ಚಿಟ್ಟೇ...ಚಿಟ್ಟೇ... ಬಣ್ಣದ ಚಿಟ್ಟೆ !

ಚಿಟ್ಟೇ...ಚಿಟ್ಟೇ... ಬಣ್ಣದ ಚಿಟ್ಟೆ !

ಚಿಟ್ಟೆಯ ಜೀವಿತಾವಧಿ ಬಹು ಅಲ್ಪ ದಿನ. ಆದರೆ ಅವುಗಳು ಸೌಂದರ್ಯದ ಗಣಿಗಳು. ಒಂದೊಂದು ಚಿಟ್ಟೆ ಒಂದೊಂದು ಬಣ್ಣ, ವಿನ್ಯಾಸ. ನಯನ ಮನೋಹರ. ಚಿಟ್ಟೆಗಳು ಬಹು ಉಪಕಾರಿ. ಅವುಗಳಿಂದಲೇ ಹೂವಿನಲ್ಲಿ ಪರಾಗಸ್ಪರ್ಶಗಳು ಆಗುತ್ತವೆ. ಇದರಿಂದ ಕಾಯಿ, ಹಣ್ಣುಗಳಾಗುತ್ತವೆ. ಈ ಚಿಟ್ಟೆ, ಪತಂಗ ಹಾಗೂ ಜೇನು ನೊಣಗಳು ಜಗತ್ತಿನಲ್ಲಿ ಇಲ್ಲವೆಂದಾದಲ್ಲಿ ನಮ್ಮ ಬದುಕೇ ನಾಶವಾಗುತ್ತವೆ. ಏಕೆಂದರೆ ಬಹಳಷ್ಟು ಪರಾಗಸ್ಪರ್ಶ ಕ್ರಿಯೆಗಳು ನಡೆಯುವುದು ಇವುಗಳ ಮುಖಾಂತರವೇ... ವರ್ಣಮಯ ಚಿಟ್ಟೆಗಳ ಲೋಕಕ್ಕೆ ಒಂದು ಸುತ್ತು ಬರುವ.

ಚಿಟ್ಟೆಗಳು ಮಕ್ಕಳಿಗೂ ಪ್ರಿಯ. ಕವಿಗಳಿಗೆ, ಬರಹಗಾರರಿಗೂ ಪ್ರಿಯ. ಕೆಲವು ಬಾರಿ ಬೈಗುಳಕ್ಕೂ ಬಳಕೆಯಾಗುತ್ತದೆ ಈ ಚಿಟ್ಟೆ ಎಂಬ ಪದ. ‘ನೀನೇನು ಚಿಟ್ಟೆಯಂತೆ ಹಾರಾಡುತ್ತಲೇ ಇರುತ್ತೀಯಾ’ ಎನ್ನುತ್ತೇವೆ. ಚಿಟ್ಟೆ ಅಥವಾ ಪಾತರಗಿತ್ತಿಯ ಜೀವನಶೈಲಿ ಅತ್ಯಂತ ಕುತೂಹಲ. ಇದರ ಬಾಳುವೆ ಸಮಯ ಅತ್ಯಲ್ಪವಾದರೂ ಕಲಾವಿದರ ಮನಸೆಳೆಯುವ ಚಿನ್ನಾರಿ ಇದು.

ನಾವು ಮಕ್ಕಳಿರುವಾಗ ಹೂವಿನಿಂದ ಹೂವಿಗೆ ಮಕರಂದ ಅರಸಿ ಬರುವ ಚಿಟ್ಟೆಗಳನ್ನು ಹಿಡಿಯುವ ಆಟವನ್ನು ಆಡಿರುತ್ತೇವೆ. ಹಳದಿ ಬಣ್ಣದ, ಕಪ್ಪು-ಕೆಂಪು ಬಣ್ಣದ, ಹೆಲಿಕಾಪ್ಟರ್ ನಂತಿರುವ, ಅಗಲವಾದ ರೆಕ್ಕೆಗಳ ಚಿಟ್ಟೆಗಳನ್ನು ನಾವು ನೋಡಿರುತ್ತೇವೆ. ಕೆಲವೊಮ್ಮೆ ಹಿಡಿದು ಬೆಂಕಿಪೆಟ್ಟಿಗೆಯಲ್ಲಿ ಬಂಧಿಸಿಯೂ ಇರುತ್ತೇವೆ. ಅದರ ರೆಕ್ಕೆಯ ಬಣ್ಣ ಕೈಗೆ ಅಂಟಿಸಿಕೊಂಡು ಮುಜುಗರ ಪಟ್ಟದ್ದೂ ಇದೆ ಅಲ್ಲವೇ? ಚಿಟ್ಟೆಗೆ ನೂಲು ಕಟ್ಟಿ ಅದನ್ನು ಮೇಲಕ್ಕೆ ಹಾರಿಸಿದ್ದೂ ಇದೆಯಲ್ಲವೇ? ಇದೆಲ್ಲವೂ ಬಾಲ್ಯದ ನೆನಪುಗಳಾದುವು.

ಚಿಟ್ಟೆಯ ಜೀವನ ಚಕ್ರವು ನಾಲ್ಕು ಅವಸ್ಥೆಗಳನ್ನು ಒಳಗೊಂಡಿದೆ. ಮೊಟ್ಟೆಯಿಂದ ಕೀಟಾವಸ್ಥೆ (ಕಂಬಳಿ ಹುಳು), ಅಲ್ಲಿಂದ ಕೋಶಾವಸ್ಥೆ, ನಂತರ ಪ್ರೌಢಾವಸ್ಥೆ. ಈ ಪ್ರೌಢಾವಸ್ಥೆ ಕೊನೆಯ ಹಂತ ಹಾಗೂ ಮಹತ್ವದ್ದು. ಮೊದಲ ಅವಸ್ಥೆ ಅಂದರೆ ಮೊಟ್ಟೆಯು ನಮ್ಮ ಗಮನಕ್ಕೆ ಅಷ್ಟಾಗಿ ಬರುವುದಿಲ್ಲ. ಚಿಟ್ಟೆಯ ಮೊಟ್ಟೆಯು ಗಿಡದ ಎಲೆಗಳ ಕೆಳಗೆ ಕಂಡು ಬರುತ್ತದೆ. ಆ ಕಾರಣದಿಂದ ಇದು ಗಮನಕ್ಕೆ ಬರುವುದು ಕಮ್ಮಿ. 

ಪ್ರೌಢಾವಸ್ಥೆಗೆ ಬಂದ ಚಿಟ್ಟೆಯು ಆಕರ್ಷಕ ರೆಕ್ಕೆ ಹಾಗೂ ವರ್ಣವನ್ನು ಪಡೆದುಕೊಂಡು ಆಹಾರಕ್ಕಾಗಿ ಮಕರಂದವನ್ನು ಸಂಗ್ರಹಿಸುತ್ತದೆ. ಈ ಚಿಟ್ಟೆಗಳು ಇಲ್ಲದ ಪ್ರದೇಶವೇ ಇಲ್ಲ. ಎಲ್ಲೆಡೆಯೂ ಕಂಡು ಬರುತ್ತದೆ. ಹೂವುಗಳು ಇರುವ ಕಡೆ ಹೆಚ್ಚು ಸಂಖ್ಯೆಯಲ್ಲಿರುವ ಇವುಗಳು, ಸಹರಾದಂತಹ ಮರುಭೂಮಿಯಲ್ಲೂ ನೋಡಲು ಸಿಗುತ್ತವೆ. ಅಲ್ಲಿರುವ ಕೆಲವು ಕಳ್ಳಿ ಗಿಡಗಳ ಹೂವಿನಿಂದ ಮಕರಂದ ಹೀರಲು ಚಿಟ್ಟೆಗಳು ಬರುತ್ತವೆ. ಚಿಟ್ಟೆಗಳು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ವಲಸೆ ಹೋಗುತ್ತವೆ. 

ಚಿಟ್ಟೆಗಳು ಒಂದು ಸೆಂ. ಮೀ ನಿಂದ ೨೫ ಸೆಂ. ಮೀ. ತನಕ ಬೆಳೆಯುತ್ತವೆ. ಜಗತ್ತಿನ ಅತ್ಯಂತ ದೊಡ್ದ ಚಿಟ್ಟೆಯಾದ ಕ್ವೀನ್ ಅಲೆಕ್ಸಾಂಡ್ರಾಸ್ ಬರ್ಡ್ ವಿಂಗ್ (Queen Alexandra Birdwing) ೨೫ ರಿಂದ ೨೮ ಸೆಂ. ಮೀ.ತನಕ ಬೆಳೆಯುತ್ತದೆ. ಇವುಗಳು ವೆಸ್ಟ್ ಇಂಡೀಸ್ ನ ದ್ವೀಪಗಳಾದ ಪಾಪುವಾ ನ್ಯೂಗಿನಿ ಹಾಗೂ ಸೋಲೋಮನ್ ಕಾಡುಗಳಲ್ಲಿ ಕಂಡು ಬರುತ್ತವೆ. ಪತಂಗದ ಜಾತಿಗೆ ಸೇರುವ ಅಟ್ಲಾಸ್ ಪತಂಗವು ಸುಮಾರು ೩೦ ಸೆಂ. ಮೀ ತನಕ ಬೆಳೆಯುತ್ತದೆ. ಪತಂಗ ಹಾಗೂ ಚಿಟ್ಟೆಗಳು ನೋಡಲು ಒಂದೇ ರೀತಿಯಾಗಿದ್ದರೂ ಹಲವಾರು ವಿಭಿನ್ನ ಗುಣಲಕ್ಷಣಗಳಿವೆ.

ಪತಂಗಗಳು ಒಂದೆಡೆ ವಿರಮಿಸುವಾಗ ರೆಕ್ಕೆಗಳನ್ನು ಬಿಡಿಸಿಕೊಂಡಿರುತ್ತವೆ, ಆದರೆ ಚಿಟ್ಟೆಗಳು ರೆಕ್ಕೆಗಳನ್ನು ಮುಚ್ಚಿಕೊಂಡಿರುತ್ತವೆ. ಚಿಟ್ಟೆಗಳ ಆಂಟೆನಾವು (ಮೀಸೆಯಂತಹ ಉದ್ದನೆಯ ರಚನೆ) ಉದ್ದವಾಗಿದ್ದು, ಪತಂಗಗಳ ಆಂಟೆನಾವು ಸಣ್ಣದಾಗಿರುತ್ತದೆ. ಸಾಮಾನ್ಯವಾಗಿ ಚಿಟ್ಟೆಗಳು ಸುಮಾರು ಮೂರು ತಿಂಗಳುಗಳ ಕಾಲ ಬದುಕುತ್ತವೆ. ಬೇರೆ ಬೇರೆ ವಿಧದ ಚಿಟ್ಟೆಗಳ ಜೀವಿತಾವಧಿ ಬೇರೆ ಬೇರೆ ರೀತಿಯಾಗಿರುತ್ತವೆ. ಕೆಲವು ವಿಧದ ಚಿಟ್ಟೆಗಳು ೧೦ ತಿಂಗಳು ಬದುಕುತ್ತವೆ. ಹವಾಮಾನದ ಏರುಪೇರಿನಿಂದ ಹಾಗೂ ಆಹಾರದ ಅಲಭ್ಯತೆಯಿಂದ ಚಿಟ್ಟೆಗಳ ಜೀವಿತಾವಧಿ ಬದಲಾಗುವ ಸಾಧ್ಯತೆ ಇದೆ. 

ಕಾಡುಗಳ ನಿರಂತರ ಕಡಿಯುವಿಕೆಯಿಂದ ಹಲವಾರು ಹೂವು ಬಿಡುವ ಮರಗಳ ಸಂಖ್ಯೆ ಕಡಿಮೆಯಾಗಿದೆ. ಈ ಕಾರಣದಿಂದಾಗಿ ಚಿಟ್ಟೆಗಳೂ ಕಮ್ಮಿಯಾಗುತ್ತಿವೆ. ವಿಪರೀತ ನಗರೀಕರಣ, ವಾಯು ಮಾಲಿನ್ಯ, ಶುದ್ಧ ನೀರಿನ ಕೊರತೆ ಇವೆಲ್ಲಾ ಪುಟ್ಟ ಪುಟ್ಟ ಕೀಟಗಳನ್ನು ಬೇಗದಲ್ಲಿ ನಾಶಮಾಡುತ್ತವೆ. 

ಚಿಟ್ಟೆಗಳ ಸಂಖ್ಯೆಯಲ್ಲಿ ಕುಸಿತವಾಗುತ್ತಿರುವ ವಿಷಯ ಈಗ ಬಹಳ ಪ್ರಚಲಿತವಾಗಿದ್ದು ಬಹಳೆಡೆ ಅವುಗಳ ಸಂರಕ್ಷಣೆಗೆ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಹಲವು ಉದ್ಯಾನವನಗಳಲ್ಲಿ 'ಚಿಟ್ಟೆ ಪಾರ್ಕ್' ಎಂಬ ಕಲ್ಪನೆಯನ್ನು ಮೂಡಿಸಲಾಗಿದೆ. ಚಿಟ್ಟೆಗೆ ಅವಶ್ಯಕವಾದ ಹೂವುಗಳ ಗಿಡಗಳನ್ನು ಬೆಳೆಸುವುದರ ಮೂಲಕ ಅವುಗಳನ್ನು ಆಕರ್ಷಿಸಿ, ಸಂತಾನಾಭಿವೃದ್ಧಿ ಮಾಡಿಸಿ ಚಿಟ್ಟೆಗಳ ಸಂತತಿಯನ್ನು ಉಳಿಸಿ ಬೆಳೆಸುವ ಕಾರ್ಯಕ್ರಮಗಳಾಗುತ್ತಿವೆ. ನಾವೂ ನಮ್ಮ ಮನೆಯ ಅಂಗಳದಲ್ಲಿ ಸಾಧ್ಯವಾದಷ್ಟು ಹೂವಿನ ಗಿಡಗಳನ್ನು ಬೆಳೆಸಬೇಕು. ಇದರಿಂದಾಗಿ ನಮ್ಮ ಪರಿಸರದ ಸೌಂದರ್ಯ ಹೆಚ್ಚುವುದರ ಜೊತೆಗೆ ಜೇನು ನೊಣ, ಚಿಟ್ಟೆ, ಪತಂಗ ಹಾಗೂ ಕೆಲವು ಸಣ್ಣ ಹಕ್ಕಿಗಳ ಸಂತತಿಯ ಉಳಿವಿಗೆ ಕಾರಣವಾಗುತ್ತದೆ. ಈ ನಿಟ್ಟಿನಲ್ಲಿ ನಾವು ಪ್ರಾಮಾಣಿಕ ಪ್ರಯತ್ನ ಮಾಡೋಣವೇ...?

ಚಿತ್ರ ವಿವರ: ೧. ತೆಳು ಪಾರದರ್ಶಕ ರೆಕ್ಕೆಯ ಕಪ್ಪು ಬಿಳಿ ವರ್ಣದ ಚಿಟ್ಟೆ (ರೈಸ್ ಪೇಪರ್ ಬಟರ್ ಫ್ಲೈ)

೨. ನೀಲಿ ಬಣ್ಣದ ಸ್ವಾಲೋಟೇಲ್ ಪಾತರಗಿತ್ತಿ

೩. ಬಸವನ ಕಣ್ಣಿನ ಪತಂಗ (ಬುಲ್ಸ್ ಮೋತ್)

೪. ಜಗತ್ತಿನ ದೊಡ್ದ ಚಿಟ್ಟೆ ಕ್ವೀನ್ ಅಲೆಕ್ಸಾಂಡ್ರಾಸ್ ಬರ್ಡ್ ವಿಂಗ್

೫. ಜಗತ್ತಿನ ದೊಡ್ಡ ಪತಂಗ ಅಟ್ಲಾಂಟಾ.

ಚಿತ್ರ ಕೃಪೆ: ಅಂತರ್ಜಾಲ ತಾಣ