ಚಾರಣಕ್ಕೆ ಹೊರಡುವಿರಾ...?
ಚಾರಣ ಅಥವಾ ಟ್ರೆಕ್ಕಿಂಗ್ ಮಾಡುವುದು ಒಂದು ಆಹ್ಲಾದಕರ ಅನುಭವ. ಯಾರು ಪರಿಸರವನ್ನು ಪ್ರೀತಿಸುತ್ತಾರೋ, ಅನಿರೀಕ್ಷಿತ ತಿರುವುಗಳ ಅಪಾಯಗಳನ್ನು ಅನುಭವಿಸ ಬಯಸುತ್ತಾರೋ, ಪ್ರಾಣಿ ಪಕ್ಷಿಗಳನ್ನಿ ಯಾರು ಪ್ರೀತಿಸುತ್ತಾರೋ ಅವರಿಗೆ ನಿಜಕ್ಕೂ ಚಾರಣ ಹೇಳಿ ಮಾಡಿಸಿದ್ದು. ಕೈಕಾಲು ಗಟ್ಟಿಯಾಗಿದ್ದು, ಮನಸ್ಸಲ್ಲಿ ಯಾವುದೇ ಅಪಾಯವನ್ನು ಎದುರಿಸುವ ಹುಮ್ಮಸ್ಸು ಇದ್ದರೆ ಬೆಟ್ಟ-ಗುಡ್ಡಗಳಿಗೆ ಚಾರಣ ಹೋಗಬಹುದು. ಕರ್ನಾಟಕ ರಾಜ್ಯದಲ್ಲೇ ಹಲವಾರು ಚಾರಣಕ್ಕೆ ಹೋಗಬಹುದಾದ ಸ್ಥಳಗಳಿವೆ. ನವೆಂಬರ್ ನಿಂದ ಎಪ್ರಿಲ್ ತಿಂಗಳು ಚಾರಣಕ್ಕೆ ಪ್ರಶಸ್ಥ. ಬೆಟ್ಟಗಳಲ್ಲಿನ ಚುಮು ಚುಮು ಚಳಿ, ಕೆಲವೊಮ್ಮೆ ಅನಿರೀಕ್ಷಿತವಾಗಿ ಸುರಿಯುವ ಮಳೆ ಇವೆಲ್ಲವೂ ಮುದ ನೀಡುತ್ತದೆ.
ನಾನು ೯೦ ರ ದಶಕದಲ್ಲಿ ಕಾಲೇಜಿನಲ್ಲಿ ಪದವಿಯಲ್ಲಿ ಓದುತ್ತಿದ್ದಾಗ ನಮ್ಮಲ್ಲಿ ‘ಮೌಂಟನೇರಿಂಗ್ ಆಂಡ್ ಹೋಬ್ಬೀಸ್' (Mountaineering & Hobbies) ಎಂಬ ಒಂದು ವಿಭಾಗ ಇತ್ತು. (ಎನ್ ಎಸ್ ಎಸ್ ಮತ್ತು ಎನ್ ಸಿ ಸಿ ತರಹ) ಇದರ ಪ್ರಮುಖ ಚಟುವಟಿಕೆಯೆಂದರೆ ವರ್ಷದಲ್ಲಿ ಒಮ್ಮೆ ಯಾವುದಾದರೂ ಶಿಖರಕ್ಕೆ ಚಾರಣ ಹೋಗುವುದು. ಹಾಗೆ ನಾನು ಎರಡು ವರ್ಷ ಚಾರಣಕ್ಕೆ ಹೋಗಿದ್ದೆ. ಒಂದು ವರ್ಷ ನಾನೇ ಈ ವಿಭಾಗದ ಕಾರ್ಯದರ್ಶಿಯಾಗಿದ್ದೆ. ಪ್ರಥಮ ವರ್ಷ ಕೊಡಚಾದ್ರಿ (ಕೊಲ್ಲೂರು ದೇವಸ್ಥಾನದ ಸಮೀಪ) ಹಾಗೂ ಎರಡನೇ ವರ್ಷ ಕುಮಾರ ಪರ್ವತ (ಸುಬ್ರಹ್ಮಣ್ಯ ದೇವಾಲಯದ ಬಳಿ) ಕ್ಕೆ ಚಾರಣಕ್ಕೆ ಹೋಗಿದ್ದೆನು.
ಮೊದಲ ವರ್ಷ ಕೊಡಚಾದ್ರಿಗೆ ಹೋದಾಗ ವಾತಾವರಣ ಹಿತಕರವಾಗಿತ್ತು. ಬೆಟ್ಟ ಏರುವ ದಾರಿಯೂ ಸಲೀಸಾಗಿತ್ತು ಹಾಗೆ ಬಹುಬೇಗನೇ ಶಿಖರದ ತುದಿಗೆ ತಲುಪಿದ್ದೆವು. ನಾವು ಸುಮಾರು ೨೫ ಮಂದಿ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಹಾಗೂ ಮೂವರು ಉಪನ್ಯಾಸಕರು ಇದ್ದೆವು. ರಾತ್ರಿ ಕ್ಯಾಂಪ್ ಫಯರ್ ಹಾಕಿ ಚಳಿ ಕಾಯಿಸಿದೆವು. ಕಾಡೆಮ್ಮೆಗಳ ಹಿಂಡು ನಮ್ಮ ಹತ್ತಿರದಲ್ಲೇ ಹಾದು ಹೋಗಿತ್ತು. ಬೆಂಕಿಯ ಕಾರಣದಿಂದ ಅದು ನಮ್ಮ ಬಳಿಗೆ ಬರಲಿಲ್ಲ. ಮರುದಿನ ಸುಂದರವಾದ ಪರಿಸರದಲ್ಲಿ ಮಿಂದು ಗಾಢ ನೆನಪಿನೊಂದಿಗೆ ಹಿಂದಿರುಗಿದೆವು. ಆದರೆ ಮುಂದಿನ ವರ್ಷದ ಕುಮಾರ ಪರ್ವತ ಚಾರಣ ಪ್ರತಿಕೂಲ ವಾತಾವರಣದ ಕಾರಣ ನಮಗೆ ಶಿಖರವನ್ನು ತಲುಪಲು ಆಗಲಿಲ್ಲ. ಅಂದು ರಾತ್ರಿ ಜೋರಾದ ಮಳೆ ಸುರಿದ ಕಾರಣ ನಮಗೆ ಮುಂದುವರೆಯಲು ಆಗಲೇ ಇಲ್ಲ. ಆದರೂ ಅದೊಂದು ರೀತಿಯ ಅನುಭವವೇ ಅಲ್ಲವೇ. ಜಿಗಣೆಗಳಿಂದ ಕಡಿಸಿಕೊಂಡು ಮರಳಿ ಬಂದದ್ದೂ ಆಯಿತು. ಇವೆರಡೂ ಚಾರಣಗಳ ಅನುಭವ ನನ್ನ ಮನಸ್ಸಲ್ಲಿ ಇನ್ನೂ ಹಸಿರಾಗಿಯೇ ಇದೆ.
ಆ ಸಮಯ ನಮ್ಮಲ್ಲಿದ್ದ ಉತ್ಸಾಹದಲ್ಲಿ ನಾವು ಚಾರಣಕ್ಕೆ ಯಾವ ಸಿದ್ಧತೆಯನ್ನೂ ಮಾಡಿಕೊಂಡಿರಲಿಲ್ಲ, ಆದರೆ ಈಗ ನೀವು ಪಶ್ಚಿಮ ಘಟ್ಟಕ್ಕೆ ಚಾರಣ ಹೋಗುವಿರಾದರೆ ನೇರವಾಗಿ ಹೋಗುವುದು ಅಪಾಯಕರ ಮತ್ತು ಕಾನೂನು ಬಾಹಿರವೂ ಹೌದು. ಏಕೆಂದರೆ ಕಾಡು ಅರಣ್ಯ ಇಲಾಖೆಯ ಸುಪರ್ದಿಯಲ್ಲಿ ಬರುವುದರಿಂದ ಅವರಲ್ಲಿ ಅನುಮತಿ ತೆಗೆದುಕೊಳ್ಳುವುದು ಬಹಳ ಮುಖ್ಯ. ಕಾಡಿನ ಒಳಗೆ ಕೆಲವೊಮ್ಮೆ ನಕ್ಸಲರ, ಕಾಡುಗಳ್ಳರ ಹಾಗೂ ಕೆಲವೊಂದು ಕಾಡು ಪ್ರಾಣಿಗಳ ಹಾವಳಿ ಇರುವ ಸಾಧ್ಯತೆ ಇರುತ್ತದೆ. ನೀವು ಚಾರಣಕ್ಕೆ ಹೋಗುವ ಸ್ಥಳ ಹಾಗೂ ನಿಮ್ಮ ತಂಡದ ಸದಸ್ಯರ ಪಟ್ಟಿಯನ್ನು ಸ್ಥಳೀಯ ಆರಕ್ಷಕ (ಪೋಲೀಸ್) ಠಾಣೆಯಲ್ಲಿ ನೀಡುವುದು ಅಪೇಕ್ಷಣೀಯ. ಏಕೆಂದರೆ ಚಾರಣ ಸಮಯದಲ್ಲಿ ಏನಾದರೂ ಅಪಾಯವಾದರೆ ನಿಮ್ಮನ್ನು ಪತ್ತೆ ಹಚ್ಚುವುದು ಸುಲಭವಾಗಲಿದೆ.
ನಾವು ೯೦ರ ದಶಕದಲ್ಲಿ ಚಾರಣಕ್ಕೆ ಹೋಗುವಾಗ ಯಾರ ಬಳಿಯಲ್ಲೂ ಮೊಬೈಲ್ ಎಂಬ ಸಾಧನ ಇರಲಿಲ್ಲ. ಆದರೆ ಈಗ ಎಲ್ಲರ ಬಳಿಯೂ ಮೊಬೈಲ್ ಇದ್ದೇ ಇದೆ. ಚಾರಣ ಹೊರಡುವ ಮೊದಲು ನಿಮ್ಮ ಮೊಬೈಲ್ ಬ್ಯಾಟರಿಯನ್ನು ಸರಿಯಾಗಿ ಚಾರ್ಜ್ ಮಾಡಿರಿ. ಏಕೆಂದರೆ ನಿಮಗೆ ಗುಡ್ಡದಲ್ಲಿ ಚಾರ್ಜಿಂಜ್ ಮಾಡುವ ಅವಕಾಶವಿರುವುದಿಲ್ಲ. ಸಾಧ್ಯವಿದ್ದರೆ ಪವರ್ ಬ್ಯಾಂಕ್ ಹಿಡಿದುಕೊಂಡಿರಿ. ನಿಮ್ಮ ಬಳಿ ಸಾಮಾನ್ಯ ಫೋನ್ (ಕೀ ಪ್ಯಾಡ್ ಇರುವ) ಇದ್ದರೆ ಅದನ್ನು ಉಪಯೋಗಿಸಿ. ಏಕೆಂದರೆ ಅದರ ಬ್ಯಾಟರಿ ಹೆಚ್ಚು ಸಮಯ ಬರುತ್ತದೆ. ಸ್ಮಾರ್ಟ್ ಫೋನ್ ಬ್ಯಾಟರಿ ಅಧಿಕ ಸಮಯ ಬರುವುದಿಲ್ಲ. ನೀವು ಹೋಗುವ ಸ್ಥಳದಲ್ಲಿ ಮೊಬೈಲ್ ಜಾಲ ಸಕ್ರಿಯವಾಗಿದೆಯೇ ಎಂಬ ವಿಷಯವನ್ನು ತಿಳಿಯಿರಿ. ಇಲ್ಲವಾದರೆ ನೀವು ಚಾರಣ ಹೋಗುವ ದಾರಿಯಲ್ಲಿ ಎಲ್ಲೆಲ್ಲಿ ನೆಟ್ ವರ್ಕ್ ಸಿಗುತ್ತದೆ ಎಂಬುದನ್ನು ಗುರುತು ಮಾಡಿ ಇಡಿ. ಆಪತ್ಕಾಲದಲ್ಲಿ ಸಹಾಯಕ್ಕೆ ಬರುತ್ತದೆ. ಎಮರ್ಜೆನ್ಸಿ ಸಂಖ್ಯೆ ೧೧೨ ನ್ನು ನೆನಪಿಡಿ. ಇದು ನೆಟ್ ವರ್ಕ್ ಇಲ್ಲದಿದ್ದರೂ ಉಪಯೋಗಕ್ಕೆ ಬರುತ್ತದೆ. ನಿಮ್ಮ ಊರಿನಲ್ಲಿರುವ ಆತ್ಮೀಯರಿಗೆ ನೀವು ಸಾಗುವ ದಾರಿಯ ಮಾಹಿತಿಯನ್ನು ಕಾಲಕಾಲಕ್ಕೆ ನೀಡುತ್ತಾ ಇರಿ. ಇದರಿಂದ ನಿಮ್ಮ ಇರುವಿಕೆಯ ಪತ್ತೆ ಸುಲಭವಾಗುತ್ತದೆ.
ಬೆಟ್ಟ ಗುಡ್ಡಗಳಲ್ಲಿ ಅನಿರೀಕ್ಷಿತವಾಗಿ ಮಳೆ ಬರುವುದು ಸಾಮಾನ್ಯ ಸಂಗತಿ. ಚಳಿಯೂ ಇರುತ್ತದೆ. ಆದುದರಿಂದ ಉತ್ತಮ ರೈನ್ ಕೋಟ್, ಕೊಡೆ ಹಾಗೂ ಸ್ವೆಟರ್ ಗಳನ್ನು ತೆಗೆದುಕೊಂಡು ಹೋಗಲು ಮರೆಯಬೇಡಿ. ಚಪ್ಪಲಿಗಳಿಗಿಂತ ಉತ್ತಮ ಗ್ರಿಪ್ ಹೊಂದಿರುವ ಶೂ ಬಳಕೆ ಮಾಡಿ. ಇದರಿಂದ ಜಿಗಣೆಗಳ ಕಾಟದಿಂದಲೂ ಅಲ್ಪಮಟ್ಟಿಗೆ ಬಚಾವಾಗಬಹುದು.
ಪರಿಚಯವಿಲ್ಲದ ಸ್ಥಳದಲ್ಲಿ ಚಾರಣ ಮಾಡುವಿರಾದರೆ ನೀವು ಸ್ಥಳೀಯ ಯುವಕರನ್ನು ಗೈಡ್ ರೀತಿಯಲ್ಲಿ ಬಳಸಿಕೊಳ್ಳಬಹುದು. ಅವರಿಗೆ ಆ ಸ್ಥಳದ ಪರಿಚಯ ಚೆನ್ನಾಗಿರುವುದರ ಜೊತೆಗೆ ನೀವು ಸುಮ್ಮನೇ ಕಾಡಿನಲ್ಲಿ ದಾರಿ ತಪ್ಪಿ ಅಲೆದಾಡುವುದು ತಪ್ಪುತ್ತದೆ. ಅವರಿಗೆ ಸ್ವಲ್ಪ ಹಣವನ್ನು ನೀಡುವುದು ಅಪೇಕ್ಷಣೀಯ. ಅವರಾಗಿಯೇ ಇಂತಿಷ್ಟು ಹಣ ಕೊಡಬೇಕು ಎಂದರೆ ಅವರು ಹೇಳಿದ ಮೊತ್ತ ಸೂಕ್ತವೆಂದು ಕಂಡರೆ ಮಾತ್ರ ಒಪ್ಪಿ ಕೊಂಡು ಮುಂದುವರೆಯಿರಿ.
ಈಗೆಲ್ಲಾ ಮೊಬೈಲ್ ನಲ್ಲೇ ಉತ್ತಮ ದರ್ಜೆಯ ಕ್ಯಾಮರಾಗಳಿವೆ. ಆದರೂ ನೀವು ಕ್ಯಾಮರಾ ತೆಗೆದುಕೊಂಡು ಹೋಗುವಿರಾದರೆ ಅದಕ್ಕೆ ಸರಿಹೊಂದುವ ಬ್ಯಾಗ್, ಫ್ಲಾಷ್ ಲೈಟ್, ಬ್ಯಾಟರಿ, ಲೆನ್ಸ್ ಗಳನ್ನು ಮರೆಯದೇ ತೆಗೆದುಕೊಂಡಿರಿ. ಮಂಜಿನಿಂದ ಆದಷ್ಟು ಕ್ಯಾಮರಾಗಳನ್ನು ದೂರವಿಡಿ. ಲೆನ್ಸ್ ನಲ್ಲಿ ಫಾಗ್ ಬಂದರೆ ಒಂದು ರೀತಿಯ ಫಂಗಸ್ ಬೆಳೆದು ತೆಗೆದ ಚಿತ್ರಗಳು ಚೆನ್ನಾಗಿ ಬರುವುದಿಲ್ಲ.
ಸಾಧ್ಯವಾದಷ್ಟು ಕಡಿಮೆ ಬಟ್ಟೆ ಬರೆಗಳನ್ನು ತೆಗೆದುಕೊಳ್ಳಿರಿ. ಆದರೆ ಅವಶ್ಯಕವಾಗಿ ಬೇಕಾದ ಆಹಾರ, ನೀರು, ಟಾರ್ಚ್, ಹಗ್ಗ, ಪುಟ್ಟ ಕತ್ತಿ, ಕ್ಯಾಂಡಲ್, ಬೆಂಕಿಪೆಟ್ಟಿಗೆ ಇವುಗಳನ್ನು ಹಿಡಿದುಕೊಂಡಿರಿ. ಕಾಡಿನ ಒಳಗಡೆ ರಾತ್ರಿಯ ನಿಲುಗಡೆ ಮಾಡುವಿರಾದರೆ ಬೆಂಕಿ ಉರಿಸಲು ಬೇಕಾದ ವಸ್ತುಗಳನ್ನು ತೆಗೆದುಕೊಂಡು ಹೋಗಿ. ಆದರೆ ಕಾಡು ಒಣಗಿರುವ ಸಂದರ್ಭದಲ್ಲಿ ಜೋರಾಗಿ ಗಾಳಿ ಬೀಸುತ್ತಿದ್ದರೆ ಕ್ಯಾಂಪ್ ಫಯರ್ ಹಾಕುವುದು ಅಪಾಯಕಾರಿ. ನಿಮ್ಮ ಒಲೆಯಿಂದ ಹಾರಿದ ಒಂದು ಕಿಡಿ ಇಡೀ ಕಾಡನ್ನು ಉರಿಸಿ ಬೂದಿ ಮಾಡಿ ಬಿಡಬಹುದು. ಒಮ್ಮೆ ಕಾಡ್ಗಿಚ್ಚು ಪ್ರಾರಂಭವಾದರೆ ಅದನ್ನು ನಂದಿಸುವುದು ಕಷ್ಟ ಸಾಧ್ಯ. ನೀವು ಇದರಿಂದ ಕಾಡಿನ ಅಮೂಲ್ಯ ಸಂಪತ್ತಿನ ಜೊತೆಗೆ ಕಾಡು ಪ್ರಾಣಿಗಳನ್ನು ಬಲಿಯಾಗಿಸುವಿರಿ. ಬೆಂಕಿ ಹಾಕದೇ ಟಾರ್ಚ್ ಲೈಟ್ ಮೂಲಕವೇ ನೀವು ರಾತ್ರಿಯನ್ನು ಕಳೆಯುವುದು ಉತ್ತಮ.
ಚಾರಣಕ್ಕೆ ತೆರಳುವ ಮೊದಲು ಪ್ರಥಮ ಚಿಕಿತ್ಸಾ ಪೆಟ್ಟಿಗೆಯನ್ನು ತೆಗೆದುಕೊಳ್ಳಲೇ ಬೇಕು. ಗಾಯಕ್ಕೆ ಮುಲಾಮು, ತಲೆ ನೋವು, ಶೀತ, ಜ್ವರದ ಔಷಧಿ, ಬ್ಯಾಂಡೇಜ್ ಪಟ್ಟಿಗಳು. ಇವೆಲ್ಲಾ ಅಗತ್ಯವಾಗಿ ಬೇಕಾಗುತ್ತವೆ. ಕಾಡಿನಲ್ಲಿ ಒಂದೊಮ್ಮೆ ದಾರಿ ತಪ್ಪಿದರೆ ಗಾಬರಿಯಾಗಿ, ಸುಮ್ಮನೇ ಅಲೆದಾಡಿ ಸುಸ್ತು ಮಾಡಿಕೊಳ್ಳಬೇಡಿ. ಎಲ್ಲಾದರೂ ಮೊಬೈಲ್ ನೆಟ್ ವರ್ಕ್ ಸಿಗುವುದೋ ಗಮನಿಸಿ. ರಾತ್ರಿಯಾದರೆ ದೂರದಲ್ಲಿ ಎಲ್ಲಾದರೂ ಇರುವ ಮನೆಯ ದೀಪಗಳು ಕಾಣಿಸುತ್ತವೆಯೇ ನೋಡಿ. ಅಲ್ಲಿಗೆ ಹೋದರೆ ನಿಮಗೆ ಅವರು ಸರಿ ದಾರಿಗೆ ಹೋಗಲು ನೆರವು ನೀಡಿಯಾರು. ಅನಾವಶ್ಯಕ ಸಾಹಸಗಳನ್ನು ಮಾಡಬೇಡಿ. ಕಾಡು ಪ್ರಾಣಿಗಳು ಕಂಡರೆ ಗಾಬರಿಯಾಗದೇ ಸುಮ್ಮನಿರಿ. ಪುಟ್ಟ ಪುಟ್ಟ ಪ್ರಾಣಿಗಳಿಗೆ ತೊಂದರೆ ಕೊಡಬೇಡಿ. ಕೊಲ್ಲಲು ಹೋಗಬೇಡಿ.
ಚಾರಣ ಮಾಡುವ ಸಂದರ್ಭದಲ್ಲಿ ನಿಮಗೆ ಹಿತಕರವಾದ ಅನುಭವವೇ ಆಗಬೇಕೆಂದಿಲ್ಲ. ಕೆಲವೊಮ್ಮೆ ನಿಮಗೆ ಅನಿರೀಕ್ಷಿತ ಅವಘಡಗಳೂ ಸಂಭವಿಸಬಹುದು. ಆದರೆ ಇವೆಲ್ಲವೂ ನಿಮ್ಮ ಚಾರಣದ ಅನುಭವದ ಭಾಗವೆಂದು ತಿಳಿಯಿರಿ. ಮುಂದೆ ಮತ್ತೆ ಚಾರಣ ಹೋಗುವಾಗ ಈ ಅನುಭವಗಳು ನಿಮಗೆ ಅನುಕೂಲಕ್ಕೆ ಬರಲಿವೆ. ತುಂಬಾ ದೀರ್ಘವಾದ ಚಾರಣ ಮಾಡಲು ಹೋಗದಿರಿ. ಸುಸ್ತಾಗುವ ಸಾಧ್ಯತೆ ಇದೆ. ಒಮ್ಮೆ ಕೈ ಕಾಲು ಮನಸ್ಸು ಸೋತಿತೆಂದರೆ ನೀವು ಮತ್ತೆ ತುಂಬಾ ಮುಂದುವರೆಯಲಾರಿರಿ. ಜಾಗ್ರತೆಯಿಂದ ಚಾರಣ ಮಾಡಿ, ಪ್ರತಿಯೊಂದು ಕ್ಷಣವನ್ನು ಅನುಭವಿಸಿ, ಮಜಾ ಮಾಡಿ. ಹ್ಯಾಪ್ಪೀ ಟ್ರೆಕ್ಕಿಂಗ್...!
ಸಾಂದರ್ಭಿಕ ಚಿತ್ರ ಕೃಪೆ: ಅಂತರ್ಜಾಲ ತಾಣ