ಚಿತ್ರಗಳಲ್ಲಿ: ಪೊಳಲಿ ಜಾತ್ರೆ
ಮಂಗಳೂರಿಗೆ ಸಮೀಪದಲ್ಲಿರುವ ಪ್ರಸಿದ್ಧ ಪೊಳಲಿಯ ರಾಜರಾಜೇಶ್ವರಿ ದೇವಸ್ಥಾನದ ವಾರ್ಷಿಕ ಉತ್ಸವದ ಸಮಯ ನಡೆಯುತ್ತಿರುವ ಜಾತ್ರೆಗೆ ಮೊನ್ನೆ ಹೋಗಿದ್ದೆವು. ಪೊಳಲಿಯ ರಾಜರಾಜೇಶ್ವರಿ ದೇವಸ್ಥಾನದ ಉತ್ಸವದಂದು ನಡೆಯುವ ಕಾರ್ಯಕ್ರಮಗಳು ಎಷ್ಟು ಜನಪ್ರಿಯವೆಂದರೆ - ಮಂಗಳೂರಿನ ಟಿವಿ ಚ್ಯಾನೆಲ್ಲೊಂದು ಇದರ ನೇರ ಪ್ರಸಾರ ಇಟ್ಟುಕೊಂಡಿತ್ತು. ಬೆಳ್ಳಿಯ ಉತ್ಸವ ಮೂರ್ತಿಯನ್ನು ತಲೆಯ ಮೇಲಿಟ್ಟು ವಾದ್ಯಗಳೊಂದಿಗೆ ನಡೆಯುವ 'ಬಲಿ' ನೋಡಲು ಅದ್ಭುತ. ರಾತ್ರಿ ೧೧.೩೦ ಸುಮಾರಿಗೆ ಪ್ರಾರಂಭವಾದ ಸಂಭ್ರಮ ರಾತ್ರಿಯುದ್ದಕ್ಕೂ ಹೆಚ್ಚು ಗಾಡವಾಗುತ್ತ ಮುಂಜಾನೆ ೩.೦೦ ರಿಂದ ೪.೦೦ರ ನಡುವೆಯೂ ಮುಂದುವರೆದಿತ್ತು.
ದೇವಸ್ಥಾನದ ಹೊರಗೆ ಜಾತ್ರೆ. ಖಾರ ಮಂಡಕ್ಕಿಯಿಂದ ಹಿಡಿದು ಐಡೀಲ್ಸ್ ಐಸ್ ಕ್ರೀಮ್ ವರೆಗೂ ಎಲ್ಲ ಲಭ್ಯವಿತ್ತು. ಕಲ್ಲಂಗಡಿ ಹಣ್ಣಿನ ವ್ಯಾಪಾರಕ್ಕೆಂದೇ ಹತ್ತಾರು ಅಂಗಡಿಗಳ ಸಾಲೊಂದಿತ್ತು. ಕೆಲವು ರೈತರು ತಾವೇ ಬೆಳೆದ ಕಲ್ಲಂಗಡಿ ಹಣ್ಣುಗಳನ್ನು ಮಾರಾಟಕ್ಕೆ ತಂದಿಟ್ಟುಕೊಂಡಿದ್ದರು. 'ಗೋಳಿ ಬಜೆ', 'ಪೋಡಿ', 'ಚರುಮುರಿ', ಬಿಂದು ಸೋಡ, ಬೇರೆ ಬೇರೆ ಬ್ರಾಂಡುಗಳ ಐಸ್ ಕ್ರೀಮ್ ಗಾಡಿಗಳು - ಇವೆಲ್ಲ ರಾತ್ರಿ ಎರಡಾದರೂ ವ್ಯಾಪಾರದ ಭರಾಟೆಯಲ್ಲಿದ್ದವು. ದೇವಸ್ಥಾನದ ಎದುರಿಗಿದ್ದ ಹೋಟೆಲಿನಲ್ಲಿ ಬೆಳಗಿನ ಹೊತ್ತು ಖರ್ಚಾದಂತೆ ತಿಂಡಿ ಮತ್ತು 'ಚಾ' ಖರ್ಚಾಗುತ್ತಿತ್ತು.
ದೇವಸ್ಥಾನದ ಒಳಗೆ ಜನ ಕಿಕ್ಕಿರಿದಿದ್ದರು. ನಿಲ್ಲಲೂ ಜಾಗವಿಲ್ಲ ಎಂಬಂತಿದ್ದರೂ ನೂಕು ನುಗ್ಗಲು ಇರಲಿಲ್ಲ. ಕೆಲವರು ಶ್ಲೋಕಗಳ ಪುಸ್ತಕಗಳನ್ನು ಹಿಡಿದು ಅಲ್ಲಲ್ಲೇ ದಾರಿಯಲ್ಲಿ ಕುಳಿತುಕೊಂಡುಬಿಟ್ಟಿದ್ದರು. ದೇವಸ್ಥಾನದ ಪುರೋಹಿತರು ಅವರಲ್ಲಿಗೆ ಬಂದವರೆಲ್ಲರನ್ನೂ ಬಿರುಸಿಲ್ಲದೆ ಪುರುಸೊತ್ತಿನಿಂದ ಮಾತನಾಡಿಸಿ ಕಳುಹಿಸುತ್ತಿದ್ದರು. 'ಬಲಿ' ಸುತ್ತ ಜನ ನೆರೆದಿದ್ದರು. ಅದು ಮುಂದೆ ಮುಂದೆ ಹೋದಂತೆ ಜನ ಅದನ್ನು ಹಿಂಬಾಲಿಸಿ ನಡೆಯುತ್ತಿದ್ದರು. ಉತ್ಸವಮೂರ್ತಿಯ ಬೆಳ್ಳಿ ವಿಗ್ರಹ ಹಾಗೂ ಪೀಠವನ್ನು ತಲೆಯ ಮೇಲೆ ಹೊತ್ತು ವಾದ್ಯಗಳಿಂದ ಹೊರಬಂದ ನುಡಿಗನುಸಾರ ನಡೆಯುತ್ತಿದ್ದ ಒಬ್ಬರ ಸುತ್ತ ವಾದ್ಯಗಳು, ಪಂಜು ಹಿಡಿದ ಹತ್ತಾರು ಜನ, ಬೀಸಣಿಗೆ ಬೀಸುವವರೊಬ್ಬರು - ಅವರೆಲ್ಲರ ಸುತ್ತ ಜನ. ಪ್ರತಿ ಸುತ್ತಿಗೂ ವಾದ್ಯಗಳು ಬದಲಾಗುತ್ತಿದ್ದವು. ಚೆಂಡೆ ಸುತ್ತಿನಲ್ಲಿ ಹತ್ತಾರು ವಾದ್ಯಗಳು ಜೊತೆಗೂಡಿದವು. ನಂತರ ಬೆಳ್ಳಿ ರಥ, ಚಂದ್ರಮಂಡಲ ರಥದ ಸುತ್ತು ಇತ್ತು. ತದನಂತರ ಕಟ್ಟೆ ಪೂಜೆ ಮುಗಿಸಿ, ದೇವರನ್ನು ಪಲ್ಲಕ್ಕಿಯ ಮೇಲೆ ೧೬ ಬಾರಿ ಕೊಂಡೊಯ್ಯುವ ಕ್ರಮವುಂಟು. ಒಟ್ಟಾರೆ ಅದ್ಭುತವಾಗಿತ್ತು.
ಸುತ್ತಲೂ ಇರುವ ಕಟ್ಟೆಗಳ ಮೇಲೆ ಕುಳಿತು ವೀಕ್ಷಿಸುತ್ತಿದ್ದ ಜನರಲ್ಲಿ ಮಕ್ಕಳೂ ಇದ್ದರು. ಹಲವರು ಮಧ್ಯರಾತ್ರಿ ಕಳೆಯುತ್ತಿದ್ದಂತೆ ನಿದ್ರೆ ತಡೆಯಲಾಗದೆ ಅಲ್ಲೇ ನಿದ್ರೆ ಹೋದದ್ದು ಕಂಡಿತು.
ಹೊರಗೆ ದೊಡ್ಡದೊಂದು ಎಲ್ ಸಿ ಡಿ ಟಿ ವಿಯಲ್ಲಿ ದೇವಸ್ಥಾನದ ಒಳಗೆ ನಡೆಯುತ್ತಿರುವುದೆಲ್ಲ ನೇರ ಪ್ರಸಾರವಾಗುತ್ತಿತ್ತು! ಜಾತ್ರೆಯಲ್ಲಿ ಖಾದ್ಯಗಳನ್ನು ಮೆಲ್ಲುತ್ತ ಕೆಲವರು ಅಲ್ಲೇ ನಿಂತು ಇದನ್ನೆಲ್ಲ ನೋಡುತ್ತಿದ್ದರು.
ಹೆಚ್ಚಿನ ಚಿತ್ರಗಳು ಇಲ್ಲಿವೆ:
http://www.flickr.com/photos/hpnadig/sets/72157633214778911/
Comments
ನಿಮ್ಮ ಜಾತ್ರೆ ವಿವರಣೆ ಮತ್ತು
ಪೊಳಲಿ ಜಾತ್ರೆ ನಡೆಯುವುದು ರಾತ್ರಿ
In reply to ಪೊಳಲಿ ಜಾತ್ರೆ ನಡೆಯುವುದು ರಾತ್ರಿ by sasi.hebbar
ಪೊಳಲಿ ಜಾತ್ರೆ- ಚೆಂಡು ಹಾಗು
ನಾಡಿಗರೆ, >>>ಕಲ್ಲಂಗಡಿ ಹಣ್ಣಿನ
In reply to ನಾಡಿಗರೆ, >>>ಕಲ್ಲಂಗಡಿ ಹಣ್ಣಿನ by ಗಣೇಶ
ಹೌದು, ಪೊಳಲಿ ಬಚ್ಚಂಗಾಯಿ ಬಹಳ