ಚಿಟ್ಟೆ
ಬರಹ
ಚಿಟ್ಟೆ
ಆಹಾ! ನೋಡು ಬಣ್ಣದ ಚಿಟ್ಟೆ!
ನಿನ್ನೀ ಮೆರುಗಿಗೆ ನಾ ಮರುಳಾಗಿಬಿಟ್ಟೆ!
ಹುಟ್ಟಿನಲಿ, ನೀನು ಕರ್ರಗಿನ ಕಂಬಳಿ - ಕುರೂಪಿ
ಬೆಳೆಯಲು, ಅಪ್ಸರೆಯರೂ ಹಿಮ್ಮೆಟ್ಟಿದರು, ನೀ ಸ್ಫುರದ್ರೂಪಿ!
ಬಣ್ಣವೋ ಬಣ್ಣ ಇದು ಅದ್ಭುತ ಚಿತ್ತಾರ
ಚೆಲ್ಲಿದೆ ರಂಗು - ಸೌಂದರ್ಯದ ಪರಮಾವಧಿ - ಸಾಕಾರ!
ಎಂಥಾ ಚೆಲುವು - ಓ ಪಾತರಗಿತ್ತಿ!
ನೋಡೀ ನೀರೆಯರೂ ನಾಚಿದರು - ನೀ ಬಿನ್ನಾಣಗಿತ್ತಿ!
ಅದೇನು ನಿನ್ನ ಈ ಅಂದ-ಚೆಂದ!
ಹೀರಿದೆಯಾ ನೀ ಹೂಗಳ ಮಕರಂದ!
ಒಂದೇ ಒಂದು ಸ್ಪರ್ಶಕ್ಕೆ ಕಾದಿವೆ ಕೋಟಿ ಶ್ಯಾಮಲೆ
ನಿಂತಲ್ಲೆ ನಿಲ್ಲಲಾರೆ - ನೀ ಮಹಾ ಚಂಚಲೆ!
ಪ್ರೀತಿಯಲಿ ಪುಷ್ಪಕ್ಕೆ ಕೊಟ್ಟಿಹೆ ಸಿಹಿ ಚುಂಬನ
ಮೃದು ಹೂವದು ನಸು ನಡುಗಿದೆ - ಎಂಥಾ ರೋಮಾಂಚನ!
ಕುಡಿದಿರುವೆ ನೀನು ಹೂವಿನ ಜೇನು...
ಹೇಳು! ನಿನ್ನ ಸೌಂದರ್ಯದ ಗುಟ್ಟು ಇದೇ ಏನು?
ನಿನ್ನ ಸೃಷ್ಟಿಸಿದ ಬ್ರಹ್ಮನ ಬಲವು ಅಷ್ಟಿಷ್ಟೇ?
ಇದನೆಲ್ಲ ಯೋಚಿಸಿ ಸ್ತಬ್ಧನಾಗಿ - ಮೂಗಿನ ಮೇಲೆ ಬೆರಳಿಟ್ಟೆ!