ಚಾಕಲೇಟ್ ಮೂಲಕ ಶುಭ ಕೋರೋಣ ಬನ್ನಿ!!
ನೀವು ನಿಮ್ಮ ಮಕ್ಕಳ ಹುಟ್ಟು ಹಬ್ಬವನ್ನು ಆಚರಿಸಲು ಬಯಸುತ್ತೀರಾ ಮತ್ತು ಅದು ವಿಭಿನ್ನ ರೀತಿಯಾಗಿದ್ದರೆ ಚೆನ್ನಎಂದು ಭಾವಿಸುತ್ತಿರಾ? ನೀವು ನಿಮ್ಮ ಹೊಸ ಸಂಸ್ಥೆಯ ಉದ್ಘಾಟನೆ ಮಾಡಲು ಯೋಜನೆ ಹಾಕಿ ಕೊಂಡಿರುತ್ತೀರಿ ಮತ್ತು ನಿಮ್ಮ ಅತಿಥಿಗಳನ್ನು ವಿಭಿನ್ನ ರೀತಿಯಲ್ಲಿ ಸ್ವಾಗತಿಸ ಬಯಸುತ್ತೀರಾ? ನೀವೊಂದು ಮಗುವಿನ ಹುಟ್ಟು ಹಬ್ಬಕ್ಕೆ ಹೋಗ ಬಯಸಿದ್ದೀರಿ ಆದರೆ ಅವರಿಗೆ ಕೊಡಲು ಅಪರೂಪದ ಉಡುಗೊರೆಯ ಬಗ್ಗೆ ಯೋಚನೆ ಮಾಡುತ್ತೀರಾ? ಮಹಿಳಾ ದಿನ, ಹೊಸ ವರ್ಷ, ಕ್ರಿಸ್ಮಸ್, ಪ್ರೇಮಿಗಳ ದಿನ, ರಕ್ಷಾ ಬಂಧನ ಹೀಗೆ ಹತ್ತು ಹಲವಾರು ಶುಭ ದಿನಗಳಂದು ನಿಮ್ಮ ಆತ್ಮೀಯರಿಗೆ ನಿಮ್ಮದೇ ಆದ ಮಾತುಗಳಲ್ಲಿ ಶುಭ ಕೋರಲು ಬಯಸಿದ್ದೀರಾ? ನೀವು ಬಯಸಿದ ಯೋಜನೆಯಂತೆಯೇ ನಿಮ್ಮ ಉಡುಗೊರೆ ಆಗಿರುತ್ತದೆ.
ಚಾಕಲೇಟ್ ಎಂದಾಕ್ಷಣ ಅಬಾಲವೃದ್ಧರೆಲ್ಲರಿಗೂ ಬಾಯಲ್ಲಿ ನೀರೂರುತ್ತದೆ. ಈ ಚಾಕಲೇಟ್ ಬಳಸಿಕೊಂಡು ಒಂದು ಅಪೂರ್ವವಾದ ಉಡುಗೊರೆ ನೀಡಲು ಬಯಸಿದ್ದಾರೆ ನಮ್ಮ ಮಂಗಳೂರಿನವರೇ ಆದ ಹರ್ಷ ಕಾಮತ್ ಇವರು. ಅಡುಗೆಯಲ್ಲಿ ಹೊಸ ಹೊಸ ರುಚಿಯನ್ನು ಮಾಡುವ ಇವರ ಅಮ್ಮ ಮಾಯಾ ಕಾಮತ್ ಇವರೇ ಹರ್ಷ ಕಾಮತ್ ಇವರಿಗೆ ಈ ಐಡಿಯಾ ನೀಡಿದ್ದು. ೨೦೦೯ರಲ್ಲಿ ಇವರ ಸಂಬಂಧಿಕರೊಬ್ಬರ ಮಗುವಿನ ಹುಟ್ಟುಹಬ್ಬದ ಸಮಯದಲ್ಲಿ ಶುಭಕೋರಲು ಬಂದ ಮಕ್ಕಳಿಗೆಲ್ಲಾ ಏನು ಕೊಡ ಬಹುದು? ಎಂದು ಯೋಚಿಸಿದಾಗ ಈ ಉಪಾಯ ಹೊಳೆಯಿತಂತೆ. ಹೊರಗಡೆ ಹುಟ್ಟು ಹಬ್ಬ ಇರುವ ಮಗುವಿನ ಭಾವಚಿತ್ರ ಹೊಂದಿರುವ ಕವರ್, ಒಳಗೆ ಚಾಕಲೇಟ್. ಈ ಯೋಜನೆ ಯಶಸ್ವಿಯಾಗುತ್ತಿದ್ದಂತೆಯೇ ಹರ್ಷ ಕಾಮತ್ ಇದನ್ನು ಹಲವಾರು ಕೋನಗಳಲ್ಲಿ ಯೋಚಿಸಿ ಅದನ್ನು ಬಳಸಲು ಪ್ರಾರಂಭಿಸಿದರು.
ಪ್ರಾರಂಭದ ದಿನಗಳಲ್ಲಿ ಇವರಿಗೆ ಹಲವಾರು ಅಡೆತಡೆಗಳು ಎದುರಾದವು. ಬಹು ಮುಖ್ಯ ತೊಂದರೆ ಎಂದರೆ ಮಾರುಕಟ್ಟೆ. ಈ ರೀತಿಯ ಯೋಚನೆಗಳೇ ಯಾರಲ್ಲೂ ಇರಲಿಲ್ಲ. ಆದರೆ ಇವರು ಕಳೆದ ಒಂದು ದಶಕದಲ್ಲಿ ತಮ್ಮದೇ ಆದ ಮಾರುಕಟ್ಟೆಯನ್ನು ನಿರ್ಮಿಸಿಕೊಂಡಿದ್ದಾರೆ. ಮಾರುಕಟ್ಟೆ ಕಂಡುಕೊಂಡರೂ ಹೆಚ್ಚು ಬಿಸಿಲಿಗೆ ಚಾಕಲೇಟ್ ಕರಗುತ್ತಿತ್ತು. ಅದನ್ನೂ ನೋಡಿಕೊಂಡು ಮುಂದುವರೆಯಬೇಕಿತ್ತು. ಹರ್ಷ ಕಾಮತ್ ಇವರು ಈ ಎಲ್ಲಾ ಅಡೆತಡೆಗಳನ್ನು ಎದುರಿಸಿ ತಮ್ಮದೇ ಆದ 'ಹೆಪ್ಪಿನೆಸ್' ಬ್ರಾಂಡ್ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದಾರೆ. ಮಂಗಳೂರಿನಾದ್ಯಂತ ಹಲವಾರು ಕಡೆ ಇವರ ಚಾಕಲೇಟ್ ಲಭ್ಯವಿದೆ.
ಈಗ ಖ್ಯಾತ ಕಂಪೆನಿಗಳಾದ ಇನ್ಫೋಸಿಸ್, ರಾಧಾ ಟಿವಿಎಸ್ ಮುಂತಾದುವುಗಳು ಇವರ ಗ್ರಾಹಕರು. ಕಾರ್ಪೋರೇಷನ್ ಬ್ಯಾಂಕ್ ಸಹಾ ಇವರ ಬಳಿ ಉಡುಗೊರೆಗಳನ್ನು ಮಾಡಿಸಿಕೊಳ್ಳುತ್ತಿದೆ.
ಎಲ್ಲಾ ಕಾರ್ಯಕ್ರಮಗಳಿಗೂ ಅನ್ವಯವಾಗುವಂತೆ ಇವರು ತಮ್ಮ ಚಾಕಲೇಟ್ನ್ನು ಸ್ವತಃ ತಮ್ಮದೇ ಆದ ಸಣ್ಣ ಕಾರ್ಖಾನೆಯಲ್ಲಿ ನಿರ್ಮಿಸಿಕೊಡುತ್ತಾರೆ. ಸೀಮಿತ ಸಂಖ್ಯೆಯ ಸಿಬ್ಬಂದಿಗಳೂ ಇವರಿಗೆ ಸಾಥ್ ನೀಡುತ್ತಾರೆ. ಸಣ್ಣ ೨೦ ಗ್ರಾಂನ ಬಾರ್ ಚಾಕ್ಲೇಟ್ನಿಂದ ಪ್ರಾರಂಭಿಸಿ ಪರ್ಸನಲೈಸ್ಡ್ (ವೈಯಕ್ತಿಕವಾಗಿ ರೂಪಿಸಿದ) ಬಾಕ್ಸ್ಗಳೂ ಲಭ್ಯವಿದೆ. ನಿಮ್ಮದೇ ಆತ್ಮೀಯರ ಭಾವಚಿತ್ರ ಅಥವಾ ನಿಮ್ಮದೇ ಮಾತುಗಳನ್ನು ಈ ಬಾಕ್ಸ್ ಮೇಲೆ ಮುದ್ರಿಸಿಕೊಡುತ್ತಾರೆ (ಚಿತ್ರ ಗಮನಿಸಿ).
ನಿಮಗೆ ಬೇಕಾದ ರುಚಿಯಲ್ಲೂ ಚಾಕಲೇಟ್ ದೊರೆಯುತ್ತದೆ. ಮ್ಯಾಂಗೋ, ಆರೆಂಜ್, ಸ್ಟ್ರಾಬೆರಿ, ಮಿಲ್ಕ್ ಹೀಗೆ ಹಲವಾರು ಸ್ವಾದಗಳಲ್ಲೂ ಲಭ್ಯವಿದೆ. ಹಾಗೆಯೇ ಇತ್ತೀಚೆಗೆ ಒಣ ಹಣ್ಣುಗಳನ್ನು ಬಳಸಿ ಡ್ರೈ ಫ್ರುಟ್ಸ್ ಚಾಕಲೇಟ್ಗಳನ್ನೂ ತಯಾರಿಸುತ್ತಿದ್ದಾರೆ. ಗ್ರಾಹಕರ ಅಭಿರುಚಿಯಂತೆ ಇವರು ತಮ್ಮ ಸೇವೆಯನ್ನು ನೀಡುತ್ತಾರೆ. ಆನ್ಲೈನ್ ಮೂಲಕವೂ ತಮ್ಮ ಚಾಕಲೇಟ್ಗಳನ್ನು ಮಾರುವುದರಿಂದ ಇವರಿಗೆ ಕರ್ನಾಟಕ ಮಾತ್ರವಲ್ಲ ಹೊರ ರಾಜ್ಯಗಳಲ್ಲೂ ಸಂತೃಪ್ತ ಗ್ರಾಹಕರಿದ್ದಾರೆ.
ಹರ್ಷ ಕಾಮತ್ ಇವರು ಇನ್ನೂ ಸಣ್ಣ ಪ್ರಾಯದ ಯುವಕ. ಕಂಪ್ಯೂಟರ್ ಸಯನ್ಸ್ನಲ್ಲಿ ಇಂಜಿನಿಯರಿಂಗ್ ಪದವಿಯನ್ನು ಪಡೆದಿದ್ದಾರೆ. ಸ್ವಲ್ಪ ಸಮಯ ಖಾಸಗಿ ಬ್ಯಾಂಕ್ನಲ್ಲಿ ಉದ್ಯೋಗ ಮಾಡಿ ನಂತರ ತಮ್ಮದೇ ಆದ ಸ್ವಂತ ಉದ್ದಿಮೆಯನ್ನು ಪ್ರಾರಂಭಿಸಿದ್ದಾರೆ.
ಈಗ ಇವರು ಒಂದು ವರ್ಷದಲ್ಲಿ ಬರುವ ಎಲ್ಲಾ ಪ್ರಮುಖ ದಿನಗಳಿಗೆ ಚಾಕಲೇಟ್ ಬಾಕ್ಸ್ ಮಾಡಿ ಕೊಡುತ್ತಾರೆ. ಹೊಸ ವರ್ಷ, ಮಹಿಳಾ ದಿನ, ಅಮ್ಮನ ದಿನ, ಪ್ರೇಮಿಗಳ ದಿನ, ರಕ್ಷಾ ಬಂಧನ ಹೀಗೆ ಹಲವು ದಿನಗಳಿಗೆ ನಿಮ್ಮದೇ ಆದ ಉಡುಗೊರೆಯನ್ನು ನೀವು ಕೊಡ ಬಹುದು.
ನಿಮಗೆ ನಿಮ್ಮ ಆತ್ಮೀಯರಿಗೆ ವಿಶ್ ಮಾಡ ಬೇಕೇ? ಚಾಕಲೆಟೀ ವಿಶ್ ಮಾಡಿ. ನಿಮ್ಮ ಸಂಸ್ಥೆಯಿಂದ ಉಡುಗೊರೆ ನೀಡ ಬೇಕಾದರೂ ಹರ್ಷ ಕಾಮತ್ ಅವರಲ್ಲಿ ನಿಮಗೆ ಬೇಕಾದ ಉತ್ತಮ ಯೋಜನೆಗಳಿವೆ. ಹರ್ಷ ಕಾಮತ್ ಸಂಪರ್ಕ: ೯೬೧೧೯೧೭೦೦೨