ಚಾಲುಕ್ಯರ ಶಿಲ್ಪಕಲೆ

ಚಾಲುಕ್ಯರ ಶಿಲ್ಪಕಲೆ

ಪುಸ್ತಕದ ಲೇಖಕ/ಕವಿಯ ಹೆಸರು
ಪುಂಡಲೀಕ ಕಲ್ಲಿಗನೂರ
ಪ್ರಕಾಶಕರು
ಕನ್ನಡ ಪ್ರಕಾಶನ, ಗಜೇಂದ್ರಗಢ, ಗದಗ
ಪುಸ್ತಕದ ಬೆಲೆ
ರೂ. ೨೪೫೦.೦೦, ಮುದ್ರಣ: ೨೦೨೧

‘ಚಾಲುಕ್ಯರ ಶಿಲ್ಪಕಲೆ’ ಕೃತಿಯು ಪುಂಡಲೀಕ ಕಲ್ಲಿಗನೂರ ಅವರ ಸಂಶೋಧನಾ ಗ್ರಂಥ. ಈ ಬೃಹತ್ ಗ್ರಂಥದಲ್ಲಿ ಒಂದೂವರೆ ಸಾವಿರಕ್ಕೂ ಹೆಚ್ಚು ಚಿತ್ರಗಳಿವೆ. ಈ ಚಿತ್ರಗಳು ಚಾಲುಕ್ಯರ ಶ್ರೀಮಂತಿಕೆಯನ್ನು ಎತ್ತಿ ಹಿಡಿಯುತ್ತವೆ. ಪುಸ್ತಕದ ಕಲಾತ್ಮಕ ಪುಟ ವಿನ್ಯಾಸ ಓದುಗರನ್ನು ಸೆಳೆಯುತ್ತವೆ.

ಕೃತಿಗೆ ಬೆನ್ನುಡಿ ಬರೆದಿರುವ ನಳಿನ ಡಿ. ಅವರು, ಜಗತ್ತಿನ ಇತಿಹಾಸ ಕಟ್ಟುವಲ್ಲಿ ಶಿಲ್ಪಗಳು, ಸ್ಮಾರಕಗಳು, ಶಾಸನಗಳು ತಮ್ಮದೇ ಆದ ಕೊಡುಗೆ ನೀಡಿದೆ. ಆದರೂ ಇತಿಹಾಸವೇ ಹಾಗೆ ತಿರುಚುಮಲ್ಲನ ಘೋರ ಕಾಳಗದ ನಡುವೆ ಎಲ್ಲೆಲ್ಲೋ ಸತ್ಯಗಳು ಅಡಗಿರುವುದನ್ನು ಕಾಣಬಹುದು. ಸತ್ಯಶೋಧನೆಗೆ ಒಳಪಡಿಸದೆ ಒಪ್ಪಬಾರದೆಂಬ ತತ್ವಕ್ಕೆ ಕಟ್ಟುಬಿದ್ದವರಿಗೆ ಇತಿಹಾಸವೆಂದು ತಿಳಿದಿದಕ್ಕಿಂತ ಸಂಶೋಧನಾತ್ಮಕವಾಗಿ ಮನಗಾಣುವುದು ಬೆಟ್ಟದಷ್ಟಿರುವುದು. ಹೀಗೆ ಸತ್ಯ ದರ್ಶನದ ಮೂಲಕ ಕನ್ನಡ ನಾಡು ನುಡಿ ಸಂಸ್ಕೃತಿಯ ಮೂಲಗಳನ್ನು ಜಗತ್ತಿನೆದುರು ತರುವ ಸಾಹಸಕ್ಕೆ ಕೈ ಹಾಕಿದವರು ಕಲವಿದ ಕೆ. ವಿ ಪುಂಡಲೀಕ. ಕಣ್ಣಾ ಮುಚ್ಚೇ ಕಾಡೇ ಗೂಡೇಯಂತೆಯೇ ಓದಿಕೊಂಡಿದ್ದೆಲ್ಲಾ ನಿಜ ಅರಿತುಕೊಂಡವರಿಗೆ ಈ ಪುಸ್ತಕಗಳು ಬಿಚ್ಚಿಡುವ ನಿಜದ ಚರಿತ್ರೆಗಳು ಬೆಚ್ಚಿಬೀಳಿಸುವುದರಲ್ಲಿ ಅಚ್ಚರಿ ಇಲ್ಲ. ಹಿತ್ತಲ ಗಿಡ ಮದ್ದಲ್ಲವೆಂದುಕೊಂಡೇ ನಮ್ಮ ದಿವ್ಯ ಮರೆವಿಗೆ ಸರಿಯುವ ಅದೆಷ್ಟೋ ಸ್ಥಳಗಳ ದೇಗುಲಗಳು, ಪ್ರವಾಸಿ ತಾಣಗಳು, ಸ್ಮಾರಕ, ಸ್ತೂಪಗಳು, ಬೆಟ್ಟ ಗುಡ್ಡಗಳು ಇವರ ಸಂಶೋಧನೆಯ ಕ್ಯಾಮೆರಾಗೆ ಸಿಕ್ಕು ಅಪರೂಪದ ಮಾಹಿತಿ ಶೋಧವಾಗಿ ಕೈಗೆ ಸಿಕ್ಕಾಗ ಕನ್ನಡಿಗನ ಹೃದಯ ಧನ್ಯತೆಯಿಂದ ಮುಗಿಯುವುದು. ಕರ್ನಾಟಕದ ಮೂಲೆ ಮೂಲೆಗಳಲ್ಲಿ ಇವರ ಸಂಚಾರ ಮಿಂಚಿನಂತೆ ಮಿನುಗಿ ಶಿಲ್ಪಗಳ, ದೇಗುಲಗಳ ಭಿನ್ನ ನೋಟಗಳನ್ನು ಒದಗಿಸಿರುವ ಪರಿ ಆಮೋಘವಾದದ್ದು. ಬಾದಾಮಿ ಐಹೊಳೆ ಪಟ್ಟದಕಲ್ಲು ಮತ್ತು ಮಹಾಕೂಟಗಳ ಮಹಾನ್ ಶಿಲ್ಪಕಲೆಗಳನ್ನೊಳಗೊಂಡ ‘ಚಾಲುಕ್ಯರ ಶಿಲ್ಪಕಲೆ’ ಕೃತಿಯು ಮಹತ್ವವಾಗಿದೆ. ನೈಸರ್ಗಿಕವಾದ ವಿಕೋಪಗಳಿಗೆ ಸಿಲುಕಿ ಮುಂದಾನೊಂದು ಜಿಲ್ಲೆಯಲ್ಲಿಯೂ ಇಂತಹ ಅಪೂರ್ವ ದಾಖಲೀಕರಣದ ಕೃತಿ ಸರ್ಕಾರದ ವತಿಯಿಂದಲೇ ತಯಾರಾಗುವಂತಾಬೇಕು. ಆಗಲೇ ಸಮರ್ಥನಿಯವಾಗಿ ಹಿಂದಿನ ಕೊಡುಗೆಯನ್ನು ಮುಂದಿನ ಜನಾಂಗಕ್ಕೆ ತಲುಪಿಸಲು ಸಾಧ್ಯವಾಗುವುದು’ ಎಂದು ಅಭಿಪ್ರಾಯಪಟ್ಟಿದ್ದಾರೆ.

ಕರ್ನಾಟಕದ ಪ್ರಸಿದ್ಧ ಕಲಾವಿದರಾದ ಪುಂಡಲೀಕ ಕಲ್ಲಿಗನೂರ ಇವರು ಅಪಾರ ಶ್ರಮವಹಿಸಿ ಪ್ರಕಟಿಸಿದ ‘ಚಾಲುಕ್ಯರ ಶಿಲ್ಪಕಲೆ’ ಕೃತಿಯಲ್ಲಿ ಈ ಬಗೆಯ ಹೊಸ ದೃಷ್ಟಿಕೋನಗಳಿವೆ. ಚಿತ್ರಕಲೆಗೆ ಚಿತ್ರ ಎನ್ನುವಂತೆ ಅಪರೂಪದ ಫೋಟೋಗಳು ಮತ್ತು ಅದ್ಭುತ ಒಳನೋಟಗಳಿರುವುದರಿಂದ ಈ ಕೃತಿ ಕರ್ನಾಟಕ-ಕನ್ನಡಿಗರ ಕನ್ನಡಿ ಎನ್ನಬಹುದು” ಎನ್ನುತ್ತಾರೆ ಐ.ಜೆ, ಮ್ಯಾಗೇರಿ. ಪುಸ್ತಕಕ್ಕೆ ಬರೆದ ಮುನ್ನುಡಿ ನಿಮ್ಮ ಓದಿಗಾಗಿ...

“ಕರ್ನಾಟಕದಲ್ಲಿ ಬನವಾಸಿ ಕದಂಬರ ಮೂಲಕ ರಾಜ್ಯಗಳು ಉದಯವಾದರೆ, ಬಾದಾಮಿ ಚಾಲುಕ್ಯರ ಮೂಲಕ ಸಾಮಾಜ್ಯಗಳು ಉದಯವಾದವು, ಯುದ್ಧ, ಸಂಘರ್ಷ, ರಾಜಿ ಸಂಬಂಧಗಳ ಮೂಲಕ ಕದಂಬ ಪಲ್ಲವರೊಂದಿಗೆ ಗೆಳೆತನ ಸಾಧಿಸಿದರೆ ಕೊನೆ ತಲೆಮಾರಿನ ಚಕ್ರವರ್ತಿಗಳೊಂದಿಗೆ ರಾಜಕೀಯ ಸಂಬಂಧ ಬೆಳೆಸಿ, ದಕ್ಷಿಣ ಭಾರತದಲ್ಲಿಯೇ ಅತ್ಯಂತ ಬಲಿಷ್ಟವಾದ ರಾಜಕೀಯ ಸಾಂಸ್ಕೃತಿಕ ಸಾಮ್ರಾಜ್ಯವನ್ನು ಕಟ್ಟಿದ ಕೀರ್ತಿ ಸಮರ್ಥನಾದ. ಬಾದಾಮಿ ಚಾಲುಕ್ಯರಿಗೆ ಸಲ್ಲುತ್ತದೆ. ಬಾದಾಮಿ ಚಾಲುಕ್ಯರು ಮೂಲತ 'ಆಯೋಧ್ಯೆಯಿಂದ ಈ ನಾಡಿಗೆ ಬಂದವರು, ಇಡೀ ದಕ್ಷಿಣ ಭಾರತದ ವಾಸ್ತುಶಿಲ್ಪದ ಜನ್ಮಸ್ಥಳವಾದ ಐಹೊಳೆಯನ್ನು ಸಾಂಸ್ಕೃತಿಕ ರಾಜಧಾನಿ ಬಾದಾಮಿಯನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ವಿಶಾಲ ಕರ್ನಾಟಕದ ಉದಯಕ್ಕೆ ಕಾರಣವಾದರು. ನಂತರದ ರಾಷ್ಟ್ರಕೂಟರು, ಚಾಲುಕ್ಯರನ್ನು ಕರ್ನಾಟಕದ ಬಲ' ಎಂದು ಕರೆದಿದ್ದು ಅರ್ಥಪೂರ್ಣವಾಗಿದೆ, ವೈದಿಕರಾಗಿರುವ ಚಾಲುಕ್ಯರು ವೈಷ್ಣವ, ಶೈವ, ಜೈನ ಮತ್ತು ಬೌದ್ಧ ಧರ್ಮಗಳಿಗೆ ಘೋಷಣೆ ನೀಡಿ ತಮ್ಮ ಧರ್ಮ ಸಹಿಷ್ಣತೆಯನ್ನು ಮೆರೆದರು. ಬಾದಾಮಿ ಐಹೊಳೆ ಪಟ್ಟದಕಲ್ಲುಗಳಲ್ಲಿನ ಅವರ ವಾಸ್ತುಶಿಲ್ಪದ ಪರಂಪರೆಯೇ ಇದಕ್ಕೆ ಸಾಕ್ಷಿ, ಅಲ್ಲಿಯವರೆಗೂ ಒಂದೇ ಪಂಥದ ಪರವಾಗಿರುವ ರಾಜಕೀಯ ಮನೋಧರ್ಮ ಚಾಲುಕ್ಯರ ಕಾಲದಲ್ಲಿ ಧಾರ್ಮಿಕ ಮತ್ತು ಸಾಮಾಜಿಕ ಸಹಿಮತೆಯ ಪರವಾಗಿರುವುದು ಕಂಡು ಬರುತ್ತದೆ.

ಕರ್ನಾಟಕದಲ್ಲಿ ಭಗವತಿ ಹಾಗೂ ಸಪ್ತಮಾತೃಕೆಗಳ ಪರಂಪರೆ ಬಾದಾಮಿ ಚಾಲುಕ್ಯರಿಂದಲೇ ಆರಂಭವಾಗಿರಬಹುದು. ವಾತಾಪಿ (ಬಾದಾಮಿ) ಯಲ್ಲಿ ನೆಲೆಸಲು ಪೂರ್ವ ಚಾಲುಕ್ಯರು, ಅಯೋದ್ಯೆಯಿಂದ ಗುಜರಾತ ಹಾಗೂ ಮಹಾರಾಷ್ಟ್ರಗಳ ಮಾರ್ಗವಾಗಿ ಬಾದಾಮಿಗೆ ಬರುವ ಪೂರ್ವದಲ್ಲಿ ಈ ಭಾಗದಲ್ಲಿ ಸಪ್ತಮಾತೃಕೆಗಳ ಪದ್ಧತಿ ಇತ್ತು. ಸಪ್ತಮಾತೃಕೆಯೆಂದರೆ, ಹಿಂದೂ ದೇವತೆಗಳ ಆರಾಧನೆ, ಹೀಗೊಂದು ಆರಾಧನೆಯ ಮೂಲಕ ಈ ಭಾಗದಲ್ಲಿ ಮಾತೃ ಪ್ರಧಾನ ಕುಟುಂಬ ವ್ಯವಸ್ಥೆ ಪ್ರಧಾನವಾಗಿತ್ತು. ಸಪ್ತಮಾತೃಕೆಯರ ಕಚ್ಚಾ ಶಿಲ್ಪಗಳು, ಗಜೇಂದ್ರಗಡ ಸಮೀಪವಿರುವ ಕಾಲಕಾಲೇಶ್ವರ ದೇವಾಲಯದಲ್ಲಿ ದೊರೆತಿವೆ, ಬಾದಾಮಿ ಐಹೊಳೆಗಳಲ್ಲಿ ಸುಧಾರಿತ ಶಿಲ್ಪಕಲೆ ಸಪ್ತಮಾತೃಕೆಯ ಮೂರ್ತಿಗಳು ದೊರೆತಿವೆ. ಮಹತ್ವಾಕಾಂಕ್ಷೆಯಾಗಿದ್ದ ಅಯೋದ್ಯೆಯ ವಿಜಯಾದಿತ್ಯನೆಂಬ ರಾಜನು

ರಕ್ಷಣಾ ಪಥವನ್ನು ಜಯಿಸಲು ದಕ್ಷಿಣಕ್ಕೆ ಬರುವಾಗ ಪಲ್ಲವರೊಂದಿಗೆ ನಡೆದ ಯುದ್ಧದಲ್ಲಿ ಸಾವನ್ನಪ್ಪುತ್ತಾನೆ. ಗರ್ಭಿಣಿಯಾಗಿದ್ದ ಅವನ ಪತ್ನಿ ಜಾಳುಕ್ಯ ಎಂಬ ಬೆಟ್ಟದ ಹತ್ತಿರದಿರುವ ದಾಹಣ ಅಗ್ರಹಾರದಲ್ಲಿ ಆಶ್ರಯ ಉತ್ತರದ ಪಡೆದು ರಾಣಿ ಮಗನನ್ನು ಹಡೆದಳು ಮಗುವಿಗೆ ವಿಷ್ಣುವರ್ಧನ ಎಂದು ಹೆಸರಿಡಲಾಯಿತು. ಈ ಸಾಲಕ ಮುಂದೆ ಸಪ್ತಮಾತ್ಮಕ ಮತ್ತು ನಂದಿಧಗವಹಿ ಎಂಬ ದೇವಿಯರನ್ನು ಅನನ್ಯ ಭಕ್ತಿಯಿಂದ ಪ್ರಾರ್ಥಿಸಿ ರಾಜತ್ವವನ್ನು ಗಳಿಸಲು ಸಮರ್ಥನಾದ.

ಕರ್ನಾಟಕದ ವಾಸ್ತು ಶಿಲ್ಪದ ಚರಿತ್ರೆಯಲ್ಲಿ ವಾಸ್ತುಶಿಲ್ಪಿಗಳ ಹೆಸರನ್ನು ದಾಖಲಿಸುವ ಪದ್ಧತಿನೇ ಆರಂಭವಾಯಿತು. ಪಟ್ಟದಕಲ್ಲಿನ ಪ್ರಸಿದ್ಧ ಮಲ್ಲಿಕಾರ್ಜುನ ದೇವಾಲಯದ ಮುಖ್ಯ ವಾಸ್ತುಶಿಲ್ಪ ರೇವಡಿ ಓವಜ್ಜ ಮೂಲತಃ ಬಾದಾಮಿ ಗಜೇಂದ್ರಗಡ ಪರಿಸರದವನು. ಗಜೇಂದ್ರಗಡದಲ್ಲಿ ಈಗಲೂ ರೇವಡಿ ಎಂಬ ಮನೆತನವಿದೆ. ಬಡಿಗ, ಕಮ್ಮಾರ, ಪತ್ತಾರ, ಚಮ್ಮಾರ ಮೊದಲಾದ ಅನೇಕ ಕಸಬುದಾರ ಕುಟುಂಬಗಳ ದೊಡ್ಡ ಪರಂಪರೆ ಈ ಭಾಗದಲ್ಲಿದೆ. ಗಜೇಂದ್ರಗಡದ ಪರಿಸರವೂ ಕೂಡಾ ಚಾಲುಕ್ಯರ ಕಾಲದ ಅತ್ಯಂತ ಮುಖ್ಯವಾದ ಸಾಂಸ್ಕೃತಿಕ ಭಾಗವಾಗಿತ್ತು. ಸತತ 200 ವರ್ಷಗಳ ರಾಜ್ಯಾಡಳಿತದ ನಂತರ ಚಾಲುಕ್ಯರ ಪ್ರಭಾವ ಕುಸಿಯುತ್ತಿದ್ದಂತೆಯೇ ಚಾಲುಕ್ಯರ ಐನೂರು ಬಗೆಯ ವ್ಯಾಪಾರಿ ವರ್ಗ ಕಳಚೂರಿ ಮತ್ತು ಕಲ್ಯಾಣ ಚಾಲುಕ್ಯರ ನಾಡಿಗೆ ವಲಸೆ ಹೋದರು. ಅವರಲ್ಲಿ ಪ್ರಮುಖ ವ್ಯಾಪಾರ ವರ್ಗ ಗಜೇಂದ್ರಗಡದ ಪರಿಸರದಲ್ಲಿ ನೆಲೆ ನಿಂತಿತು. ಬಾದಾಮಿ ಬೆಟ್ಟದಲ್ಲಿ ಗುಹಾಂತರ ದೇವಾಲಯಗಳನ್ನು ನಿರ್ಮಿಸುವ ಪೂರ್ವದಲ್ಲಿ ಅದರ ಕೆತ್ತನೆಯ ಪ್ರಾಯೋಗಿಕ ಆಭ್ಯಾಸ ಗಜೇಂದ್ರಗಡೆ ಸಮೀಪವಿರುವ ಕಾಲಕಾಲೇಶ್ವರ ದೇವಾಲಯದಲ್ಲಿ ನಡೆದಿರಬಹುದು. ಇದು ಬಾದಾಮಿಯ ಗುಹಾಂತರ ದೇವಾಲಯಗಳನ್ನು ಹೋಲದಿದ್ದರೂ ಕೆತ್ತನೆಯ ಅಭ್ಯಾಸ ಇಲ್ಲಿ ನಡೆದಿದೆ. ಗರ್ಭಗುಡಿಯ ಎಡಕ್ಕಿರುವ ಗುಹೆಯಲ್ಲಿ ತ್ರಿಮೂರ್ತಿಗಳ, ನಟರಾಜನ ಮತ್ತು ದುರ್ಗೆಯ ಆರಟರೆ ಉಬ್ಬು ಶಿಲ್ಪ ಕೆತ್ತನೆಗಳನ್ನು ನೋಡಬಹುದಾಗಿದೆ.

ಕರ್ನಾಟಕದ ಪ್ರಸಿದ್ಧ ಕಲಾವಿದರಾದ ಪುಂಡಲೀಕ ಕಲ್ಲಿಗನೂರ ಇವರು ಅಪಾರ ಶ್ರಮವಹಿಸಿ ಪ್ರಕಟಿಸುತ್ತಿರುವ "ಚಾಲುಕ್ಯರ ಶಿಲ್ಪಕಲೆ ಕೃತಿಯಲ್ಲಿ ಈ ಬಗೆಯ ಹೊಸ ದೃಷ್ಟಿಕೋನಗಳಿವೆ ಚಿತ್ರಕಲೆಗೆ ಚಿತ್ರ ಎನ್ನುವಂತೆ ಅಪರೂಪದ ಫೋಟೋಗಳು ಮತ್ತು ಆದ್ಭುತ ಒಳನೋಟಗಳಿರುವುದರಿಂದ ಈ ಕೃತಿ ಕರ್ನಾಟಕ-ಕನ್ನಡಿಗರ ಕನ್ನಡಿ ಎನ್ನಬಹುದು. ೫೦೦ ಪುಟಗಳ ಈ ಪುಸ್ತಕದಲ್ಲಿ ಅಪರೂಪದ ಛಾಯಾ ಚಿತ್ರಗಳಿವೆ.