ಚಿತ್ರದುರ್ಗದ ವೀರವನಿತೆ ಓಬವ್ವ

ಚಿತ್ರದುರ್ಗದ ವೀರವನಿತೆ ಓಬವ್ವ

ಕರುನಾಡ ಮಣ್ಣಿನ ಸೊಗಡೇ ಹಾಗೆ.ವೀರ ಧೀರ,ಶೂರರ ಆಡೊಂಬಲ. ಗಂಡುಕಚ್ಚೆಯ ಬಿಗಿದು ವೈರಿಗಳ ರುಂಡ ಚೆಂಡಾಡಿದ ನಮ್ಮ ನಾಡಿನ ವೀರವನಿತೆ ಓಬವ್ವಳ ಜನ್ಮ ದಿನವಿಂದು (ನವೆಂಬರ್ 11)

ಗುಡೇಕೋಟೆ ಪಾಳೆಗಾರರಲ್ಲಿ ಕಹಳೆಯ ಕಾಯಕ ಮಾಡಿಕೊಂಡಿದ್ದ ಚಿನ್ನಪ್ಪ-ಚಿನ್ನಮ್ಮ ದಂಪತಿಗಳ ಕುಡಿ ಈಕೆ. ಚಿತ್ರದುರ್ಗದ ರಾಜವೀರ ಮದಕರಿ ನಾಯಕನ ಆಪ್ತಸೇವಕನಾಗಿ, ಕಹಳೆಯ ವೃತ್ತಿಯಲ್ಲಿದ್ದ ಮದ್ದಹನುಮಪ್ಪನ ಮಡದಿಯಾದಳು. ಚಿತ್ರದುರ್ಗದ ವೀರ ಸೈನಿಕರ ಚಲನವಲನ, ಯುದ್ಧವನ್ನು ಹತ್ತಿರದಿಂದ ನೋಡುತ್ತಿದ್ದ ಹೆಣ್ಣುಮಗಳು ಗೃಹಿಣಿಯಾಗಿದ್ದವಳು. ಈಕೆ ಕೇವಲ ಓರ್ವ ಮನೆಯ ಮಹಿಳೆಯಾಗದೆ, ಎಲ್ಲರ ಮನದಲ್ಲಿ ಚಿರಕಾಲ ನಿಲ್ಲುವ ಸಿಂಹಿಣಿಯಾದಳು. ಹೈದರಾಲಿಯ ಸೈನಿಕರು ಏಳುಸುತ್ತಿನ ಚಿತ್ರದುರ್ಗದ ಕೋಟೆಯೊಳಗೆ ನುಗ್ಗಲು ಕಳ್ಳದಾರಿಯನ್ನು ಬೇಹುಗಾರರ ಮೂಲಕ ಅರಸುತ್ತಿದ್ದರು. ತನ್ನ ಪತಿಗೆ ಭೋಜನವಿಕ್ಕಿ, ನೀರು ಖಾಲಿಯಾಗಿದೆಯೆಂದರಿತು, ಪಕ್ಕದಲ್ಲಿದ್ದ ತಣ್ಣೀರು ಹೊಂಡದತ್ತ ಬರುತ್ತಿದ್ದ ಓಬವ್ವಳಿಗೆ ಗುಸುಗುಸು ಮಾತು ಕೇಳಿಸಿತಂತೆ. ಮೊಸರು ಮಾರಲು ಕಳ್ಳಕಿಂಡಿಯ ಮೂಲಕ ಬರುತ್ತಿದ್ದ ಹೆಣ್ಣುಮಗಳನ್ನು ಬೇಹುಗಾರರು ಹಿಂಬಾಲಿಸಿ, ಕಳ್ಳದಾರಿಯ ಕಂಡುಹಿಡಿದರಂತೆ.ಯಾರಿರಬಹುದೆಂದು ಕಿವಿಯಾನಿಸಿ ಕೇಳಿದವಳು, ಶತ್ರುಗಳ ಕಡೆಯವರೆಂದರಿತು, ತಕ್ಷಣ ಗಂಡನ ಬಳಿ ಬಂದು ಹೇಳಬೇಕೆಂದು ಕೊಂಡಾಗ ಆತ ಊಟ ಮಾಡುತ್ತಿದ್ದನಂತೆ. ಪರಿಸ್ಥಿತಿಯರಿತವಳು ಗಂಡುಕಚ್ಚೆಯ ಬಿಗಿದು, ಮನೆಯ ಮೂಲೆಯಲ್ಲಿದ್ದ ಒನಕೆಯನ್ನು ಹಿಡಿದುಕೊಂಡು, ಕಳ್ಳಕಿಂಡಿಯ ಬಳಿಗೆ ಓಡೋಡಿ ಬಂದಳಂತೆ. ಕಿಂಡಿಯ ಮೂಲಕ ತಲೆ ತೂರಿಸಿದ ಒಬ್ಬೊಬ್ಬರ ಮಂಡೆಗೆ ಬಡಿದು ದೇಹವನ್ನು ಎಳೆದು ಹಾಕಿದಳಂತೆ. ಪತ್ನಿಯನ್ನು ಅರಸುತ್ತಾ ಬಂದವನಿಗೆ ರಣಚಂಡಿಯಂತೆ ನಿಂತವಳನ್ನು ನೋಡಿ ಒಂದು ಕ್ಷಣ ವಿಚಲಿತನಾದನೆನ್ನುತ್ತಾರೆ. ಕಹಳೆಯನ್ನು ಊದಿ ಮುಂದಿನ ಯುದ್ಧ ತಯಾರಿ ಆಗುತ್ತದೆ. ಕೆಚ್ಚೆದೆಯ ಕನ್ನಡದ ನಾರಿಯನ್ನು ಹೈದರಾಲಿಯ ಸೈನಿಕರು ಹಿಂದಿನಿಂದ ಬಂದು ಚುಚ್ಚಿ ಸಾಯಿಸಿದರೆಂದು ಓಬವ್ವಳ ಕುರಿತಾದ ಚಲನಚಿತ್ರದ ಒಂದು ದೃಶ್ಯದಲ್ಲಿ ನೋಡಬಹುದು. ಆದರೆ ಆಕೆಯ ಚರಿತ್ರೆಯನ್ನು ಓದಿದಾಗ ಕ್ರಿ.ಶ.೧೭೬೬ರಲ್ಲಿ ಈ ಘಟನೆ, ಆಕೆ ಮರಣವನ್ನಪ್ಪಿದ್ದು ೧೭೬೯ರಲ್ಲಿ ಎಂದು ಓದಿದ ನೆನಪು.

ವೀರವನಿತೆಯ ಸಾಹಸದ ಬಗ್ಗೆ ಹಲವಾರು ಪುಸ್ತಕಗಳನ್ನು ಬರೆದವರಿದ್ದಾರೆ. ವೀರವನಿತೆ, ಓಬವ್ವ, ಭಾರತದ ಧೀರ ಮಹಿಳೆ ಚಿತ್ರದುರ್ಗದ ಒನಕೆ ಓಬವ್ವ, ದುರ್ಗದ ಸಿಂಹಿಣಿ ಓಬವ್ವ, ಇನ್ನೂ ಹಲವಾರು ಚಾರಿತ್ರಿಕ ನಾಟಕ ಪುಸ್ತಕಗಳೂ ಬರೆಯಲ್ಪಟ್ಟಿವೆ. ಒನಕೆ ಓಬವ್ವಳ ದಿಟ್ಟತನವ ಕೊಂಡಾಡಿದ ಮದಕರಿನಾಯಕನು ಕೋಟೆಗೊಂದು ಸುತ್ತು ನಿರ್ಮಿಸಿ, ಬಾಗಿಲಿಗೆ ‘ಒನಕೆ ಕಿಂಡಿ ಬಾಗಿಲು’ ಎಂಬುದಾಗಿ ಹೆಸರಿಡಿಸಿದ್ದಾನೆ. ತಣ್ಣೀರು ಹೊಂಡದ ಪೂರ್ವ ದಿಕ್ಕಿಗೆ ಆಕೆಯ ಸಮಾಧಿಯನ್ನು ಕಟ್ಟಿಸಿದ್ದಾನೆ. ಓಬವ್ವಳನ್ನು ಮಾತೆಯೆಂದೂ ಪೂಜಿಸುವವರು ಇದ್ದಾರೆ. ದುರ್ಗಕ್ಕೆ ಬಂದ ಸಂಕಷ್ಟವನ್ನು ಪರಿಹರಿಸಿದ ಮಾತೆ. ಹೈದರಾಲಿಯ ಕುತಂತ್ರವನ್ನು ಬಯಲಿಗೆಳೆದ ಓಬವ್ವಳ ಸಾಹಸ, ಧೈರ್ಯ, ವಿವೇಚನೆ, ಸ್ವಾಮಿನಿಷ್ಠೆ, ತ್ಯಾಗ ಎಂದೆಂದೂ ಅಮರ. ಕನ್ನಡ ಮಣ್ಣಿನ ಭಾಗ್ಯ.

(ಸಾಹಸಿ ಮಹಿಳೆ ಓಬವ್ವ ಪುಸ್ತಕವನೋದಿದ ನೆನಪುಗಳಿಂದ)

-ರತ್ನಾ ಕೆ ಭಟ್,ತಲಂಜೇರಿ ಪುತ್ತೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ