ಚಲಿಸುವ ಜಂಗಮನಾಗಿ...

ಚಲಿಸುವ ಜಂಗಮನಾಗಿ...

ಗುಡಿಯನೆಂದು ಕಟ್ಟದಿರು, ನೆಲೆಯನೆಂದು ನಿಲ್ಲದಿರು, ಒಮ್ಮೆ ಬೆಳಕಾದೆ ನಾನು, ದೇಹ ಗಾಳಿಯಾಯಿತು, ಮನಸ್ಸು ವಿಶಾಲವಾಯಿತು, ವಿಶ್ವ ಪರ್ಯಟನೆ ಮಾಡಬೇಕೆಂಬ ಆಸೆಯಾಯಿತು......

ಅಗೋ ಅಲ್ಲಿ ಮಿನುಗುತ್ತಿವೆ ನಕ್ಷತ್ರಗಳು, 

ಉರಿಯುತ್ತಿವೆ ಧೂಮಕೇತುಗಳು,

ಕೆಂಪಡರಿದ ಸೂರ್ಯ, 

ತಂಪಡರಿದ ಚಂದ್ರ, 

 

ಓ ಮೇಲೆ ನೋಡು ನೀಲಾಕಾಶ , 

ಕೆಳಗೆ ನೋಡು ಭೂಲೋಕ,

ಕಣ್ಣಿನ ನೋಟಕ್ಕೂ ಸಿಗದಷ್ಟು ನೀರು, 

ಕಣ್ಣಂಚಿನಲ್ಲಿ ಕಾಣುವಷ್ಟು ಕಾಡು,

ಅಲ್ಲಲ್ಲಿ ಪ್ರಾಣಿ ಪಕ್ಷಿಗಳು, 

ಎಲ್ಲೆಲ್ಲೂ ನರಮಾನವರು,

 

ಒಂದು ಕಡೆ ಹಚ್ಚ ಹಸಿರು, 

ಇನ್ನೊಂದು ಕಡೆ ಮರುಭೂಮಿ,

ಅಗೋ ಅಲ್ಲಿ ಅಗ್ನಿ ಪರ್ವತ, 

ಇಗೋ ಇಲ್ಲಿ ಹಿಮಪರ್ವತ,

ಎಲ್ಲೆಲ್ಲೂ ಸುಂಟರಗಾಳಿ, 

ಮತ್ತೆಲ್ಲೊ ಪ್ರಶಾಂತ ಗಾಳಿ,

 

ಅಲ್ಲಿ ನಡೆಯುತ್ತಿದೆ ನೋಡು ರಕ್ತಪಾತ,

ಇಲ್ಲಿ ಕೇಳುತ್ತಿದೆ ನೋಡು ಶಾಂತಿ ಮಂತ್ರ, 

ಅಲ್ಲೆಲ್ಲೋ ಗುಂಡಿನ ಸದ್ದು,

 ಇನ್ನೆಲ್ಲೂ ನೀರವ ಮೌನ,

 

ಸ್ವಲ್ಪ ಹೊತ್ತು ಬೆಳಕೋ ಬೆಳಕು, 

ಮತ್ತಷ್ಟು ಹೊತ್ತು ಕಾರ್ಗತ್ತಲು,

ಒಮ್ಮೆ ಮೈ ಕೊರೆಯುವ ಚಳಿ,

ಮತ್ತೊಮ್ಮೆ ಬೆವರು ಸುರಿಸುವ ಬಿಸಿಲು,

ಭೋರ್ಗರೆಯುವ ಮಳೆ , 

ರೊಪ್ಪನೆ ಬೀಸುವ ಗಾಳಿ,

 

ಮುಷ್ಟಿಯಷ್ಟಿದೆ ಈ ಲೋಕ,

ಹಿಡಿಯ ಹೋದರೆ ಸಮಷ್ಟಿ,

ಮುಗಿಯಿತು ತ್ರಿಲೋಕ ಸಂಚಾರ, 

ಆಯಿತು ಬದುಕು ಸಾಕ್ಷಾತ್ಕಾರ.

ಆದರೂ...

 

ಇನ್ನೊಂದಾಸೆ, ಒಂದೇ ಒಂದಾಸೆ,

ನಿಮ್ಮ ಹೃದಯದಾಳದಲಿ ಅಣುವಾಗುವಾಸೆ,,

ನಿಮ್ಮ ಮನದಾಳದಲಿ ಕಣವಾಗುವಾಸೆ,

ನಿಮ್ಮ ನೆನಪಿನಾಳದಲಿ ಶಾಶ್ವತವಾಗಿ ನೆಲೆಯಾಗುವಾಸೆ,

ಒಪ್ಪಿಕೊಳ್ಳಿ ,ಅಪ್ಪಿಕೊಳ್ಳಿ ದಾರಿ ತಪ್ಪಿದೀ ಜೀವಿಯನ್ನ......

***

ಬರುವವರಿಗೆ ಸ್ವಾಗತ,

ಹೋಗುವವರಿಗೆ ವಂದನೆಗಳು,

ಮೆಚ್ಚುವವರಿಗೆ ಧನ್ಯವಾದಗಳು,

ಟೀಕಿಸುವವರಿಗೆ ನಮಸ್ಕಾರಗಳು,

ಅಭಿಮಾನಿಸುವವರಿಗೆ ಕೃತಜ್ಞತೆಗಳು,

ಅಸೂಯೆಪಡುವವರಿಗೆ ಸಹಾನುಭೂತಿಗಳು,

ಪ್ರೀತಿಸುವವರಿಗೆ ನಗು,

ದ್ವೇಷಿಸುವವರಿಗೆ ನಿರ್ಲಕ್ಷ್ಯ,

ಸಹಾಯ ಮಾಡುವವರಿಗೆ ಸಲಾಂ,

ತೊಂದರೆ ಕೊಡುವವರಿಗೆ ಗುಡ್ ಬೈ,

ಆತ್ಮೀಯರಿಗೊಂದಷ್ಟು ಅಪ್ಪುಗೆ,

ಪರಿಚಿತರಿಗೊಂದಷ್ಟು ಸಲುಗೆ,

ಪ್ರೋತ್ಸಾಹಿಸುವವರಿಗೆ ನಮನಗಳು,

ಕಾಲೆಳೆಯುವವರಿಗೆ ತಿರಸ್ಕಾರಗಳು,

ಜೊತೆಯಾಗುವವರಿಗೆ ಯಶಸ್ಸಾಗಲಿ,

ದೂರಾಗುವವರಿಗೆ ಒಳ್ಳೆಯದಾಗಲಿ,

ಗೆದ್ದವರಿಗೆ ಅಭಿನಂದನೆಗಳು,

ಸೋತವರಿಗೆ ಹಿತ ನುಡಿಗಳು,

ಹೀಗೆ, ಎಲ್ಲಾ ಭಾವನೆಗಳೊಂದಿಗೆ, ಸಾಗುತ್ತಲೇ ಇದೆ ಬದುಕು, ನನ್ನದು, ನಿಮ್ಮದು, ಎಲ್ಲರದೂ, ಬದುಕಿನೊಂದಿಗೆ ಸರಸವಾಡುತ್ತಾ, ವಿಧಿಯೊಂದಿಗೆ ಚೆಲ್ಲಾಟವಾಡುತ್ತಾ, ಬರುವುದನ್ನು ಸ್ವೀಕರಿಸುತ್ತಾ, ಹೋಗುವುದನ್ನು ಬೀಳ್ಕೊಡುತ್ತಾ, ನಗುತ್ತಾ, ಅಳುತ್ತಾ, ಸಾಗುತ್ತಲೇ ಇರಲಿ ಜೀವನ. ಕೊನೆಯೇ ಇಲ್ಲವೇನೋ ಎಂಬ ಭಾವದೊಂದಿಗೆ..‌‌‌.

  • ಜ್ಞಾನ ಭಿಕ್ಷಾ ಪಾದಯಾತ್ರೆಯ 246 ನೆಯ ಚಿಕ್ಕಮಗಳೂರು ಜಿಲ್ಲೆಯ ಸುಮಾರು 23 ಕಿಲೋಮೀಟರ್ ದೂರದ ತರೀಕೆರೆ ತಾಲ್ಲೂಕು ತಲುಪಿತು. ಅಲ್ಲಿ ವಾಸ್ತವ್ಯದ ಸಮಯದಲ್ಲಿ ಬರೆದ ಲೇಖನ ಇದು

-ವಿವೇಕಾನಂದ. ಹೆಚ್.ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ