ಚಿಣ್ಣರ ಆಗಮನ

ಚಿಣ್ಣರ ಆಗಮನ

ಕವನ

ಚಂದಿರ ವದನದ ಸುಂದರ ಮಕ್ಕಳು

ವಂದಿಸಿ ಬಂದರು ಶಾಲೆಯ ಮೆಟ್ಟಿಲು

ಬಂಧನ ಕಳೆದಿಹ ಸಂತಸ ತುಂಬಿದೆ ದೇವರ ಮೋರೆಯಲಿ|

ಗಂಧದ ಪರಿಮಳ ದೇಗುಲ ತುಂಬಿದೆ

ಕಂದನ ಸಂತಸವಿಮ್ಮಡಿಯಾಗಿದೆ

ತಂದೆಯ ನಯನವು ನೀರಾಡಿದೆ ತುಂಬಿದ ಮನೆಯನು ಕಂಡು||

 

ಮಕ್ಕಳ ಚಿಲಿಪಿಲಿಯಾಗಸ ತುಂಬಾ

ಚುಕ್ಕಿಗಳೆಲ್ಲಕು ನಾಚಿಕೆ ಬಿಂಬಾ

ಸಕ್ಕರೆ ಸಿಹಿಯಿದೆ ಮುದ್ದಿನ ಮಕ್ಕಳ ಕೇಕೆಯ ನಾದದಲಿ|

ಅಕ್ಕರೆಯಿಂದಲಿಯಕ್ಕರ ಕಲಿಸಿರೆ

ಕುಕ್ಕರ ಕೂರುತ ಕಿವಿಯನು ನಿಮಿರಿಸಿ

ನಕ್ಕರು ಹೃದಯದ ಕದವನು ತೆರೆಯುತ ಹಾಸ್ಯದ ಚಿಲುಮೆಯಲಿ||

 

ಮಣ್ಣಲಿಯಾಡುತ ಗುಡ್ಡವನೇರುತ

ಹಣ್ಣಿನ ಮರಗಳ ಕ್ಷಣದಲಿಯೇರುತ

ತಿನ್ನುತ ನಲಿಯುತ ಸುತ್ತುತ ಬಂದರು ಚಿಣ್ಣರು ಗುಡಿಯೆಡೆಗೆ|

ಬನ್ನಿರಿ ಮಕ್ಕಳೆ ತೋಟದ ಹೂಗಳೆ

ಚಿನ್ನದ ರನ್ನದ ಬಣ್ಣದ ದಳಗಳೆ

ಕಣ್ಣಿನ ಬೆಳಕಿನ ಬೆಳ್ಳಿಯ ಹೊಳಪಿಗೆ ಶಾಲೆಯು ಮಿರುಗುತಿದೆ||

(ಪರಿವರ್ಧಿನಿ ಷಟ್ಪದಿಯಲ್ಲಿ)

-ಜನಾರ್ದನ ದುರ್ಗ 

 

ಚಿತ್ರ್