ಚಾ(ವ)ಡಿ ಪಟ್ಟಾಂಗ

ಚಾ(ವ)ಡಿ ಪಟ್ಟಾಂಗ

ಬರಹ

ಮಾತು ನುಡಿದರೆ ಮುತ್ತಿನಂತಿರಬೇಕೆಂಬುದು ಕವಿವಾಣಿ. ಮಾತಿನ ಬಗ್ಗೆ ಎಷ್ಟು ಹೇಳಿದರೂ, ಎಷ್ಟು ವರ್ಣಿಸಿದರೂ ಮಾತಿನ ಬಗ್ಗೆ ಮಾತೇ ಮುಗಿಯುವುದಿಲ್ಲ. ಮಾತು ಎಂದರೆ ಏನು ಮತ್ತು ಹೇಗೆ ಎಂದು ಹೇಳುತ್ತಾ ಹೋದರೆ ಬರಿ ಮಾತಿನಲ್ಲಿಯೇ ಸಮಯ ವ್ಯರ್ಥವಾಗುತ್ತದೆ ಯಾಕೆಂದರೆ ಎಲ್ಲರೂ ಮಾತನಾಡುವವರೇ ಆಗಿದ್ದಾರೆ! ಅದಕ್ಕಾಗಿಯೇ ಅಲ್ಲವೇ ಮೊಬೈಲ್ ಫೋನ್ ಬಳಕೆದಾರರ ಸಂಖ್ಯೆಯು ಗಣನೀಯ ವರ್ಧನೆಯಾಗುವುದರೊಂದಿಗೆ "ಟಾಕ್ ಟೈಮ್" ಹೆಚ್ಚುತ್ತಾ ಬರುತ್ತಿರುವುದು. ಮೊಬೈಲ್ ಮಾತುಕತೆ ಒಂದೆಡೆಯದರೆ, ಲೋಕ ಸಭಾ, ವಿಧಾನ ಸಭಾ ಸದನಗಳಲ್ಲಿನ ಮಂತ್ರಿ ಮಹೋದಯರ ಮಾತುಕತೆ, ರಾಜಕಾರಣಿಗಳ ಮಾತುಕತೆ ಹೀಗೆ ಅದೆಷ್ಟೋ ಮಾತುಕತೆಗಳ ಬಗ್ಗೆ ನಾವು ನೀವು ಆಗಾಗ ಮಾತುಕತೆ ನಡೆಸುತ್ತಲೇ ಇರುತ್ತೇವಲ್ಲಾ. ಇಲ್ಲಿ ನಾನು ಹೇಳುತ್ತಿರುವುದು ರಾಷ್ಟ್ರ ಅಥವಾ ಅಂತಾರಾಷ್ಟ್ರ ಮಟ್ಟದ ಮಾತುಕತೆಯ ಬಗ್ಗೆ ಅಲ್ಲ. ಇದು ನಮ್ಮ ಸ್ವಂತದ್ದೇ ಅಂದು ಕೊಳ್ಳುವಷ್ಟು ಪ್ರಭಾವ ಬೀರುವ ಚಾ(ವ)ಡಿ ಮಾತುಕತೆಯ ಬಗ್ಗೆ.

ಮನೆಯೆಂದಕ್ಷಣ (ಪ್ರಧಾನವಾಗಿ ಹಳ್ಳಿಗಳಲ್ಲಿ) ಚಾವಡಿ ಇದ್ದೇ ಇರುತ್ತದಲ್ಲ. ಮನೆಗೆ ಯಾರು ಬಂದರೂ ಚಾವಡಿಯಲ್ಲಿ ಕುಳಿತುಕೊಂಡು ಮಾತನಾಡದೆ ಇರುವುದಿಲ್ಲವಲ್ಲಾ. ಮಾತನಾಡುವುದಕ್ಕೆ ಮಾತ್ರವಲ್ಲ "ಪಟ್ಟಾಂಗ" ಹೊಡೆಯುವುದಕ್ಕೆ ಚಾವಡಿಯೇ ಸೂಕ್ತ. ಚಾವಡಿ ಎಂಬ ಹೆಸರು ಹೇಗೆ ಬಂತು ಎಂದು ನನಗೆ ಗೊತ್ತಿಲ್ಲ. ಅತಿಥಿಗಳ ಆತಿಥ್ಯಕ್ಕಾಗಿ ಚಾವಡಿಯಲ್ಲಿ ನೀಡುವ ಚಾ ಮತ್ತು ವಡೆಯಿಂದಾಗಿ ಇಲ್ಲಿ ಚಾ ಮತ್ತು 'ವಡೆ'ಯು 'ವಡಿ'ಯಾಗಿರಬಹುದೇ? :) ಅಥವಾ ಚಾಡಿ ಹೇಳಲು ಈ ಜಾಗವನ್ನು ಬಳಸುವುದರಿಂದ ಇದು ಚಾ(ವ)ಡಿಯಾಗಿರಬಹುದೇ ಎಂಬ ಸಂಶಯವೂ ನನ್ನ ಮನಸ್ಸಿನಲ್ಲಿ ಹೊಳೆಯುತ್ತದೆ. ಏನೇ ಆಗಲಿ ಚಾವಡಿಯಲ್ಲಿ ನಡೆಯುವ ಹೆಂಗೆಳೆಯರ ಪಟ್ಟಾಂಗಕ್ಕಂತೂ ಹೆಚ್ಚಿನ ಪ್ರಾಮುಖ್ಯತೆ ಇದ್ದೇ ಇರುತ್ತದೆ. ಮನೆಯ ಪ್ಲಾಸ್ಟಿಕ್ ಪಾತ್ರೆಯಿಂದ ಹಿಡಿದು ತೊಡುವ ಬಂಗಾರದ ವರೆಗೆ, ವರಾನ್ವೇಷಣೆಯಿಂದ ಹಿಡಿದು ಮದುವೆ, ಬಾಣಂತನ, ಕಲಿಕೆ, ಕುಡಿತ, ಫ್ಯಾಷನ್ ಎಲ್ಲವೂ ಚಾವಡಿಯಲ್ಲಿ ಚರ್ಚೆಯಾಗುವ ವಿಷಯಗಳೇ.

ಚಾವಡಿಯ ಚರ್ಚಾ ವಿಷಯಗಳಂತೂ ಅಕ್ಷಯ ಪಾತ್ರೆಯಂತೆ ಅವು ಬರಿದಾಗುವುದೇ ಇಲ್ಲ. ಸದ್ಯ, ನಾನು ಹೇಳ ಹೊರಟಿರುವುದು ಚಾಡಿ ಮಾತುಗಳ ಬಗ್ಗೆ. ಇವುಗಳನ್ನು ವಿಶ್ಲೇಷಿಸಿದರೆ, ಚಾಡಿ ಹೇಳದವರು, ಚಾಡಿ ಮಾತಿಗೆ ಬಲಿಪಶುಗಳಾಗದವರು ಯಾರೂ ಇರಲಿಕ್ಕಿಲ್ಲ. ಚಿಕ್ಕ ಮಕ್ಕಳಿರುವಾಗ ತುಂಟಾಟಿಕೆಯಲ್ಲಿ ಚಾಡಿ ಹೇಳಿ ಜಗಳವಾಡಿದವರು ನಮ್ಮ ನಡುವೆ ಇಲ್ಲದಿರಲು ಸಾಧ್ಯವೇ ಇಲ್ಲ ಅಂತಾ ನನ್ನ ಅನಿಸಿಕೆ. ಮಾತುಗಾರಿಕೆಗೆ ಒಂದು ಕೌಶಲ್ಯ ಎನ್ನುವುದಾದರೆ ಚಾಡಿ ಹೇಳುವುದಕ್ಕೂ ಬೇಕು ಒಂದು ಶೈಲಿ. ಇಂತಹ ಶೈಲಿ ಇದ್ದರೆ ಕೇಳುಗನು "ಅಹುದಹುದು" ಎಂದೆನಿಸುವಂತೆಯೇ ಮೋಡಿ ಮಾಡಿಸಲು ಸಾಧ್ಯ. ಸಾಮಾನ್ಯವಾಗಿ 'ಹೆಣ್ಣು' ಚಾಡಿ ಮಾತಿಗೆ ಬಲಿಪಶುವಾಗುತ್ತಾಳೆ ಅಥವಾ ಆಗಿಸುತ್ತಾಳೆ. ಪ್ರಸ್ತುತ ಹೆಣ್ಣು ಮಾತ್ರವಲ್ಲ ,ಇಂತಹ ಕೆಟ್ಟ ಚಾಳಿಗಳು ಯಾವುದೇ ಲಿಂಗ, ವರ್ಗ ಬೇಧವಿಲ್ಲದೆಯೇ ದೈನಂದಿನ ಜೀವನದಲ್ಲಿ ಹಾಸುಹೊಕ್ಕಾಗಿದೆ ಎಂದರೆ ತಪ್ಪಾಗಲಾರದು.ಇವುಗಳು ಎಷ್ಟು ಪ್ರಭಾವಶಾಲಿಯೆಂದರೆ ಹಳ್ಳಿಯ ಗುಡಿಸಲುಗಳಿಂದ ಹಿಡಿದು, ಹವಾನಿಯಂತ್ರಿತ ಕಚೇರಿಗಳಲ್ಲಿಯೂ ಚಾಡಿ ಮಾತಿನ ಸೋಂಕು ತಟ್ಟದೇ ಇರುವುದಿಲ್ಲ. ಊರಿನಲ್ಲಿ ಬಾಯಿ ಬಡುಕರು ತಮ್ಮ ಕಾರ್ಯಸಾಧನೆಗಾಗಿ ಇದನ್ನು ನಾಜೂಕಾಗಿ ಬಳಸಿದರೆ ಕಚೇರಿಗಳಲ್ಲಿ ಪದವಿಗಳಿಸಲಿಕ್ಕಾಗಿ ಅಥವಾ ಇತರರನ್ನು ತೇಜೋವಧೆಗೈಯ್ಯಲು ಇದೊಂದು ಸುಲಭ ಅಸ್ತ್ರವೇ ಹೌದು.

ಪುರಾಣದಲ್ಲಿ ಮಂಥರೆಯ ಚಾಡಿ ಮಾತಿನ ನಂತರವೇ ರಾಮಾಯಣದ ಕಥೆ ಹೆಚ್ಚು ಅರ್ಥಗರ್ಭಿತವಾಯಿತು ಎಂಬುದನ್ನು ನೆನಪಿಸಿಕೊಳ್ಳಿ. ಹಾಗಾದರೇ ಚಾಡಿ ಮಾತಿಗೆ ಎಷ್ಟು ಹಿಂದಿನ ಇತಿಹಾಸವಿದೆ ಎಂದು ತಿಳಿಯಿತಲ್ಲವೇ? ಚಾಡಿ ಹೇಳುವುದಕ್ಕೂ ಒಂದು ಶೈಲಿ ಇದೆ ಅಂತಾ ಮೊದಲೇ ಹೇಳಿದ್ದೆನಲ್ಲಾ..ಅದು ಎಲ್ಲರಿಗೂ ಲಭ್ಯವಾಗುವಂತಹದ್ದೇನು ಅಲ್ಲ!. "ಅವಳು ಅಥವಾ ಅವನು ಹಾಗಂತೆ..ಮತ್ತೇ? ಅದು ನಿನಗೆ ಗೊತ್ತಾ...ನಿನಗೆ ಇದು ತಿಳಿದಿಲ್ಲವಾ.."ಎಂಬ ಪದಗಳನ್ನು ಸೇರಿಸಿ ಹೇಳುವ ಈ ಮಾತುಗಳು ಅಂತೆ ಕಂತೆಗಳ ಸಂತೆಯೇ ಆಗಿರುತ್ತದೆ. ಅದು ಹೇಳುವ ರೀತಿ ಹೇಗಿರುತ್ತದೆ ಅಂದರೆ ಸಸ್ಪೆನ್ಸ್ ಚಿತ್ರಗಳಂತೆ ಮುಂದೇನಾಯಿತು?ಏನಾಗುವುದು? ಎಂಬ ಹಂಬಲದಲ್ಲಿ ಕೇಳುಗ ಕಿವಿಯಗಲಿಸಿ ನಿಂತಿರುತ್ತಾನೆ. ಕೆಲವರಂತೂ ಯಾವ ರೀತಿ ಹೇಳುತ್ತಾರೆ ಅಂದರೆ ಅವರ ಚಾಡಿಯೇ ನಮಗೆ ಛಡಿಯೇಟು ನೀಡುವಂತಿರುತ್ತದೆ.

ಇನ್ನು ಚಾಡಿ ಹೇಳುಗರ ಸ್ವಭಾವದ ಬಗ್ಗೆ ಒಂದಿಷ್ಟು (ನನಗನಿಸಿಂತೆ). ಮೊದ ಮೊದಲು ಇವರು ನಮ್ಮ ಸುಖದುಃಖಗಳನ್ನು ಹಂಚಿಕೊಳ್ಳುವವರಂತೆ ಚೆನ್ನಾಗಿ ಮಾತನಾಡುತ್ತಾರೆ. ನಾವು ಆಪ್ತರಾಗುತ್ತಿದ್ದಂತೆಯೇ ಮತ್ಯಾರದೋ ಸುದ್ದಿಯನ್ನು ಅದರೆಡೆಗೆ ತಂದು ಹಾಕುತ್ತಾರೆ. ನಮಗರಿಯದಂತೆ ನಾವೂ ಅದರೊಂದಿಗೆ ಸ್ಪಲ್ಪ ಮಾತಾಡುತ್ತೇವೆ ಇಲ್ಲದಿದ್ದರೆ ಹೂಂ ಗುಟ್ಟುತ್ತೇವೆ. ಇದಾದನಂತರ ಕೆಲವು ಅಂತೆ ಕಂತೆ ಮಾತುಗಳನ್ನು ಹೇಳಿ ಸ್ವಲ್ಪ ಗೊಂದಲಗಳನ್ನು ನಮ್ಮ ತಲೆಯೊಳಗೆ ತುರುಕಿಸಿ ಅಲ್ಲಿಂದ ಜಾಗ ಖಾಲಿ ಮಾಡುತ್ತಾರೆ. ಹಾಗೆ ಪುನಃ ಬೇರೊಂದು ಸ್ಥಳಕ್ಕೆ, ಅಲ್ಲಿಯೂ ಇದೇ ರೀತಿ ಒಬ್ಬರ ಕಿವಿಯಿಂದ ಇನ್ನೊಬ್ಬರಿಗೆ ಸುದ್ದಿಗಳನ್ನು ನೀಡುತ್ತಾ, ಸುದ್ದಿ ಹೀರುತ್ತಿರುವ ಈ ವ್ಯಕ್ತಿಗಳು ಖಾಸಗಿ ಸುದ್ದಿ ಚಾನಲ್‌ಗಳೆಂತೆ ಯಾವುದೇ ಚಿಕ್ಕ ವಿಷಯಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ವೈಭವೀಕರಿಸುವಲ್ಲಿ ಇವರದ್ದು ಎತ್ತಿದ ಕೈ.

ಹಾಗೆಯೇ ಮುಂದುವರಿಯುತ್ತವೆ ಇವರ ದಿನಚರಿ. ಇಂತಹ ಪ್ರವೃತ್ತಿಗಳಿಂದಾಗಿ "ಮಾತು ಮನೆ ಕೆಡಿಸಿತು; ತೂತು ಒಲೆ ಕೆಡಿಸಿತು" ಎಂಬ ಗಾದೆಯಂತೆ ಎಷ್ಟೋ ಸಂಸಾರಗಳು, ನೌಕರಿಗಳು, ಜನರ ಜೀವನಗಳು ಛಿದ್ರವಾಗಿ ಹೋಗಿವೆ. ಕಾಲ ಬದಲಾದರೂ ಈ ಚಾಡಿ ಮಾತುಗಳನ್ನಾಡುವ ಜನರ ಸಂಖ್ಯೆಯಲ್ಲಿ ಬದಲಾವಣೆಗಳೇನೂ ಕಂಡು ಬಂದಂತೆ ಅನಿಸುತ್ತಿಲ್ಲ. ಮೊದಲು ಹಕ್ಕಿಗಳಂತೆ ಹೆಕ್ಕಿ, ಕುಕ್ಕಿ ಹಾರಿ ಸುದ್ದಿ ಮಾಡುತ್ತಿದ್ದವರು, ಇದೀಗ ಇಮೇಲ್, ಮೆಸೇಜಿಂಗ್, ಮೊಬೈಲ್ ಮೂಲಕವು ತಮ್ಮ 'ಚಾಡಿ ಪ್ರಸಾರ'ಗಳನ್ನು ಆರಂಭಿಸಿ ಆಧುನಿಕ ಯುಗಕ್ಕೆ ಮಾರುಹೋಗಿದ್ದಾರೆ. ಅಂತೂ ಚಾಡಿ ಹೇಳುವ ಪ್ರಕ್ರಿಯೆಗಳು ಇನ್ನು ಮುಂದೆಯು ನಿರಂತರವಾಗಿ ಸಾಗುತ್ತದೆ.

ಕೊನೆಗೆ ಒಂದು ವಿಷಯ, ಚಾಡಿ ಹೇಳುವವರು ಯಾರೇ ಆಗಲಿ "ಈ ಮಾತನ್ನು ನಾನು ನಿಮಗೆ ಮಾತ್ರ ಹೇಳಿದ್ದೇನೆ, ಇನ್ಯಾರಿಗೂ ತಿಳಿಸಬೇಡಿ" ಎಂದು ಹೇಳಲು ಮರೆಯುವುದಿಲ್ಲ. ಏನಿದ್ದರೂ, ಈ ಚಾಡಿ ಮಾತಿಗೆ ಮಾತು ಬೆಳದು ರಂಗು ರಂಗಾಗಿ ಕೆಲವೇ ಕ್ಷಣದಲ್ಲಿ ಎಲ್ಲೆಡೆಗೂ ಪಸರಿಸುತ್ತದೆ. ಇಂತಹ ಪ್ರಕ್ರಿಯೆಗಳು ಜನರ ನೆಮ್ಮದಿಯನ್ನು ಕೆಡಿಸುವುದರೊಂದಿಗೆ ಜೀವನಕ್ಕೇ ಮುಳುವಾಗುತ್ತದೆ ಎಂಬುದು ಚಾಡಿ ಹೇಳುವವರು ಗಮನದಲ್ಲಿಡುವುದು ಒಳ್ಳೆಯದು. ಎಷ್ಟೇ ಹೇಳಿಕೊಂಡರೂ, ಕೇಳಿಕೊಂಡರೂ ಚಾಡಿ ಹೇಳುವಂತಹ ಲೋಕದ ಜನರ ಬಾಯಿ ಮುಚ್ಚಿಸಲು ನಮ್ಮಿಂದ ಸಾಧ್ಯವಿಲ್ಲವಲ್ಲಾ? ಸದ್ಯಕ್ಕೆ ನಮ್ಮ ಕಿವಿ ಮುಚ್ಚಿ, ಇನ್ನೊಬ್ಬರ ಗೋಜಿಗೆ ಹೋಗದೆ. ಸುಮ್ಮನಿರುವುದು ಒಳ್ಳೆಯದು ಅಲ್ಲವೇ? "ಮಾತು ಬೆಳ್ಳಿ, ಮೌನ ಬಂಗಾರ". ಏನಂತೀರಿ?