ಚಿಟ್ಟು ಮಡಿವಾಳ ಹಕ್ಕಿಯ ಸಂಭ್ರಮ !

ಚಿಟ್ಟು ಮಡಿವಾಳ ಹಕ್ಕಿಯ ಸಂಭ್ರಮ !

ಹೊಸ ಹಕ್ಕಿಯ ಪರಿಚಯ ಹೇಳುವ ಮೊದಲು ನಿಮಗೊಂದು ಒಗಟು ಕೇಳೋಣ ಅಂದುಕೊಂಡಿದ್ದೇನೆ. ತಯಾರಾಗಿದ್ದೀರಲ್ಲ...

ಕಪ್ಪು ಬಣ್ಣದ ಹಕ್ಕಿ ನಾನು

ಗುಬ್ಬಚ್ಚಿಗಿಂತ ತುಸು ದೊಡ್ಡವನು

ಹೆಗಲ ಮೇಲೊಂದು ಬಿಳಿಯ ಮಚ್ಚೆ

ಬಾಲದ ಕೆಳಗೆ ಕೇಸರಿ ಕಂದು

ಬಾಲವನೆತ್ತಿ ಕುಣಿಸುವೆನು

ಚಂದದ ಸಿಳ್ಳೆಯ ಹಾಕುವೆನು 

ನೆಲದ ಮೇಲೆ ಜಿಗಿಯುತ ನಡೆವೆ

ಹುಳು ಹುಪ್ಪಟೆಗಳ ಹಿಡಿದು ತಿನ್ನುವೆನು

ಹೇಳುವೆಯ ಜಾಣ ನಾನ್ಯಾವ ಹಕ್ಕಿ ?

ಒಗಟಿನ ಉತ್ತರ ತಿಳೀತಾ....?

ಇದು ಈ ವಾರದ ಹಕ್ಕಿ. ಈ ಹಕ್ಕಿಯನ್ನು ನಾನು ಮೊದಲನೇ ಬಾರಿ ನೋಡಿದ್ದು ಸುಮಾರು ಹತ್ತು ವರ್ಷಗಳ ಹಿಂದೆ. ಆ ದಿನ ನಾವೆಲ್ಲ ನಮ್ಮ ಚಿಕ್ಕಮ್ಮನ ಮನೆಗೆ ಹೋಗಿದ್ದೆವು. ಬೇಸಗೆಯ ರಜೆ. ಸಂಜೆ ನಾವು ಹೋದಾಗ ಚಿಕ್ಕಪ್ಪ ಗಿಡಗಳಿಗೆ ನೀರು ಹಾಕುತ್ತಿದ್ದರು. ಗಟ್ಟಿಯಾದ ಲ್ಯಾಟರೈಟ್ ಮಣ್ಣಿನ ಜಾಗದಲ್ಲೂ ಬಹಳ ಮುತುವರ್ಜಿಯಿಂದ ಹಲವು ಬಗೆಯ ಹೂವು‌, ತರಕಾರಿ ಮತ್ತು ಹಣ್ಣಿನ ಗಿಡಗಳನ್ನು ಬೆಳೆದಿದ್ದರು. ಬಾಯಾರಿಕೆ ಕುಡಿದ ನಂತರ ಬನ್ನಿ ಸ್ಟಾರ್ ಆಪಲ್ ಮರದಲ್ಲಿ ರುಚಿಯಾದ ಹಣ್ಣುಗಳು ಬಿಟ್ಟಿವೆ, ಕೊಯ್ದು ತಿನ್ನೋಣ ಎಂದು ಕರೆದರು. ಹಣ್ಣು ಕೊಯ್ಯಲು ದೋಟಿ ಮತ್ತು ತುಂಬಿಸಿಕೊಳ್ಳಲು ಚೀಲ ಹಿಡಿದುಕೊಂಡು ಹೋಗಿ ಸಾಕಷ್ಟು ಹಣ್ಣುಗಳನ್ನು ಕೊಯ್ದು ತಂದು ತಿನ್ನತೊಡಗಿದೆವು. ಎಲ್ಲರೂ ಮನೆಯ ಒಳಗೆ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದರೆ ನಾನು ಹೊರಗಡೆ ಹಜಾರದಲ್ಲಿ ಕುಳಿತು ಹಣ್ಣು ತಿನ್ನುತ್ತಿದ್ದೆ. ಅಲ್ಲೇ ಸಮೀಪದ ಮರದ ಬುಡದಲ್ಲಿ ಏನೋ ಕುಪ್ಪಳಿಸುತ್ತಾ ಓಡಾಡುತ್ತಿರುವುದು ಕಾಣಿಸಿತು. ನೋಡಲಿಕ್ಕೆ ಕಪ್ಪು ಬಣ್ಣ, ಹೆಗಲಿನ ಮೇಲಷ್ಟೇ ಸಣ್ಣ ಬಿಳಿ ಬಣ್ಣದ ಮಚ್ಚೆ, ನೆಲದ ಮೇಲೆ ಕುಪ್ಪಳಿಸುವಾಗ ಬಾಲವನ್ನು ಮೇಲಕ್ಕೆ ಎತ್ತಿ ಕೆಳಗೆ ಇಳಿಸುತ್ತಿತ್ತು. ಬಾಲದ ಕೆಳಗಡೆ ಕಂದು ಮಿಶ್ರಿತ ಕೇಸರಿ ಬಣ್ಣ. ಅದರ ಜೊತೆ ಇನ್ನೊಂದು ಹಕ್ಕಿ ಅಲ್ಲೇ ಸಮೀಪದಲ್ಲಿ ಓಡಾಡುತ್ತಿತ್ತು. ಅದರ ದೇಹ ಪೂರ್ತಿ ಒಣಗಿದ ಹುಲ್ಲಿನಂತೆ ಕಾಣುವ ಕಂದು ಬಣ್ಣ. ಬಾಲದ ಕೆಳಗೆ ಅದೇ ಕೇಸರಿ ಮಿಶ್ರಿತ ಕಂದು ಬಣ್ಣ. ಅದೂ ತನ್ನ ಬಾಲವನ್ನೆತ್ತಿ ಕೆಳಗೆ ಇಳಿಸುತ್ತಿತ್ತು. 

ಮನೆಗೆ ಹಿಂದೆ ಬಂದ ನಂತರ ಯಾವುದೀ ಹಕ್ಕಿ ಎಂದು ಪುಸ್ತಕದಲ್ಲಿ ಹುಡುಕಿದಾಗಲೇ ತಿಳಿದದ್ದು ಇದು ಚಿಟ್ಟು ಮಡಿವಾಳ ಎಂದು ಕರೆಯಲ್ಪಡುವ Indian Robin. ನೆಲದ ಮೇಲಿನ ಹುಳ, ಹುಪ್ಪಟೆಗಳೇ ಇದರ ಮುಖ್ಯ ಆಹಾರವಂತೆ. ಎಪ್ರಿಲ್ ನಿಂದ ಜೂನ್ ತಿಂಗಳ ನಡುವೆ ಮರದ ಪೊಟರೆ, ಕಲ್ಲಿನ ಸಂದಿಯಂತಹ ಜಾಗದಲ್ಲಿ ಹುಲ್ಲು, ಗರಿ ಮತ್ತು ಕೂದಲುಗಳನ್ನು ಸೇರಿಸಿ ಗೂಡು ಕಟ್ಟಿ ಮೊಟ್ಟೆ ಇಟ್ಟು ಮರಿ ಮಾಡುತ್ತದೆಯಂತೆ. ಮೊಟ್ಟೆಗೆ ಕಾವು ಕೊಡುವುದು ಹೆಣ್ಣು ಹಕ್ಕಿ. ಅದರ ಕಂದು ಮೈಬಣ್ಣ ಕಾವು ಕೊಡುವಾಗ ಅದನ್ನು ಕಾಣದಂತೆ ಮರೆಮಾಚಲು ಸಹಕಾರಿಯಾಗಿದೆ. ಮರಿಗಳಿಗೆ ಆಹಾರ ಕೊಡುವ ಜವಾಬ್ದಾರಿಯನ್ನು ತಂದೆ ತಾಯಿಗಳೆರಡೂ ವಹಿಸಿಕೊಳ್ಳುತ್ತವೆಯಂತೆ. ಭಾರತದ ಎಲ್ಲ ಕಡೆಯೂ ಕಾಣಸಿಗುವ ಈ ಹಕ್ಕಿ ನಿಮ್ಮ ಮನೆಯ ಹಿತ್ತಲಿನಲ್ಲೂ ಇರಬಹುದು.

ಕನ್ನಡದ ಹೆಸರು: ಚಿಟ್ಟು ಮಡಿವಾಳ

ಇಂಗ್ಲೀಷ್ ಹೆಸರು: Indian Robin

ವೈಜ್ಞಾನಿಕ ಹೆಸರು: Saxicoloides fulicatus

ಚಿತ್ರ ಕೃಪೆ: ಬಿಷನ್ ಮೊನ್ನಪ್ಪ & ಅವಿಶೇಕ್ ಚಾಟರ್ಜಿ 

-ಅರವಿಂದ ಕುಡ್ಲ, ಬಂಟ್ವಾಳ