ಚಳಿಗಾಲದಲ್ಲಿ ಕೂದಲಿನ ಸಮಸ್ಯೆ ಪರಿಹಾರಕ್ಕೆ ಕಿತ್ತಳೆ ಸಿಪ್ಪೆ !

ಚಳಿಗಾಲದಲ್ಲಿ ಕೂದಲಿನ ಸಮಸ್ಯೆ ಪರಿಹಾರಕ್ಕೆ ಕಿತ್ತಳೆ ಸಿಪ್ಪೆ !

ನಿಧಾನವಾಗಿ ಚಳಿಗಾಲ ರಾಜ್ಯವನ್ನು ಆವರಿಸುತ್ತಿದೆ. ಕಳೆದ ವರ್ಷಕ್ಕಿಂತ ಅಧಿಕ ಪ್ರಮಾಣದಲ್ಲಿ ಚಳಿ ಇರಲಿದೆ ಎನ್ನುವುದು ಹವಾಮಾನ ಪಂಡಿತರ ಲೆಕ್ಕಾಚಾರ. ಚಳಿಗಾಲದ ಸಮಯದಲ್ಲಿ ಕಿತ್ತಳೆ ಅಥವಾ ಆರೆಂಜ್ ಹಣ್ಣುಗಳು ಯಥೇಚ್ಛವಾಗಿ ಮಾರುಕಟ್ಟೆಗೆ ಬರುತ್ತವೆ. ಕಿತ್ತಳೆ ಹಣ್ಣು ಆರೋಗ್ಯಕ್ಕೆ ಬಹಳ ಉತ್ತಮ. ಇದರಲ್ಲಿ ವಿಟಮಿನ್ ಸಿ ಯಥೇಚ್ಛವಾಗಿದೆ. ಇದರ ಜೊತೆಗೆ ವಿಟಮಿನ್ ಇ ಮತ್ತು ಆಂಟಿ ಆಕ್ಸಿಡೆಂಟ್ ಗಳೂ ಸಮೃದ್ಧವಾಗಿವೆ. ಆದುದರಿಂದ ಸೀಸನ್ ಸಮಯದಲ್ಲಿ ಈ ಹಣ್ಣನ್ನು ಅಧಿಕ ಪ್ರಮಾಣದಲ್ಲಿ ಸೇವಿಸಬೇಕು. 

ನೀವು ಕಿತ್ತಳೆ ಹಣ್ಣನ್ನು ತಿನ್ನುವಾಗ ಸಿಪ್ಪೆಯನ್ನು ಸುಲಿದು ಬಿಸಾಕಿ ಬಿಡುತ್ತೀರಿ. ಇನ್ನು ಮುಂದೆ ಹಾಗೆ ಮಾಡದೇ ಅದರ ಸಿಪ್ಪೆಯನ್ನು ಸಂಗ್ರಹಿಸಿ ಇಟ್ಟುಕೊಂಡಿರಿ. ಹಣ್ಣಿನಷ್ಟೇ ಪ್ರಯೋಜನ ಸಿಪ್ಪೆಯಿಂದಲೂ ಇದೆ. ಕಿತ್ತಳೆ ಹಣ್ಣಿನ ಸಿಪ್ಪೆಯು ಕೂದಲಿನ ಆರೋಗ್ಯ ಕಾಪಾಡುವಲ್ಲಿ ಬಹಳ ಪ್ರಯೋಜನಕಾರಿ. ಅದರಲ್ಲೂ ಚಳಿಗಾಲದಲ್ಲಿ ಎದುರಾಗುವ ಕೂದಲಿನ ಸಮಸ್ಯೆಗಳಿಗೆ ಕಿತ್ತಳೆ ಸಿಪ್ಪೆಯಲ್ಲಿ ಪರಿಹಾರವಿದೆ. ಕಿತ್ತಳೆ ಸಿಪ್ಪೆಯಿಂದ ಕೂದಲ ಆರೈಕೆ ಮಾಡಬಹುದೇನೋ ನಿಜ, ಆದರೆ ಅದನ್ನು ಪರಿಣಾಮಕಾರಿಯಾಗಿ ಹೇಗೆ ಮಾಡಬಹುದು ಎನ್ನುವುದನ್ನು ತಿಳಿದುಕೊಳ್ಳುವುದು ಅತೀ ಮುಖ್ಯ. ಕೂದಲ ಆರೋಗ್ಯ ಕಾಪಾಡಲು ಕಿತ್ತಳೆ ಹಣ್ಣಿನ ಸಿಪ್ಪೆಯನ್ನು ಬಳಸಿದಾಗ ಸಿಗುವ ಫಲಿತಾಂಶ ಕಂಡು ನೀವು ನಿಜಕ್ಕೂ ಅಚ್ಚರಿ ಪಡುವಿರಿ.

ಕಿತ್ತಳೆ ಸಿಪ್ಪೆ ಮತ್ತು ನಿಂಬೆರಸ: ಒಂದಿಷ್ಟು ಕಿತ್ತಳೆ ಹಣ್ಣಿನ ಸಿಪ್ಪೆಗಳನ್ನು ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ. ಈ ನೀರನ್ನು ಒಂದು ಪಾತ್ರೆಗೆ ಸೋಸಿಕೊಳ್ಳಿರಿ. ಇದಕ್ಕೆ ಅರ್ಧ ಲಿಂಬೆಹಣ್ಣಿನ ರಸವನ್ನು ಸೇರಿಸಿ, ಚೆನ್ನಾಗಿ ಮಿಶ್ರ ಮಾಡಿ. ಪಿ ಎಚ್ ಮಟ್ಟ ಸುಧಾರಿಸಲು ಮತ್ತು ನೈಸರ್ಗಿಕವಾದ ಸುವಾಸನೆಗಾಗಿ ಕೂದಲನ್ನು ಈ ನೀರಿನಿಂದ ಚೆನ್ನಾಗಿ ತೊಳೆಯಿರಿ.

ಕಿತ್ತಳೆ ಸಿಪ್ಪೆ ಮತ್ತು ಮೊಸರು: ಕಿತ್ತಳೆ ಹಣ್ಣಿನ ಸಿಪ್ಪೆಯನ್ನು ಚೆನ್ನಾಗಿ ಬಿಸಿಲಿನಲ್ಲಿ ಒಣಗಿಸಿ ಹುಡಿ ಮಾಡಿ. ಈ ಹುಡಿಯನ್ನು ಮೊಸರಿನೊಂದಿಗೆ ಸೇರಿಸಿ ಮಿಶ್ರಣ ತಯಾರಿಸಿ. ಇದನ್ನು ಹೇರ್ ಮಾಸ್ಕ್ ಕೀತಿ ಕೂದಲಿಗೆ ಹಚ್ಚಿ. ಅರ್ಧ ಗಂಟೆ ಬಿಟ್ಟು ತಣ್ಣೀರಿನಿಂದ ತಲೆಸ್ನಾನ ಮಾಡಿ. ಇದು ಕೂದಲನ್ನು ನಯವಾಗಿಸಿ, ಬುಡದಿಂದಲೇ ಕೂದಲನ್ನು ಸದೃಢಗೊಳಿಸುತ್ತದೆ.

ಕಿತ್ತಳೆ ಸಿಪ್ಪೆ ಮತ್ತು ಜೇನುತುಪ್ಪ: ಒಣಗಿದ ಕಿತ್ತಳೆ ಸಿಪ್ಪೆಯ ಹುಡಿಯನ್ನು ಒಂದು ಚಮಚ ಜೇನುತುಪ್ಪದ ಜೊತೆಗೆ ಮಿಶ್ರ ಮಾಡಿ. ಈ ಮಿಶ್ರಣವನ್ನು ಹೇರ್ ಕಂಡೀಶನರ್ ರೂಪದಲ್ಲಿ ಬಳಸಬಹುದು. ಕೂದಲು ಪೋಷಣೆಗೆ ಈ ಹೇರ್ ಕಂಡೀಶನರ್ ಬಹು ಉಪಯುಕ್ತ. ಆದರೆ ಜೇನು ತುಪ್ಪವನ್ನು ನಿಗದಿತ ಪ್ರಮಾಣದಲ್ಲಿ ಮಾತ್ರ ಬಳಸಿ. ಅಧಿಕ ಪ್ರಮಾಣದ ಜೇನುತುಪ್ಪದ ಬಳಕೆ ಕೂದಲಿನ ಬಣ್ಣವನ್ನು ಬದಲಾಯಿಸಬಹುದು.

ಕಿತ್ತಳೆ ಸಿಪ್ಪೆಯ ಎಣ್ಣೆ: ಒಣಗಿದ ಕಿತ್ತಳೆ ಸಿಪ್ಪೆಯ ಹುಡಿಯನ್ನು ಆಲಿವ್ ಎಣ್ಣೆ ಅಥವಾ ತೆಂಗಿನ ಎಣ್ಣೆಯ ಜೊತೆ ಕುದಿಸಿ ಎಣ್ಣೆಯನ್ನು ತಯಾರಿಸಿ. ಕೂದಲು ಹಾಗೂ ನೆತ್ತಿಯ ಬುಡ ಒಣಗುವುದನ್ನು ತಡೆಯಲು ಮತ್ತು ತಲೆ ಸ್ನಾನಕ್ಕೂ ಅರ್ಧ ಗಂಟೆ ಮೊದಲು ಕೂದಲಿಗೆ ಈ ಎಣ್ಣೆಯನ್ನು ಹಚ್ಚಿ, ನಂತರ ಸ್ನಾನ ಮಾಡಿ.

ಕಿತ್ತಳೆ ಸಿಪ್ಪೆ ಮತ್ತು ಆಲೊವೆರಾ: ಕಿತ್ತಳೆ ಸಿಪ್ಪೆಯ ಹುಡಿ, ಕಿತ್ತಳೆ ರಸ ಮತ್ತು ಅಲೆವೋರಾ ಜೆಲ್ ಈ ಮೂರನ್ನು ಒಟ್ಟಿಗೆ ಸೇರಿಸಿ ಮಿಶ್ರ ಮಾಡಿ, ನಿಮ್ಮ ಕೂದಲಿಗೆ ಹಚ್ಚಿದರೆ ಕೂದಲು ನೈಸರ್ಗಿಕವಾದ ಹೊಳಪನ್ನು ಪಡೆದುಕೊಳ್ಳುತ್ತದೆ. ನಿಮ್ಮ ನೆತ್ತಿ ಮತ್ತು ಕೂದಲಿಗೆ ಹಚ್ಚಿದರೆ ಕೂದಲ ಸೀರಮ್ ರೀತಿಯಲ್ಲಿ ಕೆಲಸ ಮಾಡುತ್ತದೆ. 

ಕಿತ್ತಳೆ ಸಿಪ್ಪೆಯಲ್ಲಿ ವಿಟಮಿನ್ ಸಿ ಹಾಗೂ ಆಂಟಿ ಆಕ್ಸಿಡೆಂಟ್ ಗಳು ಇರುವುದರಿಂದ ಅದು ಕೂದಲಿನ ಒಣ ಸಿಪ್ಪೆಗಳನ್ನು ನಿವಾರಣೆ ಮಾಡುತ್ತದೆ. ನಿಮಗೆ ಯಾವುದೇ ರೀತಿಯ ಅಲರ್ಜಿ ಸಮಸ್ಯೆ ಇದ್ದರೆ ಕಿತ್ತಳೆ ಸಿಪ್ಪೆಯನ್ನು ಕೂದಲಿಗೆ ಬಳಸುವ ಮುನ್ನ ಪ್ಯಾಚ್ ಟೆಸ್ಟ್ ಮಾಡಿ ನೋಡಿ. ಅದರಲ್ಲಿ ಯಾವುದೇ ತೊಂದರೆಯಾಗದೇ ಹೋದರೆ, ನಿರಾತಂಕವಾಗಿ ಕೂದಲಿಗೆ ಕಿತ್ತಳೆ ಸಿಪ್ಪೆ ಬಳಸಿ, ಕೂದಲಿನ ಆರೋಗ್ಯವನ್ನು ಹೆಚ್ಚಿಸಿಕೊಳ್ಳಿ. 

(ಆಧಾರ)

ಚಿತ್ರ ಕೃಪೆ: ಅಂತರ್ಜಾಲ ತಾಣ