ಚಾರ್ಲಿ ಚಾಪ್ಲಿನ್ ನ ಮರೆಯಲಾಗದ ಆ ಎರಡು ಚಿತ್ರಗಳು

ಚಾರ್ಲಿ ಚಾಪ್ಲಿನ್ ನ ಮರೆಯಲಾಗದ ಆ ಎರಡು ಚಿತ್ರಗಳು

ಚಾರ್ಲಿ ಚಾಪ್ಲಿನ್ ಎಂದರೆ ಯಾರಿಗೆ ಗೊತ್ತಿಲ್ಲ? ಅಬಾಲವೃದ್ಧರಾದಿಯಾಗಿ ಈ ಮೂಕಿ, ಕಪ್ಪು ಬಿಳುಪು ಚಿತ್ರದ ನಾಯಕ, ನಿರ್ದೇಶಕನನ್ನು ಗುರುತಿಸಿಯೇ ಗುರುತಿಸುತ್ತಾರೆ. 1889ರ ಎಪ್ರಿಲ್ ೧೬ರಂದು ಜನಿಸಿದ ಚಾಪ್ಲಿನ್ ತನ್ನ ಬಾಲ್ಯವನ್ನು ಅತ್ಯಂತ ಬಡತನ ಮತ್ತು ಕಷ್ಟದಿಂದ ಕಳೆದ. ತಂದೆಯ ನೆರಳಿಲ್ಲದ ಮಗುವನ್ನು ಕಷ್ಟದಿಂದ ಸಾಕಿದ ಚಾಪ್ಲಿನ್ ತಾಯಿ ಅಧಿಕ ಸಮಯ ಮಗನನ್ನು ನೋಡಲು ಬದುಕಲಿಲ್ಲ. ಸಣ್ಣ ವಯಸ್ಸಿನಿಂದಲೇ ನಾಟಕ, ರಂಗಭೂಮಿಯ ಸಂಪರ್ಕ ಬೆಳೆಸಿಕೊಂಡ ಚಾರ್ಲಿ ಚಾಪ್ಲಿನ್ ಭವಿಷ್ಯದಲ್ಲಿ ಅದ್ವಿತೀಯ ನಟ, ನಿರ್ದೇಶಕ ಎಂದು ಹೆಸರುಗಳಿಸಿಕೊಂಡ. ಚಾಪ್ಲಿನ್ ಸ್ವತಃ ಪ್ರೀತಿಸುತ್ತಿದ್ದ ಎರಡು ಚಿತ್ರಗಳ ಬಗ್ಗೆ ನಾವು ಒಂದಿಷ್ಟು ತಿಳಿದು ಕೊಳ್ಳೋಣ.

‘ದಿ ಕಿಡ್' (The Kid) ೧೯೨೧ರಲ್ಲಿ ಬಿಡುಗಡೆಯಾದ ಈ ಚಿತ್ರವನ್ನು ಸ್ವತಃ ಚಾರ್ಲಿ ಚಾಪ್ಲಿನ್ ನಿರ್ದೇಶಿಸಿ ನಟಿಸಿದ್ದರು. ಇದೊಂದು ಪೂರ್ಣ ಪ್ರಮಾಣದ ಮೂಕಿ ಚಿತ್ರವಾಗಿತ್ತು. ಈ ಚಿತ್ರದಲ್ಲಿ ಚಾಪ್ಲಿನ್ ಅಲೆಮಾರಿಯೊಬ್ಬನ ಪಾತ್ರ ನಿರ್ವಹಿಸಿದ್ದ. ಈ ಅಲೆಮಾರಿಗೆ ಸಿಗುವ ಅನಾಥ ಮಗುವಿನ ಸುತ್ತ ಈ ಚಿತ್ರ ಕೇಂದ್ರೀಕ್ರತವಾಗಿತ್ತು. ಜಾಕಿ ಕೂಗನ್ ಎಂಬ ಬಾಲ ನಟ ಅನಾಥ ಮಗುವಿನ ಪಾತ್ರ ನಿರ್ವಹಿಸಿದ್ದ. ಇಡೀ ಚಿತ್ರದಲ್ಲಿ ಇವರಿಬ್ಬರ ಜುಗಲ್ ಬಂದಿ ಹಾಸ್ಯದ ಹೊನಲನ್ನೇ ಹಾಸಿತ್ತು. ಅನಾಥ ಮಗುವಿನ ತಾಯಿ ತನ್ನ ಮಗುವನ್ನು ಹುಡುಕುವ ಸಲುವಾಗಿ ಬಹುಮಾನವನ್ನು ಘೋಷಿಸುತ್ತಾಳೆ. ಇದರಿಂದ ಎಲ್ಲರೂ ಆ ಮಗುವಿನ ಹಿಂದೆ ಬೀಳುತ್ತಾರೆ. 

ಚಾಪ್ಲಿನ್ ಮತ್ತು ಮಗು ಚಿತ್ರದುದ್ದಕ್ಕೂ ನೋಡುಗರನ್ನು ರಂಜಿಸುತ್ತಾರೆ. ಬೇರೆ ಬೇರೆ ರೀತಿಯಲ್ಲಿ ವೇಷ ಮರೆಸಿ ತಮ್ಮನ್ನು ಹುಡುಕುವವರಿಗೆ ಮರುಳು ಮಾಡುತ್ತಾರೆ. ಚಿತ್ರ ಬಿಡುಗಡೆಯಾಗಿ ಚಿತ್ರ ಮಂದಿರಗಳಲ್ಲಿ ಪ್ರದರ್ಶಿತವಾದಾಗ ಜನ ಕಿಕ್ಕಿರಿದು ನೆರೆದಿದ್ದರು. ದಿ ಕಿಡ್ ಚಿತ್ರವು ಅಂದಿನ ಚಲನ ಚಿತ್ರದ ಇತಿಹಾಸದಲ್ಲಿ ಒಂದು ಅವಿಸ್ಮರಣೀಯ ಚಿತ್ರವಾಗಿ ಜನಮಾನಸದಲ್ಲಿ ನೆಲೆ ನಿಂತಿದೆ.

ಎರಡನೇ ಚಿತ್ರ ೧೯೨೫ರಲ್ಲಿ ಬಿಡುಗಡೆಯಾದ ‘ಗೋಲ್ಡ್ ರಷ್' (Gold Rush). ಇದೂ ಸಹ ಮೂಕಿ ಚಿತ್ರವಾಗಿದ್ದು ಇದರಲ್ಲೂ ಚಾಪ್ಲಿನ್ ಅಲೆಮಾರಿಯೊಬ್ಬನ ಪಾತ್ರ ನಿರ್ವಹಣೆ ಮಾಡಿದ್ದ. ಚಾಪ್ಲಿನ್ ತನ್ನ ವಿಭಿನ್ನ ಶೈಲಿಯ ನಡಿಗೆಗೆ ಹೆಸರುವಾಸಿ. ಹಾಗೆಯೇ ತಮ್ಮ ಮೀಸೆ, ಹರಿದ ಹಳೆಯದಾದ ಕೋಟು ಇವೆಲ್ಲಾ ಜನರನ್ನು ಬೇಗನೇ ಆಕರ್ಷಿಸಿತು. ಚಿತ್ರದಲ್ಲಿ ಬಂಗಾರದ ನಿಕ್ಷೇಪ ಹುಡುಕುವ ಚಾಪ್ಲಿನ್ ಪಾತ್ರ ಸದಾ ಕಾಲ ನೆನಪಿನಲ್ಲಿ ಉಳಿಯುವಂತದ್ದು. 

ಈ ಚಿತ್ರದಲ್ಲಿ ಅತ್ಯಂತ ಕರುಣಾಜನಕ ದೃಶ್ಯವೆಂದರೆ ಹಸಿವಿನಿಂದ ಕಂಗಾಲಾದ ಇಬ್ಬರು ತಮ್ಮ ಶೂಗಳನ್ನು ಬೇಯಿಸಿ ಅದನ್ನು ತಿನ್ನುವ ದೃಶ್ಯ. ಇದನ್ನು ನೋಡಿದಾಗ ಕರುಳು ಕಿತ್ತು ಬರುತ್ತದೆ. ಹೀಗೆ ಮೂಕಿ ಚಿತ್ರಗಳಾದರೂ, ಕಪ್ಪು ಬಿಳುಪಿನ ತಮ್ಮ ಸಮಯದಲ್ಲಿ ನಮಗೆ ಮರೆಯಲಾಗದ ಹಲವು ಚಿತ್ರಗಳನ್ನು ನೀಡಿದ ಚಾರ್ಲಿ ಚಾಪ್ಲಿನ್ ನಿಜಕ್ಕೂ ಸ್ಮರಣೀಯರು.  ಸುಮಾರು ೭೫ ವರ್ಷಗಳ ಕಾಲ ನಮ್ಮನ್ನು ರಂಜಿಸಿದ ಈ ನಟ ನಮ್ಮನ್ನು ಅಗಲಿದ್ದು ೧೯೭೭ರ ಡಿಸೆಂಬರ್ ೨೫ರಂದು. ಈ ಚಲನ ಚಿತ್ರಗಳು ಅಂತರ್ಜಾಲದಲ್ಲಿ ನೋಡಲು ಸಿಗುತ್ತವೆ. ಸಮಯ ಸಿಕ್ಕಾಗ ದಯವಿಟ್ಟು ನೋಡಿ.

ಮುಗಿಸುವ ಮುನ್ನ: ಚಾಪ್ಲಿನ್ ಜೀವಿತಾವಧಿಯಲ್ಲೇ ಒಮ್ಮೆ ಚಾರ್ಲಿ ಚಾಪ್ಲಿನ್ ನಂತೆಯೇ ವೇಷ ಧರಿಸಿ ನಟಿಸುವ ಸ್ಪರ್ಧೆ ಏರ್ಪಟ್ಟಿತ್ತು. ಹಲವಾರು ಮಂದಿ ಭಾಗವಹಿಸಿದ ಸ್ಪರ್ಧೆಯಲ್ಲಿ ಚಾರ್ಲಿ ಚಾಪ್ಲಿನ್ ಕೂಡಾ ಭಾಗವಹಿಸಿದ್ದರು. ಆದರೆ ದುರಂತವೆಂದರೆ ಸ್ವತಃ ಅವರ ಪಾತ್ರದಲ್ಲೇ ಸ್ಪರ್ಧಿಸಿದ ಚಾಪ್ಲಿನ್ ಗೆ ಮೂರನೇ ಸ್ಥಾನ ಸಿಕ್ಕಿತ್ತು. 

ಚಿತ್ರ ಕೃಪೆ: ಅಂತರ್ಜಾಲ ಕೃಪೆ