ಚಿಂತನ-ಮಂಥನ

ಚಿಂತನ-ಮಂಥನ

ಮನಸ್ಸು

ನಮ್ಮ ಮನಸ್ಸು ಎನ್ನುವುದು ಒಂದು ಉತ್ತಮ ಕ್ಯಾಮೆರಾದ ಲೆನ್ಸ್ ಇದ್ದಂತೆ. ಲೆನ್ಸ್ ಚೆನ್ನಾಗಿದ್ದರೆ ಭಾವಚಿತ್ರ, ದೃಶ್ಯಗಳೂ ಚೆನ್ನಾಗಿರುತ್ತವೆ. ಎಷ್ಟೋ ಸಲ ನಾವು ಹೇಳುವುದುಂಟು 'ಅಯ್ಯೋ ಮಹರಾಯ, ನಿನ್ನ ಕ್ಯಾಮರಾ ಸರಿ ಇಲ್ಲ ,ಒಂದೂ ಫೋಟೋ ಚಂದ ಬಂದಿಲ್ಲ’ ಎಂಬುದಾಗಿ. ಆಗ ಫೋಟೋಗ್ರಾಫರ್ ಮನಸ್ಸಿನಲ್ಲಿಯೇ ಹೇಳುತ್ತಾನೆ 'ಇವರು ಇರುವುದೇ ಹೀಗೆ, ಇದ್ದ ಹಾಗೆ ಅಲ್ವಾ ಬರುವುದು?' ಅಂತ.

ನಮ್ಮ ಮನಸ್ಸಿನ ಕೆಲಸ ಎರಡು--ದೇವರತ್ತ ಒಲವು, ದೇವತಾಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದು, ತಾನೇ ಸ್ವತಃ ಭಾಗವಹಿಸಲು ಆಗದಿದ್ದರೆ ಸಹಕಾರ ನೀಡುವುದು.

ಇನ್ನೊಂದು ಪ್ರಕೃತಿಯತ್ತ ನೋಟ. ಇಲ್ಲಿ ಪ್ರಕೃತಿ ಅಂದರೆ ನಮ್ಮ ಬದುಕು. ಉಸಿರಿರುವ ತನಕ ಬದುಕಬೇಕು, ಮುಂದೆ ನಮ್ಮ ಪೀಳಿಗೆ ಅದನ್ನು ಮುಂದುವರಿಸುತ್ತದೆ. ಜೀವಿಸಲು ನಮಗೆ ಬೇಕಾದ ಸೌಲಭ್ಯಗಳನ್ನು ನಾವೇ ಮಾಡಿಕೊಳ್ಳಬೇಕು. ಉದ್ಯೋಗ, ವಿದ್ಯಾರ್ಜನೆಯ, ಕೃಷಿಯ ಯಾವುದೂ ಆಗಬಹುದು. ಆದರೆ ಎಲ್ಲದಕ್ಕೂ ಮನಸ್ಸಿರಬೇಕು.

ಕಲಿಯಲು ಏಕಾಗ್ರತೆ, ಹಠ, ಛಲ, ಸಾಧಿಸಲೇ ಬೇಕು ಎಂಬ ತುಡಿತ, ನನ್ನ ಹಿರಿಯರ ಆಶೋತ್ತರಗಳನ್ನು ಈಡೇರಿಸಬೇಕೆಂಬ ಉತ್ಕಟ ಆಸೆ, ನನ್ನ ಕಾಲ ಮೇಲೆ ನಾನು ನಿಲ್ಲುವಂತಾಗಬೇಕು, ಇದೆಲ್ಲಾ ಬೇಕಾದರೆ ಮನಸ್ಸು ಮಾಡಬೇಕು.

ಒಮ್ಮೊಮ್ಮೆ ನಾವು ಆಲಸಿಗಳಾಗಿ ಬಿಡುತ್ತೇವೆ. ಮೊಗವು ಬಾಡಿರುತ್ತದೆ, ಯಾವುದರಲ್ಲಿಯೂ ಮನಸ್ಸಿರುವುದಿಲ್ಲ. ಮುಖವು ಮನಸ್ಸಿನ ಕನ್ನಡಿ ಅಲ್ಲವೇ? ಮನಸ್ಸಿನಲ್ಲಿ ಏನಿದೆಯೋ ಅದು ಮುಖದಲ್ಲಿ ಕಾಣುತ್ತದೆ.

ಅಪ್ರಿಯ ನುಡಿಗಳನ್ನು ಆಲಿಸಿದಾಗ ಮನಸ್ಸಿಗೆ ಘಾಸಿಯಾಗುತ್ತದೆ. ಇದರಿಂದ ಒಳ್ಳೆಯದು ಅಥವಾ ಕೆಟ್ಟದು ಎರಡೂ ಆಗಬಹುದು. ಒಳ್ಳೆಯ ಮಾತುಗಳನ್ನೇ ಆಡೋಣ.

ಈ ಸಮಾಜದಲ್ಲಿ ನಾವು ಎಲ್ಲರೊಂದಿಗೆ ಕಲೆತು, ಬೆರೆತು ಒಳ್ಳೆಯ ಸಂಬಂಧಗಳನ್ನು ಇಟ್ಟುಕೊಂಡು ಚಂದದಿಂದ ಬಾಳೋಣ. ಎಲ್ಲದಕೂ ಮನಸ್ಸು ಮಾಡೋಣ.

-ರತ್ನಾ ಭಟ್, ತಲಂಜೇರಿ

ಚಿತ್ರಕೃಪೆ: ಇಂಟರ್ನೆಟ್