ಚರ್...ಪರ್...ಎನ್ನುವ ವೆಲ್ಕ್ರೋ...!

ಚರ್...ಪರ್...ಎನ್ನುವ ವೆಲ್ಕ್ರೋ...!

ನೀವು ಬಳಸುವ ಚಪ್ಪಲಿ ಅಥವಾ ಶೂನಲ್ಲಿ, ನೀವು ಉಪಯೋಗಿಸುವ ಬ್ಯಾಗ್ ಗಳಲ್ಲಿ, ನಿಮ್ಮ ಬಟ್ಟೆಗಳಲ್ಲಿ, ಮಕ್ಕಳ ಡೈಪರ್ ಗಳಲ್ಲಿ ಎಲ್ಲಾ ಕಡೆಗಳಲ್ಲೂ ಚರ್... ಪರ್... ಎಂದು ಶಬ್ದ ಮಾಡುವ ಒಂದು ವಸ್ತು ಇದ್ದೇ ಇರುತ್ತದೆ. ಮಕ್ಕಳಿಗೆ ಈ ವಸ್ತು ಇರುವ ಸಾಮಾಗ್ರಿಗಳೊಂದಿಗೆ ಆಡುವುದು ಒಂದು ಆಟವೇ. ಮೊದಲೆಲ್ಲಾ ಮನೆಗಳಲ್ಲಿ ಪಂಚೆಯನ್ನು ಉಡುವುದು ಸಾಮಾನ್ಯ ವಿಷಯವಾಗಿತ್ತು. ಕೇರಳದಲ್ಲಿ ಈಗಲೂ ಪಂಚೆ ಹೊರಗೆ ಹೋಗುವಾಗಲೂ ಉಡುವ ಬಟ್ಟೆ. ಈಗಿನ ಜನಾಂಗದವರಿಗೆ ಪಂಚೆ ಅಥವಾ ಧೋತಿ ಉಡುವುದೆಂದರೆ ಏನೋ ಮುಜುಗರ. ಅವರ ಸೊಂಟದಲ್ಲಿ ಅದು ನಿಲ್ಲುವುದೇ ಇಲ್ಲ. ಪಂಚೆ ಉಟ್ಟುಕೊಂಡು ಹೊರ ಹೋದಾಗ ಅದು ಜಾರಿ ಹೋಗಿ ಮರ್ಯಾದೆ ಮೂರು ಕಾಸು ಆದರೆ ಎಂಬ ಹೆದರಿಕೆ ಈಗಿನವರಿಗೆ. ಅದಕ್ಕಾಗಿ ಪಂಚೆ ತಯಾರಿಸುವವರು ಪಂಚೆಗೂ ವೆಲ್ಕ್ರೋ ಪಟ್ಟಿ ಹಾಕಿ ಬಿಟ್ಟಿದ್ದಾರೆ. ಇದರಿಂದಾಗಿ ಈಗಿನ ಯುವಕರೂ ಹೆದರಿಕೆಯಿಲ್ಲದೇ ಸಮಾರಂಭಗಳಲ್ಲಿ ಪಂಜೆಯನ್ನುಟ್ಟು ಜುಂ ಜುಂ...ಎಂದು ತಿರುಗಾಡುತ್ತಾರೆ. ಹಾಗಾದರೆ ಏನಿದು ವೆಲ್ಕ್ರೋ...?

ವೆಲ್ಕ್ರೋ (Velcro) ಎಂದರೆ ಎರಡು ಬಗೆಯ ಪಟ್ಟಿಗಳನ್ನು ಜೊತೆಯಾಗಿ ಸೇರಿಸಿದರೆ ಆಗುವ ಬಿಗಿಯಾದ ಬಂಧನದ ಸಾಧನ. ಒಂದು ಪಟ್ಟಿಯಲ್ಲಿ ಮುಳ್ಳು ಮುಳ್ಳುಗಳಂತೆ (ಕೊಕ್ಕೆ) ಇರುವ ವ್ಯವಸ್ಥೆಯೂ, ಮತ್ತೊಂದು ಪಟ್ಟಿಯಲ್ಲಿ ಈ ಮುಳ್ಳುಗಳನ್ನು ಬಂಧಿಸಲು ಬೇಕಾದ ವ್ಯವಸ್ಥೆಯೂ ಇರುತ್ತದೆ. ಇವುಗಳೆರಡನ್ನು ಜೋಡಿಸಿದಾಗ ಒಂದು ಬಿಗಿಯಾದ ಬಂಧನ ಏರ್ಪಡುತ್ತದೆ. ಒಂದೆಡೆಯಿಂದ ಹಿಡಿದು ಜೋಡಿಸಿದಾಗ ಜೊತೆಯಾದರೆ ಮತ್ತೊಂದು ಸಲ ವಿಭಿನ್ನ ದಿಕ್ಕಿನಲ್ಲಿ ಎಳೆದಾಗ ಚರ್ ...ಪರ್... ಎಂಬ ಶಬ್ದದೊಂದಿಗೆ ಬಂಧನ ಬಿಡುಗಡೆ ಕಾಣುತ್ತದೆ. ಇದನ್ನು ಎಷ್ಟು ಸಲ ಬೇಕಾದರೂ ಉಪಯೋಗಿಸಬಹುದು. ಈಗಂತೂ ವೆಲ್ಕ್ರೋ ಎಲ್ಲಾ ಕಡೆಗಳಲ್ಲೂ ಆವರಿಸಿದೆ. ಇದರ ಆವಿಷ್ಕಾರ ಹೇಗಾಯಿತು ಎಂದು ತಿಳಿಯೋದು ಬೇಡವೇ?

ವೆಲ್ಕ್ರೋ ಬಗ್ಗೆ ಇತ್ತೀಚೆಗೆ ಒಂದು ಪತ್ರಿಕೆಯಲ್ಲಿ ಓದಿದೆ. ಅದರಲ್ಲಿದ್ದ ವಿಷಯವೆಂದರೆ, ವೆಲ್ಕ್ರೋ ಎಂಬುವುದು ಎರಡೂ ಪದಗಳ ಸಂಯೋಜನೆಯಿಂದ ಹುಟ್ಟಿಕೊಂಡ ಹೆಸರು. ವೆಲೊರ್ ಮತ್ತು ಕ್ರೊಕೆಟ್ ಎಂಬ ಎರಡು ಪದಗಳ ಸಂಯೋಜನೆಯಿಂದ ವೆಲ್ಕ್ರೋ ಎಂಬ ಹೆಸರು ಹುಟ್ಟಿಕೊಂಡಿದೆಯಂತೆ. ಇದರ ಆವಿಷ್ಕಾರಕ್ಕೆ ಅಲ್ಪ ಪ್ರಮಾಣದಲ್ಲಿ ಕಾರಣವಾದದ್ದು ಒಂದು ನಾಯಿ ಎಂದರೆ ನಿಮಗೆ ಅಚ್ಚರಿಯಾಗಬಹುದು. ಆದರೆ ಇದು ಸತ್ಯ ವಿಷಯ. 

ಜಾರ್ಜ್ ಮೆಸ್ಕಲ್ ಎಂಬ ವ್ಯಕ್ತಿಗೆ ಪರ್ವತಾರೋಹಣ ಒಂದು ಹವ್ಯಾಸ. ಒಮ್ಮೆ ಜಾರ್ಜ್ ತನ್ನ ಪ್ರೀತಿಯ ನಾಯಿಯ ಜೊತೆ ಒಂದು ಪರ್ವತವನ್ನು ಏರುತ್ತಿದ್ದ. ಪರ್ವತಗಳ ತುಂಬೆಲ್ಲಾ ಬರ್ಡಾಕ್ (Burdock) ಎಂಬ ಸಸ್ಯಗಳಿದ್ದುವು. ಈ ಸಸ್ಯಗಳಲ್ಲಿ ಬಿಡುವ ಹೂ ಬೀಜವಾಗುವಾಗ ಒಂದು ರೀತಿಯ ಮುಳ್ಳು ಮುಳ್ಳು ಇರುವ ಕಾಯಿಯಾಗುತ್ತದೆ (ಚಿತ್ರವನ್ನು ಗಮನಿಸಿ). ಈ ಸಸ್ಯಗಳ ರಾಶಿಗಳ ನಡುವಿಂದ ಹಾದು ಹೋಗಬೇಕಾದ ಅನಿವಾರ್ಯ ಸಂದರ್ಭವೂ ಬಂತು. ಹಾಗೆ ಜಾರ್ಜ್ ತನ್ನ ನಾಯಿಯ ಜೊತೆ ಬರ್ಡಾಕ್ ಗಿಡಗಳ ನಡುವಿನಿಂದ ಹಾದು ಹೋಗಿ ಹೊರ ಬಂದಾಗ ಆತನ ಪ್ಯಾಂಟ್ ಹಾಗೂ ನಾಯಿಯ ಮೈ ಮೇಲೆ ಬರ್ಡಾಕ್ ಸಸ್ಯದ ಬೀಜಗಳು ಅಂಟಿಕೊಂಡಿದ್ದವು. ಈ ಬೀಜಗಳ ಹೊರಮೈ ಒಂದು ರೀತಿಯ ಮೆದುವಾದ ಮುಳ್ಳು (ಪುಟ್ಟ ಕೊಕ್ಕೆಗಳಂತಿರುವ ರಚನೆಗಳು) ಗಳು ಹೊಂದಿದ್ದು ಅದು ಯಾವುದೇ ವಸ್ತುವಿಗೆ ಅಂಟಿಕೊಳ್ಳುವಂತಿತ್ತು. ಅದನ್ನು ಪ್ಯಾಂಟ್ ನಿಂದ ಬಿಡಿಸುತ್ತಿರುವ ಸಮಯದಲ್ಲಿ ಜಾರ್ಜ್ ಗೆ ಒಂದು ಅದ್ಭುತವಾದ ಯೋಚನೆ ಹೊಳೆಯಿತು. 

ಆತ ಕೂಡಲೇ ಪರ್ವತವನ್ನು ಏರುವ ಕಾರ್ಯವನ್ನು ಮೊಟಕುಗೊಳಿಸಿ ತನ್ನ ಮನೆಗೆ ಹಿಂದಿರುಗಿದ. ತನ್ನ ಪ್ಯಾಂಟ್ ಹಾಗೂ ನಾಯಿಯ ಮೈ ಮೇಲೆ ಅಂಟಿಕೊಂಡಂತೆ ಇದ್ದ ಬರ್ಡಾಕ್ ಸಸ್ಯದ ಬೀಜಗಳನ್ನು ಬಿಡಿಸಿ, ಅದನ್ನು ಬೇರೆ ವಸ್ತುಗಳಿಗೆ ಅಂಟಿಸಿ ನೋಡಿದ. ಅಲ್ಲಿಯೂ ಅದು ಸೊಗಸಾಗಿ ಅಂಟಿಕೊಳ್ಳುವುದನ್ನು ಗಮನಿಸಿದ ಆತನ ತಲೆಯಲ್ಲಿ ಒಂದು ಯೋಚನೆ ಹೊಳೆಯಿತು. ಆತ ಆ ಬೀಜದ ಮೇಲ್ಮೈಯಲ್ಲಿರುವ ಕೊಕ್ಕೆಯಂತಿರುವ ರಚನೆಗಳನ್ನು ಬೇರ್ಪಡಿಸಿ, ಅದನ್ನು ಮೃದುವಾದ ಉಣ್ಣೆಯ ಬಟ್ಟೆಗೆ ಅಂಟಿಸಿದ. ಅದು ಚೆನ್ನಾಗಿ ಅಂಟಿಕೊಂಡಿತು. ಇದನ್ನು ಉಪಯೋಗಿಸಿ ಆತ ಕೃತಕವಾಗಿ ಎರಡು ಪಟ್ಟಿಗಳನ್ನು ತಯಾರು ಮಾಡಿದ. ಒಂದಕ್ಕೆ ಕೊಕ್ಕೆಯಂತಹ ರಚನೆಗಳನ್ನೂ, ಮತ್ತೊಂದಕ್ಕೆ ಉಣ್ಣೆ ಬಟ್ಟೆಯನ್ನೂ ಅಳವಡಿಸಿ ಸೇರಿಸಿದಾಗ ಸೊಗಸಾದ ಬಂಧನ ಏರ್ಪಟ್ಟಿತು. ಇದುವೇ ವೆಲ್ಕ್ರೋ ಆವಿಷ್ಕಾರಕ್ಕೆ ಮೂಲ ಕಾರಣವಾಯಿತು. 

ನಂತರದ ದಿನಗಳಲ್ಲಿ ವೆಲ್ಕ್ರೋ ಸರ್ವವ್ಯಾಪಿಯಾಯಿತು. ಯಾವುದೇ ಬಟ್ಟೆ, ಚಪ್ಪಲ್, ಮಕ್ಕಳ ವಸ್ತುಗಳು ಎಲ್ಲವೂ ವೆಲ್ಕ್ರೋ ಹೊಂದಿ ಬರತೊಡಗಿದವು. ಈಗಂತೂ ನಾಸಾ ಬಾಹ್ಯಾಕಾಶ ಸಂಸ್ಥೆಯು ತನ್ನ ಅಂತರಿಕ್ಷಕ್ಕೆ ಗಗನಯಾತ್ರಿಗಳು ಹೋಗುವಾಗ ತೊಡುವ ಉಡುಗೆಗೆ ಸಂಪೂರ್ಣವಾಗಿ ವೆಲ್ಕ್ರೋವನ್ನು ಬಳಸಿಕೊಂಡಿದೆ. ಆಸ್ಪತ್ರೆಗಳಲ್ಲಿ, ಬೈಕ್, ಕಾರು ಯಾತ್ರಿಗಳಿಗೆ, ಸೀಟು ಕವರ್ ಗಳಲ್ಲಿ, ಆಟಗಾರರ ಗ್ಲೌಸ್, ಪ್ಯಾಡ್ ಮುಂತಾದುವುಗಳಲ್ಲಿ ಎಲ್ಲೆಡೆ ಈಗ ವೆಲ್ಕ್ರೋ ಬಳಕೆಯಾಗುತ್ತಿದೆ. 

ಚಿತ್ರ: ೧. ಪಂಚೆಯಲ್ಲಿ ಬಳಕೆಯಾಗುವ ವೆಲ್ಕ್ರೋ

೨. ವೆಲ್ಕ್ರೋ ಪಟ್ಟಿಗಳು

೩. ವೆಲ್ಕ್ರೋ ಹುಟ್ಟಿಗೆ ಕಾರಣವಾದ ಬರ್ಡಾಕ್ ಗಿಡ   

(ಆಧಾರ)-ಚಿತ್ರ ಕೃಪೆ: ಅಂತರ್ಜಾಲ ತಾಣ