ಚಾಲುಕ್ಯ ವಿಕ್ರಮ

ಚಾಲುಕ್ಯ ವಿಕ್ರಮ

ಪುಸ್ತಕದ ಲೇಖಕ/ಕವಿಯ ಹೆಸರು
ಪ್ರಕಾಶ್ ಹೇಮಾವತಿ
ಪ್ರಕಾಶಕರು
ಕಾಮಧೇನು ಪುಸ್ತಕ ಭವನ, ಶೇಷಾದ್ರಿಪುರ, ಬೆಂಗಳೂರು-೫೬೦೦೨೦
ಪುಸ್ತಕದ ಬೆಲೆ
ರೂ. ೨೨೫.೦೦, ಮುದ್ರಣ: ೨೦೨೩

‘ಚಾಲುಕ್ಯ ವಿಕ್ರಮ' ಎನ್ನುವ ಐತಿಹಾಸಿಕ ಕಾದಂಬರಿಯನ್ನು ಬರೆದಿದ್ದಾರೆ ಪ್ರಕಾಶ್ ಹೇಮಾವತಿ ಇವರು. ಕರ್ನಾಟಕದ ಭವ್ಯ ಚರಿತ್ರೆಯಲ್ಲಿ ತಮ್ಮದೇ ವಿಶಿಷ್ಟ ಕೊಡುಗೆಗಳಿಂದ ಅಮರರಾಗಿರುವ ಚಕ್ರವರ್ತಿಗಳಲ್ಲಿ ಕಲ್ಯಾಣಿ ಚಾಲುಕ್ಯರ ಆರನೇ ವಿಕ್ರಮಾದಿತ್ಯ ಅದ್ವಿತೀಯ ವ್ಯಕ್ತಿ. ಸುಮಾರು ಐವತ್ತೊಂದು ವರುಷಗಳ ತನ್ನ ದೀರ್ಘ ಆಳ್ವಿಕೆಯಲ್ಲಿ ಬಹುತೇಕ ಶಾಂತಿಯನ್ನು ಕಾಪಾಡಿಕೊಂಡು, ಜನರಿಗೆ ಸುರಕ್ಷತೆ ಒದಗಿಸುವುದರೊಂದಿಗೆ ಕರ್ನಾಟಕ ಎಲ್ಲಾ ಕ್ಷೇತ್ರಗಳಲ್ಲಿಯೂ ಅಗಾಧ ಏಳಿಗೆ ಹೊಂದುವುದಕ್ಕೂ ಕಾರಣನಾಗಿದ್ದಾನೆ" ಎನ್ನುತ್ತಾರೆ ಲೇಖಕರು. ಅವರು ‘ಚಾಲುಕ್ಯ ವಿಕ್ರಮ ’ ಕೃತಿಗೆ ಬರೆದ ಮುನ್ನುಡಿಯ ಕೆಲವು ಸಾಲುಗಳನ್ನು ಸಂಗ್ರಹಿಸಿ ಇಲ್ಲಿ ನೀಡಲಾಗಿದೆ...

“ಕರ್ನಾಟಕದ ಭವ್ಯ ಚರಿತ್ರೆಯಲ್ಲಿ ತಮ್ಮದೇ ವಿಶಿಷ್ಟ ಕೊಡುಗೆಗಳಿಂದ ಅಮರರಾಗಿರುವ ಚಕ್ರವರ್ತಿಗಳಲ್ಲಿ ಕಲ್ಯಾಣಿ ಚಾಲುಕ್ಯರ ಆರನೇ ವಿಕ್ರಮಾದಿತ್ಯ ಅದ್ವಿತೀಯ ವ್ಯಕ್ತಿ. ಸುಮಾರು ಐವತ್ತೊಂದು ವರುಷಗಳ ತನ್ನ ದೀರ್ಘ ಆಳ್ವಿಕೆಯಲ್ಲಿ ಬಹುತೇಕ ಶಾಂತಿಯನ್ನು ಕಾಪಾಡಿಕೊಂಡು, ಜನರಿಗೆ ಸುರಕ್ಷತೆ ಒದಗಿಸುವುದರೊಂದಿಗೆ ಕರ್ನಾಟಕ ಎಲ್ಲಾ ಕ್ಷೇತ್ರಗಳಲ್ಲಿಯೂ ಅಗಾಧ ಏಳಿಗೆ ಹೊಂದುವುದಕ್ಕೂ ಕಾರಣನಾಗಿದ್ದಾನೆ. ಈತನ ಪ್ರೋತ್ಸಾಹದಿಂದಾಗಿ ಅಸಂಖ್ಯಾತ ದೇವಾಲಯಗಳು, ಜೈನ ಬಸದಿಗಳು ನಿರ್ಮಾಣಗೊಂಡಿದ್ದವು. ಈತನ ಪತ್ನಿಯರು ಅಡಳಿತ ನಿರ್ವಹಣೆಯಲ್ಲಿ, ದಾನ ಧರ್ಮಗಳಲಿ, ವಿದ್ಯಾಪೋಷಣೆಯಲ್ಲಿ ನಿರಂತರವಾಗಿ ಶ್ರಮಿಸಿದ್ದರು.

ಈತ ನಿರ್ಮಿಸಿದ್ದ ಸಮಾಜದಿಂದಾಗಿ ಆಗಿನ ಮಹಿಳೆಯರು ವಿದ್ಯಾವಂತರಾಗಿ, ವಿವಿಧ ಹುದ್ದೆಗಳಲ್ಲಿ, ಸಾರ್ವಜನಿಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ದಾಖಲೆಗಳು ದೊರೆತಿವೆ. ಈತನ ಕಾಲದಲ್ಲಿ ಸಾವಿರಕ್ಕೂ ಹೆಚ್ಚಿನ ಸಂಖ್ಯೆಯ ಶಾಸನಗಳು ಸ್ಥಾಪಿತಗೊಂಡಿದ್ದವು. ಸಾಮಾನ್ಯವಾಗಿ ಸಾಹಿತ್ಯಿಕ ಕೃತಿಗಳು ಆಯಾ ಕಾಲದ ಜೀವನಶೈಲಿ, ಧಾರ್ಮಿಕ ಸ್ಥಿತಿಗತಿ ಹಾಗೂ ಜನರ ವಿಚಾರಧಾರೆಗಳ ಕಲಾತ್ಮಕ ಅಭಿವ್ಯಕ್ತಿಯಾದರೆ ಶಾಸನಗಳು ರಾಜಕೀಯ, ಸಾಮಾಜಿಕ ಹಾಗೂ ಪ್ರಮುಖ ಘಟನೆ, ಸಂಗತಿಗಳ ದಾಖಲಾತ್ಮಕ ಅಭಿವ್ಯಕ್ತಿಯಾಗುತ್ತವೆ. ಚರಿತ್ರೆಯನ್ನು ಅಭ್ಯಾಸ ಮಾಡುವವರಿಗೆ ಶಾಸನಗಳು ಅಧಿಕೃತ, ಪ್ರಮಾಣಿಕ ಆಕರವಾಗಬಲ್ಲವು. ಹಾಗೆಂದ ಮಾತ್ರಕ್ಕೆ ಶಾಸನಗಳಲ್ಲಿ ದಾಖಲಿಸಿರುವುದೆಲ್ಲವೂ ಅಕ್ಷರಶಃ ನಿಜವೆನ್ನಲಾಗುವುದಿಲ್ಲ.

ಕೆಲವೆಡೆ ಉತ್ಪ್ರೇಕ್ಷೆಯೂ ಇರುತ್ತದೆ. ಆಗ ಚರಿತ್ರಾಕಾರ ಇತರ ಮೂಲಗಳನ್ನೂ, ಆಧಾರಗಳನ್ನೂ ಶೋಧಿಸುವುದರೊಂದಿಗೆ ಚರಿತ್ರೆಯ ಅಭ್ಯಾಸದಲ್ಲಿ ತಾನು ಗಳಿಸಿರುವ ಪರಿಣತಿಯನ್ನು ಬಳಸಿಕೊಂಡು ಯಾವುದು ನಂಬಲರ್ಹ ಎನ್ನುವುದನ್ನು ನಿರ್ಧರಿಸಬೇಕಾಗುತ್ತದೆ. ಈ ಐತಿಹಾಸಿಕ ಕಾದಂಬರಿಗೆ ವಿಷಯ ಸಂಗ್ರಹಣೆಯನ್ನು ನಾನಾ ಮೂಲಗಳಿಂದ ಶೇಖರಿಸಲಾಗಿದೆ. ಹಾಗೆ ಶೇಖರಿಸಲಾದ ವಿಷಯಗಳನ್ನು ಒರೆಗೆ ಹಚ್ಚಲು, ವಿಶ್ಲೇ಼ಷಿಸಲು ವಿಕ್ರಮಾದಿತ್ಯನ ಅಸಂಖ್ಯಾತ ಶಾಸನಗಳು ನೆರವಾಗಿವೆ. ಆದರೆ ಓದುವುದಕ್ಕೆ ಸುಲಭವಾಗಲೆಂದು ಎಲ್ಲಾ ಘಟನೆ, ಸಂಗತಿ, ವಿಷಯಗಳನ್ನು ಇಲ್ಲಿ ಉಲ್ಲೇಖಿಸಿಲ್ಲ. ಕಥೆಯ ನಿರಂತರತೆಗೆ, ಓಟಕ್ಕೆ ಮುಖ್ಯವಾದವುಗಳನ್ನಷ್ಟೆ ಇಲ್ಲಿ ಬಳಸಿಕೊಳ್ಳಲಾಗಿದೆ. ಆದರೂ ವಿಕ್ರಮಾದಿತ್ಯನ ಸಾಧನೆಗಳನ್ನು ಹಿಡಿದಿಡುವ ಪ್ರಯತ್ನ ಮಾಡಲಾಗಿದೆ. ಆದಷ್ಟೂ ಚರಿತ್ರೆಯ ವಾಸ್ತವಾಂಶಗಳ ಆಧಾರದ ಮೇಲೆಯೇ ಈ ಕಾದಂಬರಿಯನ್ನು ರಚಿಸಬೇಕು ಎಂದುಕೊಂಡುದರಿಂದ ಕೆಲವೆಡೆ ವಿಷಯಗಳ ಭಾರದಿಂದ ಓದಿನ ಓಟಕ್ಕೆ ಚ್ಯುತಿಯಾಗಬಹುದು. ಓದುಗರು ಸಹಿಸಿಕೊಳ್ಳುತ್ತಾರೆಂದು ಭಾವಿಸುತ್ತೇನೆ. ಸುಮಾರು ಸಾವಿರ ವರುಷಗಳ ಹಿಂದಿನ ಸಮಾಜದ ನೈಜಚಿತ್ರಣವನ್ನು ಓದುಗರ ಮುಂದಿಡಬೇಕೆನ್ನುವುದೇ ಇಲ್ಲಿನ ಮುಖ್ಯ ಉದ್ಧೇಶವಾಗಿದೆ.

ನಾನಾ ಮೂಲಗಳಿಂದ ಈ ಕಾದಂಬರಿಗೆ ವಿಷಯವನ್ನು ಸಂಗ್ರಹಿಸಲಾಗಿದೆ. ಅವುಗಳಲ್ಲಿ ಮುಖ್ಯವಾದವು ಎಪಿಗ್ರಾಫಿಯ ಕರ್ನಾಟಕ, ಮುಂಬೈ , ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹೊರತಂದಿರುವ "ಕರ್ನಾಟಕದ ಪರಂಪರೆ" ಗ್ರಂಥ, ಸೂರ್ಯನಾಥ ಕಾಮತ್, ಎ. ಎಸ್. ನಂಜುಂಡಸ್ವಾಮಿ, ನೀಲಕಂಠ ಶಾಸ್ತ್ರಿ ಮತ್ತಿತರ ಲೇಖನಗಳು ನಾನಾ ಕಾರಣಗಳಿಂದಾಗಿ ನಮ್ಮ ಪಠ್ಯ ಪುಸ್ತಕಗಳಲ್ಲಿ ಮರೆಯಾಗಿರುವ ಕರ್ನಾಟಕದ ಭವ್ಯ ಚರಿತ್ರೆಯನ್ನು ಅದರ ನಿಜ ಸ್ವರೂಪದಲ್ಲಿ ಓದುಗರಿಗೆ ತಲುಪಿಸಬೇಕೆನ್ನುವುದೇ ಈ ಕಾದಂಬರಿಯ ಉದ್ಧೇಶ. ನನ್ನ ಹಿಂದಿನ ಐತಿಹಾಸಿಕ ಕಾದಂಬರಿಗಳಂತೆಯೇ ಈ ಕಾದಂಬರಿಯನ್ನೂ ಸಹೃದಯದ ಕನ್ನಡಿಗರು ಸ್ವೀಕರಿಸಿ ನಮ್ಮ ನಾಡು, ನುಡಿ, ಚರಿತ್ರೆಯ ಬಗೆಗೆ ಹೆಮ್ಮೆಪಡುವಂತಾದರೆ ನನ್ನ ಶ್ರಮ ಸಾರ್ಥಕವೆಂದು ಭಾವಿಸುತ್ತೇನೆ.”