ಚಿಣ್ಣರ ಚಿತ್ರ ರಾಮಾಯಣ
ಪ್ರತಿಯೊಬ್ಬರ ಮನೆಯಲ್ಲಿ ಇರಲೇ ಬೇಕಾದ ಪುಸ್ತಕವಿದು. ಯಾಕೆಂದರೆ ಭಾರತದ ಪಾರಂಪರಿಕ ಮಹಾಕಾವ್ಯ ರಾಮಾಯಣದ ಪರಿಚಯವನ್ನು ಸರಳವಾಗಿ ಮಕ್ಕಳಿಗೆ ಮಾಡಿಕೊಡಬಲ್ಲ ಪುಸ್ತಕವಿದು.
ಈ ಪುಸ್ತಕದ ಎಡಭಾಗದ ಪುಟಗಳಲ್ಲಿ ರಾಮಾಯಣದ 60 ಘಟನೆಗಳ ವರ್ಣಚಿತ್ರಗಳಿವೆ; ಪ್ರತಿಯೊಂದು ಚಿತ್ರದ ಘಟನೆಯ ವಿವರಣೆ ಬಲಭಾಗದ 60 ಪುಟಗಳಲ್ಲಿವೆ. ಈ ಚಂದದ ಚಿತ್ರಗಳನ್ನು ಒಂದು ಶತಮಾನದ (1916) ಮುಂಚೆ ರಚಿಸಿದವರು ಭವಾನರಾವ್ ಶ್ರೀನಿವಾಸರಾವ್ ಊರ್ಫ ಬಾಳಸಾಹೇಬ ಪಂಡಿತ ಪಂತ ಪ್ರತಿನಿಧಿ, ಬಿ.ಎ., ಸಂಸ್ಥಾನ ಔಂಧ.
ಇದರ ನಿರೂಪಣೆಯನ್ನು ಬರೆದಿರುವ ಪ್ರೊ. ಜಿ. ವೆಂಕಟಸುಬ್ಬಯ್ಯ ಮುನ್ನುಡಿಯಲ್ಲಿ ಹೀಗೆಂದು ನಿವೇದಿಸಿಕೊಂಡಿದ್ದಾರೆ: “ನನಗೆ ಒಂದು ಹಳೆಯ ಪುಸ್ತಕ ಸಿಕ್ಕಿತು. ಅದರ ಹೆಸರು “ಚಿತ್ರ ರಾಮಾಯಣ.” 1916ರಲ್ಲಿ ಪ್ರಕಟವಾದ ಅದು ಬೊಂಬಾಯಿಯ ಬ್ರಿಟಿಷ್ ಛಾಪಖಾನೆಯಲ್ಲಿ ಛಾಪಿಸಲ್ಪಟ್ಟಿತ್ತು. ಅದಕ್ಕೆ ವಿಜಾಪುರದ ರಾಮಚಂದ್ರ ಮಧ್ವ ಮಹಿಷಿ ಎನ್ನುವವರು ಒಂದು ಪ್ರಸ್ತಾವನೆಯನ್ನು ಬರೆದಿದ್ದಾರೆ. …
ಈ ಪುಸ್ತಕದಲ್ಲಿ 60 ವರ್ಣ ಚಿತ್ರಗಳಿವೆ. … ಎಡಗಡೆಯ ಚಿತ್ರವನ್ನು ನೋಡಿ ಬಲಗಡೆಯ ನಿರೂಪಣೆಯನ್ನು ಓದಿ ಪುಸ್ತಕವನ್ನು ಪೂರೈಸಿದರೆ ರಾಮಾಯಣದ ಕಥೆ ಸಂಗ್ರಹವಾಗಿ ಸಿಗುತ್ತದೆ. ಇದರಲ್ಲಿ ರಾಮಾಯಣದ ಆರು ಕಾಂಡಗಳ ಕಥೆಯನ್ನು ಓದಬಹುದು. ಉತ್ತರಕಾಂಡದ ಕಥೆಯನ್ನು ತೆಗೆದುಕೊಂಡಿಲ್ಲ. ಅದು ವಾಲ್ಮೀಕಿಯು ಬರೆದದ್ದಲ್ಲ ಎಂಬ ನಂಬಿಕೆಯಿದೆ.
ಈ ಪುಸ್ತಕವು ನಿಜವಾಗಿ ದೊಡ್ಡವರಿಗೆಂದು ಬರೆದದ್ದಲ್ಲ. ಚಿತ್ರಗಳ ಮೂಲಕ ಬಾಲಕರಿಗೆ ರಾಮಾಯಣದ ಕಥೆಯನ್ನು ತಿಳಿಸಲು ಮಾಡಿದ ಒಂದು ಪ್ರಯತ್ನ. ಕಥೆಯ ನಿರೂಪಣೆಯನ್ನು ಬಿಜಾಪುರದ ರಾಮಚಂದ್ರ ಮಹಿಷಿ ಅವರು ಮಾಡಿದ್ದರು. ಅದು ಸುಮಾರು ನೂರು ವರ್ಷಗಳ ಹಿಂದಿನ ಕನ್ನಡ ಭಾಷೆಯಲ್ಲಿದೆ. ಈಗಿನವರಿಗೆ ಬೇಗ ಅರ್ಥವಾಗುವುದಿಲ್ಲ.
ಹೀಗಿದ್ದದ್ದರಿಂದ ಈ ಪುಸ್ತಕವನ್ನು "ಚಿಣ್ಣರ ಚಿತ್ರ ರಾಮಾಯಣ” ಎಂಬ ಹೆಸರಿನಲ್ಲಿ ಪ್ರಕಟಿಸಲು ನಾನು ಪ್ರಯತ್ನ ಪಟ್ಟಿದ್ದೇನೆ. ಕಥೆಯ ನಿರೂಪಣೆಯನ್ನು ಹೊಸದಾಗಿ ನಾನೇ ಬರೆದಿದ್ದೇನೆ. … ಇದರ ಸುಂದರ ಚಿತ್ರಗಳು ಕಾಲಗರ್ಭದಲ್ಲಿ ಮರೆಯಾಗಿ ಹೋಗಬಾರದು ಎಂದು ಇದನ್ನು ಮುದ್ರಣಕ್ಕೆ ಕೊಟ್ಟಿದ್ದೇನೆ. …"
ಇದರ ಮೊದಲ ಹತ್ತು ಭಾಗಗಳ ಶೀರ್ಷಿಕೆಗಳು ಹೀಗಿವೆ:
1)ರಾಮಾಯಣವು ರಚಿತವಾದುದು ಹೇಗೆ!
2)ಋಷ್ಯಶೃಂಗ ಋಷಿ ಅಯೋಧ್ಯೆಗೆ ಬಂದದ್ದು
3)ಪುತ್ರಕಾಮೇಷ್ಟಿ ಯಾಗದ ಪ್ರಯೋಜನ
4)ವಿಶ್ವಾಮಿತ್ರ ಋಷಿಯು ಅಯೋಧ್ಯೆಗೆ ಬಂದದ್ದು
5)ತಾಟಕಿ ಎಂಬ ರಾಕ್ಷಸಿಯನ್ನು ಕೊಂದದ್ದು
6)ರಾಮ ಲಕ್ಷ್ಮಣರು ರಾಕ್ಷಸರನ್ನು ಸಂಹಾರ ಮಾಡಿದ್ದು
7)ಗೌತಮ ಋಷಿಗಳು ಅಹಲ್ಯೆಗೆ ಶಾಪ ಹಾಕಿದ್ದು
8)ಅಹಲ್ಯೆಯು ರಾಮನಿಗೆ ನಮಸ್ಕರಿಸಿದ್ದು
9)ರಾಮನು ಶಿವಧನುಸ್ಸನ್ನು ಮುರಿದುದು
10)ಪರಶುರಾಮನ ಗರ್ವಭಂಗ
ಪ್ರೊ. ಜಿ. ವೆಂಕಟಸುಬ್ಬಯ್ಯನವರು “ಪ್ರತಿಯೊಂದು ಮನೆಯಲ್ಲಿ ಇದು ಇದ್ದರೆ ಮನೆಯ ಮಕ್ಕಳಿಗೆ ರಾಮಾಯಣದ ಪರಿಚಯವಾಗುತ್ತದೆ. ಅದು ತುಂಬ ಆಪ್ತವಾದ ಅನುಭವವಾಗುತ್ತದೆ. ಸಾರ್ವಜನಿಕರು ಈ ದೃಷ್ಟಿಯಿಂದ ಇದನ್ನು ಮಕ್ಕಳಿಗೆ ಒದಗಿಸಬೇಕು…" ಎಂಬ ಆಶಯವನ್ನು ಮುನ್ನುಡಿಯಲ್ಲಿ ವ್ಯಕ್ತ ಪಡಿಸಿದ್ದಾರೆ.
ಕನ್ನಡಕ್ಕಾಗಿ ಬದುಕನ್ನೇ ಮುಡುಪಾಗಿಟ್ಟ ಆ ಹಿರಿಯ ವಿದ್ವಾಂಸರ ಆಶಯಕ್ಕೆ ಸ್ಪಂದಿಸೋಣ. ಯಾಕೆಂದರೆ ಭಾರತದ ಐದು ಸಾವಿರ ವರುಷಗಳ ಸಾಂಸ್ಕೃತಿಕ ಪರಂಪರೆಯ ಬಗ್ಗೆ ತಿಳಿಯುವುದು, ಅದನ್ನು ಗೌರವಿಸುವುದು ಮತ್ತು ಅದನ್ನು ಮುಂದಿನ ತಲೆಮಾರಿಗೆ ದಾಟಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ.
ಈ ನಿಟ್ಟಿನಲ್ಲಿ ಒಂದು ಶತಮಾನದ ಮುಂಚೆಯೇ ಒಬ್ಬರು ಪ್ರತಿಭಾವಂತ ಕಲಾವಿದ ಮತ್ತು ಒಬ್ಬರು ಘನ ವಿದ್ವಾಂಸರು, ನಮ್ಮ ಪರಂಪರೆಯ ಬಹುಮುಖ್ಯ ಭಾಗವಾದ ರಾಮಾಯಣದ ಕಥೆಯನ್ನು ಕನ್ನಡದಲ್ಲಿ ಮುಂದಿನ ತಲೆಮಾರುಗಳಿಗೆ ದಾಟಿಸಲು ಮಾಡಿದ ಪ್ರಯತ್ನ ನಮಗೆಲ್ಲರಿಗೂ ಒಂದು ಅಮೂಲ್ಯ ಮಾದರಿ. ಅದಕ್ಕೆ ಹೊಸಗನ್ನಡದಲ್ಲಿ ನಿರೂಪಣೆ ಬರೆದು, "ಚಿಣ್ಣರ ಚಿತ್ರ ರಾಮಾಯಣ” ಎಂಬ ಹೆಸರಿನಲ್ಲಿ ಬೆಳಕಿಗೆ ತಂದಿರುವ ಪ್ರೊ. ಜಿ, ವೆಂಕಟಸುಬ್ಬಯ್ಯನವರಿಗೆ ನಮ್ಮೆಲ್ಲರ ಅಭಿನಂದನೆಗಳು ಸಲ್ಲುತ್ತವೆ.