ಚಿಗುರೆಲೆಯ ಮೇಲಿನ ಹಿಮ ಬಿಂದು ಕಣ್ಣರಳಿಸಿ ನಕ್ಕಾಗ...(ಭಾಗ 1)

ಚಿಗುರೆಲೆಯ ಮೇಲಿನ ಹಿಮ ಬಿಂದು ಕಣ್ಣರಳಿಸಿ ನಕ್ಕಾಗ...(ಭಾಗ 1)

ವಿಶ್ವ ಕಾವ್ಯ ದಿನ - ಮಾರ್ಚ್ 21, ವಿಶ್ವ ಜಲ ದಿನ - ಮಾರ್ಚ್ 22, ಭಗತ್ ಸಿಂಗ್, ಶಿವರಾಂ ರಾಜ್ ಗುರು, ಸುಖದೇವ್ ತಾಪರ್ ಹುತಾತ್ಮರಾದ ದಿನ - ಮಾರ್ಚ್ 23, ಲಾಹೋರ್ ಜೈಲಿನಲ್ಲಿ. ಚಿಗುರೆಲೆಯ ಮೇಲಿನ ಹಿಮ ಬಿಂದು ಕಣ್ಣರಳಿಸಿ ನಕ್ಕಾಗ.. ನಾನು ನಸು ನಕ್ಕೆ, ಅದು ಸಂಕೋಚದಿಂದ ಸೂರ್ಯನ ಕಿರಣಗಳತ್ತ ನೋಡಿ ನಾಚಿ ಆವಿಯಾಗಿ ಮರೆಯಾಯಿತು.

ಬಿರಿದ ಕೆಂಡ ಸಂಪಿಗೆಯ ಸುವಾಸನೆಗೆ ಮರುಳಾಗಿ ಪ್ರೇಮ ಭಾವದಲ್ಲಿ ಅದನ್ನು ದಿಟ್ಟಿಸಿದಾಗ ತಣ್ಣನೆಯ ಗಾಳಿಗೆ ಸೋಕಿ  ದೂರ ಹಾರಿತು. ಸೂಜಿ ಮಲ್ಲಿಗೆಯ ಸೂಕ್ಷ್ಮ ಕುಸುರಿಗೆ ಮನಸೋತು ವಿಸ್ಮಯ ನೋಟ ಬೀರಿದಾಗ ತುಂತುರು ಮಳೆಗೆ ನಾಚಿ ನೀರಾಗಿ ನೆಲಕ್ಕುದುರಿತು. ದಾಸವಾಳದ ದಾರಿಯಲ್ಲಿ ಅದನ್ನು ಪ್ರೀತಿಯಿಂದ ಸ್ಪರ್ಶಿಸಿದಾಗ ರೋಮಾಂಚನಗೊಂಡು ನಿಧಾನವಾಗಿ ಬಿರಿದು ಸ್ವಾಗತ ಕೋರಿತು. ದಟ್ಟ ದಳಗಳ ಚೆಂಡು ಹೂ ನನ್ನ ನೋಟಕ್ಕೆ ಸಣ್ಣಗೆ ಬೆದರಿ ಮುಖ ತಿರುಗಿಸಿ ತಲೆ ಬಾಗಿಸಿ ಶರಣಾಯಿತು. ಕೆಂಗುಲಾಬಿಯು ನೋಟವರಳಿಸಿ ಹೃದಯ ಸೇರುವ ಬಯಕೆ ವ್ಯಕ್ತಪಡಿಸುವ ಭಾವ ಸೂಸುವುದು ಮನಸ್ಸಿನಲ್ಲಿ ಅಚ್ಚಾಯಿತು. ಗುಲ್ ಮೊಹರ್ ತಾನು ಆಸ್ವಾದಿಸಿದ ಪ್ರೇಮಿಗಳ ಪ್ರೀತಿ ನಿವೇದನೆಯ ಪಿಸುಮಾತು ನನಗೆ ತಿಳಿಸಲು ಗಾಳಿಯ ಸಹಾಯ ಪಡೆಯಲು ಹವಣಿಸಿದಂತಿತ್ತು. ಸೇವಂತಿಗೆ ದುಂಬಿಗಳ ಪ್ರಣಯ ಕಾವ್ಯದ ರಸ ನಿಮಿಷಗಳನ್ನು ಸುತ್ತಲೂ ಪಸರಿಸುತ್ತಿತ್ತು. ತಾವರೆಯು ಸೂರ್ಯ ರಶ್ಮಿಗೆ ಮೈ ಚಾಚಿ ನೇಸರನ ದೃಷ್ಟಿಸುತ್ತಾ ನೆನಪಿನ ಅಂಗಳಕ್ಕೆ ಜಾರಿದಂತಿತ್ತು. ತೋರಣದ ಬಾಗಿಲಿಗೆ ಸಿಂಗಾರವಾಗಲು ಕನಕಾಂಬರ ಕಾತರಿಸುತ್ತಿತ್ತು.

ಅಶೋಕ, ಸ್ಪಟಿಕ, ಪಾರಿಜಾತ, ಕಣಗಿಲೆ, ಕೇದಗೆ, ಡೇರೆ, ಸುರಗಿ, ತುಂಬೆ, ಜಾಜಿಗಳು ವಸಂತದ ಆಗಮನದಿಂದ ಸಂಭ್ರಮಿಸುತ್ತಾ ತಮ್ಮ ಬದುಕಿನ ಸಾರ್ಥಕ ಕ್ಷಣಗಳನ್ನು ಅನುಭವಿಸುವುದನ್ನು ಗಮನಿಸುತ್ತಾ.. ಕೋಗಿಲೆಯು ಇಂಪಾದ ಸ್ವರ ಮಾಧುರ್ಯದಲ್ಲಿ ಇನಿಯನನ್ನು ಕರೆಯುತ್ತಾ,.. ಗುಬ್ಬಚ್ಚಿಯು ಚಿಲಿಪಿಲಿ ಹಾಡಿ, ಮಗುವಿಗೆ ಕಾಳು ಉಣಿಸುತ್ತಾ, ಮಿಡತೆಗಳ ಮಿಲನ ಮಹೋತ್ಸವದ ಝೇಂಕಾರದಲ್ಲಿ ತೇಲಾಡುತ್ತಾ,.. ಕಾಗೆಗಳು  ಕಲರವದಲ್ಲಿ ತಮ್ಮ ಆಹಾರ ಹಂಚಿಕೊಳ್ಳುತ್ತಾ,.. ಪಾರಿವಾಳಗಳ ಗುಟುರಿನೊಂದಿಗೆ ಶಾಂತಿ ಸಂದೇಶ ಸಾರುತ್ತಾ… ಗಿಣಿಗಳು ಅಣಿಮುತ್ತಿನಲ್ಲಿ ರಸಸ್ವಾಧಿಸುತ್ತಾ,.. ನವಿಲುಗಳು ನರ್ತನದಲ್ಲಿ ನಲಿಯುತ್ತಾ,.. ಗೀಜಗ ಮಳೆಗಾಲಕ್ಕಾಗಿ ಗೂಡು ನೇಯುತ್ತಾ,.. ತೆಂಗು, ಮಾವು, ಬಾಳೆ, ಹಲಸು, ಸೀಬೆ, ದ್ರಾಕ್ಷಿ,  ಸೇಬು, ದಾಳಿಂಬೆ, ಅನಾನಸ್, ಕಿತ್ತಳೆ, ಮೂಸಂಬಿ, ಕಲ್ಲಂಗಡಿ, ಕರ್ಬೂಜ, ಪಪ್ಪಾಯಿ, ಸಪೋಟ, ಚಕ್ಕೋತ...

ಕೊತ್ತಂಬರಿ, ಕರಿಬೇವು, ಪುದಿನ, ದಂಟು, ಪಾಲಾಕ್, ಅರಿವೆ, ಬದನೆ, ನುಗ್ಗೆ, ಬೆಂಡೆ, ತೊಂಡೆ, ನಿಂಬೆ, ಸೌತೆ, ಹುರುಳಿ,  ಪಡವಲಕಾಯಿ, ಈರುಳ್ಳಿ, ಬೆಳ್ಳುಳ್ಳಿ, ಸೋರೆ, ಅವರೆ, ತೊಗರಿ, ಕಡಲೆ, ಗುರೆಳ್ಳು, ಗಸಗಸೆ, ಶುಂಠಿ, ಮೆಣಸು, ಜೀರಿಗೆ., ಬೆಕ್ಕು, ನಾಯಿ, ಹಸು, ಕರು, ಕುರಿ, ಕೋಳಿ, ಹಂದಿ, ಮೊಲ, ಒಂಟೆ, ಕುದುರೆ, ಕತ್ತೆ.... ಹುಲಿ, ಸಿಂಹ, ಚಿರತೆ, ಜಿಂಕೆ, ಕರಡಿ, ಹಾವು,... ಮೀನು, ಮೊಸಳೆ, ಆಮೆ, ಶಂಕ, ಹೀಗೆ ಪ್ರಕೃತಿಯ ಮಡಿಲಲ್ಲಿ ಮಾತನಾಡುತ್ತಾ, ಶಬ್ದ ಕೇಳಿಸಿಕೊಳ್ಳುತ್ತಾ, ಭಾವ ಗ್ರಹಿಸುತ್ತಾ, ವಸಂತ ಋತುವಿನಲ್ಲಿ ಒಂದು ಸುತ್ತ ಚರ ಜಂಗಮನಾಗಿ ನಡೆದಾಡಿದರೆ ಮನಸ್ಸು ಮತ್ತೆ ನವ ಉಲ್ಲಾಸ ಪಡೆದು ಚೇತೋಹಾರಿಯಾಗುತ್ತದೆ.

ವಸಂತ ಮಾಸವೆಂದರೆ ಪ್ರಕೃತಿಯೊಂದಿಗಿನ ಒಡನಾಟ, ಪರಿಸರದೊಂದಿಗೆ ಸಂಬಂಧ, ಜೀವಚರಗಳೊಂದಿಗೆ ಅನುಬಂಧ, ಮಾನವೀಯತೆಯ ಋಣಾನುನಂಧ. ಮತ್ತೆ ಚಿಗುರುವ ಜೀವನೋತ್ಸಾಹ, ಅಂದಹಾಗೆ, ಇವತ್ತು ವಿಶ್ವ ಜಲದಿನ. ಭೂ ಮಂಡಲದಲ್ಲಿ ಮುಕ್ಕಾಲು ಪಾಲು ನೀರೇ ಇದ್ದರೂ, ಎಲ್ಲೆಲ್ಲೂ ನೀರಿಗಾಗಿ ಹಾಹಾಕಾರ, " ನೀರು ಉಳಿಸಿ " ಎಂಬ ಘೋಷವಾಕ್ಯ ಪ್ರತಿಧ್ವನಿಸುವ ಕೆಟ್ಟ ಪರಿಸ್ಥಿತಿಯಲ್ಲಿ ನಾವಿದ್ದೇವೆ. ನೀರಿನ ಸರಿಯಾದ ಬಳಕೆ ಮತ್ತು ಅದರ ಮಹತ್ವವನ್ನು ಇದೇ ಸಂದರ್ಭದಲ್ಲಿ ನೆನಪಿಸುತ್ತ...

ಭಗತ್‌‌ ಸಿಂಗ್‌‌, ರಾಜಗುರು, ಸುಖದೇವ್ ಬಲಿದಾನ… 1931 ಮಾರ್ಚ್ 23 ಮತ್ತು, 2024 ಮಾರ್ಚ್ 23. ಬದುಕುವ ಮಾರ್ಗ ತಿಳಿಯದೆ ದೇಶದ ಸ್ವಾತಂತ್ರ್ಯಕ್ಕಾಗಿ ನಿಸ್ವಾರ್ಥದಿಂದ ಚಿಕ್ಕ ವಯಸ್ಸಿನಲ್ಲಿಯೇ ನೇಣುಗಂಬವೇರಿದ ದೇಶಪ್ರೇಮಿ ಹುತಾತ್ಮರು. ( ವ್ಯಂಗ್ಯ)... ಬದುಕುವುದು ಹೇಗೆ ಎಂದು ಅರ್ಥಮಾಡಿಕೊಂಡು ನಮ್ಮದೇ ಜನರ ನಮ್ಮದೇ ಸರ್ಕಾರದ ‌ಹಣವನ್ನು ಲೂಟಿ ಮಾಡಿ ಕಾರು ಬಂಗಲೆ ಸಮೇತ ಮಜಾ ಉಡಾಯಿಸುತ್ತಿರುವ ಮಹಾತ್ಮರು. ( ವ್ಯಂಗ್ಯ)

ಇಂದು ಬೆಳಗಿನಿಂದ ಸಂಜೆಯವರೆಗೂ ಬೇಕಾದರೆ ಗಮನಿಸಿ. ಯಾವುದೇ ಮುಖ್ಯ ವಾಹಿನಿಯ ಟಿವಿ ಮಾಧ್ಯಮಗಳಲ್ಲಿ ಒಂದೆರಡು ನಿಮಿಷಗಳಷ್ಟು ಸಹ ಈ ಸ್ವಾತಂತ್ರ್ಯ ಹುತಾತ್ಮರ ಬಗ್ಗೆ ತೋರಿಸುವ ಸಾಧ್ಯತೆ ಕಡಿಮೆ. ಅದೇ ದಿನಗಟ್ಟಲೆ ಆ ಭ್ರಷ್ಟಾಚಾರಿ ಮಹಾತ್ಮರನ್ನ ಸಂದರ್ಶನ ಸಮೇತ ತೋರಿಸುತ್ತಾರೆ. ದಿನವಿಡೀ ಅವರದೇ ಸುದ್ದಿಗಳು. ಇದೇ 1931 ಮತ್ತು 2024 ರ ನಡುವಿನ ಸಾಮಾಜಿಕ ಬದಲಾವಣೆ. ಕೆಟ್ಟದ್ದಕ್ಕೆ ಸಮಾಜದಲ್ಲಿ ಪ್ರಚಾರ ಮತ್ತು ಮಾನ್ಯತೆ, ಒಳ್ಳೆಯದರ ಬಗ್ಗೆ ನಿರ್ಲಕ್ಷ್ಯ ಮತ್ತು ತಿರಸ್ಕಾರ.

ಇಂದು ನಾವು ಅನುಭವಿಸುತ್ತಿರುವ ಸಂವಿಧಾನಾತ್ಮಕ ಸ್ವಾತಂತ್ರ್ಯ ಎಷ್ಟೋ ಜನರ ತ್ಯಾಗ ಬಲಿದಾನಗಳಿಂದ ದೊರೆತಿದೆ. ಅದರ ಮಹತ್ವ ಏನು, ಅದನ್ನು ಹೇಗೆ ಉಳಿಸಿಕೊಳ್ಳಬೇಕು, ಮುಂದಿನ ಪೀಳಿಗೆಗೆ ಅದನ್ನು ಹೇಗೆ ವರ್ಗಾಯಿಸಬೇಕು ಎಂಬ ಚರ್ಚೆ ಇಂದು ಆಗಬೇಕಾಗಿದೆ.. ಚಿಕ್ಕ ವಯಸ್ಸಿನಲ್ಲಿ ಊಟಕ್ಕೆ ಬಟ್ಟೆಗೆ ಪರದಾಡುತ್ತಿದ್ದವರು ನಾವು, ಮಳೆ ಚಳಿ ಗಾಳಿಗೆ ತತ್ತರಿಸುತ್ತಿದ್ದವರು ನಾವು, 

ಅದರಲ್ಲಿ ಬಹಳಷ್ಟು ಜನ ಇಂದು ಊಟ ಬಟ್ಟೆ ವಸತಿ ಮೀರಿ ಕಾರು ಬಂಗಲೆ ಎಸಿ ಸುಗಂಧ ದ್ರವ್ಯ ಎಲ್ಲವನ್ನೂ ಪಡೆದಿದ್ದಾರೆ. ಆದರೂ ಇನ್ನೂ ಇನ್ನೂ ಇನ್ನೂ ಹಣ ಹಣ ಹಣ ಎಂದು ಮನೆಯ ಸಿಕ್ಕ ಸಿಕ್ಕ ಜಾಗದಲ್ಲಿ ತುಂಬಿಡುತ್ತಿದ್ದಾರೆ. ಚಿನ್ನ ಬೆಳ್ಳಿ ವಜ್ರ ವೈಡೂರ್ಯಗಳು ಕೆಜಿಗಟ್ಟಲೆ ಮನೆಯಲ್ಲಿ ಸಿಗುತ್ತಿವೆ. ಸರ್ಕಾರಿ ಉದ್ಯೋಗ ದೊರೆಯುವ ಮೊದಲು ಹಳೆ ಬಟ್ಟೆ ಹಳೆ ಮನೆ ಹಳೆ ಚಾಪೆ ಕಡಿಮೆ ಊಟದಲ್ಲೇ ತೃಪ್ತಿ ಹೊಂದುತ್ತಿದ್ದ ಜನ ಸರ್ಕಾರಿ ಉದ್ಯೋಗ ದೊರೆತು ಸುಮಾರು 50,000 ಸಾವಿರ ಸಂಬಳ ಪಡೆಯತೊಡಗಿದಾಗ ಮತ್ತಷ್ಟು ಭ್ರಷ್ಟ ಹಣಕ್ಕೆ ಕೈಚಾಚುವುದು ತುಂಬಾ ಸೋಜಿಗವೆನಿಸುತ್ತದೆ. ಚುನಾವಣೆಯಲ್ಲಿ ಗೆಲ್ಲುವವರೆಗೆ ಕಂಡ ಕಂಡ ಜನರಿಗೆ ಕೈ ಮುಗಿಯುವ, ಎಲ್ಲೆಂದರಲ್ಲಿ ಯಾರೆಂದರೆ ಅವರನ್ನು ಮಾತನಾಡಿಸುವ ಜನ ಪ್ರತಿನಿಧಿಗಳು ಆಯ್ಕೆಯಾದ ನಂತರ ದೇವರಾಗುವುದು ಒಂದು ವಿಪರ್ಯಾಸ. ಭಾರತದ ಸ್ವಾತಂತ್ರ್ಯ ಹೋರಾಟದ ಕ್ರಾಂತಿಕಾರಿಗಳಲ್ಲಿ ಭಗತ್ ಸಿಂಗ್ ಬಹುಮುಖ್ಯರಾಗುತ್ತಾರೆ. 

(ಇನ್ನೂ ಇದೆ)

-ವಿವೇಕಾನಂದ ಎಚ್. ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ