ಚಿನ್ನದ ಗುಲಾಬಿ ಗಿಡ

ಚಿನ್ನದ ಗುಲಾಬಿ ಗಿಡ

ಅರ್ಮೇನಿಯಾ ದೇಶದ ಹಳ್ಳಿಯೊಂದರಲ್ಲಿ ಬಡ ರೈತನೊಬ್ಬ ತನ್ನ ಹೆಂಡತಿ ಮತ್ತು ಒಬ್ಬನೇ ಮಗನೊಂದಿಗೆ ವಾಸವಾಗಿದ್ದ. ಅವರ ಪುಟ್ಟ ಹೊಲದಲ್ಲಿ ಬೆಳೆದ ತರಕಾರಿ ಮತ್ತು ಧಾನ್ಯಗಳು ಅವರಿಗೆ ಸಾಕಾಗುತ್ತಿರಲಿಲ್ಲ. ಎಷ್ಟೋ ದಿನ ರಾತ್ರಿ ಅವರು ಊಟ ಮಾಡದೆ ಮಲಗುತ್ತಿದ್ದರು.

ಕೊನೆಗೆ ಅವರು ತಮ್ಮ ಹೊಲ ಮಾರಲು ನಿರ್ಧರಿಸಿದರು; ತಮ್ಮ ಪಕ್ಕದ ಮನೆಯ ರೈತನಿಗೇ ಅದನ್ನು ಮಾರಿದರು. ಅವನೇನೂ ಶ್ರೀಮಂತನಲ್ಲ. ಆದರೆ ತನ್ನಲ್ಲಿದ್ದ ಹಣವನ್ನೆಲ್ಲ ಒಟ್ಟುಗೂಡಿಸಿ ಆ ಹೊಲ ಮತ್ತು ಎರಡು ಎತ್ತುಗಳನ್ನು ಖರೀದಿಸಿದ.

ಅನಂತರ ಹೊಲ ಖರೀದಿಸಿದ ರೈತ ಹೊಲ ಉಳುಮೆ ಮಾಡಲು ತೊಡಗಿದ. ಅವನ ನೇಗಿಲಿಗೆ ಏನೋ ತಗಲಿದಂತಾಯಿತು. ಆತ ಅಗೆದು ನೋಡಿದಾಗ, ಒಂದು ಮಡಕೆ ಸಿಕ್ಕಿತು. ಅದರಲ್ಲಿ ಚಿನ್ನದ ನಾಣ್ಯಗಳಿದ್ದವು!

ಪ್ರಾಮಾಣಿಕನಾದ ಆತ ಜಮೀನು ಮಾರಿದ ರೈತನ ಮನೆಗೆ ಹೋಗಿ ಆತನಿಗೆ ವಿಷಯ ತಿಳಿಸಿದ. "ನಾನು ನಿನ್ನಿಂದ ಜಮೀನು ಮಾತ್ರ ಖರೀದಿಸಿದ್ದು; ಚಿನ್ನವನ್ನಲ್ಲ. ಆದ್ದರಿಂದ ಈ ಚಿನ್ನವೆಲ್ಲ ನೀನೇ ತಗೋ. ಅದು ನಿನ್ನ ಸೊತ್ತು” ಎಂದ. ಜಮೀನು ಮಾರಿದ ರೈತ ಹೇಳಿದ, "ನೋಡಪ್ಪಾ, ನಾನು ಜಮೀನು ಮತ್ತು ಅದರಲ್ಲಿದ್ದ ಎಲ್ಲವನ್ನೂ ನಿನಗೆ ಮಾರಿದೆ. ಈಗ ಅದೆಲ್ಲವೂ ನಿನ್ನದೇ. ನನ್ನದಲ್ಲದ್ದನ್ನು ನಾನು ತಗೊಳ್ಳಲು ಸಾಧ್ಯವೇ ಇಲ್ಲ.”

ಅವರಿಬ್ಬರೂ ಹೀಗೆ ಬಹಳ ಹೊತ್ತು ವಾದ ಮಾಡುತ್ತಾಮಾಡುತ್ತಾ ಒಬ್ಬರ ಮೇಲೊಬ್ಬರು ಸಿಟ್ಟಾದರು; ಪರಸ್ಪರ ಹೊಡೆದಾಟಕ್ಕೆ ನಿಂತರು. ಕೊನೆಗೆ ಇಬ್ಬರೂ ಈ ಸಮಸ್ಯೆಯನ್ನು ರಾಜನ ಬಳಿಗೆ ಇತ್ಯರ್ಥಕ್ಕಾಗಿ ಒಯ್ಯಲು ನಿರ್ಧರಿಸಿದರು.

ಇವರಿಬ್ಬರ ಅಹವಾಲನ್ನು ತಾಳ್ಮೆಯಿಂದ ಕೇಳಿದ ರಾಜನಿಗೆ “ಇಂತಹ ಪ್ರಾಮಾಣಿಕ ಮನುಷ್ಯರೂ ಇದ್ದಾರಲ್ಲಾ" ಎಂದು ಆಶ್ಚರ್ಯವಾಯಿತು. ರಾಜ ಕೇಳಿದ, "ನಿಮಗೆ ಎಷ್ಟು ಮಕ್ಕಳಿದ್ದಾರೆ?" ಜಮೀನು ಮಾರಿದಾತ ಹೇಳಿದ, “ನನಗೆ ಒಬ್ಬನೇ ಒಬ್ಬ ಮಗ.” ಜಮೀನು ಖರೀದಿಸಿದ ರೈತ ಹೇಳಿದ, “ನನಗೆ ಒಬ್ಬಳೇ ಒಬ್ಬಳು ಮಗಳು.”

ರಾಜ ಮುಗುಳ್ನಗುತ್ತಾ ಹೇಳಿದ, “ಒಳ್ಳೆಯದೇ ಆಯಿತು. ಅವರಿಬ್ಬರಿಗೂ ಮದುವೆ ಮಾಡಿ ಮತ್ತು ಈ ಚಿನ್ನವನ್ನು ಮದುಮಕ್ಕಳಿಗೆ ಮದುವೆಯ ಉಡುಗೊರೆಯಾಗಿ ಕೊಡಿ.”

ರಾಜನ ಸರಳ ಪರಿಹಾರವನ್ನು ಕೇಳಿ ಇಬ್ಬರು ರೈತರಿಗೂ ಸಂತೋಷವಾಯಿತು. ಅವರ ಮಕ್ಕಳ ಸಂತೋಷಕ್ಕಂತೂ ಪಾರವೇ ಇಲ್ಲ. ಯಾಕೆಂದರೆ ಅವರು ಪರಸ್ಪರರನ್ನು ಪ್ರೀತಿಸುತ್ತಿದ್ದರು ಮತ್ತು ಈಗ ನಿರಾಯಾಸವಾಗಿ ಸಂಪತ್ತು ಸಿಗಲಿತ್ತು.

ಅಂತೂ ರೈತರ ಮಕ್ಕಳಿಬ್ಬರಿಗೆ ಮದುವೆಯಾಯಿತು. ತಮಗೆ ನೀಡಲಾದ ಚಿನ್ನ ಮಾರಿ, ಅವರು ವಿಸ್ತಾರವಾದ ಜಮೀನು ಖರೀದಿಸಿದರು. ಊರಿನವರಿಗೆಲ್ಲ ಭೋಜನಕೂಟ ಏರ್ಪಡಿಸಿದರು. ಅನಂತರ ಆ ಜಮೀನಿನಲ್ಲಿ ಪುಟ್ಟ ಮನೆ ಕಟ್ಟಿಸಿಕೊಂಡರು.

ಅದಾದ ನಂತರ ರೈತರ ಕುಟುಂಬಗಳು ತಮ್ಮ ಜಮೀನಿನಲ್ಲಿ ಮೈಮುರಿದು ಬೇಸಾಯ ಮಾಡುತ್ತಾ ನೆಮ್ಮದಿಯಿಂದ ಬದುಕು ಸಾಗಿಸಿದರು. ಅವರ ದುಡಿಮೆಯಿಂದಾಗಿ ಅವರು ಶ್ರೀಮಂತರಾದರು. ಹೀಗಿರುವಾಗ, ಜಮೀನಿನಲ್ಲಿ  ಚಿನ್ನದ ನಾಣ್ಯಗಳು ತುಂಬಿದ್ದ ಮಡಕೆ ಸಿಕ್ಕಿದಲ್ಲಿ ಒಂದು ಅದ್ಭುತ ಗುಲಾಬಿ ಗಿಡ ಬೆಳೆಯಿತು; ಅದರಲ್ಲಿ ಹೊಳೆಯುವ ಚಿನ್ನದ ಗುಲಾಬಿ ಹೂಗಳು ಮೂಡಿದವು. ಇದನ್ನು ಕಂಡು ಊರಿನವರೆಲ್ಲರೂ ವಿಸ್ಮಯ ಪಟ್ಟರು.

ಅದೊಂದು ದಿನ ರಾಜಕುಮಾರ ಆ ದಾರಿಯಲ್ಲಿ ಕುದುರೆಯ ಸವಾರಿ ಮಾಡುತ್ತಾ ಹೋಗುತ್ತಿದ್ದ. ಆ ಹೊಲದಲ್ಲಿದ್ದ ಅದ್ಭುತ ಗುಲಾಬಿ ಗಿಡ ಅವನಿಗೆ ಕಾಣಿಸಿತು. ಅದರಿಂದ ಗುಲಾಬಿ ಹೂಗಳಿದ್ದ ರೆಂಬೆಯೊಂದನ್ನು ಕಿತ್ತುಕೊಳ್ಳಲು ಅವನು ಬಯಸಿದ. ಆ ಹೊಲದ ಮಾಲೀಕ ಯಾರು ಎಂಬುದನ್ನು ವಿಚಾರಿಸದೆ, ಚಿನ್ನದ ಗುಲಾಬಿ ಗಿಡದ ರೆಂಬೆಗೆ ರಾಜಕುಮಾರ ಕೈಹಾಕಿ ಎಳೆದ.
ಅಷ್ಟರಲ್ಲಿ ಅಲ್ಲೊಂದು ಚಮತ್ಕಾರ ಘಟಿಸಿತು. ಆ ಗುಲಾಬಿ ಗಿಡ ಜಮೀನಿನಿಂದ ಬೇರು ಸಹಿತ ಮೇಲೆದ್ದು, ಆಕಾಶಕ್ಕೇರಿ ಮೋಡಗಳ ನಡುವೆ ಕಣ್ಮರೆಯಾಯಿತು!

ಪೆಚ್ಚಾದ ರಾಜಕುಮಾರ ತನ್ನ ಕುದುರೆಯನ್ನು ಮುಂದಕ್ಕೆ ಓಡಿಸಿದ. ತುಸು ದೂರ ಸಾಗಿದ ರಾಜಕುಮಾರ ಹಿಂದಕ್ಕೆ ತಿರುಗಿ ನೋಡಿದಾಗ ಅವನಿಗೊಂದು ಅಚ್ಚರಿ ಕಾದಿತ್ತು. ಆ ಅದ್ಭುತ ಗುಲಾಬಿ ಗಿಡ ಅದು ಮೊದಲಿದ್ದ ಜಾಗದಲ್ಲಿ ಪುನಃ ಕಾಣಿಸಿತು! ರಾಜಕುಮಾರನಿಗೆ ಕಿರಿಕಿರಿಯಾಯಿತು. ಅದರಿಂದ ಒಂದು ಚಿನ್ನದ ಗುಲಾಬಿ ಹೂವನ್ನಾದರೂ ಕಿತ್ತು ಕೊಳ್ಳಬೇಕೆಂದು ಅವನು ಕುದುರೆಯನ್ನು ಹಿಂದಕ್ಕೆ ತಿರುಗಿಸಿ, ಪುನಃ ಅದ್ಭುತ ಗುಲಾಬಿ ಗಿಡದತ್ತ ದೌಡಾಯಿಸಿದ; ಅದರಿಂದ ಚಿನ್ನದ ಗುಲಾಬಿ ಹೂ ಕೀಳಲು ಅವನು ಕೈಚಾಚುತ್ತಿದ್ದಂತೆ ಪುನಃ ಆ ಗುಲಾಬಿ ಗಿಡ ಮೇಲೆದ್ದು ಆಕಾಶದಲ್ಲಿ ಕಣ್ಮರೆಯಾಯಿತು!

ಅಲ್ಲಿಂದ ಪುನಃ ಹೊರಟ ರಾಜಕುಮಾರ, ತುಸು ದೂರ ಹೋಗಿ ಹಿಂದಕ್ಕೆ ತಿರುಗಿ ನೋಡಿದಾಗ ಆ ಅದ್ಭುತ ಗುಲಾಬಿ ಗಿಡ ಅಲ್ಲೇ ಇತ್ತು! ರಾಜಕುಮಾರ ಕೋಪದಿಂದ ಮೂರನೆಯ ಸಲ ಅದ್ಛುತ ಗುಲಾಬಿ ಗಿಡದತ್ತ ತನ್ನ ಕುದುರೆಯನ್ನು ದೌಡಾಯಿಸಿದ. ಆದರೆ, ಈ ಸಲವೂ ಹಾಗೆಯೇ ಆಯಿತು. ರಾಜಕುಮಾರನಿಗೆ ಸಿಟ್ಟಿನಿಂದ ಮೈಯೆಲ್ಲ ಉರಿದು ಹೋಯಿತು. ಅವನು ತನ್ನ ಸೇವಕರಿಗೆ ಆ ಹೊಲದಲ್ಲಿದ್ದ ಎಲ್ಲ ಗಿಡಗಳನ್ನೂ ಕಿತ್ತು ನಾಶ ಮಾಡಲು ಆದೇಶಿಸಿದ. ಇದೆಲ್ಲವನ್ನೂ ರೈತರ ಕುಟುಂಬಗಳ ಎಲ್ಲರೂ ತಮ್ಮತಮ್ಮ ಮನೆಗಳಿಂದಲೇ ಭಯಭೀತರಾಗಿ ನೋಡಿದರು.

ಅರಮನೆಗೆ ಹಿಂತಿರುಗಿದ ರಾಜಕುಮಾರ ಆ ದಿನ ನಡೆದ ಸಂಗತಿಯನ್ನೆಲ್ಲ ರಾಜನಿಗೆ ತಿಳಿಸಿದ. ರಾಜ ಎಲ್ಲವನ್ನೂ ಮೌನವಾಗಿ ಕೇಳಿದ. ಅನಂತರ ತನ್ನ ರಾಜ್ಯದ ಎಲ್ಲ ಜ್ನಾನಿಗಳನ್ನೂ ಕರೆಸಿ, ಈ ವಿದ್ಯಮಾನವನ್ನು ತಿಳಿಸಿ, ಚಿನ್ನದ ಗುಲಾಬಿ ಗಿಡ ಕಣ್ಮರೆಯಾಗುವ ಚಮತ್ಕಾರಕ್ಕೆ ಕಾರಣವೇನೆಂದು ಕೇಳಿದ. ಅವರು ಯಾರಿಗೂ ಉತ್ತರಿಸಲು ಸಾಧ್ಯವಾಗಲಿಲ್ಲ.

ರಾಜಕುಮಾರನಿಗೆ ರಾತ್ರಿಹಗಲು ಅದೇ ಸಂಗತಿ ತಲೆತಿನ್ನುತ್ತಿತ್ತು. ಕೊನೆಗೆ ಕುತೂಹಲ ತಡೆಯಲಾಗದೆ ಆತ ವಿದೇಶಗಳನ್ನು ಸುತ್ತಿ, ಜ್ನಾನಿಗಳನ್ನು ಭೇಟಿಯಾಗಿ ಚಿನ್ನದ ಗುಲಾಬಿ ಗಿಡದ ಚಮತ್ಕಾರದ ಕಾರಣ ತಿಳಿಯಲು ನಿರ್ಧರಿಸಿದ. ಹಲವಾರು ದಿನ ಪ್ರಯಾಣಿಸಿದ ನಂತರ ಒಬ್ಬಳು ಹಣ್ಣುಹಣ್ಣು ಮುದುಕಿಯನ್ನು ಅವನು ಭೇಟಿಯಾದ. ಅವಳು ರಾಜಕುಮಾರನಿಗೆ ಹೀಗೆಂದಳು: "ಮುಂದಿನ ನಗರದಲ್ಲಿ ನಿನಗೊಬ್ಬ ಕುಳ್ಳ ಜ್ನಾನಿ ಸಿಗುತ್ತಾನೆ. ಅವನು ನಿನ್ನ ಪ್ರಶ್ನೆಗೆ ಉತ್ತರ ಹೇಳಬಲ್ಲ.”

ಮುಂದೆ ಸಾಗಿದ ರಾಜಕುಮಾರ ಆ ಕುಳ್ಳ ಜ್ನಾನಿಯನ್ನು ಭೇಟಿಯಾಗಿ ಚಿನ್ನದ ಗುಲಾಬಿ ಗಿಡದ ಸಂಗತಿಯನ್ನೆಲ್ಲ ತಿಳಿಸಿ ಕಾರಣ ಕೇಳಿದ. ಆತ ಮುಗುಳ್ನಗುತ್ತಾ ಉತ್ತರಿಸಿದ, “ಆ ಗುಲಾಬಿ ಗಿಡದ ಹೂಗಳನ್ನು ಆ ಹೊಲದ ಮಾಲೀಕ ಮಾತ್ರ ಕೀಳಬಲ್ಲ; ಬೇರಾರೂ ಕೀಳಲಾಗದು. ತಮ್ಮದಲ್ಲದ ಸಂಪತ್ತನ್ನು ಯಾರೂ ದೋಚಬಾರದು ಮತ್ತು ಇನ್ನೊಬ್ಬರ ಸೊತ್ತನ್ನು ಯಾರೂ ನಾಶ ಪಡಿಸಬಾರದು ಎಂಬ ಕಾರಣಕ್ಕಾಗಿ ಪ್ರಕೃತಿಯೇ ಈ ವ್ಯವಸ್ಥೆ ಮಾಡಿದೆ. ಪರರ ಸಂಪತ್ತಿಗೆ ಅಸೂಯೆ ಪಡಬಾರದು ಮತ್ತು ತಮಗೆ ಬೇಕಾದ್ದೆಲ್ಲವನ್ನೂ ತಮ್ಮ ಪರಿಶ್ರಮದಿಂದಲೇ ಗಳಿಸಬೇಕೆಂದು ತಿಳಿಸುವುದೂ ಇದರ ಉದ್ದೇಶ."

ರಾಜಕುಮಾರ ಇದನ್ನು ಕೇಳಿ ಪಶ್ಚಾತ್ತಾಪದಿಂದ ತಲೆತಗ್ಗಿಸಿದ. ತನ್ನ ಸಿಟ್ಟಿನಲ್ಲಿ ಆ ರೈತರ ಹೊಲದಲ್ಲಿದ್ದ ಗಿಡಗಳನ್ನೆಲ್ಲ ನಾಶ ಮಾಡಲು ಆದೇಶಿಸಿದ್ದು ತಪ್ಪೆಂದು ಅವನಿಗೆ ಈಗ ಅರ್ಥವಾಯಿತು. ಕುಳ್ಳ ಜ್ನಾನಿಗೆ ಕೃತಜ್ನತೆ ಸೂಚಿಸಿ ಅವನು ಅಲ್ಲಿಂದ ಹೊರಟ.

ರಾಜಕುಮಾರ ನೇರವಾಗಿ ಅದ್ಛುತ ಗುಲಾಬಿ ಗಿಡವಿದ್ದ ಹೊಲಕ್ಕೆ ಬಂದು ತಲಪಿದ. ತನ್ನಿಂದಾಗಿ ಆ ರೈತರಿಗಾದ ನಷ್ಟಕ್ಕೆ ಎಷ್ಟು ಪರಿಹಾರ ನೀಡಬೇಕೆಂದು ವಿಚಾರಿಸುವುದು ಅವನ ಉದ್ದೇಶವಾಗಿತ್ತು. ಆದರೆ, ಆ ಹೊಲಗಳಲ್ಲಿ ಬೆಳೆಗಳು ನಳನಳಿಸುತ್ತಿದ್ದವು ಮತ್ತು ಚಿನ್ನದ ಗುಲಾಬಿ ಗಿಡ ಚಿನ್ನದ ಹೂಗಳಿಂದ ತುಂಬಿ ಕಂಗೊಳಿಸುತ್ತಿತ್ತು. ಇದನ್ನು ಕಂಡು ರಾಜಕುಮಾರನ ಬಾಯಿಯಿಂದ ಮಾತುಗಳೇ ಹೊರಡಲಿಲ್ಲ!