ಚಿತ್ರಕಲೆಯ ಲೋಕದಲ್ಲಿ ಶ್ರೇಯಸ್ ಕಾಮತ್

ಚಿತ್ರಕಲೆಯ ಲೋಕದಲ್ಲಿ ಶ್ರೇಯಸ್ ಕಾಮತ್

ಬೆಳೆಯುವ ಸಿರಿ ಮೊಳಕೆಯಲ್ಲೇ.. ಇದು ಬಹಳ ಹಿಂದಿನಿಂದಲೂ ಹಿರಿಯರಾಡುವ ಹಿತ ಮಾತು. ಈ ಮಾತು ಯಾವಾಗಲೂ ಸರ್ವಕಾಲಿಕ ಸತ್ಯ. ಏಕೆಂದರೆ ನಮ್ಮ ಹಿರಿಯರು ತಮ್ಮ ಜೀವನದಲ್ಲಿ ಅನುಭವಿಸಿದ ಪ್ರತಿಯೊಂದು ವಿಷಯಗಳನ್ನು ಗಾದೆ ಮಾತುಗಳನ್ನಾಗಿ ಮಾಡಿರುವರು. ಬಾಲ್ಯದಲ್ಲೇ ಚುರುಕಾಗಿರುವ, ಅಪಾರ ಪ್ರತಿಭೆಯನ್ನು ಹೊಂದಿರುವ ಮಕ್ಕಳ ಬಗ್ಗೆಯೂ ನಾವು ಈ ಮಾತನ್ನು ಬಳಸುತ್ತೇವೆ. ಕೆಲವು ಮಕ್ಕಳು ಕಲಿಕೆಯಲ್ಲಿ, ಕೆಲವರು ಕ್ರೀಡೆಯಲ್ಲಿ ಮತ್ತು ಕೆಲವರು ವಿವಿಧ ಕಲಾ ಪ್ರಕಾರಗಳಲ್ಲಿ ಪರಿಣತಿಯನ್ನು ಪಡೆದಿರುತ್ತಾರೆ. ಬಾಲ್ಯದಲ್ಲೇ ತಮ್ಮ ಒಲವು ಯಾವ ಕಡೆಗೆ ಇದೆ ಎಂದು ನಿರೂಪಿಸುತ್ತಾ ಹೋಗುತ್ತಾರೆ. ಇಂತಹ ಒಂದು ಬಾಲ ಪ್ರತಿಭೆಯನ್ನು ನಾನು ನಿಮಗೆ ಪರಿಚಯ ಮಾಡಿ ಕೊಡಲಿದ್ದೇನೆ. ಚಿತ್ರಗಳನ್ನು ಬಿಡಿಸುವುದು ಇವನ ಅತ್ಯಂತ ಪ್ರಿಯವಾದ ಹವ್ಯಾಸ. ನೂರಾರು ಚಿತ್ರಗಳು ಇವನ ಕಲಾ ಬತ್ತಳಿಕೆಯಿಂದ ಹೊರ ಬಂದಿದೆ. ಇಲ್ಲಿ ನೀಡಿರುವ ಚಿತ್ರಗಳು ಕೆಲವೇ ಕೆಲವು ಅಷ್ಟೇ. 

ಈ ಚಿತ್ರಗಳ ಬಾಲ ಕಲಾವಿದ ಬೆಂಗಳೂರಿನ ಶ್ರೇಯಸ್ ಕಾಮತ್. ಅಮೃತ ವಿದ್ಯಾಲಯಂ ನಲ್ಲಿ ೯ನೇ ತರಗತಿಯ ವಿದ್ಯಾರ್ಥಿಯಾಗಿರುವ ಶ್ರೇಯಸ್ ಕಲಿಕೆಯಲ್ಲಿಯೂ ಚುರುಕು. ಹಾಗೆಯೇ ಚಿತ್ರಕಲೆಯಲ್ಲೂ. ಪೆನ್ಸಿಲ್ ಕಲೆಯಲ್ಲಿ ವಿಪರೀತ ಆಸಕ್ತಿ ಇರುವ ಇವನು ಹಲವಾರು ಖ್ಯಾತ ನಾಮರ ಚಿತ್ರಗಳನ್ನು ಬಿಡಿಸಿದ್ದಾನೆ. ಕ್ರಿಕೆಟಿಗ ವಿರಾಟ್ ಕೊಹ್ಲಿ, ಶಿಕ್ಷಕರ ದಿನಾಚರಣೆಯ ಸಮಯದಲ್ಲಿ ಎಸ್. ರಾಧಾಕೃಷ್ಣನ್, ದೇವರ ಚಿತ್ರಗಳು, ಪರಿಸರ, ಜಲಚರಗಳು, ಪ್ರಾಣಿ ಪಕ್ಷಿಗಳೂ ಎಲ್ಲವೂ ಇವನ ಕುಂಚದಿಂದ ಅರಳಿದೆ. 

ಬಾಲ್ಯದಿಂದಲೂ ಚಿತ್ರ ಕಲೆಯಲ್ಲಿ ಆಸಕ್ತಿ ಇದ್ದರೂ, ಇವನು ನಿಯಮಿತವಾಗಿ ಚಿತ್ರಗಳನ್ನು ಬಿಡಿಸಲು ಪ್ರಾರಂಭಿಸಿದ್ದು ೨೦೧೯ರಲ್ಲಿ. ಒಂದು ವರ್ಷದಲ್ಲೇ ಹಲವಾರು ಚಿತ್ರಗಳನ್ನು ಬಿಡಿಸಿದ್ದಾನೆ. ಭವಿಷ್ಯದಲ್ಲಿ ಉತ್ತಮ ಚಿತ್ರಗಾರನಾಗುವ ಆಶೆಯಿದ್ದರೂ ಉತ್ತಮವಾಗಿ ವಿದ್ಯಾಭ್ಯಾಸ ಮಾಡಿ ವಿಜ್ಞಾನಿಯಾಗುವ ಹೆಬ್ಬಯಕೆ ಶ್ರೇಯಸ್ ನದ್ದು. ಇವನ ಪ್ರತಿಭೆಗೆ ಬೆಂಬಲ ನೀಡುತ್ತಿದ್ದಾರೆ ಇವನ ತಂದೆ ಗಿರಿಧರ್ ಕಾಮತ್ ಹಾಗೂ ತಾಯಿ ಶ್ವೇತಾ ಕಾಮತ್. ಶ್ರೇಯಸ್ ತಂದೆ ಗಿರಿಧರ್ ಕಾಮತ್ ಅವರು ತಮ್ಮದೇ ಆದ ಸ್ವಂತ ವ್ಯವಹಾರವನ್ನು ಹೊಂದಿದ್ದಾರೆ. ತಾಯಿ ಶ್ವೇತಾ ಕಾಮತ್ ಗೃಹಿಣಿಯಾಗಿದ್ದು ತಮ್ಮ ಮಗನ ಕಲಿಕೆ ಹಾಗೂ ಕಲೆಯ ಬಗ್ಗೆ ಹೆಚ್ಚಿನ ನಿಗಾ ವಹಿಸುತ್ತಿದ್ದಾರೆ. 

ಪುಸ್ತಕಗಳನ್ನು ಓದುವುದು ಶ್ರೇಯಸ್ ನ ಪ್ರಮುಖ ಹವ್ಯಾಸಗಳಲ್ಲಿ ಒಂದು. ಶ್ರೇಯಸ್ ಕಾಮತ್ ಕಾರ್ಟೂನ್ ರಚನೆಯಲ್ಲೂ ಎತ್ತಿದ ಕೈ. ಚಿತ್ರ ರಚನೆಯಲ್ಲಿ ಇವನು ಇನ್ನಷ್ಟು ಪಳಗಬೇಕಾಗಿದೆ. ಶ್ರೇಯಸ್ ಇನ್ನಷ್ಟು ಆಸಕ್ತಿ ವಹಿಸಿ ಚಿತ್ರ ಕಲೆಯನ್ನು ಕರಗತ ಮಾಡಿಕೊಂಡರೆ ಭವಿಷ್ಯದಲ್ಲಿ ಉತ್ತಮ ಚಿತ್ರ ಕಲಾವಿದನಾಗುವುದರಲ್ಲಿ ಸಂಶಯವಿಲ್ಲ. ಇವನ ಉಜ್ವಲ ಭವಿಷ್ಯಕ್ಕೆ ಶುಭವಾಗಲಿ ಎಂಬುದೇ ನಮ್ಮ ಶುಭ ಹಾರೈಕೆಗಳು.