ಚಿಂತೆ

ಚಿಂತೆ

ಕವನ

ಚಿಂತೆ| ಚಿಂತೆ| ಚಿಂತೆ|
ಜಗದ ಮಂದಿಗೆಲ್ಲ ಇದು, ಆಪ್ತಮಿತ್ರನಂತೆ.
ಚಿಂತೆ ಗೆದ್ದ ಮಂದಿ, ಬಹೂ ವಿರಳವಂತೆ.
ಚಿಂತೆ ಇರದ ಜಗದ ಊಹೆ, ಬರೀ ಭ್ರಾಂತಿಯಂತೆ.

ಇದರ ಮೊದಲ ಆಗಮನವು, ಎಚ್ಚರಿಕೆ ಗಂಟೆಯಂತೆ.
ಮನವು ಎಚ್ಚೆತ್ತಿಕೊಳಲು, ಅದು ಚಿಂತೆಮುಕ್ತವಂತೆ.
ಚಂಚಲ ಮನವು ಪ್ರೇರೇಪಿಸಿದೆ, ಚಿಂತೆ ಮತ್ತೆ ಮರಳುವಂತೆ.
ಭಿನ್ನ ರೂಪ ತಾಳಿ ಮನವನಂಟಿದೆ, ಬಿಡದ ಜಿಗಣೆಯಂತೆ.

ಇದರ ಬತ್ತಳಿಕೆಯಲಿ ಇಹುದು, ಹಲವು ಬಾಣವಂತೆ.
ಶಕ್ತಿಯಲಿ ಒಂದನೊಂದು ಮೀರುವ, ಸಾಮರ್ಥ್ಯವಿರುವುದಂತೆ.
ದುರ್ಬಲ ಮನಗಳು ಇದಕೆ, ಸುಲಭ ಬೇಟೆಯಂತೆ.
ಗಟ್ಟಿ ಮನಗಳನೂ ಹೊಕ್ಕಲು, ಬಾಣವು ಶಕ್ತವಾದುವಂತೆ.

ಗಂಡಾಗಲಿ, ಹೆಣ್ಣಾಗಲಿ ಲಿಂಗ ಭೇಧವಿಲ್ಲವಂತೆ.
ಹಿರಿಯರು, ಕಿರಿಯರು ಒಂದೇ ಸಮಾನರಂತೆ.
ಸಿರಿತನ ಬಡತನದ ಅರಿವು ಇದಕೆ ಇಲ್ಲವಂತೆ.
ಮನಸ್ಥಿತಿಯ ಬಲಾಬಲವು ಇದರ ದಾಳದಂತೆ.

ಮನವನಲವು ದುಸ್ಥಿತಿಗೆ ದೂಡುವುದು, ಇದರ ಕಾರ್ಯವಂತೆ.
ಭೋಗಿಯಾದವ ರೋಗಿಯಾದರೂ ಆಶ್ಚರ್ಯವಿಲ್ಲವಂತೆ.
ಇದರ ಬತ್ತಳಿಕೆಯ ಇನ್ನೊಂದು ಬಾಣ, ಅತೀ ತೀಕ್ಷ್ಣವಂತೆ.
ನೊಂದ ಮನದ ದಹನವಿದಕೆ ಪ್ರತ್ಯಕ್ಷ ಸಾಕ್ಷಿಯಂತೆ.

ಚಿಂತೆಯ ತೀವ್ರತೆಯ ನಿಯಂತ್ರಿಸಲು,
ಮನದ ಸೌಮ್ಯತೆಯು ಒಳ್ಳೆ ಅಸ್ತ್ರವಂತೆ.
ಮನದ ಈ ಸ್ಥಿತಿಯು ಸ್ಥಿರವಾಗಿರಲು,
ಚಿಂತೆ ಕೂಡ ಕರಗಿ ಶಮನವಾಗುವುದಂತೆ.