ಚಿಂದೋಡಿ ಲೀಲಾ : ದಶಕಗಳ ಹಿಂದಿನ ಒಂದು ನೆನಪು

ಚಿಂದೋಡಿ ಲೀಲಾ : ದಶಕಗಳ ಹಿಂದಿನ ಒಂದು ನೆನಪು

ಬರಹ

  ಐದು ದಶಕಗಳಿಗೂ ಹಿಂದಿನ ಹಿಂದಿನ ಮಾತು. ನಾನಾಗ ಶಾಲಾ ಬಾಲಕ. ನನ್ನ ತಂದೆ ಭುಜಂಗರಾಯರು ದಾವಣಗೆರೆಯ ಚೌಕಿಪೇಟೆಯಲ್ಲಿ ಫೋಟೊ ಸ್ಟುಡಿಯೋ ನಡೆಸುತ್ತಿದ್ದರು. ’ಫೈನ್ ಆರ್ಟ್ ಸ್ಟುಡಿಯೋ’ ಎಂಬ ಹೆಸರಿನ ಆ ಸ್ಟುಡಿಯೋ ಅತ್ಯಂತ ಪ್ರಸಿದ್ಧವಾಗಿತ್ತು. ನಮ್ಮ ತಂದೆಯವರ ಕಲಾತ್ಮಕ ಛಾಯಾಚಿತ್ರಗ್ರಹಣವು ಅಂದಿನ ಅವಿಭಜಿತ ಚಿತ್ರದುರ್ಗ ಜಿಲ್ಲೆಯಿಡೀ ಮನೆಮಾತಾಗಿತ್ತು.

  ಚಿಂದೋಡಿ ಲೀಲಾ ಅವರ ತಂದೆ ಅಣ್ಣಿಗೇರಿ ಶಾಂತವೀರಪ್ಪ ನಮ್ಮ ಸ್ಟುಡಿಯೋದ ಖಾಯಂ ಗಿರಾಕಿ. ಮೈಸೂರು ಮಹಾರಾಜರಿಂದ ಚಿನ್ನದ ತೊಡೇವು ತೊಡಿಸಿಕೊಂಡ ನಂತರ ಅವರು ಚಿಂದೋಡಿ ವೀರಪ್ಪ ಎಂದೇ ಖ್ಯಾತರಾದರು. ತಮ್ಮ ಕಂಪೆನಿಯ ನಾಟಕಗಳ ಕರಪತ್ರಗಳಿಗೆ ಪಾತ್ರಧಾರಿಗಳ ಫೋಟೋಗಳನ್ನು ಅವರು ನಮ್ಮ ಸ್ಟುಡಿಯೋದಲ್ಲಿಯೇ ತೆಗೆಸುತ್ತಿದ್ದರು. ಪಾತ್ರಧಾರಿಗಳು ಸಾಮಾನ್ಯ ಉಡುಪಿನಲ್ಲಿ ಸ್ಟುಡಿಯೋಕ್ಕೆ ಬಂದು, ಸ್ಟುಡಿಯೋದಲ್ಲಿ ನಾಟಕದ ಪಾತ್ರದ ವೇಷ ಹಾಕಿಕೊಂಡು ಫೋಟೋ ತೆಗೆಸಿ, ನಂತರ ಆ ವೇಷ ಕಳಚಿ ತಮ್ಮ ಎಂದಿನ ಉಡುಪಿನಲ್ಲಿ ಹೊರನಡೆಯುತ್ತಿದ್ದರು. ಸ್ತ್ರೀ ಪಾತ್ರಧಾರಿಗಳು ಸ್ತ್ರೀಯರೇ ಆಗಿದ್ದರೂ ಒಮ್ಮೊಮ್ಮೆ ಕೆಲವರು ಎದೆಯೊಳಗೆ ಪ್ಯಾಡ್‌ಗಳನ್ನಿಟ್ಟುಕೊಂಡು ಕ್ಯಾಮೆರಾದ ಮುಂದೆ ಕೂರುತ್ತಿದ್ದುದುಂಟು!

  ಅಣ್ಣಿಗೇರಿ ಶಾಂತವೀರಪ್ಪನವರ ಮಗಳಾದ ಚಿಂದೋಡಿ ಲೀಲಾ ಕೂಡ ಸ್ಟುಡಿಯೋಕ್ಕೆ ಬಂದು ನಾಟಕ-ಸಿನಿಮಾಗಳ ವಿವಿಧ ಪಾತ್ರಗಳಲ್ಲಿ ಫೊಟೋ ತೆಗೆಸಿಕೊಂಡು ಹೋಗುತ್ತಿದ್ದರು. ಸಾಮಾನ್ಯವಾಗಿ ಆಕೆ ತನ್ನ ಅಣ್ಣ (ಹಾಗೂ ನಾಟಕ ಕಲಾವಿದ) ವೀರಪ್ಪ ಮತ್ತು ಅತ್ತಿಗೆ ಇವರುಗಳ ಜೊತೆಯಲ್ಲಿ ಬರುತ್ತಿದ್ದರು. ಸ್ಟುಡಿಯೋದಲ್ಲೇ ಮೇಕಪ್ ಮಾಡಿಕೊಂಡು ಹಲವು ಉಡುಪುಗಳಲ್ಲಿ ಮತ್ತು ನಾನಾ ಭಂಗಿಗಳಲ್ಲಿ ಫೋಟೋಗಳನ್ನು ತೆಗೆಸಿಕೊಳ್ಳುತ್ತಿದ್ದರು. ಲೀಲಾ ಅವರು ಕ್ಯಾಮೆರಾದ ಮುಂದೆ ಹಾಜರಾದಾಗ ನನ್ನ ತಂದೆಯವರ ಆದೇಶದ ಮೇರೆಗೆ ನನ್ನ ತಾಯಿಯವರು ಬಂದು ಆಕೆಯ ದಿರಸುಗಳನ್ನು ಸರಿಮಾಡುತ್ತಿದ್ದರು. ನನ್ನ ತಂದೆಯವರ ಆಣತಿಯನ್ನು ಚಾಚೂ ತಪ್ಪದಂತೆ ಪಾಲಿಸುತ್ತ ಲೀಲಾ ಅವರು ಕ್ಯಾಮೆರಾಕ್ಕೆ ವಿವಿಧ ಬಗೆಯ ಪೋಸುಗಳನ್ನು ನೀಡುತ್ತಿದ್ದರು.

  ’ಕಿತ್ತೂರು ಚೆನ್ನಮ್ಮ’ ಚಲನಚಿತ್ರದಲ್ಲಿ ಪಾತ್ರ ಮಾಡುವ ಸಂದರ್ಭದಲ್ಲೂ ಲೀಲಾ ಅವರು ನಮ್ಮ ಸ್ಟುಡಿಯೋಕ್ಕೆ ಬಂದು ಹಲವು ಬಗೆಯ ಫೋಟೋ ತೆಗೆಸಿಕೊಂಡು ಹೋಗಿದ್ದರು. ಕಣ್ಣುಗಳು ಸ್ವಲ್ಪ ದೊಡ್ಡವಿದ್ದಿದ್ದರೆ ಲೀಲಾ ಅವರೇ ಚೆನ್ನಮ್ಮನ ಪಾತ್ರಕ್ಕೆ ಆಯ್ಕೆಯಾಗುತ್ತಿದ್ದರೆಂದು ಯಾರೋ ನನ್ನ ತಂದೆಯವರಿಗೆ ಹೇಳುತ್ತಿದ್ದುದ್ದು ನನಗೆ ಮಸುಕು ಮಸುಕಾದ ನೆನಪು. ಅದೇನೇ ಇರಲಿ, ಬಿ. ಸರೋಜಾದೇವಿಯವರು ಚೆನ್ನಮ್ಮನ ಪಾತ್ರದಲ್ಲಿ ಅದ್ಭುತವಾಗಿ ಅಭಿನಯಿಸಿ ಜನಕೋಟಿಯ ಮೆಚ್ಚುಗೆಗೆ ಪಾತ್ರರಾದದ್ದು ಕನ್ನಡ ಚಲನಚಿತ್ರರಂಗದಲ್ಲಿ ಸುವರ್ಣಾಕ್ಷರಗಳಲ್ಲಿ ದಾಖಲಿಸಬೇಕಾದ ಸಂಗತಿಯೇ ಸರಿ. ಅದೇ ’ಕಿತ್ತೂರು ಚೆನ್ನಮ್ಮ’ ಚಲನಚಿತ್ರದಲ್ಲೇ ಚಿಂದೋಡಿ ಲೀಲಾ ಅವರ ಪಾತ್ರವನ್ನು ಮತ್ತು ’ಶೃಂಗಾರ ಹೆಣ್ಣಿನ ಮಾನ ಸನ್ಮಾನ, ಯೌವನ ಸ್ವರ್ಗದ ಸೋಪಾನ’ ಎಂಬ ಹಾಡಿಗೆ ಲೀಲಮ್ಮ ಮಾಡಿದ ಥಳುಕು ಬಳುಕಿನ ನೃತ್ಯದೊಯ್ಯಾರವನ್ನೂ ಕಲಾರಸಿಕರು ಎಂದಾದರೂ ಮರೆಯಲು ಸಾಧ್ಯವೆ?