ಚಿತ್ರಕಲಾ ಪ್ರತಿಭೆ - ಶ್ರೀರಕ್ಷಾ ಗುಂಡಿಬೈಲು
ಸ್ವಯಂಸ್ಪೂರ್ತಿಯೇ ಗುರುವಾಗಿ ಮೈ ಮನಸ್ಸುಗಳನ್ನು ಆವರಿಸಿದ ಫಲವಾಗಿ ಉಡುಪಿಯ ಶ್ರೀರಕ್ಷಾ ಎಂಬ ಹತ್ತನೇ ತರಗತಿಯ ವಿದ್ಯಾರ್ಥಿನಿಯೋರ್ವಳು ಇಂದು ಅತ್ಯುತ್ತಮ ಚಿತ್ರ ಕಲಾವಿದೆಯಾಗಿ ಹಲವರ ಮೆಚ್ಚುಗೆಗೆ ಪಾತ್ರಳಾಗಿದ್ದಾಳೆ. ಪೆನ್ಸಿಲ್ ಆರ್ಟ್ ಮತ್ತು ಪೈಂಟಿಂಗ್ ನಲ್ಲಿ ಹತ್ತು ಹಲವು ಸ್ಪರ್ಧೆಗಳಲ್ಲಿ ಭಾಗವಹಿಸಿ ಈಗಾಗಲೇ ಸಾಕಷ್ಟು ಬಹುಮಾನಗಳನ್ನೂ ಪಡೆದುಕೊಂಡಿರುವ ಶ್ರೀರಕ್ಷಾ, ಉಡುಪಿ ನಗರದ ಒಳಕಾಡು ಸರಕಾರಿ ಸಂಯುಕ್ತ ಪ್ರೌಢಶಾಲೆಯಲ್ಲಿ ಹತ್ತನೇ ತರಗತಿ ಪರೀಕ್ಷೆ ಬರೆದಿರುವ ವಿದ್ಯಾರ್ಥಿನಿ. ಇಲ್ಲಿ ಕಾಣಿಸುತ್ತಿರುವ ಸುಂದರವಾದ ಚಿತ್ರಗಳಲ್ಲಿರುವ ಜೀವಾಳವೇ ಶ್ರೀರಕ್ಷಾಳ ಪ್ರತಿಭೆಗೆ ಸಾಕ್ಷಿ.
ಉಡುಪಿ ನಗರದ ಗುಂಡಿಬೈಲು ನಿವಾಸಿಯಾಗಿರುವ ದಯಾನಂದ ಪೂಜಾರಿ ಹಾಗೂ ನೀತಾ ದಂಪತಿಗಳ ಪುತ್ರಿಯಾಗಿರುವ ಶ್ರೀರಕ್ಷಾಳಿಗೆ ಚಿತ್ರಕಲೆ ಮೂಲತಃ ಒಲಿದು ಬಂದ ಕಲೆ. ಚಿಕ್ಕಂದಿನಲ್ಲಿಯೇ ಸಿಕ್ಕಿಸಿಕ್ಕಿದ ಕಾಗದಗಳಲ್ಲಿ ಚಿತ್ರ ಗೀಚಲು ಶುರು ಮಾಡಿದ್ದ ಶ್ರೀರಕ್ಷಾಳಿಗೆ ಬರಬರುತ್ತಾ ಇದರಲ್ಲಿ ವಿಶೇಷವಾದ ಆಸಕ್ತಿ ಮೂಡಿತು, ಪ್ರೀತಿ ಹುಟ್ಟಿತು ಇದರ ಫಲವಾಗಿ ಗೀಚಿದ ಒಂದೊಂದು ಚಿತ್ರವೂ ಹಲವರ ಕಣ್ಣರಳುವಂತೆ ಮಾಡಿತು, ಮೆಚ್ಚುಗೆಗೆ ಪಾತ್ರವಾಗತೊಡಗಿತು. ಸಹಜವಾಗಿಯೇ ಮನೆಯವರ ಪ್ರೋತ್ಸಾಹವೂ ಸಿಕ್ಕಿತು.
ಬಾಲ್ಯದಲ್ಲಿ ಕೆಲ ವರ್ಷಗಳ ಕಾಲ ಹೆತ್ತವರೊಂದಿಗೆ ಮುಂಬೈನಲ್ಲಿದ್ದ ಶ್ರೀರಕ್ಷಾ, ಬಳಿಕ ತಾಯಿಯೊಂದಿಗೆ ಊರಿಗೆ ಮರಳಿದಳು. ಒಂದರಿಂದ ಏಳನೇ ತರಗತಿಯ ವರೆಗೆ ಉಡುಪಿಯ ಮುಕುಂದಕೃಪಾ ಶಾಲೆಯಲ್ಲಿ ಕಲಿತರೆ, ಪ್ರೌಢಶಾಲಾ ವಿದ್ಯಾಭ್ಯಾಸವನ್ನು ಒಳಕಾಡು ಶಾಲೆಯಲ್ಲಿ ಪಡೆದಳು.
ಯಾವಾಗ ಚಿತ್ರಕಲೆಯಲ್ಲಿ ಮನೆಯವರ, ನೆರೆಕರೆಯವರ, ಬಂಧು ಬಳಗದವರ, ಸಹಪಾಠಿಗಳ, ಶಿಕ್ಷಕರ ಗಮನ ಸೆಳೆಯುವಷ್ಟು ಬೆಳೆದುಬಿಟ್ಟಳೋ, ಬಳಿಕ ಶ್ರೀರಕ್ಷಾ ಚಿತ್ರಕಲಾ ಸ್ಪರ್ಧೆಯಲ್ಲೂ ಭಾಗವಹಿಸಿದಳು. ಅನೇಕ ಬಹುಮಾನಗಳನ್ನು ತನ್ನದನ್ನಾಗಿಸಿಕೊಂಡಳು. ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಎರಡು ವರ್ಷವೂ ಬಹುಮಾನಗಳನ್ನು ಮುಡಿಗೇರಿಸಿಕೊಂಡ ಶ್ರೀರಕ್ಷಾ, ಮಣಿಪಾಲದ 'ಪವರ್', ಇಸ್ಕಾನ್ ಸಹಿತ ವಿವಿಧ ಸಂಘ ಸಂಸ್ಥೆಗಳು ನಡೆಸಿದ ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಪಡೆದುಕೊಂಡಿದ್ದಾಳೆ.
ಚಿತ್ರಕಲೆಯಲ್ಲಿ ಶ್ರೀರಕ್ಷಾಳಿಗಿದ್ದ ಅಪಾರವಾದ ಆಸಕ್ತಿಯನ್ನು ಗಮನಿಸಿದ ಮನೆಯವರು, ಈಕೆಯನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಕಳೆದ ವರ್ಷ ಉಡುಪಿಯ ದೃಶ್ಯ ಸ್ಕೂಲ್ ಆಫ್ ಆರ್ಟ್ಸ್ ಗೆ ವಾರದಲ್ಲಿ ಎರಡು ದಿನ ಚಿತ್ರಕಲಾ ಶಿಕ್ಷಣಕ್ಕೆ ಕಳುಹಿಸಿಕೊಡುತ್ತಿದ್ದಾರೆ. ಕಳೆದ ವರ್ಷ, ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ನಡೆಸಿದ ಚಿತ್ರಕಲಾ ಪರೀಕ್ಷೆಯಲ್ಲೂ ಶ್ರೀರಕ್ಷಾ ಉತ್ತಮ ಅಂಕಗಳೊಂದಿಗೆ ಪ್ರಮಾಣಪತ್ರ ಪಡೆದಿದ್ದಾಳೆ.
ಶ್ರೀರಕ್ಷಾಳಿಗೆ ಚಿತ್ರಕಲೆ ಒಲಿದುಬಂದ ಪ್ರತಿಭೆ. ಸೂಕ್ತ ಮಾರ್ಗದರ್ಶನ ಮತ್ತು ಪ್ರೋತ್ಸಾಹ ಈಕೆಗೆ ದೊರೆತದ್ದೇ ಆದಲ್ಲಿ ಚಿತ್ರಕಲಾ ಕ್ಷೇತ್ರದ ಅಪ್ರತಿಮ ಪ್ರತಿಭೆಯಾಗಿ ಶ್ರೀರಕ್ಷಾ ಬೆಳೆದು ಹೆಸರು ಮಾಡುವುದರಲ್ಲಿ ಯಾವ ಅನುಮಾನವೂ ಇಲ್ಲ ಶ್ರೀರಕ್ಷಾ ಸರ್ವ ಶ್ರೇಯಸ್ಸನ್ನೂ ಕೋರೋಣ.