ಚಿಪ್ಕೋ ಚಳುವಳಿಯ ಸುಂದರಲಾಲ್ ಬಹುಗುಣ
‘ನಾನು ಖಂಡಿತಾ ಸೆಂಚುರಿ ಬಾರಿಸುತ್ತೇನೆ' ಎಂದು ಧೃಢ ನಿರ್ಧಾರದಿಂದ ಹೇಳಿದ್ದ ಖ್ಯಾತ ಪರಿಸರವಾದಿ, ಚಿಪ್ಕೋ ಚಳುವಳಿಯ ಹರಿಕಾರ ಸುಂದರಲಾಲ ಬಹುಗುಣ ಇವರು ಕೊರೋನಾ ಮಹಾಮಾರಿಗೆ ಸಿಲುಕಿ ನಿಧನ ಹೊಂದಿದರು. ಈ ಕೊರೋನಾ ಮಹಾಮಾರಿ ಒಬ್ಬ ಪರಿಸರ ಸಂತ, ಸರಳ ವ್ಯಕ್ತಿಯನ್ನು ನಮ್ಮಿಂದ ದೂರಕ್ಕೆ ಕೊಂಡು ಹೋಯಿತು. ಆದರೂ ತಮ್ಮ ಜೀವಿತಾವಧಿಯ ೯೪ ವರ್ಷಗಳನ್ನು ಅರ್ಥಪೂರ್ಣವಾಗಿ ಪರಿಸರದ ನಡುವೆ ಕಳೆದರು. ‘ಪರಿಸರ ಉಳಿಸಿ’-ಅದು ಮಾತ್ರ ನಿಮ್ಮನ್ನು ಉಳಿಸುತ್ತದೆ ಎಂಬ ಜೀವ ಮಂತ್ರವನ್ನು ಹೇಳಿಕೊಟ್ಟ ಮಹಾನ್ ಜೀವಿ ಇವರು.
ಪರಿಸರ ನಾಶಕ್ಕೆ ಕಾರಣವಾಗುವ ಯಾವುದೇ ಯೋಜನೆಗಳನ್ನು ಬಹುಗುಣ ಅವರು ಖಡಾಖಂಡಿತವಾಗಿ ವಿರೋಧಿಸುತ್ತಿದ್ದರು. ತಮ್ಮದೇ ದಾರಿಯಲ್ಲಿ ಆ ವಿರೋಧವನ್ನು ವ್ಯಕ್ತ ಪಡಿಸುತ್ತಿದ್ದರು. ಉಪವಾಸ ಮಾಡುವುದಾಗಲೀ, ಮರಗಳನ್ನು ಅಪ್ಪಿಕೊಂಡಾಗಲೀ, ಪಾದಯಾತ್ರೆ ಮಾಡುವ ಮೂಲಕವಾಗಲಿ ತಮ್ಮ ಚಳುವಳಿಗಳನ್ನು ಜನರಿಗೆ ತಲುಪಿಸಿ ಅವರಲ್ಲಿ ಜಾಗೃತಿಯನ್ನು ಮೂಡಿಸುವ ಕೆಲಸ ಮಾಡುತ್ತಿದ್ದರು. ಪ್ರತಿಭಟನೆ ಮಾಡುವ ಅವರ ಸಾಮರ್ಥ್ಯ ೯೦ರ ಹರೆಯದಲ್ಲೂ ಕಮ್ಮಿಯಾಗಿರಲಿಲ್ಲ. ಅದಕ್ಕೆ ಸಾಕ್ಷಿಯೆಂದರೆ ಗಂಗಾ ನದಿಗೆ ಅಡ್ಡವಾಗಿ ಟೆಹರಿಯಲ್ಲಿ ಅಣೆಕಟ್ಟು ನಿರ್ಮಾಣ ಮಾಡುವ ಯೋಜನೆಗೆ ವಿರುದ್ಧವಾಗಿ ಇವರು ಮಾಡಿದ ಪ್ರತಿಭಟನೆ. ಒಮ್ಮೆ ೭೪ ದಿನ ಮತ್ತೊಮ್ಮೆ ೪೫ ದಿನಗಳ ಉಪವಾಸ ಸತ್ಯಾಗ್ರಹ ಮಾಡಿದ್ದರು.
ಸುಂದರಲಾಲ್ ಬಹುಗುಣ ಇವರು ೧೯೨೭ರ ಜನವರಿ ೯ರಂದು ಉತ್ತರಾಖಂಡ (ಹಿಂದಿನ ಉತ್ತರ ಪ್ರದೇಶ) ರಾಜ್ಯದ ತೆಹ್ರಿ ಬಳಿಯ ಮರೋಡ ಎಂಬ ಗ್ರಾಮದಲ್ಲಿ ಜನಿಸಿದರು. ಇವರ ಬಾಲ್ಯವು ಕಳೆದದ್ದೇ ಸುಂದರವಾದ ಹಸಿರು ಪರಿಸರದ ನಡುವೆ. ಈ ಕಾರಣದಿಂದ ಪ್ರಕೃತಿಯ ಮೇಲೆ ನಡೆಯುವ ಯಾವುದೇ ದೌರ್ಜನ್ಯವನ್ನು ಇವರು ಖಂಡಿಸುತ್ತಿದ್ದರು. ತಮ್ಮ ಹದಿಮೂರನೆಯ ವಯಸ್ಸಿನಲ್ಲಿಯೇ ಇವರು ಟೆಹರಿ ಎಂಬ ಊರಿನಲ್ಲಿ ಬ್ರಿಟೀಷರ ವಿರುದ್ಧ ಚಳುವಳಿಯನ್ನು ನಡೆಸಿದ್ದರು. ಸ್ವಾತಂತ್ರ್ಯದ ನಂತರ ಇವರಿಗೆ ಕೇಂದ್ರದಲ್ಲಿ ಮಂತ್ರಿಯಾಗುವ ಅವಕಾಶ ಹಾಗೂ ರಾಜ್ಯದ ಮುಖ್ಯಮಂತ್ರಿಯಾಗುವ ಅವಕಾಶವಿದ್ದರೂ ಅವರು ಅದನ್ನು ಸ್ವೀಕರಿಸಲಿಲ್ಲ. ಜನರಿಗಾಗಿ ಇರುವ ಜನಪರ ಹೋರಾಟಗಳಿಗೆ ಅವರು ತಮ್ಮ ಜೀವನವನ್ನು ಮೀಸಲಾಗಿಟ್ಟರು. ಇದಕ್ಕೆ ಬಹಳಷ್ಟು ಸಹಕಾರ ನೀಡಿದ್ದು ಇವರ ಪತ್ನಿಯಾದ ವಿಮಲಾ ಅವರು. ಇವರ ಸಕಲ ಹೋರಾಟಗಳಿಗೆ ಪ್ರೇರಣಾಶಕ್ತಿ ನನ್ನ ಪತ್ನಿಯೇ ಎಂದು ಸುಂದರಲಾಲ್ ಅವರೇ ಬಹಳಷ್ಟು ಕಡೆ ಹೇಳಿಕೊಂಡಿದ್ದಾರೆ. ಆ ಕಾರಣದಿಂದಲೇ ಅವರು ರಾಜಕೀಯ ರಂಗದಿಂದ ವಿಮುಖರಾಗಿ ವಿನೋಬಾ ಹಾಗೂ ಗಾಂಧೀಜಿಯವರ ಚಿಂತನೆಗಳನ್ನು ತಮ್ಮಲ್ಲಿ ಮೈಗೂಡಿಸಿಕೊಂಡರು. ಮದ್ಯ ವಿರೋಧಿ ಆಂದೋಲನ, ದಲಿತರ ಏಳಿಗೆಗಾಗಿ, ಬಡ ಮಕ್ಕಳಿಗೆ ಶೈಕ್ಷಣಿಕ ವ್ಯವಸ್ಥೆ ಸಿಗಲು ಹೋರಾಟಗಳನ್ನು ಹಮ್ಮಿಕೊಂಡರು. ಆದರೆ ಇವರ ಹೋರಾಟದ ಬದುಕಿಗೆ ಒಂದು ಹೊಸ ಆಯಾಮ ನೀಡಿದ್ದು ಮಾತ್ರ ಚಿಪ್ಕೋ ಚಳುವಳಿ.
ಹಿಮಾಲಯದ ಅರಣ್ಯಗಳಲ್ಲಿ ನಡೆಯುತ್ತಿದ್ದ ಪರಿಸರ ನಾಶವನ್ನು ವಿರೋಧಿಸಿ ಬಹುಗುಣ ಇವರು ೧೯೭೪ರ ಮಾರ್ಚ್ ೨೬ರಂದು ಚಿಪ್ಕೋ ಆಂದೋಲನವನ್ನು ಪ್ರಾರಂಭಿಸಿದರು. ಚಿಪ್ಕೋ ಹೆಸರೇ ಹೇಳುವಂತೆ ಹಿಂದಿಯಲ್ಲಿ ಅರ್ಥ ‘ಅಪ್ಪಿಕೋ’ ಎಂದು. ಬಹುಗುಣ ಹಾಗೂ ಇವರ ಆಂದೋಲನದ ಸ್ವಯಂ ಸೇವಕರು ಕಡಿಯುತ್ತಿದ್ದ ಮರಗಳ ಸುತ್ತ ನಿಂತು ಅದನ್ನು ಅಪ್ಪಿಕೊಂಡರು. ಮರಗಳನ್ನು ಕಡಿಯದಂತೆ ಅದನ್ನು ಸುತ್ತುವರಿದರು. ಅರಣ್ಯನಾಶವನ್ನು ವಿರೋಧಿಸಿ ಬಹುಗುಣ ಇವರು ಮೂರು ವರ್ಷಗಳ ಕಾಲ ಕಾಶ್ಮೀರದ ಶ್ರೀನಗರದಿಂದ ನಾಗಾಲ್ಯಾಂಡಿನ ಕೊಹಿಮಾದವರೆಗೆ ಸುಮಾರು ೫೦೦೦ ಕಿ.ಮೀ. ದೂರದವರೆಗೆ ಪಾದಯಾತ್ರೆಯನ್ನು ಮಾಡಿದರು. ಈ ಪಾದಯಾತ್ರೆಯು ಹಲವಾರು ಮಂದಿಯ ಕಣ್ಣು ತೆರೆಸಿತು. ಅರಣ್ಯ ನಾಶ ಕಮ್ಮಿಯಾಯಿತು.
ಈ ಆಂದೋಲನವು ಕರ್ನಾಟಕದಲ್ಲೂ ‘ಅಪ್ಪಿಕೋ’ ಚಳುವಳಿಯಾಗಿ ರೂಪುಗೊಂಡಿತು. ಖುದ್ದು ಬಹುಗುಣ ಅವರೇ ಕರ್ನಾಟಕದ ಮಲೆನಾಡಿಗೆ ಬಂದು ಸಿರಸಿ, ದಕ್ಷಿಣ ಕನ್ನಡ, ಶಿವಮೊಗ್ಗ, ಕೊಡಗು ಮೊದಲಾದ ಪ್ರದೇಶದ ಕಾಡಿನ ಭಾಗದಲ್ಲಿ ಸಂಚರಿಸಿ ಜಾಗೃತಿ ಮೂಡಿಸಿದ ಬಳಿಕ ರಾಜ್ಯದ ಅರಣ್ಯ ನೀತಿಗಳಲ್ಲಿ ಮಹತ್ತರ ಬದಲಾವಣೆಗಳು ಸಂಭವಿಸಿದವು.
ಸುಂದರಲಾಲ್ ಬಹುಗುಣ ಅವರು ತಮ್ಮ ಪತ್ನಿ ವಿಮಲಾ ಜೊತೆಗೂಡಿ ನವಜೀವನ ಆಶ್ರಮವನ್ನು ಸ್ಥಾಪಿಸಿದ್ದರು. ಪರಿಸರ ಸಂರಕ್ಷಣೆಯ ಜೊತೆಗೆ ಇನ್ನಿತರ ಸಮಾಜಮುಖಿ ಕಾರ್ಯಗಳನ್ನು ಮಾಡುವುದೇ ಇದರ ಧ್ಯೇಯೋದ್ದೇಶವಾಗಿತ್ತು. ಗಂಗಾ ನದಿಯ ತಟದ ಸಮೀಪ ಗುಡ್ಡದ ಮೇಲಿರುವ ಈ ಆಶ್ರಮದ ಪರಿಸರವೇ ಬಹಳ ಸುಂದರವಾಗಿತ್ತು ಎಂದು ಹೇಳುತ್ತಾರೆ ಅವರ ಜೊತೆ ಹಲವಾರು ವರ್ಷಗಳನ್ನು ಕಳೆದ ಖ್ಯಾತ ಪರಿಸರವಾದಿ, ಕನ್ನಡಿಗ ಪಾಂಡುರಂಗ ಹೆಗಡೆಯವರು. ಇವರು ಪ್ರಸ್ತುತ ಸಿರಸಿಯ ಪರಿಸರ ಸಂರಕ್ಷಣಾ ಕೇಂದ್ರದ ಮುಖ್ಯಸ್ಥರೂ ಆಗಿದ್ದಾರೆ. ಬಹುಗುಣ ಅವರ ಜೊತೆಗೆ ಚಿಪ್ಕೋ ಚಳುವಳಿಯ ಸಮಯದ ಪಾದಯಾತ್ರೆಯಲ್ಲೂ ಇವರು ಭಾಗವಹಿಸಿದ್ದರು. ಬಹುಗುಣ ಅವರನ್ನು ಹತ್ತಿರದಿಂದ ಕಂಡಿದ್ದಾರೆ. ಖ್ಯಾತ ಪರಿಸರ ಹೋರಾಟಗಾರ್ತಿ ವಂದನಾ ಶಿವ ಇವರೂ ನವಜೀವನ ಆಶ್ರಮದ ಮೂಲಕವೇ ತಮ್ಮ ಹೋರಾಟದ ಬದುಕನ್ನು ಕಂಡುಕೊಂಡವರು.
ಅರಣ್ಯದ ಉಳಿಯುವಿಕೆಯ ಪ್ರಯೋಜನಗಳನ್ನು ಬಹುಗುಣ ಅವರು ಸೊಗಸಾಗಿ ವರ್ಣಿಸುತ್ತಾರೆ. ಮೊದಲಿಗೆ ನಾವು ಉಸಿರಾಡುವ ಪ್ರಾಣವಾಯು, ನೀರು, ಮಣ್ಣು, ಅರಣ್ಯದಲ್ಲಿನ ಉತ್ಪನ್ನಗಳು, ಕಾಡಿನಲ್ಲಿರುವ ಪ್ರಾಣಿ, ಪಕ್ಷಿಗಳು ಎಲ್ಲವೂ ಮಾನವನ ಜೀವನಕ್ಕೆ ಅತ್ಯಂತ ಉಪಯುಕ್ತವಾದವುಗಳು. ಇದರಲ್ಲಿಯ ಯಾವುದೇ ಅಂಶ ಇಲ್ಲವೆಂದಾದಲ್ಲಿ ನಮ್ಮ ಜೀವನ ಸಂಕಷ್ಟಕ್ಕೆ ಸಿಲುಕುತ್ತದೆ. ಇವರ ಪ್ರಕಾರ ನೀವು ಯಾವುದೇ ಹೋರಾಟ ಮಾಡುವುದಾದರೆ ಕೈಯಲ್ಲಿ ಹಣವನ್ನು ಮುಟ್ಟಬಾರದು, ಯಾರ ಬಳಿಯೂ ಹಣ ಕೇಳಬಾರದು. ನೀವು ಪಾದಯಾತ್ರೆ ಮಾಡುತ್ತಿದ್ದರೆ ಜನರು ತಿನ್ನಲು ಕೊಟ್ಟದ್ದನ್ನು ಮಾತ್ರ ತೆಗೆದುಕೊಳ್ಳಬೇಕು. ಅವರಾಗಿಯೇ ಆಶ್ರಯ ನೀಡಿದರೆ ಮಾತ್ರ ಉಳಿದುಕೊಳ್ಳಬೇಕು. ನಾವಾಗಿಯೇ ಯಾವುದನ್ನೂ ಕೇಳಬಾರದು ಎನ್ನುವುದು ಅವರ ಧ್ಯೇಯವಾಗಿತ್ತು. ಹೇಳಿದ ಹಾಗೆಯೇ ಬದುಕಿ ತೋರಿಸಿದರು ಬಹುಗುಣ ಇವರು.
ಪತ್ರಿಕೆಗಳಿಗೆ ವರದಿಗಾರನಾಗಿ, ಹಲವಾರು ಇಂಗ್ಲಿಷ್ ಹಾಗೂ ಹಿಂದಿ ಪತ್ರಿಕೆಗಳಿಗೆ ಲೇಖನಗಳನ್ನು ಬರೆದಿದ್ದಾರೆ. ಸಾವಿರಾರು ಲೇಖನಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ನೊಬೆಲ್ ಪುರಸ್ಕಾರಕ್ಕೆ ಸಮವಾದ ‘ರೈಟ್ ಲೈವ್ಲೀ ಹುಡ್’ ಪ್ರಶಸ್ತಿ ಇವರಿಗೆ ದೊರೆತಿದೆ. ೧೯೮೧ರಲ್ಲಿ ಇವರಿಗೆ ಪದ್ಮಶ್ರೀ ಪ್ರಶಸ್ತಿ ಸಿಕ್ಕರೂ ಅವರು ಅದನ್ನು ನಿರಾಕರಿಸಿದ್ದರು. ನಂತರ ೨೦೦೯ರಲ್ಲಿ ಅವರಿಗೆ ಪದ್ಮವಿಭೂಷಣ ಪ್ರಶಸ್ತಿ ಹುಡುಕಿಕೊಂಡು ಬಂತು. ಇವರು ಹಲವಾರು ಪುಸ್ತಕಗಳನ್ನೂ ಬರೆದಿದ್ದಾರೆ.
ಬಿಳಿಯ ಹಾಲಿನ ಬಣ್ಣದ ಗಡ್ಡ, ಮಗುವಿನ ನಗು ಹಾಗೂ ನಿಷ್ಕಳಂಕ ವ್ಯಕ್ತಿತ್ವದ ಸುಂದರಲಾಲ್ ಬಹುಗುಣ ಅವರು ಮೇ ೨೧, ೨೦೨೧ರಂದು ನಿಧನ ಹೊಂದಿದರು. ದೇಶದ ಅರಣ್ಯ ನಾಶದ ಬಗ್ಗೆ ದೊಡ್ಡದಾದ ದನಿಯೆತ್ತಿ, ಹೋರಾಟವೇ ಬದುಕು ಮಾಡಿಕೊಂಡ ಪರಿಸರವಾದಿ ಇಂದು ನಮ್ಮ ಜೊತೆ ಇಲ್ಲ. ಆದರೆ ಅವರು ಬಿಟ್ಟು ಹೋದ ಉದಾತ್ತ ಚಿಂತನೆ, ಸರಳತೆ ಹಾಗೂ ಹೋರಾಟದ ಬದುಕನ್ನು ಮುಂದುವರೆಸಿಕೊಂಡು ಹೋಗಬೇಕಾದ ಬಹು ದೊಡ್ಡ ಜವಾಬ್ದಾರಿ ನಮ್ಮ ಮೇಲಿದೆ.
ಚಿತ್ರದಲ್ಲಿ ಚಿಪ್ಕೋ ಚಳುವಳಿಯ ದೃಶ್ಯ (ಅಂತರ್ಜಾಲ ತಾಣದ ಕೃಪೆ)