ಚಳಿಗಾಲದಲ್ಲಿ ಚರ್ಮದ ಸಮಸ್ಯೆಯೇ?
ಚಳಿಗಾಲ ಪ್ರಾರಂಭವಾದೊಡನೆಯೇ ಹಲವಾರು ಸಮಸ್ಯೆಗಳು ಧುತ್ತನೆ ಎದ್ದು ನಮ್ಮ ಮುಂದೆ ಬರುತ್ತವೆ. ಕೆಮ್ಮು, ದಮ್ಮು, ಶೀತ, ಗಂಟು ನೋವು, ಚರ್ಮ ಒಡೆಯುವುದು, ಹಿಮ್ಮಡಿ ಒಡೆದು ರಕ್ತ ಸ್ರಾವ ಹೀಗೆ ಹತ್ತು ಹಲವು ಸಮಸ್ಯೆಗಳು ಕಾಣ ತೊಡಗುತ್ತವೆ. ಇದರಲ್ಲಿ ಪ್ರಮುಖವಾದದ್ದು ಚರ್ಮದ ಸಮಸ್ಯೆ. ಚಳಿಗಾಲದ ಕಾರಣ ಚರ್ಮವು ಶುಷ್ಕವಾಗಿ ನಿರ್ಜೀವವಾದಂತೆ ಕಾಣುತ್ತದೆ. ಇದರಿಂದ ರಕ್ಷಣೆ ಪಡೆಯಲು ನಾವು ಕೋಲ್ಡ್ ಕ್ರೀಮ್ ಹಾಗೂ ಮೊಯಿಶ್ಚರೈರ್ ಮೊರೆ ಹೋಗಬೇಕಾಗುತ್ತದೆ. ಅದರ ಬದಲು ಮನೆಯಲ್ಲೇ ಇರುವಂತಹ ಪದಾರ್ಥಗಳಿಂದ ಉತ್ತಮ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ. ಉತ್ತಮ ತ್ವಚೆಗಾಗಿ ಮನೆಮದ್ದು ತಯಾರಿಸಿಕೊಳ್ಳಬಹುದು. ಇದರ ತಯಾರಿಕೆ ಹೇಗೆ?
೨೦ ಗ್ರಾಂ ಕೊಟ್ಟಕಲ್ ಕಚುರಾಡು ಹುಡಿ (Hedychium Spicatum), ೨೦ ಗ್ರಾಂ ಲಾವಂಚದ ಹುಡಿ, ಒಂದು ಚಮಚ ಶ್ರೀಗಂಧದ ಹುಡಿ, ೨೦ ಗ್ರಾಂ ಗುಲಾಬಿ ದಳದ ಹುಡಿ, ೧೦೦ ಗ್ರಾಂ ಹೆಸರು ಬೇಳೆ ಹಿಟ್ಟು, ಎಳ್ಳಿನ ಎಣ್ಣೆ, ಮಲ್ಲಿಗೆ ಹೂಗಳು.
ಮನೆ ಮದ್ದು ತಯಾರಿಸುವ ಬಗೆ: ಮೊದಲಿಗೆ ಒಂದು ಬಟ್ಟಲಿನಲ್ಲಿ ಕೊಟ್ಟಕಲ್ ಕಚರಾಡು ಹುಡಿ, ಲಾವಂಚದ ಹುಡಿ ಹಾಗೂ ಶ್ರೀಗಂಧದ ಹುಡಿ, ಗುಲಾಬಿ ದಳದ ಹುಡಿ ಮತ್ತು ಮೆಂತ್ಯ ಹುಡಿ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಬೇಕಾಗುತ್ತದೆ. ಅದಾದ ನಂತರ ಕತ್ತರಿಸಿದ ಮಲ್ಲಿಗೆ ಹೂವುಗಳನ್ನು ಸೇರಿಸಿ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು. ಸ್ನಾನ ಮಾಡುವ ಮೊದಲು ಎಳ್ಳಿನ ಎಣ್ಣೆಯನ್ನು ದೇಹಾದ್ಯಂತ ಹಚ್ಚಿಕೊಳ್ಳಬೇಕು. ಸುಮಾರು ಅರ್ಧಗಂಟೆಯ ಬಳಿಕ ಮೊದಲು ತಯಾರಿಸಿಟ್ಟ ಮಿಶ್ರಣವನ್ನು ಪೇಸ್ಟ್ ನಂತೆ ಚರ್ಮದ ಮೇಲೆಲ್ಲ ಉಜ್ಜ ಬೇಕು. ಇದನ್ನು ಚಳಿಗಾಲದಲ್ಲಿ ಪ್ರತೀ ದಿನ ಬಳಕೆ ಮಾಡುವುದರಿಂದ ತ್ವಚೆಯು ಆರೋಗ್ಯಕರವಾಗಿರುತ್ತದೆ.
ಈ ರೀತಿ ಸ್ನಾನ ಮಾಡುವುದರಿಂದ ಚರ್ಮದ ಉಳಿದ ಸಮಸ್ಯೆಗಳೂ ಪರಿಹಾರವಾಗುತ್ತದೆ. ಚರ್ಮವು ಮೃದುವಾಗಿ ಮತ್ತು ಹೊಳಪಿನಿಂದ ಕಂಗೊಳಿಸುತ್ತದೆ. ಕೊಟ್ಟಕಲ್ ಕಚುರಾಡು ಹುಡಿಯು ತ್ವಚೆಯನ್ನು ಆರೋಗ್ಯವಾಗಿಡಲು ಬಹು ಉಪಯುಕ್ತ. ಲಾವಂಚ, ಶ್ರೀಗಂಧ ಹಾಗೂ ಗುಲಾಬಿ ದಳಗಳು ಚರ್ಮವನ್ನು ಮೃದುವಾಗಿರಿಸಲು ನೆರವಾಗುತ್ತದೆ. ಹೆಸರುಬೇಳೆ ಹಿಟ್ಟು ಚರ್ಮದ ತ್ವಚೆ ಆರದಂತೆ ನೋಡಿಕೊಳ್ಳುತ್ತದೆ. ಆದುದರಿಂದ ಚಳಿಗಾಲದಲ್ಲಿ ನಿಯಮಿತವಾಗಿ ಈ ಮಿಶ್ರಣದ ಸ್ನಾನ ಮಾಡಿ, ನಿಮ್ಮ ಚರ್ಮದ ಆರೋಗ್ಯವನ್ನು ಕಾಪಾಡಿ.
(ಆಧಾರ)
ಚಿತ್ರ ಕೃಪೆ: ಅಂತರ್ಜಾಲ ತಾಣ