ಚಿತ್ರ ಬರೆಯಿತು ಮುಂಗಾರು…
ಕವನ
ತುಂತುರು ಮಳೆಹನಿ ಬಂತದು ಭೂಮಿಗೆ
ಚಿಂತೆಯ ಕಳೆಯಿತು ಜೀವಿಗಳ
ಸಂತಸವೆಲ್ಲೆಡೆ ತಂತದು ಹಂಚಲು
ಹಂತಕ ಬರವನು ನೀಗಿಸುತ
ಬತ್ತಿದ ಕೆರೆಗಳು ಮತ್ತದು ತುಂಬಿತು
ಕುತ್ತಿನ ಬರವನು ಹೊರದೂಡಿ
ಭತ್ತವ ಹೊಲದಲಿ ಬಿತ್ತಿದ ರೈತನು
ತುತ್ತನು ನೀಡುವ ಬೆಳೆಗಾಗಿ
ಉಸಿರನು ನೀಡುವ ಹಸಿರಿನ ಮೊಳಕೆಯು
ಹೊಸೆಯಿತು ನೆಲದಲಿ ಚಿತ್ತಾರ
ಬಸಿರಿನ ಒಡಲಲಿ ನಸುನಗೆ ಬೀರುವ
ವಸುಧೆಗೆ ಮಾಡಿದೆ ಶೃಂಗಾರ
ಮುತ್ತಿನ ಹನಿಗಳ ಹೊತ್ತಿಹ ಮೇಘವು
ಹತ್ತಿರವಾಯಿತು ಮಳೆ ಸುರಿದು
ಸುತ್ತಲ ಪರಿಸರ ಚಿತ್ತವ ಸೆಳೆವುದು
ಚಿತ್ರವ ಬರೆಯಿತು ಮುಂಗಾರು||
-ಪೆರ್ಮುಖ ಸುಬ್ರಹ್ಮಣ್ಯ ಭಟ್
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್