ಚಾಣಕ್ಯ- ಅದ್ಭುತ ಕನಸುಗಾರ

ಚಾಣಕ್ಯ- ಅದ್ಭುತ ಕನಸುಗಾರ

ಪುಸ್ತಕದ ಲೇಖಕ/ಕವಿಯ ಹೆಸರು
ಮೂಲ: ಪಿ.ಖುರಾನಾ, ಕನ್ನಡಕ್ಕೆ: ಓ. ಆರ್. ಪ್ರಕಾಶ್
ಪ್ರಕಾಶಕರು
ಸಪ್ನ ಬುಕ್ ಹೌಸ್, ಗಾಂಧಿನಗರ, ಬೆಂಗಳೂರು - ೫೬೦೦೦೯
ಪುಸ್ತಕದ ಬೆಲೆ
ರೂ.೭೦.೦೦, ಮುದ್ರಣ: ಸೆಪ್ಟೆಂಬರ್ ೨೦೨೨

“ಚಾಣಕ್ಯ ಒಬ್ಬ ಮಹಾನ್ ಕನಸುಗಾರ. ಒಂದು ರಾಜ್ಯ ಮತ್ತು ಸಂಸಾರದಲ್ಲಿ ಸನ್ಮಾರ್ಗ ಮತ್ತು ಸಂತೋಷದ ವಿಜಯವನ್ನು ನಿರೂಪಿಸುವ ಮಹಾಕಾವ್ಯ ಮಹಾಭಾರತ. ಒಂದು ಆಶ್ಚರ್ಯಕರ ಸೂತ್ರ ನೀಡುತ್ತದೆ. “ ಸಂತೋಷದ ಮೂಲ ಧರ್ಮ". ಚಾಣಕ್ಯ ಇದನ್ನೇ ಅನುಸರಿಸಿದ್ದಾನೆ.

ಚಾಣಕ್ಯನ ಬೋಧನೆಗಳು ಜೀವನಕ್ಕೆ ಸಂಪದ್ಭರಿತವಾಗಿವೆ. ಶತಮಾನಗಳೇ ಕಳೆದರೂ, ಸ್ವಾಭಾವಿಕ ಅನಾಹುತಗಳು ಈ ಗ್ರಹದ ರೂಪ ರೇಷೆಗಳನ್ನೇ ಬದಲಾಯಿಸಿದರೂ, ಅವು ಜೀವಂತ, ಅತ್ಯಾವಶ್ಯಕ ಮತ್ತು ವಿನೂತನವಾಗಿರುತ್ತವೆ. ಅಂತಹ ಬೋಧನೆಗಳು ಎಂದೂ ನಾಶವಾಗುವುದಿಲ್ಲ; ಅಂತಹ ಮಹಾನ್ ವ್ಯಕ್ತಿಗಳು ನಿರಂತರ ನಮ್ಮೊಡನಿರುತ್ತಾರೆ. ಯಾವುದು ನಿಜವಾಗಿ ಶ್ರೇಷ್ಟತಮವಾದುದೋ ಅದನ್ನು ಎಂದೂ ನಿರ್ಮೂಲಗೊಳಿಸಲಾಗದು.” ಈ ವಾಕ್ಯಗಳು ‘ಚಾಣಕ್ಯ-ಅದ್ಭುತ ಕನಸುಗಾರ' ಪುಸ್ತಕದ ಬೆನ್ನುಡಿಯಲ್ಲಿ ಕಂಡುಬರುತ್ತವೆ. 

ಖ್ಯಾತ ಜ್ಯೋತಿಷಿಯೂ ಹಾಗೂ ಮನೋರೋಗ ಚಿಕಿತ್ಸಕರಾದ ಪಿ.ಖುರಾನಾ ಅವರು ಆಂಗ್ಲ ಭಾಷೆಯಲ್ಲಿ ಬರೆದ ಪುಸ್ತಕವನ್ನು ಓ ಆರ್ ಪ್ರಕಾಶ್ ಅವರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಮೂಲ ಲೇಖಕರಾದ ಪಿ.ಖುರಾನಾ ಅವರು ಚಾಣಕ್ಯನ ಬಗ್ಗೆ ಪರಿಚಯ ಮಾಡಿಕೊಡುವಾಗ ಹೀಗೆ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. 

“ವೃತ್ತಿಯಿಂದ ನಾನೊಬ್ಬ ಜ್ಯೋತಿಷಿ ಮತ್ತು ಮನೋರೋಗ ಚಿಕಿತ್ಸಕ; ಚಾಣಕ್ಯನನ್ನು ನನ್ನ ಮೆಚ್ಚಿನ ನಾಯಕನನ್ನಾಗಿ ಮಾಡಿಕೊಂಡು ಪುಸ್ತಕ ರಚಿಸಲು ಹೊರಟಾಗಗಿ, ನನ್ನ ಓದುಗರು ಸಖೇದಾಶ್ಚರ್ಯದಿಂದ 'ಏಕೆ' ಎಂದು ಕೇಳಿದರು. ನಾನು ನನ್ನ ಗುರುವಿನಿಂದ ಜ್ಯೋತಿಷ್ಯಾಸ್ತ್ರ ಮತ್ತು ಯಂತ್ರ ವಿದ್ಯೆಯನ್ನು ಕಲಿಯುತ್ತಿದ್ದಾಗ, ಅವರು ಹೇಳಿದ್ದೇನೆಂದರೆ- ದೊಡ್ಡ ಕನಸಿನ ಯಾವುದೇ ಜ್ಯೋತಿಷ್ಯನೂ ಯಶಸ್ಸನ್ನು ಸಾಧಿಸಲಾರ. ದೊಡ್ಡ ಕನಸನ್ನು ಹೊಂದಿದ ಯಾರೇ ಆದರೂ ವೃತ್ತಿಯಲ್ಲಿ ಸಂತೋಷ, ಅಭಿವೃದ್ಧಿ, ವಿಜಯ ಎಲ್ಲವನ್ನು ಸಾಧಿಸುತ್ತಾನೆ. ಈ ಕನಸಿನೊಂದಿಗೆ ಯಶಸ್ಸು ಗಳಿಸಲು ಆತನಿಗೆ ತನ್ನ ಸತ್ಕರ್ಮಗಳ ಬೆಂಬಲವೂ ಇರಬೇಕು. ಇದಕ್ಕಾಗಿ ನನ್ನ ಗುರುಗಳು ಚಾಣಕ್ಯನ ನೈತಿಕ ಬೇರುಗಳನ್ನು ಅನುಸರಿಸಲು ಹೇಳಿದ್ದರು.

ತನ್ನ ಮನಸ್ಸಿನಲ್ಲಿ ಸ್ಪಷ್ಟತೆಯನ್ನು ಹೊಂದಿರದೆ ಚಾಣಕ್ಯನ ಮಾರ್ಗವನ್ನು ಅನುಸರಿಸದ ಜ್ಯೋತಿಷಿಯು, ಚುಕ್ಕಾಣಿ ಇಲ್ಲದೆ ಆಳ ಸಮುದ್ರದಲ್ಲಿ ಮುಳುಗೇಳುವ ಹಡಗಿನಂತೆ, ಅಜ್ಞಾನ ಸಾಗರದಲ್ಲಿ ಇರುತ್ತಾನೆ. ಚಾಣಕ್ಯನ ವಿಚಾರಗಳ ಅರಿವಿಲ್ಲದ ವ್ಯಕ್ತಿ, ರಸ್ತೆಯಲ್ಲಿ ಕಸ ಗುಡಿಸಲು ಬರುವ ಜಾಡಮಾಲಿಯಂತೆ, ರಸ್ತೆಯಿಂದ ರಸ್ತೆಗೆ ಹೋಗುತ್ತಾ, ಎಲ್ಲೆಡೆ ಸಿಗುವ ಕಸವನ್ನು ಸಂಗ್ರಹಿಸುತ್ತಾನೆಯೇ ಹೊರತು ಅದೇ ಸಮಯದಲ್ಲಿ ಸುತ್ತಲಿರುವ ಸೃಷ್ಟಿಯ ಸೌಂದರ್ಯವನ್ನು ಸವಿಯಲಾರದವನಾಗುತ್ತಾನೆ.

ಕೆಲವೊಮ್ಮೆ ಹಲವು ಜ್ಯೋತಿಷಿಗಳು ತಾವು ತಮ್ಮ ಜೀವನದ ಉದ್ದೇಶವನ್ನು ಸಾಧಿಸುತ್ತಿರುವುದಾಗಿಯೂ, ಕೆಲವೊಮ್ಮೆ ವಿಚಿತ್ರವಾಗಿ ಚಿಂತಿಸುವುದನ್ನು ಮಾಡುತ್ತಾರೆ. ಚಾಣಕ್ಯನ ಜ್ಞಾನವನ್ನು ಯಥೋಚಿತವಾಗಿ ಅನ್ವಯಿಸಿದಾಗ, ನನಗೆ ಹಾಲು ಮತ್ತು ನೀರನ್ನು ಬೇರೆಯಾಗಿ ನೋಡಲು ಸಾಧ್ಯವಾಗಿದೆ. ಚಾಣಕ್ಯನ ಬೋಧನೆಯ ಎಂದರೆ ಅಳುತ್ತಿರುವ ಮಗುವನ್ನು ಸದಾ ಸಂತೈಸುವ ತಾಯಿಯ ವಾತ್ಸಲ್ಯದ ಹಸ್ತದಂತೆ ಅಥವಾ ಜೀವನದ ಕಡಲಿನಲ್ಲಿ ಆಧಾರವಿಲ್ಲದೆ ಮುಳುಗುತ್ತಿರುವ ನಮ್ಮನ್ನು ಉಳಿಸಲು ಬರುವ ತಿರುದೋಣಿ ಅಥವಾ ತೆಪ್ಪದಂತೆ. ಆತನ ಚಿಂತನೆ ನನ್ನನ್ನು ರಾತ್ರಿಯ ಕತ್ತಲಿನಲ್ಲಿ ಕಳೆದುಹೋಗದಂತೆ ಉಳಿಸಿದೆ.

ಯಾವುದೇ ವ್ಯಕ್ತಿ ತನ್ನ ಜ್ಯೋತಿಷ್ಯ ಜೀವನ ಅಥವಾ ಆಧ್ಯಾತ್ಮದ ಜೀವನದಲ್ಲಿ ಪ್ರಗತಿ ಸಾಧಿಸಲು, ಪರಮಾತ್ಮನ ಅನುಗ್ರಹ ಬಹು ಮುಖ್ಯವಾಗಿರುತ್ತದೆ. ಈಗಾಗಲೇ ಒಂದು ದಾರಿಯಲ್ಲಿ ಪ್ರಯಾಣಿಸಿದವನು, ಅದೇ ದಾರಿಯಲ್ಲಿ ಹೊರಟಿರುವ ಹೊಸಬನಿಗೆ ಸ್ಪಷ್ಟವಾದ ಮಾರ್ಗದರ್ಶನ ನೀಡಲು ಶಕ್ತನಿರುವಂತೆ, ಜೀವನದ ಕಷ್ಟ ಸುಖಗಳನ್ನು ಅನುಭವಿಸಿರುವ ವ್ಯಕ್ತಿಯೂ ಕೂಡ, ಇತರರಿಗೆ ಮಾರ್ಗದರ್ಶನ ನೀಡಲು ಸಮರ್ಥವಾಗಿ ಇರುತ್ತಾನೆ. ಪ್ರಾಚೀನ ಭಾರತದಲ್ಲಿ ಕ್ರಿಯಾಶೀಲ ಜೀವನದ ತತ್ವಜ್ಞಾನವನ್ನು ಪ್ರತಿಪಾದಿಸಿದ ಚಾಣಕ್ಯನ ವಿಚಾರಧಾರೆಯನ್ನೇ, ಆಧುನಿಕ ಕಾಲದಲ್ಲಿ ಸ್ವಾಮಿ ವಿವೇಕಾನಂದರು ಪುನರ್ ಪ್ರತಿಪಾದಿಸಿದ್ದಾರೆ."

ಪುಸ್ತಕದಲ್ಲಿ ಚಾಣಕ್ಯನ ಬಗ್ಗೆ ಎರಡು ಅಧ್ಯಾಯಗಳಿವೆ. ಒಂದು-ಚಾಣಕ್ಯ ಅದ್ಭುತ ಕನಸುಗಾರ ಮತ್ತೊಂದು ಚಾಣಕ್ಯನ ಬುದ್ಧಿವಂತಿಕೆ. ಸುಮಾರು ೭೫ ಪುಟಗಳ ಈ ಪುಸ್ತಕದ ಕೊನೆಯಲ್ಲಿ ಚಾಣಕ್ಯನು ಪ್ರತಿಪಾದಿಸಿದ ಸೂಕ್ತಿಗಳನ್ನು ನೀಡಲಾಗಿದೆ. ಒಟ್ಟಿನಲ್ಲಿ ಇದೊಂದು ಪುಟ್ಟದಾದರೂ ಓದಲು ಸೂಕ್ತವಾದ ಪುಸ್ತಕ ಎನ್ನಬಹುದಾಗಿದೆ.