ಚಿತ್ತದ ಚಿತ್ತಿನಿ (ಸಾಂಗತ್ಯ ಪದ್ಯ)

ಚಿತ್ತದ ಚಿತ್ತಿನಿ (ಸಾಂಗತ್ಯ ಪದ್ಯ)

ಕವನ

ತಾರೆಯ ತೆರದಲಿ ವದನವು ಕಾಣಲು

ನೀರೆಯ ಬಣ್ಣವು ಮಧುರ

ಮಾರುತ ತಣ್ಣಗೆ ಸೋಕಲು ತನುವಿಗೆ

ನಾರಿಯ ಮನವದು ಭ್ರಮರ

 

ಕಮನದಿಯಪ್ಪುವ ಹೊನ್ನಿನ ಬಣ್ಣವು

ಸುಮದಲಿ ನಗುತಿರು ಸಖಿಯೆ

ಗಮನವ ತೋರುತ ನಲ್ಲನ ಶೋಧಿಸಿ

ಕಮಲದ ಲೋಚನ ಮುಖಿಯೆ

 

ಮುನಿಯದ ಮಾನಿನಿ ಚೆಲುವಲಿ ಕಿನ್ನರಿ

ಕನಸಿನ ಕಲ್ಪನಾ ಕುವರಿ

ಮನದಲಿ ಧ್ಯಾನಿಸಿ ನಿಲ್ಲಲು ತೋಷದಿ

ವನದಲಿ ಗೀತದ ಲಹರಿ

 

ತಣಿಸುತ ದಾಹವ ಮೋಹನ ರಾಗದಿ

ಕುಣಿದಳು ರಂಗದಿ ನಟಿಯು

ಮಣಿಸುತ ದೇಹವ ವಿಧವಿಧ ಭಂಗಿಯ

ಚಣದಲಿ ನಡುಗದ ಕಟಿಯು

 

ಡೆಂಕಣಿ ಬಾರಿಸಿ ಮಂಗಳ ಶ್ಲೋಕವ

ಶಂಕರ ಗುಡಿಯೊಳಗಿಂದು

ಝೆಂಕಾರ ನಾದದಿ ಶೈಲೂಷಿ ಕುಣಿದಳು

ತೆಂಕಣ ಬೀಸುತಲಂದು

 

ಚಿತ್ತವ ಸೆಳೆದಿಹ ಚಿತ್ತಿನಿ ಹೃದಯದಿ

ಹತ್ತಿರ ಸೆಳೆದಿಹ ಗಮನ

ಸುತ್ತಲು ಬೆಳ್ಳಿಯ ಕೌಮುದಿ ಬೆಳಕದು

ಮುತ್ತಿನ ಹಾಗೆಯೆ ನಯನ

 

ಸೋತೆನು ಕಾಂತನ ಪ್ರೀತಿಗೆ ಮರುಳಲಿ

ಚೂತವನದಲಿಯೆ ತರುಣಿ

ದ್ಯೂತವನಾಡುತ ಸಮಯವ ಕಳೆವಳು

ಜ್ಯೋತಿಯ ತೆರದಲಿ ರಮಣಿ

 

*ಶಂಕರಾನಂದ ಹೆಬ್ಬಾಳ* 

 

ಚಿತ್ರ್