ಚಿಗುರ ತಹತಹ, ಗೊಂದಲ...
ಪಾಪದ ಹುಡುಗ ಹುಡುಗಿಯರ
ಬದುಕರಳುವ ಗೊಂದಲ
ಕಳಚುತ್ತೆಷ್ಟೊಂದು ಪದರ
ಹುಡುಕಬೇಕು ಅಂಗುಲ, ಚದರ ||
ಹೇಳಿಕೊಡುವರಿಲ್ಲವೆನ್ನುವಂತಿಲ್ಲ
ಮಸಲ ಸಂಗತಾಸಂಗತ ಪ್ರಶ್ನೆ
ಹಿತಾಹಿತ ಸಂಶಯವೆ ಸಲಹುತ್ತ
ಹುತ್ತಗಟ್ಟಿದ ಭೂತ ಅನುಮಾನ ||
ಕಲಿಕೆಯೇನೊ ಸಹಜ ನಿಜ
ಕಲಿಯಲುಂಟು ಸಾಗರದಪಾರ
ಖನಿಜ, ಲವಣ, ಜೀವಜಲ ರಾಶಿ
ಕೈಯಿಡಲೆಲ್ಲಿ ಮೊದಲು, ಕೊನೆ? ||
ಆರಂಭಿಸಲೆಂತು ಎಲ್ಲೊ, ಹೇಗೊ?
ಅನುಭವದ ಸುಡು ಬೆಂಕಿ ತಂಪು
ಹುಮ್ಮಸ್ಸು ಉತ್ಸಾಹಗಳ ಗಂಟು
ದಾಟಿಸೆ ಸಾಕೆ ದರ್ಶಿಸುತ ಮಾರ್ಗ ? ||
ಬೀಜ ಮೊಳೆತು ಸಸಿಯಾಗರಿತು
ಗಿಡ ಮರ ಹೆಮ್ಮರವಾಗುವ ಚಿತ್ತ
ಅನಾವರಣಕನುವಾಗೆ, ಹಳೆ ಬೇರು -
ಪೋಷಿಸೆ ಚಿಗುರ ನಿರುಮ್ಮಳ, ನಿರಾತಂಕ ||
ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು
Comments
ಉ: ಚಿಗುರ ತಹತಹ, ಗೊಂದಲ...
ಆತ್ಮೀಯ ನಾಗೇಶ್ ಜಿ, ತುಂಬ ಸುಂದರ ಕವನ. ಮೆಚ್ಚುಗೆಯಾಯಿತು. ಧನ್ಯವಾದಗಳು ಸರ್
In reply to ಉ: ಚಿಗುರ ತಹತಹ, ಗೊಂದಲ... by lpitnal
ಉ: ಚಿಗುರ ತಹತಹ, ಗೊಂದಲ...
ಆತ್ಮೀಯ ಇಟ್ನಾಳರೆ, ನಮಸ್ಕಾರ ಮತ್ತು ಧನ್ಯವಾದಗಳು. ಬಿಜಿನೆಸ್ ಟ್ರಿಪ್ಪಿನಿಂದ ಹಿಂದಿರುಗುವಾಗ ವಿಮಾನವೇರುವುದಕ್ಕೆ ಇನ್ನು ಸ್ವಲ್ಪ ಸಮಯವಿತ್ತು - ಆಗ ಮೂಡಿದ ಸಾಲುಗಳಿವು :-)
ಉ: ಚಿಗುರ ತಹತಹ, ಗೊಂದಲ...
ಚಿಗುರಿನ ತಹತಹಿಕೆ, ಚಡಪಡಿಕೆ, ಹಪಹಪಿಕೆಗಳು ಪ್ರೌಢವಾದಾಗ ತಿಳುವಳಿಕೆಯಾಗಿ ಮಾರ್ಪಡುತ್ತವೆ. ಮಾಗಿದಾಗ ಒಣಗಿ ಉದುರಿ, ಹೊಸ ಚಿಗುರುಗಳಿಗೆ ದಾರಿ ಮಾಡಿಕೊಡುತ್ತವೆ. ಸುಂದರ ಚಿತ್ರಣ. ಅಭಿನಂದನೆ, ನಾಗೇಶರೇ.
In reply to ಉ: ಚಿಗುರ ತಹತಹ, ಗೊಂದಲ... by kavinagaraj
ಉ: ಚಿಗುರ ತಹತಹ, ಗೊಂದಲ...
ಕವಿಗಳೆ, ನಮಸ್ಕಾರ ಮತ್ತು ಧನ್ಯವಾದಗಳು. ಒಂದು ರೀತಿಯಲ್ಲಿ ಸಂಪದದ ಟ್ಯಾಗ್ ಲೈನ್ ' ಹಳೆ ಬೇರು ಹೊಸ ಚಿಗುರಿ'ಗೆ ಹೊಂದಿಕೆಯಾಗುವ ವಸ್ತುವಿನ ಒಂದು ಸರಳ ರೂಪ :-)