ಚಿರನಿದ್ರೆಗೆ ಜಾರಿದ ಮಹಾನ್ ವಿದ್ವಾಂಸ - ಬನ್ನಂಜೆ ಗೋವಿಂದಾಚಾರ್ಯ

ಚಿರನಿದ್ರೆಗೆ ಜಾರಿದ ಮಹಾನ್ ವಿದ್ವಾಂಸ - ಬನ್ನಂಜೆ ಗೋವಿಂದಾಚಾರ್ಯ

‘ವಿದ್ಯಾವಾಚಸ್ಪತಿ' ಬನ್ನಂಜೆ ಗೋವಿಂದಾಚಾರ್ಯರು ಇನ್ನಿಲ್ಲ ಎಂಬ ಸುದ್ದಿಯನ್ನು ಏಕೋ ಅರಗಿಸಿಕೊಳ್ಳಲಾಗುತ್ತಿಲ್ಲ. ಅವರ ವಿದ್ವತ್ ಪೂರ್ಣ ನುಡಿಗಳು ಇನ್ನೂ ಕಿವಿಯಲ್ಲಿ ರಿಂಗಣಿಸುತ್ತಿದೆಯೋ ಎಂದು ಅನಿಸುತ್ತಿದೆ. ಸ್ವಲ್ಪ ದಿನಗಳ ಹಿಂದೆಯಷ್ಟೇ ಗೋವಿಂದಾಚಾರ್ಯರು ತಮ್ಮ ಪುತ್ರನನ್ನು ಕಳೆದುಕೊಂಡಿದ್ದರು. 'ಪುತ್ರ ಶೋಕಂ ನಿರಂತರಂ’ ಎನ್ನುತ್ತಾರೆ. ಬಹುಷಃ ಇದೂ ಬನ್ನಂಜೆಯವರ ನಿಧನಕ್ಕೆ ಕಾರಣವಾಯಿತೇ? ಎನ್ನುವ ನೋವು ಎಲ್ಲರಲ್ಲೂ ಕಾಡುತ್ತಿದೆ. ಆದರೂ ೮೪ ವರ್ಷಗಳ ತುಂಬು ಬದುಕನ್ನು ಅತ್ಯಂತ ವಿದ್ವತ್ ಪೂರ್ಣ ಹಾಗೂ ಧಾರ್ಮಿಕ ಜಾಗೃತ ಪ್ರಜ್ಞೆಯೊಂದಿಗೆ ಬದುಕಿದ ಮಹಾನ್ ವಿದ್ವಾಂಸ ಬನ್ನಂಜೆ ಗೋವಿಂದಾಚಾರ್ಯರು. ಅವರಿಗೊಂದು ನುಡಿ ನಮನ.

ಆಗಸ್ಟ್ ೩, ೧೯೩೬ರಲ್ಲಿ ಪಡುಮನ್ನೂರು ನಾರಾಯಣಾಚಾರ್ಯರ ಪುತ್ರರಾಗಿ ಜನಿಸಿದರು. ಇವರ ತಂದೆಯವರಾದ ನಾರಾಯಣಾಚಾರ್ಯರು ‘ತರ್ಕ ಕೇಸರಿ' ಎಂಬ ಬಿರುದಾಂಕಿತ ಶ್ರೇಷ್ಟ ವಿದ್ವಾಂಸರಾಗಿದ್ದರು. ಬಾಲ್ಯದಿಂದಲೇ ತಮ್ಮ ತಂದೆಯವರಿಂದ ಶಾಸ್ತ್ರಗಳ ಅಭ್ಯಾಸವನ್ನು ಅರಿತು, ನಂತರ ತಮ್ಮದೇ ಆದ ಸ್ವ ಅಧ್ಯಯನಗಳಿಂದ ಜ್ಞಾನವನ್ನು ಸಂಪಾದಿಸಿದ ಮಹನೀಯರು ಇವರು. ಇವರು ಬಾಲ್ಯದಲ್ಲಿ ಶಾಲೆಗೆ ಹೋದಾಗ ಅಲ್ಲಿಯ ಶಿಕ್ಷಣದ ಮಟ್ಟವನ್ನು ನೋಡಿ ‘ಇದು ನನಗೆ ಸರಿಹೊಂದುವುದಿಲ್ಲ’ ಎಂದು ನಿರ್ಧರಿಸಿ ತಾವೇ ಸ್ವಯಂ ಶಿಕ್ಷಣ ವ್ಯವಸ್ಥೆಯನ್ನು ಅಳವಡಿಸಿಕೊಂಡಿದ್ದರು. ಅಂದಿನ ಶಿಕ್ಷಣ ವ್ಯವಸ್ಥೆಗೂ ಇಂದಿಗೂ ಬಹಳವೇನೂ ಬದಲಾವಣೆ ಆದಂತಿಲ್ಲ. ಮಕ್ಕಳಿಗೆ ಪುಸ್ತಕದ ಬದನೇಕಾಯಿಯನ್ನು ಕಲಿಸುವುದರ ಹೊರತಾದ ಶಿಕ್ಷಣ ಈಗಲೂ ಸಿಗುತ್ತಿಲ್ಲ. ಆ ಸಮಯ ಬನ್ನಂಜೆಯವರು ಶಾಲೆ ತ್ಯಜಿಸಿದಾಗ ಒಂದು ಪ್ರತಿಜ್ಞೆ ಮಾಡಿದ್ದರಂತೆ. ‘ಇನ್ನೆಂದೂ ಶಾಲೆ ಮೆಟ್ಟಲು ಹತ್ತುವುದಿಲ್ಲ. ಹತ್ತುವುದಾದರೆ ಕಾಲೇಜು ವಿದ್ಯಾರ್ಥಿಗಳಿಗೆ ಕಲಿಸುವುದಕ್ಕೆ' ಎಂದು ಅವರು ಮಾಡಿದ ನಿರ್ಧಾರವನ್ನು ಮುಂದಿನ ದಿನಗಳಲ್ಲಿ ಅವರು ನೆರವೇರಿಸಿಕೊಂಡರು. 

ಬಾಲ್ಯದಲ್ಲಿ ಇವರು ವಿವಿಧ ಮಠಾಧೀಶರಿಂದ ಜೀವನ ಮೌಲ್ಯದ ಬಗ್ಗೆ ಹಾಗೂ ವೈದಿಕ ಶಿಕ್ಷಣವನ್ನು ಪಡೆದುಕೊಂಡರು. ಪಲಿಮಾರು- ಭಂಡಾರಕೇರಿ ದ್ವಂದ್ವ ಮಠಾಧೀಶರಾಗಿದ್ದ ಶ್ರೀ ವಿದ್ಯಾಮಾನ್ಯ ತೀರ್ಥರು ಹಾಗೂ ಕಾಣಿಯೂರು ಮಠದ ಶ್ರೀ ವಿದ್ಯಾಸಮುದ್ರ ತೀರ್ಥರಿಂದ ಜ್ಞಾನಾರ್ಜನೆಯನ್ನು ಮಾಡಿಕೊಂಡರು. ಇವರು ಬನ್ನಂಜೆಯವರ ಸಂಶೋಧನಾ ಪ್ರವೃತ್ತಿಗೆ ಹಾಲೆರೆದು ಬೆಳೆಸಿದರು. ಬಾಲ್ಯದಿಂದಲೇ ಆಸಕ್ತಿದಾಯಕ ಲೇಖನಗಳನ್ನು ಬರೆಯುವುದರಲ್ಲಿ ಬನ್ನಂಜೆಯವರು ಸೈ ಎನಿಸಿಕೊಂಡಿದ್ದರು. 

ಬನ್ನಂಜೆಯವರು ಸಾಂಪ್ರದಾಯಿಕ ಕುಟುಂಬದಲ್ಲಿ ಜನಿಸಿದರೂ ಜಾಲ್ಯದಿಂದಲೂ ಇವರು ಪ್ರತಿಯೊಂದು ವಿಷಯವನ್ನು ಚಿಕಿತ್ಸಕ ಹಾಗೂ ಸಂಶೋಧನಾತ್ಮಕ ದೃಷ್ಟಿಯಿಂದಲೇ ನೋಡುತ್ತಿದ್ದರಂತೆ. ಇದು ಹಲವಾರು ಸಂಪ್ರದಾಯಸ್ಥ ವ್ಯಕ್ತಿಗಳ ಟೀಕೆಗೂ ಗುರಿಯಾದರೂ ಬನ್ನಂಜೆಯವರು ತಮ್ಮ ದೃಷ್ಟಿಕೋನವನ್ನು ಎಂದೂ ಬದಲಾಯಿಸಲಿಲ್ಲ. ಇವರ ಈ ಗುಣವನ್ನು ಬಹುವಾಗಿ ಮೆಚ್ಚಿಕೊಂಡವರು ಕಾಣಿಯೂರು ಮಠದ ಮಠಾಧೀಶರಾಗಿದ್ದ ಶ್ರೀ ವಿದ್ಯಾಸಮುದ್ರ ತೀರ್ಥರು. ಕೆಲವೊಂದು ವಿಷಯಗಳ ಬಗ್ಗೆ ಪಂಡಿತರ ಬಳಿಯೂ ತರ್ಕ ಮಾಡಿ ಕಾಣಿಯೂರು ಶ್ರೀಗಳಿಂದ ಸೈ ಎನಿಸಿಕೊಂಡಿದ್ದರು ಬನ್ನಂಜೆಯವರು. ಆ ಸಮಯ ಬನ್ನಂಜೆಯವರು ಹದಿಹರೆಯದ ಯುವಕ. ಇವರ ಈ ವಿದ್ವತ್ ಗುಣಗಳನ್ನು ಆಗಲೇ ಗುರುತಿಸಿ ಮೆಚ್ಚಿಕೊಂಡ ಕಾಣಿಯೂರು ಶ್ರೀಗಳು ಅವರನ್ನು ತಮ್ಮ ಎದುರುಗಡೆಯೇ ಭೋಜನಕ್ಕೆ ಕುಳ್ಳಿರಿಸಿ, ಬೆನ್ನು ತಟ್ಟಿದ್ದರಂತೆ.    

ಸಂಸ್ಕೃತ ಭಾಷೆಯಲ್ಲಿ ಬರುವ ವ್ಯಾಕರಣ, ಛಂದಸ್ಸು ಗಳ ಕುರಿತು ಇವರಿಗೆ ಅಪಾರ ಜ್ಞಾನವಿತ್ತು. ಇವರ ಕನ್ನಡ ಭಾಷಾ ಜ್ಞಾನವೂ ಉನ್ನತ ಮಟ್ಟದ್ಧಾಗಿತ್ತು. ಆ ಕಾರಣದಿಂದಲೇ ಗೋವಿಂದಾಚಾರ್ಯರ ಅನುವಾದಗಳು ಯಾವತ್ತೂ ಅನುವಾದ ಎಂದು ಅನಿಸುವುದೇ ಇಲ್ಲ. ಅಷ್ಟು ಸೊಗಸಾದ ಭಾಷಾ ಹಿಡಿತವನ್ನು ಬನ್ನಂಜೆಯವರು ಹೊಂದಿದ್ದರು. ಅದಕ್ಕೆ ಉದಾಹರಣೆಯೆಂದರೆ ಸಂಸ್ಕೃತದಲ್ಲಿ ಬಾಣ ಭಟ್ಟನು ಬರೆದ ಕಾದಂಬರಿಯ ಅನುವಾದ. ಈ ಕಾದಂಬರಿಯನ್ನು ಬನ್ನಂಜೆಯವರು ಅತ್ಯಂತ ಸುಲಲಿತವಾಗಿ ಓದುವಂತೆ ಕನ್ನಡಕ್ಕೆ ಅನುವಾದ ಮಾಡಿದ್ದಾರೆ. 

ಗೋವಿಂದಾಚಾರ್ಯರು ಕನ್ನಡ ಹಾಗೂ ಸಂಸ್ಕೃತದಲ್ಲಿ ಸುಮಾರು ೫೦ ಕ್ಕೂ ಅಧಿಕ ಅನುವಾದ, ಟಿಪ್ಪಣಿ, ಸ್ವತಂತ್ರ ಗ್ರಂಥಗಳನ್ನು ಹೊರತಂದಿದ್ದಾರೆ. ಅವರು ಸಂಸ್ಕೃತದಲ್ಲಿ ರಚಿಸಿದ ಗ್ರಂಥಗಳಾದ ಉಪನಿಷತ್ ಭಾವಚಂದ್ರಿಕೆ, ಮಹಾಭಾರತ ತಾತ್ಪರ್ಯ ನಿರ್ಣಯ, ಶತರುದ್ರೀಯ ಮೊದಲಾದುವುಗಳು ಸಾರಸ್ವತ ಲೋಕದ ಕೊಹಿನೂರ್ ವಜ್ರಕ್ಕೆ ಸಮ. ಏಕೆಂದರೆ ಶತಶತಮಾನದಲ್ಲಿ ಇಂತಹ ಕೃತಿ ರಚನೆ ಮಾಡಿದವರು ಅತ್ಯಂತ ವಿರಳ ಎಂದು ಬಲ್ಲವರ ಅಭಿಪ್ರಾಯ. ಇವರು ಸಾಹಿತ್ಯ ಮತ್ತು ವೇದಾಂತ ಎರಡೂ ಕ್ಷೇತ್ರಗಳಲ್ಲಿ ಸಮಾನವಾದ ಆಸಕ್ತಿಯನ್ನು ಹೊಂದಿದ್ದರು. ಮೃಚ್ಛಕಟಿಕ, ಉತ್ತರರಾಮ ಚರಿತೆ, ಶಾಕುಂತಳಾದಂತಹ ಉನ್ನತ ಕೃತಿಗಳನ್ನು ಅನುವಾದ ಮಾಡಿದ್ದಾರೆ. ಬನ್ನಂಜೆಯವರು ಹದಿಮೂರು ಶತಮಾನದಲ್ಲಿ ಶ್ರೀ ಮಧ್ವಾಚಾರ್ಯರ ನೇರ ಶಿಷ್ಯರಾದ ಶ್ರೀ ಹೃಷಿಕೇಶ ತೀರ್ಥರು ರಚಿಸಿದ್ದ ಮಧ್ವಾಚಾರ್ಯರ ವ್ಯಾಖ್ಯಾನಗಳನ್ನು ಸುಮಾರು ೨೦೦೦ ಪುಟಗಳಷ್ಟು ಸುದೀರ್ಘವಾದ ಗ್ರಂಥದ ರೂಪದಲ್ಲಿ ಓದುಗರಿಗೆ ಕೊಡುಗೆಯಾಗಿ ನೀಡಿದ್ದಾರೆ. ಮಧ್ವಾಚಾರ್ಯರ ಹಲವಾರು ವಿದ್ವತ್ ಪೂರ್ಣ ಕೃತಿಗಳೂ ಸಹ ಈ ಗ್ರಂಥದ ಭಾಗವಾಗಿವೆ. ಅವರ ‘ಆಚಾರ್ಯ ಮಧ್ವ : ಬದುಕು ಬರಹ' ಕೃತಿಯನ್ನು ರಾಷ್ಟ್ರಕವಿ ಗೋವಿಂದ ಪೈ ಪ್ರತಿಷ್ಟಾನವು ಪ್ರಕಟಿಸಿದೆ. ದ.ರಾ.ಬೇಂದ್ರೆಯವರಂಥಹ ಮೇರು ಕವಿಗಳೂ ಬನ್ನಂಜೆ ಗೋವಿಂದಾಚಾರ್ಯರ ವಿದ್ವತ್ ಶಕ್ತಿಗೆ ಮಾರು ಹೋಗಿದ್ದರು. ಬನ್ನಂಜೆಯವರ ಜ್ಞಾನ ಕೇವಲ ಕಾವ್ಯ, ಅನುವಾದ, ತರ್ಕಗಳಲ್ಲ ಅವರು ಪತ್ರಿಕೆಯ ಪುರವಣಿ ಸಂಪಾದಕರಾಗಿದ್ದ ಸಮಯದಲ್ಲಿ ಸಿನೆಮಾ ಸುದ್ದಿಗಳನ್ನೂ ಬರೆಯುತ್ತಿದ್ದರಂತೆ. ಜಿ.ವಿ. ಅಯ್ಯರ್ ಅವರಂತಹ ಸಿನೆಮಾ ದಿಗ್ಗಜರ ಜೊತೆ ಬನ್ನಂಜೆಯವರ ಒಡನಾಟವಿತ್ತು. ಪ್ರಸಿದ್ಧ ನಟ ವಿಷ್ಣುವರ್ಧನ್ ಅವರ ಆಧ್ಯಾತ್ಮಿಕ ಗುರುವೂ ಆಗಿದ್ದರು. ವಿಷ್ಟುವರ್ಧನ್ ತಮ್ಮ ಪತ್ನಿ ಭಾರತಿಯವರ ಜೊತೆ ಹಲವಾರು ಬಾರಿ ಉಡುಪಿಯ ಅಂಬಲಪಾಡಿಯಲ್ಲಿರುವ ಗೋವಿಂದಾಚಾರ್ಯರ ನಿವಾಸಕ್ಕೂ ಭೇಟಿ ನೀಡಿದ್ದರು. 

‘ಉದಯವಾಣಿ' ದಿನ ಪತ್ರಿಕೆಯ ಆರಂಭದ ಎರಡು ದಶಕಗಳಲ್ಲಿ ಅವರು ‘ಸಾಪ್ತಾಹಿಕ'ಪುರವಣಿಯ ಸಂಪಾದಕರಾಗಿದ್ದರು. ಆ ಸಮಯ ಅವರು ಬಹುತೇಕ ನಿಂತೇ ಹೋಗಿದ್ದ ಸಂಸ್ಕೃತ ವ್ಯಾಖ್ಯಾನ ಪರಂಪರೆಗೆ ಮರು ಜೀವ ಕೊಟ್ಟಿದ್ದರು. ಉದಯವಾಣಿಯನ್ನು ಕಟ್ಟಿಬೆಳೆಸುವಲ್ಲಿ ಗೋವಿಂದಾಚಾರ್ಯರ ಪಾತ್ರವೂ ಮಹತ್ವದಾಗಿತ್ತು. ವರದಿಗಾರರು ಕಳುಹಿಸುತ್ತಿದ್ದ ವರದಿಗಳನ್ನು ಸೊಗಸಾಗಿ ಓದುಗರಿಗೆ ಇಷ್ಟವಾಗುವಂತೆ ಮರು ರಚನೆ ಮಾಡಿ ಪ್ರಕಟಣೆಗೆ ಕಳುಹಿಸುತ್ತಿದ್ದರಂತೆ. ೧೯೯೩ರಲ್ಲಿ ಬ್ರಹ್ಮಾವರದಲ್ಲಿ ನಡೆದ ಉಡುಪಿ ತಾಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಹಾಗೂ ೨೦೦೦ರಲ್ಲಿ ಉಡುಪಿಯ ಎಂಜಿಎಂ ಕಾಲೇಜಿನಲ್ಲಿ ನಡೆದ ಉಡುಪಿ ಜಿಲ್ಲಾ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ಇವರು ವಹಿಸಿದ್ದರು. ಉಡುಪಿಯವರಾದರೂ ಬನ್ನಂಜೆಯವರಿಗೆ ದೇಶವಿದೇಶಗಳಲ್ಲಿ ಅಭಿಮಾನಿ ಬಳಗವಿತ್ತು. ಅವರ ಉಪನ್ಯಾಸದ ಖ್ಯಾತಿ ವಿದೇಶಗಳಲ್ಲೂ ವ್ಯಾಪಿಸಿತ್ತು. ಅಂತರ್ಜಾಲದ ಮೂಲಕ ನೇರವಾಗಿ ಅವರು ಎಲ್ಲೆಡೆಯ ತನ್ನ ಅಭಿಮಾನಿಗಳಿಗೆ ಉಪನ್ಯಾಸ ನೀಡುತ್ತಿದ್ದರು. ಅವರ ಈ ಉಪನ್ಯಾಸಗಳು ಬಹಳ ಪ್ರಖ್ಯಾತಿ ಪಡೆದಿದ್ದವು. ಇವರು ರಾಮಾಯಣ, ಮಹಾಭಾರತ, ವೇದ-ಉಪನಿಷತ್ತುಗಳ ಬಗ್ಗೆ ಸುಮಾರು ೨೬,೦೦೦ ಗಂಟೆಗಳಷ್ಟು ಅವಧಿಯ ಉಪನ್ಯಾಸಗಳನ್ನು ನೀಡಿರುವುದು ಒಂದು ದಾಖಲೆಯೇ ಸರಿ.ಇವರ ಹಲವಾರು ಕೃತಿಗಳು ಹೊರಬರಲು ಇನ್ನೂ ಬಾಕಿಯಿವೆ. ಅದರಲ್ಲಿ ಪ್ರಮುಖವಾದದ್ದು ಪಲಿಮಾರು ಮಠದ ಐದನೇ ಯತಿ ಶ್ರ್ರಿ ರಾಜರಾಜೇಶ್ವರ ತೀರ್ಥರ ಅಮೂಲ್ಯ ಕೃತಿ ‘ರಾಮ ಸಂದೇಶ' ವನ್ನು ಕನ್ನಡಕ್ಕೆ ಬನ್ನಂಜೆಯವರು ಅನುವಾದಿಸಿದ್ದಾರೆ. ಮುದ್ರಣ ಮಾತ್ರ ಬಾಕಿಯಿದೆ.  

ಇವರು ಶಾಲಾ ಕಾಲೇಜಿಗೆ ಹೋಗಿ ಯಾವುದೇ ಪದವಿಯನ್ನು ಪಡೆಯದಿದ್ದರೂ ಗೌರವ ಡಾಕ್ಟರೇಟ್ ಪದವಿ (ಮಂಗಳೂರು ವಿ.ವಿ.) ಇವರನ್ನು ಹುಡುಕಿಕೊಂಡು ಬಂತು. ಇವರ ವಿದ್ವತ್ ಗಮನಿಸಿದ ಕೇಂದ್ರ ಸರಕಾರ ೨೦೦೯ರಲ್ಲಿ ಪದ್ಮಶ್ರೀ ಪುರಸ್ಕಾರ ನೀಡಿ ಗೌರವಿಸಿದೆ. ಇವಿಷ್ಟೇ ಅಲ್ಲದೇ ಅವರಿಗೆ ಸಂದ ಪುರಸ್ಕಾರ, ಗೌರವಗಳು ಹಲವಾರು. ಕರ್ನಾಟಕ ಸರಕಾರದ ರಾಜ್ಯೋತ್ಸವ ಪ್ರಶಸ್ತಿ, ಆಳ್ವಾಸ್ ನುಡಿಸಿರಿ ಪ್ರಶಸ್ತಿ, ಶ್ರೀ ವಿಬುಧೇಶ ತೀರ್ಥ ಶ್ರೀಪಾದರಿಂದ ‘ವಿದ್ಯಾವಾಚಸ್ಪತಿ' ಎಂಬ ಬಿರುದು, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮೊದಲಾದ ಹಲವಾರು ಪ್ರಶಸ್ತಿ- ಸನ್ಮಾನಗಳು ಇವರನ್ನು ಹುಡುಕಿಕೊಂಡು ಬಂದಿವೆ. ಇವರು ಖ್ಯಾತ ಲೇಖಕಿ ವೀಣಾ ಬನ್ನಂಜೆ ಸಹಿತ ನಾಲ್ವರು ಪುತ್ರಿಯರು ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ. 

ಪಾಂಡಿತ್ಯ ಪೂರ್ಣ ಉಪನ್ಯಾಸಗಳನ್ನು ನೀಡುತ್ತಿದ್ದ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರು ಇಂದು ಭೌತಿಕವಾಗಿ ನಮ್ಮೊಂದಿಗಿಲ್ಲದೇ ಹೋದರೂ, ಅವರು ರಚಿಸಿದ ೧೦೦ ಕ್ಕೂ ಅಧಿಕ ಗ್ರಂಥಗಳು ಮತ್ತು ಅವರ ಉಪನ್ಯಾಸ ಮಾಲಿಕೆಗಳು ಸದಾ ಕಾಲ ನಮ್ಮ ಜೊತೆಗಿರುತ್ತವೆ. ಇವರು ಸಂಸ್ಕೃತ ಹಾಗೂ ಕನ್ನಡ ಸಾಹಿತ್ಯಕ್ಕೆ ನೀಡಿದ ಕೊಡುಗೆಗಳೂ ಅಜರಾಮರ. ಆಧ್ಯಾತ್ಮಿಕ ಲೋಕದ ಬೃಹತ್ ಆಲದ ಮರವಾಗಿದ್ದ ಗೋವಿಂದಾಚಾರ್ಯರ ಸಾಧನೆ ಬಹಳ ಹಿರಿದಾದದ್ದು. ಅದನ್ನು ಉಳಿಸಿ ಬೆಳೆಸುವ ಕಾಯಕ ನಮ್ಮದಾಗಲಿ. ಬನ್ನಂಜೆ ಗೋವಿಂದಾಚಾರ್ಯರಿಗೊಂದು ಭಾವಪೂರ್ಣ ನಮನಗಳು.  

ಚಿತ್ರ ಕೃಪೆ : ಅಂತರ್ಜಾಲ ತಾಣ