"ಚಾಕ್", ಎಂಬ ಮಕ್ಕಳ, ’ಪ್ರೀತಿಯ-ಮನೆ’ !

"ಚಾಕ್", ಎಂಬ ಮಕ್ಕಳ, ’ಪ್ರೀತಿಯ-ಮನೆ’ !

ಬರಹ

ನಾವು ಇಲಿನಾಯ್ ರಾಜ್ಯದ ನಾರ್ಮಲ್-ಬ್ಲೂಮಿಂಗ್ಟನ್ ನಗರದ ನಮ್ಮ ಕಳ್ಳಂಬೆಳ್ಳಾ ಪರಿವಾರದಜೊತೆಯಲ್ಲಿ ವಾಸ್ತವ್ಯಹೂಡಿದ್ದೆವು. ಮೂರೂವರೆ ವರ್ಷದ ಮೊಮ್ಮಗಳು ಗೌರಿ, ಈಗ ತನ್ನ ’ಚಾಕ್,’ ಗೆ ಹೋಗುತ್ತಿದ್ದಾಳೆ. ಅವಳ ’ಮಿಸ್’ ಬಗ್ಗೆ ಅದೇನು ಹೆಮ್ಮೆ, ವಿಶ್ವಾಸಗಳೋ ಮಿಸ್ ಹೇಳಿದ್ದೇ ವೇದವಾಕ್ಯ ! ಇನ್ನೂ ಬೆಳಗಾಗುವುದೇ ತಡ, ಅವಳಿಗೆ ಶಾಲೆಗೆ ಹೋಗುವ ಆತುರ. ಪ್ರತಿದಿನ ಗೌರಿಯತಾಯಿಯೇ ಅವಳನ್ನು ಬಿಟ್ಟುಬರುವುದು ಆಮೇಲೆ, ಸಾಯಂಕಾಲ ೫ ಗಂಟೆಗೆ ಕರೆದುಕೊಂಡುಬರುವ ಪರಿಪಾಠವಿತ್ತು. ನಮ್ಮ ಪುಟಾಣಿ ’ಗೌರಿ,’ ಹೋಗುತ್ತಿದ್ದ ’ಕ್ರೆಷ್’ ನೋಡಬೇಕೆನ್ನಿಸಿತು. ನಾವು ಹೇಳಿದ್ದೇ ತಡ, "ಇವತ್ತೇ ಬನ್ನಿ ಅಜ್ಜ", ಎಂದು ಗೋಗರೆಯಲು ಪ್ರಾರಂಭ. "ಅಜ್ಜೀ; ನೀವೂ ಬನ್ನಿ, ನಮ್ ಮಿಸ್ ನಾ ತೋರಿಸ್ತೀನಿ; ನೋಡಿವಿರಂತೆ ". ಪಾಪ , ರಾತ್ರಿಯೆಲ್ಲಾ ಅವಳ ಶಾಲೆಯ, ಹಾಗೂಅವರ ಮಿಸ್ ಬಗ್ಗೆ, ಹೇಳಿದ್ದೇ ಹೇಳಿದ್ದು. ಕೋಳಿನಿದ್ದೆ ಮಾಡಿದ್ಲು; ನನಗೇನೋ ಕಣ್ತುಂಬಾ ನಿದ್ದೆ ! ಅಮೆರಿಕದ, ಇಲಿನಾಯ್ ರಾಜ್ಯದ, ಬ್ಲೂಮಿಂಗ್ಟನ್ ನಗರದ ’ಚಾಕ್ ಶಿಶು ಕಲ್ಯಾಣಕೇಂದ್ರ,’ ನಿರ್ವಹಿಸುತ್ತಿರುವ ರೀತಿ ಬೇರೆ ಎಲ್ಲಾ ಸಂಸ್ಥೆಗಳಿಗೂ, ಅನುಕರಣೀಯವಾದದ್ದು. ವೈಜ್ಞಾನಿಕ ಪದ್ಧತಿಗಳನ್ನು ತಮ್ಮ ಕಾರ್ಯ-ವೈಖರಿಯಲ್ಲಿ ಅಳವಡಿಸಿಕೊಂಡು, ಶಿಶುಗಳ ಸೇವೆಯನ್ನು ದೇವರಕಾರ್ಯವೆಂದು ಭಾವಿಸಿ ಅದೇ-ಮಾನಸಿಕತೆಯನ್ನು ಹೊಂದಿದ ಜವಾಬ್ದಾರಿಯುತ ಸಿಬ್ಬಂದಿಗಳ ನೆರವಿನಿಂದ ಶ್ರಮಿಸುತ್ತಿರುವ ಈ ಶಿಶು ಕಲ್ಯಾಣಕೇಂದ್ರ ಒಂದು ಮಾದರಿಸಂಸ್ಥೆಯಾಗಿ ಬೆಳೆದಿದೆ ! ೨ ರಿಂದ ೬ ವರ್ಷಗಳ ಒಳಗಿನ ಚಿಣ್ಣರ ಕಲ್ಯಾಣಕೇಂದ್ರಕ್ಕೆ ನಾವು ಭೇಟಿ ಕೊಟ್ಟಾಗ, ಯಾವುದೋ ಒಂದು ವಿಸ್ಮಯಜಗತ್ತನ್ನು ಪ್ರವೇಶಿಸಿದಂತಿತ್ತು ! ಎಲ್ಲಾ ಊರುಗಳಲ್ಲಿರುವಂತಹ ಇದೂ ಒಂದು ’ಕ್ರೆಷ್,’ ಇರಬಹುದೇನೋ ಅಂದುಕೊಂಡು ಪಾದಾರ್ಪಣೆಮಾಡಿದಾಗ ನಮಗಾದ ಅನುಭವ ಅನನ್ಯವಾದದ್ದು. ನಮ್ಮದೇಶದಲ್ಲೂ ಮುಂಬೈ, ಪುಣೆ, ಪಂಚಗಣಿ, ದೆಹಲಿ, ಚೆನ್ನೈ, ಕೊಲ್ಕತ್ತ, ಬೆಂಗಳೂರು, ಮುಂತಾದ ನಗರಗಳಲ್ಲಿ ಇಂತಹ ಕೇಂದ್ರಗಳು ಸರ್ವೇಸಾಮಾನ್ಯವಾಗಿವೆ. ಶ್ರೀಮಂತರು ತಮ್ಮ ಪ್ರೀತಿಪಾತ್ರರಾದ ಮಕ್ಕಳನ್ನು ’ಕ್ರೆಷ್’ ಗಳಲ್ಲಿ ಬಿಡುತ್ತಾರೆ. ದಿನವಿಡೀ ಕಾಡುವ ಮಕ್ಕಳಿಂದ ದೂರವಿರಬಹುದೆಂದು. ಕೆಲಸಕ್ಕೆ ಹೋಗುವ ತಾಯಿತಂದೆಯರು, ಹಾಗೆತಾನೇ ಭಾವಿಸುವುದು ? ಆದರೆ ಅದರೊಳಗೆ ಹೋದಾಗ ಅನ್ನಿಸಿದ್ದು, ಅಲ್ಲ- ಅದು ಮಕ್ಕಳಿಗಾಗಿಯೇ ಅತಿಜಾಗರೂಕತೆಯಿಂದ ಹಲವಾರು ವರ್ಷಗಳಕಾಲ ಅತ್ಯಂತ, ಶ್ರದ್ಧೆ, ತಾಳ್ಮೆ ಹಾಗೂ ಸಂಯಮಗಳಿಂದ, ಮಕ್ಕಳಲ್ಲಿ ಸುಶುಪ್ತವಾಗಿ ಅಡಗಿರುವ, ಸಂವೇದನೆಗಳು, ಜಾಣ್ಮೆ, ಕುಶಲತೆಗಳನ್ನು ಅವರಿಗೆ ಖಾತ್ರಿಮಾಡಿಸಿ ಅವರಲ್ಲಡಗಿರುವ ಎಲ್ಲಾಜಾಣತನದ ಖಜಾನೆಯ ಸಂಪತ್ತನ್ನೂ ಹೊರತರುವ ಅವರ ’ಪ್ರೀತಿಯ ಮಕ್ಕಳ-ಮನೆ,’ ಅಥವಾ ಶಿಕ್ಷಣಕೇಂದ್ರವೆಂದರೆ ತಪ್ಪಿಲ್ಲವೆಂಬುದು ನನ್ನ ಅನಿಸಿಕೆ. ೨೪೩೨, ಮಾಲೋನಿ ರಸ್ತೆಯಲ್ಲಿರುವ ಈ ಪುಟ್ಟಶಾಲೆ, ಇಲಿನಾಯ್ ನ, ೧೦,೦೦೦ ಚದರಡಿ ಜಾಗವಿರುವ ಕಟ್ಟಡ, ೭ ಕ್ಲಾಸ್ ರೂಮ್ ಗಳಿವೆ. ೨೦೦೦ ಚದರಡಿ ಸ್ಥಳವಿರುವ (indoor activity center) ದೊಡ್ಡ ’ಪಡಸಾಲೆ,’ ಅವಾ ’ದಿವಾನ್ ಖಾನೆ,’ ಇದೆ. * 1. a custom soft sculpted play area, * 2. individual activity stations, * 3. and three outdoor play areas. ಒಳಗೆ ಪ್ರವೇಶಮಾಡಿದಾಗ ನಮಗೆ ಕಂಡಿದ್ದು, ಅಷ್ಟು ಪುಟಾಣಿವಯಸ್ಸಿನ ಮಕ್ಕಳೆಲ್ಲಾ ’ಮಕ್ಕಳಮನೆ,’ ಗೆ ಹೋಗಲು ಅದೆಷ್ಟು ಇಷ್ಟಪಡುತ್ತಾರೆ ಎನ್ನುವ ವಿಷಯ ! ಪೋಷಕರು, ಶಿಕ್ಷಕರು ಜೊತೆಗೂಡಿ ಅವರಿಗೆ ಕೊಡುವ ಪ್ರೀತಿ, ಸ್ವಾತಂತ್ರ್ಯ, ಹಾಗೂ ಪ್ರೋತ್ಸಾಹಗಳಲ್ಲಿ ಏನೆಲ್ಲಾ ಪ್ರಭಾವೀ-ಶಕ್ತಿಗಳು ಅಡಗಿವೆ, ಹಾಗೂ ಅವುಗಳನ್ನು ಹೊರತರಲು, ಸರಳ ಸಾಧ್ಯತೆಗಳಿವೆ ಎನ್ನುವ ವಿಷಯ, ಅರಿವಾದದ್ದು ಅಲ್ಲೇ ! ’ಚಾಕ್,’ ನಲ್ಲಿ ದುಡಿಯುವ ಶಿಕ್ಷಕರು, ವಿಶೇಶ ತರಪೇತಿಪಡೆದ, ಸೇವಾನಿರತ ಮಕ್ಕಳನ್ನು ಪ್ರೀತಿಸುವ ಹೆಣ್ಣುಮಕ್ಕಳು. ಕೇವಲ ಹಣಕ್ಕಾಗಿ ಕೆಲಸಮಾಡುವವರಲ್ಲ. ಪ್ರತಿಮಗುವನ್ನೂ ಸರಿಯಾಗಿ ಗಮನಿಸಿ ಅದರ ಮನೋಭಾವವನ್ನು ಅರ್ಥಮಾಡಿಕೊಂಡು ಅದಕ್ಕಾಗಿಯೇ ಬೇಕಾದ ಅವಕಾಶಗಳನ್ನು ರೂಪಿಸಿ, ಮಕ್ಕಳಮನಸ್ಸನ್ನು ಗೆಲ್ಲುವಕಲೆ ಅವರಿಗೆ ಕರಗತ. ಕ್ರಿಶ್ಚಿಯನ್ ಮತಸಂಸ್ಥೆಗಳು, ನಿರ್ವಹಿಸುವ ಸೇವಾಕಾರ್ಯಗಳು ಸಾಮಾನ್ಯವಾಗಿ ಅನುಕರಣೀಯವಾಗಿರುತ್ತವೆ. ನಮ್ಮದೇಶದ ಕೆಲವು ಆಸ್ಪತ್ರೆಗಳಲ್ಲಿ ಅವರು ಮಾಡುವ ರೋಗಿಗಳಸೇವೆ, ನಾವು ಅವಲೋಕಿಸಿದಾಗಲೇ ನಮಗೆ ಅರಿವಾಗುವುದು ! * The hands-on learning experiences : ಮಕ್ಕಳ ಮನಸ್ಸಿನಲ್ಲಿ ಚಿಕ್ಕವಯಸ್ಸಿನಲ್ಲಿಯೇ ಯಶಸ್ಸನ್ನು ಕಾಣುವ ಭರವಸೆ ಮೂಡಿಸುವುದು ಅತಿಮುಖ್ಯ. ಅವರೇ ತಮ್ಮ ಕೈಗಳಿಂದ ಸ್ವಂತವಾಗಿ ಕೆಲಸಮಾಡುವ ಸೌಕರ್ಯಗಳನ್ನು ಒದಗಿಸುತ್ತಾರೆ. ಗೆಲುವಿನ ಹಾದಿಯಲ್ಲಿ ಮುಂದುವರೆಯುವ ಗುಣವನ್ನು ಬೆಳೆಸಿ, ನೀರೆರೆಯುತ್ತಾರೆ. ಪ್ರತಿ ತಿಂಗಳಿಗೆ ೭೦೦ ಡಾಲರ್ ಫೀ ಕೊಟ್ಟರೂ ಅಡ್ಡಿಯಿಲ್ಲ. ಅಂತಹ ಹಣವನ್ನು ತುಂಬಲು ಸಮರ್ಥರಾದ ತಂದೆತಾಯಂದಿರೇ ಅಲ್ಲಿಗೆ ಹೆಚ್ಚಾಗಿ ಬರುವುದು. ಅಲ್ಲಿನ ಪರಿಸರದಲ್ಲಿ, ಕಲಿಯುವ ಸಾಧ್ಯತೆಗಳು ಅತಿ-ಹೆಚ್ಚು. ಹೊಸಭಾಷೆಗಳು, (ಇಂಗ್ಲೀಷ್ ನ ಜೊತೆ, ಸ್ಪಾನಿಷ್, ಫ್ರೆಂಚ್, ಮತ್ತು ಜರ್ಮನ್ ಭಾಷೆಗಳನ್ನು ಕಲಿಸುತ್ತಾರೆ.) ಕರ-ಕೌಶಲ್ಯಗಳು, ನಯವಾದ ಮಾತು-ಕತೆ, ಎಲ್ಲರಲ್ಲೂ ಬೆರೆಯುವ ಮನೋಭಾವ, ಸದ್ಗುಣಗಳ ಕಲಿಕೆ, ದೇಶಪ್ರೇಮ, ದೇಶಭಾಷಾಪ್ರೇಮ, ಹೊಂದಾಣಿಕೆ, ಸಾಮಾನ್ಯ ಜ್ಞಾನ, ಇತ್ಯಾದಿಗಳು. ಧರ್ಯ, ಆತ್ಮವಿಶ್ವಾಸಗಳನ್ನು ಅನೇಕ ಸುಲಭಮಾರ್ಗಗಳಲ್ಲಿ ಮಕ್ಕಳಮನಸ್ಸಿನಲ್ಲಿ ಭದ್ರವಾಗಿ ಮುದ್ರಿಸಿಬಿಡುತ್ತಾರೆ. ಸೇವಾಮನೋಭಾವ, ನಿಜವಾಗಿಯೂ ಹೇಳಿಕೊಡಲಾಗದ ಭಾಗ. ಅವನ್ನು ಮಕ್ಕಳೇ ತಮ್ಮ ಜೀವನದಲ್ಲಿ ವಾಸ್ತವವಾಗಿ ಅನುಭವಿಸಿ ಕಂಡುಕೊಳ್ಳಬೇಕು. ಬಲಹೀನರ-ಸೇವೆ, ಭಯಂಕರ-ರೋಗಗಳಿಂದ ನರಳುವವರ ಸೇವೆ, ವಯಸ್ಸಾದವರ ಸೇವೆ, ಅಂಗವಿಕಲರಸೇವೆ, ಇತ್ಯಾದಿಗಳ ಬಗ್ಗೆ ನಮ್ಮ ತಿಳುವಳಿಕೆ ಬಹಳ ಕಡಿಮೆಯೆನ್ನುವ ವಿಷಯದ ಗಮನ ನಮಗೆ ಬಂದದ್ದು ಅಲ್ಲೇ ! ಅಬ್ಬಾ ಅದೆಷ್ಟುವಿಷಯಗಳಲ್ಲಿ ನಾವು, ಹಾಗೂ ನಮ್ಮ ಮಕ್ಕಳು ಪರಿಣತಿ ಪಡೆಯಬೇಕು ? ನಮ್ಮ ಕಾಲದ ಜೀವನಕ್ಕೂ ಇಂದಿನ-ಮುಂದಿನ ಸ್ಪರ್ಧಾತ್ಮಕ ಜೀವನದ ಆವಶ್ಯಕತೆಗಳಿಗೂ ಅಜ-ಗಜಾಂತರ ಅಂತರವಲ್ಲವೇ ! ಪ್ರಗತಿಶೀಲ ರಾಷ್ಟ್ರಗಳಲ್ಲಿ ಇದರ ಕಾಳಜಿ ಇನ್ನೂ-ಮತ್ತಷ್ಟು-ಹೆಚ್ಚು ಎನ್ನುವಮಾತಿನಲ್ಲಿ, ಎಳ್ಳಷ್ಟೂ ಸಂಶಯವಿಲ್ಲ !