ಚಿನ್ನದ ಪಾದ

ಚಿನ್ನದ ಪಾದ

ಎರಡು ಸಾವಿರ ವರುಷಗಳ ಮುಂಚೆ ಪ್ರಾಚೀನ ಈಜಿಪ್ಟಿನಲ್ಲಿ ಕುಟ್ ಮತ್ತು ಅವನ ಅವಳಿ-ಜವಳಿ ಸೋದರಿ ನೆಫೊಸ್ ವಾಸ ಮಾಡುತ್ತಿದ್ದರು. ಅವರು ನೈಲ್ ನದಿಯ ಪಕ್ಕದ ಹೊಲಗಳಿಂದ ಪಾಪಿರಸ್ ಹೆಸರಿನ ಉದ್ದದ ಹುಲ್ಲನ್ನು ಸಂಗ್ರಹಿಸಿ ಮಾರುಕಟ್ಟೆಯಲ್ಲಿ ಮಾರುತ್ತಿದ್ದರು. ಈ ಹುಲ್ಲಿನಿಂದ ಆಗಿನ ಕಾಲದ “ಬರೆಯುವ ಹಾಳೆ”ಗಳನ್ನು ತಯಾರಿಸಲಾಗುತ್ತಿತ್ತು.

ಅದೊಂದು ದಿನ ಅವರ ದೋಣಿಯಲ್ಲಿ ಹುಲ್ಲು ತುಂಬಿತ್ತು. ಕುಟ್ ಕೊನೆಯ ಹುಲ್ಲಿನ ಹೊರೆಗಾಗಿ ಹುಲ್ಲು ಸಂಗ್ರಹಿಸುತ್ತಿದ್ದ. ನೆಫೊಸ್ ಮನೆಗೆ ಒಯ್ಯಲು ಚಂದದ ಹೂಗಳನ್ನು ಹುಡುಕುತ್ತಾ ನದಿಯ ದಡದಲ್ಲಿ ಸ್ವಲ್ಪ ದೂರ ಹೋದಳು.

ಅಲ್ಲೊಂದೆಡೆ ನೀರಿನ ನಡುವೆ ಲಿಲ್ಲಿ ಹೂಗಳನ್ನು ಕಂಡು ಚಪ್ಪಲಿ ಕಳಚಿ ಅತ್ತ ನಡೆದಳು. ಫಕ್ಕನೆ ನೀರಿನಲ್ಲಿ ದೊಡ್ಡ ಅಲೆಗಳೆದ್ದವು. ದೊಡ್ಡ ಮೊಸಳೆಯೊಂದು ನೀರಿನಲ್ಲಿ ನುಗ್ಗಿ ಬಂದು ಅವಳ ಎಡಪಾದವನ್ನು ಕಚ್ಚಿ ಹಿಡಿಯಿತು.  

ನೆಫೊಸ್ ನೋವಿನಿಂದ ಚೀರಿದಳು. ಕುಟ್ ತಕ್ಷಣವೇ ಧಾವಿಸಿ ಬಂದು, ಮೊಸಳೆಯನ್ನು ಓಡಿಸಿ, ಸೋದರಿಯನ್ನು ಎಳೆದುಕೊಂಡ. “ನಿನ್ನ ಪಾದ ಚಿಂದಿಯಾಗಿದೆ. ಇಲ್ಲೇ ಮಲಗಿರು. ನೀನು ನಡೆಯಲು ಸಾಧ್ಯವಿಲ್ಲ. ನಮ್ಮ ದೋಣಿಯನ್ನು ಇಲ್ಲಿಗೆ ತರುತ್ತೇನೆ” ಎನ್ನುತ್ತಾ ದೋಣಿಯತ್ತ ಓಡಿದ ಕುಟ್.

ನೆಫೊಸ್ ನಿಶ್ಶಕ್ತಿ ತಡೆಯಲಾಗದೆ ನದಿ ದಡದ ಮರಳಿನಲ್ಲಿ ಮಲಗಿದಳು. ಅವಳ ಎಡಗಾಲಿನ ನೋವು ಜೀವಹಿಂಡುತ್ತಿತ್ತು. ಆದರೆ, “ಇನ್ನು ಯಾವತ್ತೂ ಸರಿಯಾಗಿ ನಡೆಯಲಿಕ್ಕಾಗದು” ಎಂಬ ಚಿಂತೆ ಆ ನೋವಿಗಿಂತ ದೊಡ್ಡದಾಗಿತ್ತು.

ಭವಿಷ್ಯದ ಚಿಂತೆಯಿಂದ ಅವಳು ಕಣ್ಣೀರು ಹಾಕಿದಳು. ಆಗ ಅಲ್ಲಿ ಹಕ್ಕಿಗಳು ರೆಕ್ಕೆ ಬಡಿಯುವ ಸದ್ದು ಕೇಳಿಸಿತು. ಪವಿತ್ರ ಐಬಿಸ್ ಹಕ್ಕಿಗಳ ಗುಂಪೊಂದು ನದಿ ನೀರಿಗೆ ಬಂದಿಳಿಯಿತು. ನೆಫೋಸಿಗೆ ನಿಶ್ಶಕ್ತಿಯಿಂದ ಕಣ್ಣು ಮಂಜಾಗುತ್ತಿತ್ತು. ಆ ಹಕ್ಕಿಗಳಲ್ಲೊಂದು ತನ್ನತ್ತ ಬರುತ್ತಿರುವುದು ಅವಳಿಗೆ ಕಾಣಿಸಿತು; ಆದರೆ ಅದು ಮನುಷ್ಯ ದೇಹಕ್ಕೆ ಹಕ್ಕಿಯ ತಲೆ ಜೋಡಿಸಿದಂತಿತ್ತು.

ತಕ್ಷಣವೇ ಅದೇನೆಂದು ನೆಫೊಸ್ ಗುರುತಿಸಿದಳು. "ಥೋಥ್ ದೇವರು! ನನಗೆ ಸಹಾಯ ಮಾಡಿ, ದೇವರೇ" ಎಂದು ಅವಳು ಉದ್ಗರಿಸಿದಳು. “ಪುಟ್ಟ ಹುಡುಗಿ, ಹೆದರಬೇಡ. ನಾನೇ ಈಜಿಪ್ಟಿನ ರೋಗಮುಕ್ತಿಯ ದೇವರು. ನಿನಗೆ ಸಹಾಯ ಮಾಡುತ್ತೇನೆ. ಆದರೆ ನನ್ನ ಸಹಾಯವನ್ನು ಯಾರಿಗೂ ಹೇಳದೆ ರಹಸ್ಯವಾಗಿ ಇಡುತ್ತೇನೆಂದು ನೀನು ಭಾಷೆ ಕೊಡಬೇಕು” ಎಂದರು ಥೋಥ್.

ದೇವರಿಗೆ ನೆಫೊಸ್ ಹಾಗೆಯೇ ಭಾಷೆ ಕೊಟ್ಟಳು. ಅನಂತರ ಏನಾಯಿತೆಂದು ಅವಳಿಗೆ ನೆನಪಾಗಲೊಲ್ಲದು. ಒಂದಂತೂ ಸತ್ಯ, ಅವಳು ಮೊದಲಿನಂತಾದಳು! ಕುಟ್ ಅವಳತ್ತ ಓಡಿ ಬಂದಾಗ ಅವಳು ಎದ್ದು ನಿಂತು, ನೆಲದಿಂದ ಜಿಗಿದು ಕುಣಿದಳು!

ಕುಟ್ ಅವಳನ್ನು ಅಚ್ಚರಿಯಿಂದ ನೋಡಿದ. ಅದ್ಯಾವುದೋ ಮ್ಯಾಜಿಕ್‌ನಿಂದಾಗಿ ನೆಫೊಸಳ ಎಡಪಾದದಲ್ಲಿ ಬಂಗಾರದ ಬೂಟು ಇತ್ತು! ಅದು ಅವಳ ಮುರಿದಿದ್ದ ಪಾದಕ್ಕೆ ಅಚ್ಚುಕಟ್ಟಾಗಿ ಜೋಡಿಸಲ್ಪಟ್ಟಿದ್ದು, ಅವಳದು ಬಂಗಾರದ ಕಾಲಿನಂತೆ ಕಾಣುತ್ತಿತ್ತು. “ಓ, ಇದೊಂದು ಅದ್ಭುತ! ಇದು ಹೇಗಾಯಿತು?" ಎಂದು ಕೇಳಿದ ಕುಟ್. ನೆಫೊಸ್ ಮುಗುಳ್ನಕ್ಕಳು; ಉತ್ತರಿಸಲಿಲ್ಲ. ಯಾಕೆಂದರೆ ಅವಳು ರಹಸ್ಯವನ್ನು ಸೋದರನಿಗೂ ತಿಳಿಸದೆ ಕಾಪಾಡಲೇ ಬೇಕಾಗಿತ್ತು.

ಅನಂತರ ನೆಫೊಸ್ ಮುಂಚಿನಂತೆಯೇ ನಡೆಯುತ್ತಿದ್ದಳು, ಸಂತೋಷದಿಂದ ಆಟವಾಡುತ್ತಿದ್ದಳು. ಉದ್ದ ಲಂಗ ತೊಟ್ಟು ತನ್ನ ಬಂಗಾರದ ಕಾಲನ್ನು ಇತರರ ನೋಟದಿಂದ ಮರೆಮಾಚಿದ್ದಳು. ಅವಳು ಚಪ್ಪಲಿ ತೊಟ್ಟು ನಡೆಯುವಾಗ ಬಲಗಾಲಿಗೆ ಬಂಗಾರದ ಗೆಜ್ಜೆ ಧರಿಸಿದಂತೆ ಕಾಣುತ್ತಿತ್ತು.

ಆದರೆ ಅವಳ ಸಂತೋಷ ಹೆಚ್ಚು ಕಾಲ ಉಳಿಯಲಿಲ್ಲ. ಕುಟ್‌ಗೆ ಏನೋ ರೋಗ ತಗಲಿತು. ಯಾವ ಚಿಕಿತ್ಸೆಯಿಂದಲೂ ಅದು ವಾಸಿಯಾಗಲಿಲ್ಲ. ನೆಫೊಸ್ ಒಬ್ಬಳಿಗೇ ಹೆಚ್ಚು ಹುಲ್ಲು ಸಂಗ್ರಹಿಸಲು ಸಾಧ್ಯವಾಗದೆ, ಆದಾಯ ಕಡಿಮೆಯಾಗುತ್ತಾ ಬಂತು.
ಹಾಗಾಗಿ, ತನ್ನ ಸೋದರನಿಗೆ ತಿಳಿಸದೆ, ನೆಫೊಸ್ ಹತ್ತಿರದ ನಗರಕ್ಕೆ ಹೋದಳು. ಅಲ್ಲಿ ನೆಬ್ಕಾ ಎಂಬ ಚಿನಿವಾರನ ಮಳಿಗೆಗೆ ಹೋಗಿ, ತನ್ನ ಚಿನ್ನದ ಬಲಪಾದವನ್ನೇ ಮಾರಿದಳು! ಈ ಸಂಗತಿಯನ್ನು ರಹಸ್ಯವಾಗಿಡುವುದಾಗಿ ಅವನಿಂದ ಭಾಷೆ ಪಡೆದಳು.

ಈಗ ನೆಫೊಸ್ ಕುಂಟುತ್ತಾ ನಡೆಯಬೇಕಾಗಿತ್ತು. ಆದರೆ, ಅವಳ ಬಳಿ ಈಗ ಕೆಲವು ತಿಂಗಳು ಊಟಕ್ಕೆ ಬೇಕಾದಷ್ಟು ಹಣವಿತ್ತು. ಮನೆಗೆ ಕುಂಟುತ್ತಾ ನಡೆದು ಬರುತ್ತಿರುವಾಗ, ಇಬ್ಬರು ದೇವತಾ ಅರ್ಚಕರು ಮಾತಾಡಿದ್ದನ್ನು ನೆಫೊಸ್ ಕೇಳಿಸಿಕೊಂಡಳು. ದೂರದ ಮರುಭೂಮಿಯಲ್ಲಿರುವ ಒಂದು ದೇವಾಲಯದಲ್ಲಿ ಪ್ರಾರ್ಥನೆ ಮಾಡಿದರೆ ಬೇಡಿಕೆ ಈಡೇರುತ್ತದೆ ಎಂದು ಅವರಲ್ಲೊಬ್ಬ ಹೇಳುತ್ತಿದ್ದ. ಅಲ್ಲಿಗೆ ಹೋಗಿ ಸೋದರ ಕುಟ್‌ನ ರೋಗ ವಾಸಿಗಾಗಿ ಪ್ರಾರ್ಥನೆ ಸಲ್ಲಿಸಲು ಅವಳು ಬಯಸಿದಳು. ಆದರೆ ಹೇಗೆ? ಎಂಬ ಚಿಂತೆಯಿಂದ ಆ ದಿನ ರಾತ್ರಿ ಮಲಗುವಾಗ ಅವಳು ಕಣ್ಣೀರಾಗಿದ್ದಳು.

ಈಜಿಪ್ಟಿನ ರಾಜ ಫಾರೋನ ಅರಮನೆಯಲ್ಲಿ ಸೆಕರ್ ಎಂಬ ಯುವಕನಿದ್ದ . ಅವನು ಚಿನಿವಾರ ನೆಬ್ಕಾನಿಂದ ಬೆಲೆಬಾಳುವ ಅಂದಚಂದದ ವಸ್ತುಗಳನ್ನು ಆಗಾಗ ಖರೀದಿಸುತ್ತಿದ್ದ. ಅದೊಂದು ದಿನ ನೆಬ್ಕಾ ಬಟ್ಟೆಯಲ್ಲಿ ಸುತ್ತಿದ್ದ ವಸ್ತುವೊಂದನ್ನು ತೆಗೆದು ಸೆಕರಿಗೆ ತೋರಿಸಿದ. ಅದೊಂದು ಬಂಗಾರದ ಕಾಲು. “ಅಬ್ಬಬ್ಬಾ! ಅದ್ಭುತವಾಗಿದೆ. ಇದು ದೇವರ ಮೂರ್ತಿಯೊಂದರ ಕಾಲು ಆಗಿರಬೇಕು. ಆ ಮೂರ್ತಿಯ ಉಳಿದ ಭಾಗ ಎಲ್ಲಿದೆ?” ಎಂದು ಪ್ರಶ್ನಿಸಿದ ಸೆಕರ್.

“ಅನ್ಯಥಾ ಭಾವಿಸಬೇಡಿ. ಇದರ ಉಳಿದ ಭಾಗಕ್ಕೆ ಕಿಂಚಿತ್ತೂ ಬೆಲೆಯಿಲ್ಲ. ಅದಕ್ಕಿಂತ ಹೆಚ್ಚು ನಾನೇನೂ ಹೇಳಲಾರೆ” ಎಂದು ಉತ್ತರಿಸಿದ ನೆಬ್ಕಾ. “ಪರವಾಗಿಲ್ಲ. ನಾನು ಪತ್ತೆ ಮಾಡುತ್ತೇನೆ” ಎಂದ ಸೆಕರ್. ಆತ ಆಗಲೇ ನಿರ್ಧರಿಸಿದ - ಮರುಭೂಮಿಯ ದೇವಾಲಯಕ್ಕೆ ಹೋಗಿ ಆ ಮೂರ್ತಿಯ ಉಳಿದ ಭಾಗ ಎಲ್ಲಿದೆಯೆಂದು ತಿಳಿಯಲು ಪ್ರಾರ್ಥನೆ ಸಲ್ಲಿಸಬೇಕೆಂದು.

ಅದೇ ದಿನ ಸೆಕರ್ ತನ್ನ ನಂಬಿಕಸ್ಥ ಸೇವಕ ಅಬುವಿನ ಜೊತೆ ಮರುಭೂಮಿಯ ದೇವಾಲಯಕ್ಕೆ ಹೊರಟ. ಮೂರು ದಿನಗಳ ಕಠಿಣ ಪ್ರಯಾಣದ ಬಳಿಕ ಅವರು ದೇವಾಲಯದ ಅರ್ಧ ದಾರಿ ಕ್ರಮಿಸಿದ್ದರು. ಆಗ, ಹಾದಿ ಬದಿಯಲ್ಲಿ ಯುವತಿಯೊಬ್ಬಳು ಬಿದ್ದಿರುವುದನ್ನು ಕಂಡರು. ಅದು ನೆಫೊಸ್! ದೇವಾಲಯದಿಂದ ಹಿಂತಿರುಗುತ್ತಿದ್ದ ಅವಳು ಕುಂಟುತ್ತಾ ಮುಂದೆ ನಡೆಯಲಾಗದೆ ಕುಸಿದು ಬಿದ್ದಿದ್ದಳು.

“ಒಡೆಯಾ, ಇವಳು ಯಾರೆಂದು ನನಗೆ ಗೊತ್ತು. ಇವಳೇ ನೆಫೊಸ್. ಇತ್ತೀಚೆಗೆ ಅವಳು ಒಂದು ಕಾಲು ಕಳೆದುಕೊಂಡಿದ್ದಾಳೆ. ಅವಳ ಸೋದರ ರೋಗದಿಂದ ಮಲಗಿದ್ದಾನೆ. ಸೋದರನ ರೋಗ ವಾಸಿಯಾಗಲೆಂದು ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಲಿಕ್ಕಾಗಿ ಅವಳು ಈ ದೂರದ ಪ್ರಯಾಣ ಮಾಡಿದ್ದಾಳೆ” ಎಂದ ಅಬು.

ಇವರ ಮಾತು ಕೇಳಿದ ನೆಫೊಸ್ ಕಣ್ಣು ತೆರೆದು ನೋಡಿದಳು. ಸೆಕರ್ ಕೈಯಲ್ಲಿದ್ದ ಚಿನ್ನದ ಪಾದವನ್ನು ನೋಡಿದಾಗ ಅವಳ ಕಣ್ಣುಗಳು ಅರಳಿದವು. ತಕ್ಷಣವೇ ಸೆಕರ್ ಅದು ಅವಳದೇ ಚಿನ್ನದ ಪಾದವೆಂದು ಅರ್ಥ ಮಾಡಿಕೊಂಡ. "ನಾನು ದೇವಾಲಯಕ್ಕೆ ಹೋಗಿ ಪ್ರಾರ್ಥನೆ ಸಲ್ಲಿಸಬೇಕೆಂದಿದ್ದೆ. ಆದರೆ ಅರ್ಧ ದಾರಿಯಲ್ಲಿಯೇ ದೇವರು ನನ್ನ ಪ್ರಾರ್ಥನೆಗೆ ಉತ್ತರ ಕೊಟ್ಟಿದ್ದಾರೆ. ಇದು ನಿನ್ನದೇ ಪಾದ ಎಂಬುದು ಖಂಡಿತ” ಎಂದ ಸೆಕರ್.

ನೆಫೊಸ್ ಅವರೊಂದಿಗೆ ಊರಿಗೆ ಮರಳಿದಳು. ತನ್ನ ಪ್ರಾರ್ಥನೆಗೂ ದೇವರು ಉತ್ತರಿಸಿದ್ದನ್ನು ನೋಡಿ ಅವಳ ಸಂತೋಷಕ್ಕೆ ಪಾರವೇ ಇಲ್ಲ. ಅವಳ ಸೋದರ ಕುಟ್‌ನ ರೋಗ ವಾಸಿಯಾಗಿತ್ತು. ಕೆಲವೇ ದಿನಗಳಲ್ಲಿ ನೆಫೊಸ್ ಮತ್ತು ಸೆಕರ್ ಮದುವೆಯಾಗಿ ಸುಖಸಂತೋಷದಿಂದ ಬಾಳಿದರು.