ಚಿತ್ರ ಒಂದು - ಗಝಲ್ ಗಳು ಎರಡು

ಚಿತ್ರ ಒಂದು - ಗಝಲ್ ಗಳು ಎರಡು

ಕವನ

ಗಝಲ್ - ೧

ಕತ್ತಲಲಿ ಹೂನಗೆ ಚೆಲ್ಲಿ ಬಂದ ಬೆಳಕು ಮನದಿ ನವೋಲ್ಲಾಸ ಮೂಡಿಸಿದೆ ಸಖಿ

ಸುತ್ತಲಿನ ತಮವ ಕಳೆದು ಭರವಸೆಯ ಕಿರಣಗಳ ಹರಿಸಿದೆ ಸಖಿ

 

ಬಿಳಿಯ ಉಡುಪು ಧರಿಸಿ ಸರಳ   ರೇಖೆಯಲಿ ಒಳಗಡಿಯಿಡುವ ರಶ್ಮಿಯ ಕಂಡೆಯಾ

ಹಳೆಯ ಮನೆಯ ಕಿಟಕಿಯಲಿ ಹೊಳೆದ ಪ್ರಭೆಯು ಕೋಣೆಯ ತುಂಬಾ ಚಲಿಸಿದೆ ಸಖಿ

 

ಹುಸಿಕೋಪದಿಂದ ಜೀವನವ ಅಂಧಕಾರದೆಡೆಗೆ ಒಯ್ಯವುದು ಸರಿಯೇ

ಪ್ರೇಮದೀಪವ ಬೆಳಗಿಸಿ ಬಾಳಲಿ ಶಾಂತಿಯ ಸ್ಥಾಪಿಸಿದೆ ಸಖಿ

 

ಅನುಮಾನದ ವಿಷವು ಮುಸುಕಾಗಿ ಹಬ್ಬಲು ಬಿಡದಿರು ಗೆಳತಿ

ಅನುರಾಗವು ಮಿಂಚಾಗಿ ದಾಳಿಯಿಡಲು ಅಂತರಂಗವು ಕುಣಿಯಲು ಬಯಸಿದೆ ಸಖಿ

 

ಪ್ರಬಲ ಕಾಂತಿಯೊಂದು ಶ್ರೀ ಯ ಬದುಕಿನ ನೋಟವನೇ ಬದಲಿಸಿದೆಯಲ್ಲ

ನಿಶ್ಚಲ ಹೊಂದಿಹ ಹೃದಯದಿ  ಒಲವಿನ ಕದವ ತೆರೆಸಿದೆ ಸಖಿ

 

- ಪದ್ಮಶ್ರೀ ಪ್ರಶಾಂತ್ 

************************

ಗಝಲ್ - ೨

ಕತ್ತಲೆ ಲೋಕದ ಕಣ್ಣನು ತೆರೆಯಲು

ಸುರಿದಿದೆ ಬೆಳಕು|

ಬೆತ್ತಲೆ ಜಗದಲ್ಲಿನ ಅನ್ಯಾಯ ಮೆಟ್ಟಲು

ಪಿರಿದಿದೆ ಬೆಳಕು||

 

ದುಷ್ಟರ ಭ್ರಷ್ಟತೆ ಹೆಚ್ಚುತ ಕುಣಿದಿದೆ

ಧರೆಯಲಿ ನಿತ್ಯನೂತನ|

ಕಷ್ಟದ ಕಾಲದಲಿ ಕುಗ್ಗದೆ ನೆಡೆಯುತ

ಸರಿದಿದೆ ಬೆಳಕು||

 

ಮಾಸಿದ ಕನಸದು ಎಣಿಸದೆ ನಿಂತಿದೆ

ತಣಿಯುವ ಸಂದರ್ಭ|

ಕಾಶದ ತೋಷದಿ ಮನಸದು ನಲಿಯುತ

ಬಿರಿದಿದೆ ಬೆಳಕು||

 

ದಾರ್ಷ್ಟ್ಯತೆ ನಡೆಯಲಿ ಸುಂದರ ಬದುಕದು

ಚೆಲ್ಲಿದೆ ಸುಜ್ಞಾನವನು|

ಧೃಢತೆಯ ಪಥದಲಿ ತಮವನು ನುಂಗುತ

ಜರಿದಿದೆ ಬೆಳಕು||

 

ಅಭಿಜ್ಞಾಳ ಚಾವಡಿಗೆ ಹರಡಿದೆ ಕಿರಣವು

ಬೆಳದಿಂಗಳ ಪರಿಷೆಯದು|

ಸ್ವೋಪಜ್ಞತೆಯ ಮಾರ್ಗದಿ ಒಳಿತನು

ಸೂಸುತ ಹರಿದಿದೆ ಬೆಳಕು||

 

-ಅಭಿಜ್ಞಾ ಪಿ ಎಮ್ ಗೌಡ 

 

ಚಿತ್ರ್