ಚಿತ್ತ ವೃತ್ತಿ
ಚಿತ್ತವೃತ್ತಿ
ಚಪಲ ಚಂಚಲತೆಯ ಚಿಲುಮೆ ಓ ಚಿತ್ತವೇ,
ಚುಟುಕು ಚಟುವಟಿಕೆಯಲಿ ಚಿಟ್ಟೆಯನ್ನೂ ಮೀರಿಸಿರುವೆ.
ವೇಗವನು ನೀ ಹಿಡಿವೆ ಮೈಲುಗಳಾಚೆ,
ಕನಸುಗಳ ಕಾಣುವೆ ಸಪ್ತಸಾಗರದಾಚೆ,
ನಿರುಕಿಸಿ ನೋಡುವೆಯಾ ಒಮ್ಮೆ ನಿನ್ನೆಯಿಂದಾಚೆ?
ತಾಳ್ಮೆಯನು ತಳೆಯದೆ ತಳಮಳಿಸುತಿರುವೆ,
ನಿನ್ನಂತಾಗದೊಡೆ ನೀ ನಿಟ್ಟುಸಿರಗಯ್ಯುವೆ
ಅನ್ಯರಿಗೆ ನೀ ಎಂದು ಮಣೆಯ ಹಾಕಿರುವೆ?
ಸಂತಸದಿ ಹಗುರಾಗಿ ಹತ್ತಿಯಂತಾಗುವೆ,
ದುಃಖ ತಾಳದೆ ಎಂದೂ ಭಾರವಾಗುವೆ,
ನಿರ್ಲಿಪ್ತ ಭಾವದಲಿ ಸಮಚಿತ್ತವಿಲ್ಲವೇ?
ಕಾಲೇ ಇಲ್ಲದ ನೀನು ಜಗವ ಸುತ್ತಿರುವೆ,
ಕಾಲಕಾಲಕೆ ಬಯಸಿ ಬದಲಾಗುತಿರುವೆ,
ಕಾಲನು ಬಂದು ಕರೆದರೂ ಬದುಕು ಸಾಲದು ನಿನಗೆ
©ಅಜಿತ್ ಕಾಶೀಕರ್,
೦೭/೧೨/೨೦೧೮