ಚಿತ್ರ ಒಂದು ; ಕವನಗಳು ಎರಡು
ಒಂದೇ ಚಿತ್ರಕ್ಕೆ ಎರಡು ಕವನಗಳನ್ನು ಕವಯತ್ರಿ ಶ್ರೀಮತಿ ಲತಾ ಬನಾರಿ ಹಾಗೂ ಶ್ರೀ ಶಂಕರಾನಂದ ಹೆಬ್ಬಾಳ ಇವರು ರಚಿಸಿದ್ದಾರೆ. ಚಿತ್ರ ಒಂದೇ ಆದರೂ ಕವನಗಳ ಭಾವಗಳು ಬೇರೆ ಬೇರೆ.
ಕವನ ೧ *ಕುಂಬಾರನ ಬದುಕು*
ಖಂಡ ಪರಶುವ ಮನದಿ ನೆನೆಯುತ
ಮಂಡಿಯೂರುತ ಕುಳಿತನೊಬ್ಬನು
ಗಿಂಡಿಯೊಂದನು ಮಾಡಲೆನ್ನುತ ಮಣ್ಣ ಕಲೆಸುತಲಿ
ಗುಂಡಿಗೆಯ ಢವಢವದ ಸದ್ದಿಗೆ
ಮಂಡೆಯೊಳಗೇನೇನೊ ಯೋಚನೆ
ಕೊಂಡು ಹೋಗುವನದನು ಪೇಟೆಗೆ ಮಾರಿ ಹಣ ಗಳಿಸೆ
ವಿವಿಧ ರೀತಿಯ ಮಡಕೆ ಮಾಡುತ
ನವನವೀನದ ಬಣ್ಣ ಹಚ್ಚುತ
ಲಿವನ ಕಾಯಕ ಹೊಟ್ಟೆ ಪಾಡಿಗೆ ನಿತ್ಯವೀಬಗೆಯು
ಬೆವರ ಸುರಿಸುತ ದಿನವು ದುಡಿಯಲು
ನೆವಣ ಹೇಳದೆ ಬಂದು ಬಿಡುವನು
ಕವಿದ ಕತ್ತಲೆಯನ್ನು ಸರಿಸಲು ಬದುಕ ದಾರಿಯಲಿ
ತೋರುವನು ಬೆಳಕನ್ನು ದೇವನು
ದೂರದಲ್ಲಿಯೆ ನಿಂತು ನೋಡುತ
ಸೇರಬೇಕಿದೆ ಗುರಿಯನೆನ್ನುತ ಹೊರಟು ಬಂದಿಹನು
ನೇರ ನುಡಿ ನಡೆಯಿಂದ ಸಾಗುತ
ಬೇರೆ ಯೋಚನೆ ಮಾಡದಿರುವನು
ಮೀರಿ ನಡೆಯನು ಮಿತಿಯನೆಂದಿಗು ಶುದ್ಧ ಮನಸಿನವ
✍️ಲತಾ ಬನಾರಿ
******
ಕವನ-೨
ಪದ *ಖಂ*
ಕುಂಬಾರನ ನೋವು
ಖಂಡಿತವಾದಿಯು ಮಣ್ಣಿನ ಮಡಕೆಯ
ಬಂಡಿಯ ಚಕ್ರದಿ ಮಾಡುತಲಿ|
ಚಂಡಿನ ಹಾಗೆಯೆ ಗಾಲಿಯ ಸುತ್ತಲು
ದುಂಡನೆ ಗಡಿಗೆಯು ಕಾಣುತಲಿ||
ಕೋಲಲಿ ತಿರುಗಿಸಿ ತಿಗರಿಯ ಜೋರಲಿ
ಫಾಲದ ದೇವನ ನುತಿಸುತಲಿ|
ಗೋಲದ ಮೇಲೆಯೆ ತಿರುಗುವ ಜೀವನ
ಶಾಲೆಯ ಕಲಿಯದ ಗೋಳಿನಲಿ||
ಬೆವರನು ಹರಿಸುತ ಮಾಡಿದ ಗಡಿಗೆಯು
ಶಿವನಿಗೆ ಕಾಣಿಕೆ ಮೊದಲಿನಲಿ|
ದವಸವ ಧಾನ್ಯವ ಕೂಡಿಡಲೆಲ್ಲರು
ನವನವ ಮಡಿಕೆಯ ಸೊಗಸಿನಲಿ||
ಮಣ್ಣಿನ ಹಣತೆಯ ದೀಪವ ಹಚ್ಚಲು
ಕಣ್ಣಿಗೆ ಸುಂದರ ಚೆಲುವಿನಲಿ|.
ಬಣ್ಣದ ಮಾತಿಗೆ ಬೆಲೆಯನು ಕೊಡದೆಯೆ
ನುಣ್ಣನೆ ಹಣತೆಯ ಮಾಟದಲಿ||
ಬಡವನ ಕಷ್ಟವು ಮುಗಿಯದ ನಾಟಕ
ದುಡಿಯುತ ಬಾಳನು ಸವೆಸುತಲಿ|
ಗಡಿಗೆಯ ಕಾಯಕ ಹೊಟ್ಟೆಯ ತುಂಬಿಸಿ
ಬಡತನ ದೂರವ ಮಾಡುತಲಿ||
ಶಂಕರಾನಂದ ಹೆಬ್ಬಾಳ
