ಚಾಮರಸ ಮತ್ತು ಬೇಂದ್ರೆ

ಚಾಮರಸ ಮತ್ತು ಬೇಂದ್ರೆ

ಬರಹ

ಈಗಿನ ದಿನಗಳಲ್ಲಿ ಈ ಎಬ್ಬರು ಕವಿಗಳ ಕೃತಿಗಳನ್ನು ಓದುತ್ತಿದ್ದೇನೆ. ಆಗ ಓದುವಾಗ ನನಗೆ ಇವರಿಬ್ಬರಲ್ಲಿ ಬಹಳ ಸಾಮ್ಯತೆ ಕಂಡುಬಂತು. ಇದನ್ನು ಗಮನಿಸುತ್ತಾ ಓದಿದರೆ ಇನ್ನು ಖುಶಿ ಸಿಗುತ್ತೆ ಅಂತ ಒಂದೇ ಸಮನೆ ಇಬ್ಬರನ್ನು ಓದುತ್ತಾ ಇದ್ದೀನಿ.

ಮೊದಲಿಗೆ, ಇಬ್ಬರ ಪದ್ಯಗಳು ಕಿವಿಗೆ ರಾಚುವಂತೆ ಇವೆ. ಬೇರೆಯವರು ಓದುವುದನ್ನು ಅಥವಾ ನೀವೆ ಓದುತ್ತಿದ್ದರೆ ಕೇಳುವುದಕ್ಕೆ ಹಿತವೆನಿಸಿ ನಿಮ್ಮ ಗಮನವನ್ನು ಸೆಳೆಯುತ್ತದೆ. ಅಂದರೆ ಶ್ರವಣತೆಗೆ ಒತ್ತು ಕೊಡಲಾಗಿದೆ. ಇದೇ ಈ ಇಬ್ಬರ ಪದ್ಯಗಳ ಜೀವಾಳ.

ಉದಾ: ಚಾಮರಸನ ಪ್ರಭುಲಿಂಗಲೀಲೆಯ ಈ ಸಾಲುಗಳ ನೋಡಿ

"ಉಣಿಸುವುಣಿಸೆಂದೆಂಬರೆಲ್ಲರು |

ವುಣಿಸನುಂಬುದನಿಂದು ಕಂಡೆವು |

ದಣಿಸಿದಿರಿ ನೀವಾದೊಡೆಮ್ಮನು ಭಕ್ತ ನಿಮ್ಮಾಣೆ ||

ಅಣಕವಲ್ಲಿದು ನರಸುರೋರಗ |

ರೆಣಿಕೆಯೊಳು ನಿನಗಾರು ಸರಿ ಕಾ |

ರಣಕಳಾತ್ಮಕ ನೀನೆಲೈ ಬಸವಣ್ಣ ಕೇಳೆಂದ "

ಇದು ಅಲ್ಲಮನು ಬಸವಣ್ಣನ ಮನೆಗೆ ಬಂದಾಗ ಬಸವಣ್ಣನು ಅವನನ್ನು ಸತ್ಕರಿಸುವ ರೀತಿ ಕಂಡು ಅಲ್ಲಮನು ಹೇಳುವ ಮಾತು.

ಇಲ್ಲಿ ಪ್ರತಿ ಸಾಲಿನ ಎರಡನೆ ಸಾಲಿನ ಅಕ್ಕರಗಳು 'ಣ','ಣಿ' ಇಂದ ಕೂಡಿದೆ. ಚಾಮರಸನು ಈ ರೀತಿ ಪ್ರಯೋಗ ಉದ್ದಕ್ಕೂ ಮಾಡಿದ್ದಾನೆ. ಇದರಿಂದಲೇ ಇದು ಗಮಕಿಗಳಿಗೆ ಹತ್ತಿರವಾಗಿರಬಹುದು. ಈ ರೀತಿಯ ಚೆಲುವಾದ ಸಾಲುಗಳು ಬೇಕಾದಷ್ಟಿವೆ.

ಇನ್ನು ಬೇಂದ್ರೆಯವರು ಶಬ್ದಗಳ ಸೊಗಡನ್ನು ಹೀರಿ ಬೆಳೆದ ಕೆಲವೇ ಕೆಲವರಲ್ಲಿ ಒಬ್ಬರು. ಮಡಿವಂತಿಕೆಗೆ ಮಣೆ ಹಾಕದೆ ಯಾವುದೇ ಪದಗಳ ಪ್ರಯೋಗಕ್ಕೆ ಹಿಂಜರಿಯದೆ ಶಬ್ದ ಸೌಂದರ್ಯವನ್ನು ನಮಗೆ ಅವರ ಪದ್ಯಗಳಲ್ಲಿ 'ಉಣಿ'ಸುತ್ತಾರೆ. ನನಗಂತೂ ಮೆಚ್ಚಿನ ಕವಿ ಇವರೇ.

"ಒಂದೇ ಬಾರಿ ನನ್ನ ನೋಡಿ

ಮಂದನಗಿ ಹಾಂಗ ಬೀರಿ

ಮುಂದ ಮುಂದ ಮುಂದ ಹೋದ

ಹಿಂದ ನೋಡದ ಗೆಳತಿ"

ಇಲ್ಲಿ 'ಮುಂದ' ಅನ್ನೋ ಪದವನ್ನು ಮೂರು(೩) ಸಲ ಬಳಸಿ ಆ ದೃಶ್ಯವನ್ನು ನಮ್ಮ ಮನಸ್ಸಿನಲ್ಲಿ ಅಚ್ಚು ಒತ್ತಿದಂತೆ ಮಾಡುತ್ತಾರೆ. ಈ ಹಾಡು ಕೇಳಿ ಮಾರುಹೋಗದವರು ಇಲ್ಲವೆನ್ನಬಹುದು.

ಇನ್ನೊಂದು ಅವರ 'ಸಖಿಗೀತ' ಹೊತ್ತಿಗೆಯಿಂದ

" ತುಮ್ ತುಮ್ ತುಮ್ ತುಮ್ ತುಮ್ ತುಮ್ ತುಮ್ ತುಮ್

ತುಂಬಿ ಬಂದಿತ್ತ ತಂಗೀ

ತುಂಬಿ ಬಂದಿತ್ತು || ಪಲ್ಲವಿ||

ಬೆಳಕಿಗಿಂತ ಬೆಳ್ಲಗೆ ಇತ್ತ

ಗಾಳಿಗಿಂತ ತೆಳ್ಲಗೆ ಇತ್ತ

ಜಡಿಯಿಂದಿಳಿದ ಗಂಗಿ ಹಾಂಗ......."

ಇಲ್ಲಿ 'ತುಮ್' ಅನ್ನೊ simple ಪದವನ್ನು ೮ ಸಲ ಬಳಸಿದ್ದಾರೆ. ಯಾಕೆಂದರೆ ಕೇಳುವವರಿಗೆ( ಓದುವವರಿಗೆ ಮಾತ್ರ ಅಲ್ಲ) ಇದರಿಂದ ಪದ್ಯದ ಭಾವ, ಸನ್ನಿವೇಶದ tempo ಹೆಚ್ಚಿಸುತ್ತಾ ಹೋಗುತ್ತದೆ. ಈ ತರ ಬರೆಯೋಕ್ಕೆ ಎಷ್ಟು ಗುಂಡಿಗೆ, ಕಲ್ಪಾನ ಶಕ್ತಿ ಬೇಕು ಅಂತ ಯೋಚಿಸಿ.

ಒಟ್ಟಿನಲ್ಲಿ ಚಾಮರಸ ಮತ್ತು ಬೇಂದ್ರೆಯವರಿಗೆ ತುಂಬ ತುಂಬ ತುಂಬ ನನ್ನಿಗಳು, ಕನ್ನಡ ಸೊಗಡನ್ನು ಉಣಬಡಿಸಿದ್ದಕ್ಕೆ.