ಚಹಾಗೆ ಸಕ್ಕರೆ ಬದಲು ಬೆಲ್ಲ ಹಿತಕಾರಿಯೇ?

ಚಹಾಗೆ ಸಕ್ಕರೆ ಬದಲು ಬೆಲ್ಲ ಹಿತಕಾರಿಯೇ?

'ಸಕ್ಕರೆ ವಿಷ - ಬೆಲ್ಲ ಅಮೃತ' ಎನ್ನುವ ಮಾತು ಬಹಳ ಹಳೆಯದ್ದು. ಆದರೆ ನಮಗೆ ಎಲ್ಲಾ ಪದಾರ್ಥಗಳಿಗೆ ಸಕ್ಕರೆಯನ್ನು ಬಳಸುವುದು ಅಭ್ಯಾಸವಾಗಿದೆ. ಸಕ್ಕರೆ ಬಳಕೆಯಿಂದ ಮಧುಮೇಹದ ಸಂಭವ ಅಧಿಕವಾಗುತ್ತದೆ, ಮಧುಮೇಹಿಗಳು ಸಕ್ಕರೆ ಬಳಸುವಂತಿಲ್ಲ. ಬಹಳಷ್ಟು ಮಂದಿ ಈಗ ಚಹಾ ಮತ್ತು ಕಾಫಿ ತಯಾರಿಕೆಗೆ ಸಕ್ಕರೆ ಬದಲಾಗಿ ಬೆಲ್ಲವನ್ನು ಬಳಸುತ್ತಿದ್ದಾರೆ. ಇದು ಏಷ್ಟು ಆರೋಗ್ಯಕರ? ಬೆಲ್ಲವು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಮತ್ತು ಸಕ್ಕರೆಗೆ ಉತ್ತಮ ಪರ್ಯಾಯವಾಗಿದೆ. ಆದರೆ ಚಹಾದಲ್ಲಿ ಬೆಲ್ಲ ಹಾಕುವುದು ಸರಿಯೋ ತಪ್ಪೋ ಎಂದು ಯೋಚನೆ ಮಾಡಿದ್ದೀರಾ?

ತಜ್ಞರ ಪ್ರಕಾರ, ಸಕ್ಕರೆ ಮಿಶ್ರಿತ ಚಹಾವನ್ನು ಬೆಲ್ಲದ ಚಹಾದೊಂದಿಗೆ ಬದಲಿಸುವುದು ಅಷ್ಟೊಂದು ಪ್ರಯೋಜನಕಾರಿಯಲ್ಲ. ಏಕೆಂದರೆ ಎರಡೂ ವಸ್ತುಗಳ ಸ್ವಭಾವ ವಿಭಿನ್ನ. ಈ ಕಾರಣದಿಂದ ಇದು ಆರೋಗ್ಯಕ್ಕೆ ಉಪಕಾರಿಯಾಗುವುದಿಲ್ಲ. ಆಯುರ್ವೇದದ ಪ್ರಕಾರ, ಬೆಲ್ಲವು ಬಿಸಿ (ಉಷ್ಣ) ಸ್ವಭಾವವನ್ನು ಹೊಂದಿದೆ. ಆದರೆ ಹಾಲು ಶೀತ ಸ್ವಭಾವವನ್ನು ಹೊಂದಿದೆ. ಅಂತಹ ಪರಿಸ್ಥಿತಿಯಲ್ಲಿ ಈ ಎರಡು ವಿಭಿನ್ನ ಸ್ವಭಾವದ ವಸ್ತುಗಳನ್ನು ಒಟ್ಟಿಗೆ ಬೆರೆಸಿದಾಗ ಅವು ನಮ್ಮ ದೇಹದಲ್ಲಿ ವಿರೋಧಿ ಆಹಾರಗಳಂತೆ ಕಾರ್ಯನಿರ್ವಹಿಸುತ್ತವೆ. ಆಹಾರ ತಜ್ಞರ ಪ್ರಕಾರ, ನೀವು ಈ ರೀತಿಯ ಚಹಾ ಸೇವನೆಯನ್ನು ನಿರಂತರವಾಗಿ ಮಾಡುತ್ತಿದ್ದರೆ ಅದು ನಿಮ್ಮ ಆರೋಗ್ಯಕ್ಕೆ ಹಾನಿಕರವಾಗಿದೆ. ಆದರೆ ನೀವು ಇದನ್ನು ಬಾಲ್ಯದಿಂದಲೂ ಸೇವನೆ ಮಾಡುತ್ತಿದ್ದರೆ ಅದು ನಿಮ್ಮ ದೇಹಕ್ಕೆ ಒಗ್ಗಿ ಹೋಗಿ ಅಷ್ಟೊಂದು ಹಾನಿಕರವೆನಿಸುವುದಿಲ್ಲ.

ಬೆಲ್ಲವು ಕಬ್ಬಿಣದಂಶದ ಸಮೃದ್ಧ ಮೂಲ. ಹಿಮೋಗ್ಲೋಬಿನ್ ನಲ್ಲಿ ಕಬ್ಬಿಣದ ಅಂಶವು ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಇದು ದೇಹದಾದ್ಯಂತ ಶ್ವಾಸಕೋಶದಿಂದ ಆಮ್ಲಜನಕವನ್ನು ಸಾಗಿಸಲು ಕೆಂಪು ರಕ್ತಕಣಗಳನ್ನು ಉತ್ಪಾದಿಸುತ್ತದೆ. ಪ್ರತಿದಿನ ಬೆಲ್ಲವನ್ನು ಸೇವಿಸುವುದರಿಂದ ದೇಹದ ಕಬ್ಬಿಣ ಮತ್ತು ಖನಿಜ ಅಗತ್ಯಗಳನ್ನು ಪರಿಣಾಮಕಾರಿಯಾಗಿ ಪೂರೈಸಬಹುದು.

ರಕ್ತ ಹೀನತೆಯಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ಇದು ಬಹು ಉಪಕಾರಿಯಾಗಿದೆ. ಅಂತಹ ವ್ಯಕ್ತಿಗಳು ತಾವು ಪ್ರತಿ ನಿತ್ಯ ಸೇವಿಸುವ ಆಹಾರ ಅಥವಾ ಪಾನೀಯದಲ್ಲಿ ಸಕ್ಕರೆಯ ಬದಲಾಗಿ ಬೆಲ್ಲವನ್ನು ಬಳಸುವುದು ಬಹಳ ಉತ್ತಮ. ಹೀಗೆ ಮಾಡುವುದರಿಂದ ನಿಮ್ಮ ದೇಹದ ರಕ್ತದಲ್ಲಿರುವ ಕಬ್ಬಿಣದ ಪ್ರಮಾಣವನ್ನು ನಿಯಂತ್ರಿಸಬಹುದಾಗಿದೆ. 

ಬೆಲ್ಲದ ನಿರಂತರ ಬಳಕೆಯು ನಮ್ಮ ದೇಹದಲ್ಲಿ ಜೀರ್ಣಕ್ರಿಯೆಗೆ ಸಹಕಾರಿಯಾಗುತ್ತದೆ. ಒಬ್ಬ ವ್ಯಕ್ತಿಯ ಜೀರ್ಣಕ್ರಿಯೆಯನ್ನು ಉತ್ತೇಜಿಸುವ ಪೌಷ್ಟಿಕಾಂಶಗಳ ವಿಷಯದಲ್ಲಿ ನಾವು ಸಕ್ಕರೆಗೆ ಹೋಲಿಸಿದರೆ, ಬೆಲ್ಲವು ಉತ್ತಮ ಎಂದು ಹೇಳಬಹುದು. ಇದಲ್ಲದೆ ಬೆಲ್ಲದ ಬಿಸಿ (ಉಷ್ಣ) ಗುಣವು ಜೀರ್ಣಕ್ರಿಯೆಗೆ ಸಹಕಾರಿ. ಬೆಲ್ಲವು ತೂಕವನ್ನು ಕಡಿಮೆ ಮಾಡಲೂ ಉತ್ತಮ. ಜೀರ್ಣಕಾರಿ ಸಮಸ್ಯೆಗಳು ಮತ್ತು ಮಲಬದ್ಧತೆ ಎದುರಿಸುತ್ತಿರುವ ಜನರಿಗೆ ಬಿಸಿನೀರು ಅಥವಾ ಚಹಾದಲ್ಲಿ ಬೆಲ್ಲವನ್ನು ಸೇರಿಸಿ ಸೇವಿಸಲು ವೈದ್ಯರು ಸಲಹೆ ನೀಡುತ್ತಾರೆ.

ಬೆಲ್ಲವು ಸಂಸ್ಕರಿಸಿದ ಸಕ್ಕರೆಗಿಂತ ಕಡಿಮೆ ಕ್ಯಾಲೊರಿಗಳನ್ನು ಹೊಂದಿದೆ. ಸಕ್ಕರೆಯ ಬಳಸಿ ತಯಾರಿಸುವ ಸಿಹಿ ತಿಂಡಿಗಳಿಗೆ ಬೆಲ್ಲ ಪರ್ಯಾಯವಾದರೂ ಆ ತಿಂಡಿಯ ನೋಟ ಮತ್ತು ಬಣ್ಣ ಬದಲಾಗುವ ಸಾಧ್ಯತೆ ಇದ್ದೇ ಇದೆ. ಬೆಲ್ಲವು ಕಬ್ಬಿಣ, ಪೊಟ್ಯಾಷಿಯಂ ಮತ್ತು ಮೆಗ್ನೀಸಿಯಂನಂತಹ ಅಂಶಗಳನ್ನು ಒಳಗೊಂಡಿದೆ. ಈಗ ಸಕ್ಕರೆಯನ್ನು ಬಳಸಿಯೇ ಬೆಲ್ಲವನ್ನು ತಯಾರಿಸುತ್ತಾರೆ. ಇದು ಬಹಳ ಹಾನಿಕರ. ಅಲೆಮನೆಗಳಲ್ಲಿ ತಯಾರಿಸಿದ ಶುದ್ಧ ಬೆಲ್ಲವನ್ನು ಉಪಯೋಗ ಮಾಡಿದರೆ ಮಾತ್ರ ನಮಗೆ ಅದರ ಆರೋಗ್ಯಕಾರಿ ಪ್ರಯೋಜನಗಳು ದೊರಕುತ್ತವೆ. ಶುದ್ಧ ಬೆಲ್ಲವು ಗಾಢ ಬಣ್ಣದಲ್ಲಿದ್ದು, ಅದರ ನೋಟ ಅಷ್ಟಾಗಿ ಚೆನ್ನಾಗಿರುವುದಿಲ್ಲ. ಸ್ವಲ್ಪ ಕಸ ಕಡ್ಡಿಗಳೂ ಇರುವ ಸಾಧ್ಯತೆ ಇದೆ.

ಬೆಲ್ಲದ ಬಿಸಿ ಸ್ವಭಾವದ ಕಾರಣದಿಂದ ನೀವು ಬೇಸಿಗೆ ಕಾಲದಲ್ಲಿ ಬೆಲ್ಲದ ಚಹಾ ಸೇವನೆಯನ್ನು ಮಾಡದೇ ಇರುವುದು ಉತ್ತಮ. ಇದರ ಬದಲು ನೀವು ದೇಸೀ ಸಕ್ಕರೆ ಅಥವಾ ಸ್ಟೀವಿಯಾ ಸಕ್ಕರೆಯನ್ನು ಬಳಸಬಹುದು. ಇದರ ಸ್ವಭಾವ ತಂಪಾಗಿರುವುದರಿಂದ ನಿಮ್ಮ ದೇಹಕ್ಕೆ ಹಾನಿಯುಂಟುಮಾಡುವ ಸಾಧ್ಯತೆ ಕಡಿಮೆ. ನೀವು ಮೊದಲೇ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ಬೆಲ್ಲದ ಚಹಾ ಸೇವನೆ ಮಾಡಲು ಬಯಸುವಿರಾದರೆ ಮೊದಲಿಗೆ ನಿಮ್ಮ ಕುಟುಂಬದ ವೈದ್ಯರನ್ನು ಸಂಪರ್ಕಿಸಿರಿ. ಏಕೆಂದರೆ ನೀವು ಮೊದಲೇ ತೆಗೆದುಕೊಳ್ಳುತ್ತಿರುವ ಔಷಧಿಗಳೊಂದಿಗೆ ಬೆಲ್ಲವನ್ನು ಸಂಯೋಜಿಸಿದಾಗ ಅಡ್ದ ಪರಿಣಾಮಗಳು ಕಂಡು ಬರಬಹುದು. ಈ ಕಾರಣದಿಂದ ಆಹಾರ ಪದ್ಧತಿಯ ಬದಲಾವಣೆ ಮಾಡುವ ಮೊದಲು ಜಾಗೃತೆ ವಹಿಸುವುದು ಅಗತ್ಯ.

(ಆಧಾರ)

ಚಿತ್ರ ಕೃಪೆ: ಅಂತರ್ಜಾಲ ತಾಣ