ಚಿರಮೌನಕ್ಕೆ ಜಾರಿದ ಡಾ। ಮನಮೋಹನ್ ಸಿಂಗ್
ಭಾರತ ದೇಶವನ್ನು ಆರ್ಥಿಕ ಸುಧಾರಣೆಯ ಹಳಿಗೆ ತಂದು ನಿಲ್ಲಿಸಿದ ಧೀಮಂತ ವ್ಯಕ್ತಿ, ಮಾಜಿ ಪ್ರಧಾನಿ, ಸರಳತೆಯ ಪ್ರತೀಕವಾಗಿದ್ದ ಡಾ। ಮನಮೋಹನ್ ಸಿಂಗ್ ನಿನ್ನೆ (ಡಿಸೆಂಬರ್ ೨೬, ೨೦೨೪) ನಿಧನರಾಗಿದ್ದಾರೆ. ಸಿಂಗ್ ಅವರು ತಮ್ಮ ಬದುಕಿನ ೯೨ ವರ್ಷಗಳನ್ನು ಬಹಳ ಅರ್ಥಪೂರ್ಣವಾಗಿ ಕಳೆದಿದ್ದಾರೆ. ನೆಹರೂ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ, ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಸಲಹೆಗಾರ, ಆರ್ ಬಿ ಐ ನಿರ್ದೇಶಕ, ಮುಖ್ಯ ಆರ್ಥಿಕ ಸಲಹೆಗಾರ, ಐಡಿಬಿಐ ನ ನಿರ್ದೇಶಕ, ರಿಸರ್ವ್ ಬ್ಯಾಂಕ್ ನ ಗವರ್ನರ್, ಯೋಜನಾ ಆಯೋಗದ ಮುಖ್ಯಸ್ಥ, ವಿತ್ತ ಸಚಿವ, ರಾಜ್ಯ ಸಭೆಯಲ್ಲಿ ವಿಪಕ್ಷ ನಾಯಕ, ಪ್ರಧಾನ ಮಂತ್ರಿ ಹೀಗೆ ಹತ್ತು ಹಲವು ಹುದ್ದೆಗಳನ್ನು ಯಶಸ್ವಿಯಾಗಿ ನಿರ್ವಹಿಸಿ ಮರಳಿ ಬಾರದ ಲೋಕಕ್ಕೆ ತೆರಳಿದ್ದಾರೆ.
ಈಗ ಪಾಕಿಸ್ತಾನದಲ್ಲಿರುವ ಪಂಜಾಬ್ ಪ್ರಾಂತ್ಯದ ‘ಗಾಹ್’ ಎಂಬ ಗ್ರಾಮದಲ್ಲಿ ಸೆಪ್ಟೆಂಬರ್ ೨೬, ೧೯೩೨ರಲ್ಲಿ ಗುರುಮುಖ್ ಸಿಂಗ್ ಹಾಗೂ ಅಮೃತ್ ಕೌಲ್ ಅವರ ಸುಪುತ್ರರಾಗಿ ಜನಿಸಿದರು ಮನಮೋಹನ್ ಸಿಂಗ್. ಮನೆಯಲ್ಲಿ ಕಿತ್ತು ತಿನ್ನುವ ಬಡತನ, ಅಭಿವೃದ್ಧಿಯ ಮುಖವೇ ಕಾಣದ ಕುಗ್ರಾಮಕ್ಕೆ ಮನಮೋಹನರ ಜ್ಞಾನದ ತೃಷೆಗೆ ತಣ್ಣೀರೆರಚಲು ಸಾಧ್ಯವಾಗಲಿಲ್ಲ. ಆಗ ಅವರಿಗೆ ಕಾಲಿಗೆ ಹಾಕಲು ಚಪ್ಪಲಿಯಾಗಲಿ, ಧರಿಸಲು ಉತ್ತಮ ಬಟ್ಟೆಯಾಗಲಿ ಇರಲೇ ಇಲ್ಲ. ಎರಡು ಹೊತ್ತಿನ ಊಟ ಸಿಕ್ಕರೆ ಸಾಕು ಎಂಬ ಪರಿಸ್ಥಿತಿ ಅವರ ಮನೆಯಲ್ಲಿತ್ತು. ಆದರೆ ಓದಿನ ಹಸಿವಿನ ಮುಂದೆ ಮನಮೋಹನರಿಗೆ ಹೊಟ್ಟೆಯ ಹಸಿವು ದೊಡ್ಡದು ಎನಿಸಲೇ ಇಲ್ಲ. ವಿದ್ಯುತ್ ಸಂಪರ್ಕ ಇಲ್ಲದ ಮನೆಯಲ್ಲಿ ಚಿಮಣಿ ದೀಪವೇ ಅವರಿಗೆ ಕಲಿಯಲು ಆಧಾರವಾಗಿತ್ತು. ಚಿಮಣಿ ದೀಪಕ್ಕೆ ಎಣ್ಣೆ ಇಲ್ಲದ ಸಂದರ್ಭದಲ್ಲಿ ಬೀದಿ ದೀಪವೇ ಅವರಿಗೆ ಜ್ಞಾನ ದೀಪವಾಯಿತು. ಹೀಗೆ ಕಷ್ಟಪಟ್ಟು ಓದಿದ ಮನಮೋಹನ ಎಂಬ ಸಾಧಾರಣ ಬಾಲಕ ಅತ್ಯುತ್ತಮ ಶಿಕ್ಷಣ ಪಡೆದು ಭಾರತದ ಪ್ರಧಾನಿಯಾದದ್ದು ಈಗ ಇತಿಹಾಸ. ಮನಮೋಹನ್ ಸಿಂಗ್ ಅವರ ಬಾಲ್ಯ, ಶಿಕ್ಷಣ ಮತ್ತು ಸಾಗಿಬಂದ ಹಾದಿ ಇಂದಿನ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೆ ಪಾಠವಾಗಬೇಕಾಗಿದೆ.
ಬಾಲ್ಯದಿಂದಲೇ ಕಲಿಕೆಯಲ್ಲಿ ಚುರುಕಾಗಿದ್ದ ಮನಮೋಹನ್ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಹಿಂದೂ ಶಾಲೆಯಲ್ಲಿ ಮತ್ತು ಪದವಿಯನ್ನು ಪಂಜಾಬ್ ವಿಶ್ವವಿದ್ಯಾನಿಲಯದಲ್ಲಿ ಪೂರ್ಣಗೊಳಿಸಿದರು. ಹೋಶಿಪುರದಲ್ಲಿ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದು, ಕೇಂಬ್ರಿಡ್ಜ್ ವಿಶ್ವವಿದ್ಯಾನಿಯಲದಲ್ಲಿ ಡಾಕ್ಟರೇಟ್ ಆಫ್ ಫಿಲಾಸಫಿ ಪದವಿಯನ್ನು ಪಡೆದರು. ನಂತರ ವಾಣಿಜ್ಯ ಶಾಸ್ತ್ರದಲ್ಲಿ ಆಕ್ಸ್ ಫರ್ಡ್ ವಿವಿಯಲ್ಲಿ ಡಾಕ್ಟರೇಟ್ ಪದವಿಯನ್ನು ಪಡೆದರು.
೧೯೯೦ರ ದಶಕದ ಆರಂಭದಲ್ಲಿ ಭಾರತದ ಅರ್ಥಿಕ ಸ್ಥಿತಿ ಸಂಪೂರ್ಣ ಹಳಿ ತಪ್ಪಿದ್ದಾಗ ಮನಮೋಹನ್ ಸಿಂಗ್ ಅವರಿಗೆ ಆಗ ಪ್ರಧಾನಿಯಾಗಿ ಆಯ್ಕೆಯಾಗಿದ್ದ ಪಿ ವಿ ನರಸಿಂಹರಾವ್ ಅವರು ವಿತ್ತ ಸಚಿವ ಎನ್ನುವ ಮಹತ್ತರವಾದ ಜವಾಬ್ದಾರಿಯನ್ನು ವಹಿಸಿದರು. ರಾಜಕಾರಣದ ಒಳಹೊರಗಳನ್ನು ತಿಳಿಯದೇ ಇದ್ದ ಸಿಂಗ್ ತಮಗೆ ದೊರೆತ ವಿತ್ತ ಸಚಿವಾಲಯದ ಹೊಣೆಯನ್ನು ಬಹಳ ಪ್ರಜ್ಞಾಪೂರ್ವಕವಾಗಿ ನಿರ್ವಹಿಸಿದರು. ದೇಶದ ಆರ್ಥಿಕ ಸ್ಥಿತಿಯನ್ನು ಸುಧಾರಣೆಯ ಹಳಿಗೆ ತಂದು ನಿಲ್ಲಿಸಿದರು. ಅರ್ಥ ವ್ಯವಸ್ಥೆಗೆ ಸುಧಾರಣೆಯ ಸ್ಪರ್ಶ ನೀಡಿ ಆರ್ಥಿಕತೆಯನ್ನು ಮರಳಿ ಹಳಿಗೆ ತಂದ ಓರ್ವ ಅಸಾಧಾರಣ ಆರ್ಥಿಕ ಸುಧಾರಕ, ಉದಾರೀಕರಣ, ಜಾಗತೀಕರಣ ಮತ್ತು ಖಾಸಗಿಕರಣ ನೀತಿಗಳನ್ನು ಪರಿಚಯಿಸಿ, ದೇಶದ ಮಾರುಕಟ್ಟೆಯನ್ನು ವಿಶ್ವಕ್ಕೇ ಪರಿಚಯಿಸಿದ್ದೇ ಅಲ್ಲದೆ ತಮ್ಮ ಕಠಿಣ ಪರಿಶ್ರಮ, ವಿನಯವಂತಿಕೆ, ಮೃದು ಸ್ವಭಾವದ ಕಾರಣದಿಂದಲೇ ಪ್ರಧಾನಿ ಪಟ್ಟ ೨೦೦೪ರಲ್ಲಿ ಅನಿರೀಕ್ಷಿತವಾಗಿ ಒಲಿದು ಬಂದಾಗ ನಿರಾಕರಿಸದೆ ಆ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಪರಿಸ್ಥಿತಿಯ ಕೈಗೊಂಬೆ, ಅಪಘಾತದ ಪ್ರಧಾನಿ (Accidental Prime Minister), ಮೌನಿ ಬಾಬಾ ಮೊದಲಾದ ಟೀಕೆಗಳನ್ನು ಕೇಳಿಯೂ ಎಲ್ಲಿಯೂ ತಮ್ಮ ಸಹನೆಯನ್ನು ಕಳೆದುಕೊಳ್ಳದೆ ಹತ್ತು ವರ್ಷ ಪ್ರಧಾನಿಯಾಗಿ ಸೇವೆ ಸಲ್ಲಿಸಿದರು. ಸುಮಾರು ೩೩ ವರ್ಷಗಳ ಕಾಲ ರಾಜ್ಯ ಸಭಾ ಸದಸ್ಯರಾಗಿ ಕಾರ್ಯನಿರ್ವಹಿಸಿದ ಮನಮೋಹನ್ ಸಿಂಗ್ ಅವರಿಗೆ ಎಂದೂ ಲೋಕಸಭಾ ಸದಸ್ಯರಾಗಲು ಸಾಧ್ಯವಾಗಲಿಲ್ಲ. ಒಮ್ಮೆ ೧೯೯೯ರಲ್ಲಿ ದಕ್ಷಿಣ ದೆಹಲಿ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧಿಸಿದರೂ ಅವರ ಪ್ರತಿಸ್ಪರ್ಧಿ ಬಿಜೆಪಿಯ ವಿಜಯ್ ಕುಮಾರ್ ಮಲ್ಹೋತ್ರಾ ಎದುರು ಸೋತು ಹೋದರು. ನಂತರ ಸಿಂಗ್ ಅವರು ಎಂದಿಗೂ ಲೋಕಸಭೆಯ ಚುನಾವಣೆಯತ್ತ ಮುಖ ಮಾಡಲಿಲ್ಲ.
ಮನಮೋಹನ್ ಸಿಂಗ್ ಅವರು ತಮ್ಮ ಕಾರ್ಯಾವಧಿಯಲ್ಲಿ ವಿಶೇಷ ಆರ್ಥಿಕ ವಲಯ ಕಾಯ್ದೆ, ಆಹಾರ ಭದ್ರತೆ ಕಾಯ್ದೆ, ಶಿಕ್ಷಣ ಹಕ್ಕು ಕಾಯ್ದೆ (ಆರ್ ಟಿ ಐ), ಉದ್ಯೋಗ ಖಾತ್ರಿ ಯೋಜನೆ, ನಗರ ಅಭಿವೃದ್ಧಿಗೆ ನರ್ಮ್ ಯೋಜನೆ, ಸರ್ವ ಶಿಕ್ಷಣ ಅಭಿಯಾನಕ್ಕೆ ಶಕ್ತಿ, ಮೊಬೈಲ್ ಸಂಖ್ಯೆ ಪೋರ್ಟಬಿಲಿಟಿ ಕಾಯ್ದೆಯನ್ನು ಜಾರಿಗೆ ತಂದರು. ಚಂದ್ರಯಾನ ಮತ್ತು ಮಂಗಳಯಾನದ ಕನಸು ಬಿತ್ತಿದರು. ಯುಪಿಎ -೧ ಅವಧಿಯಲ್ಲಿ ಇವರ ಸರಕಾರ ತಂದ ಸುಧಾರಣಾ ಕಾರ್ಯಗಳಿಂದ ಭಾರತದ ಜಿಡಿಪಿಯು ಶೇ.೮ ರಿಂದ ೯ಕ್ಕೆ ಏರಿತ್ತು. ಅದರಲ್ಲೂ ವಿಶೇಷವಾಗಿ ಶೇ ೯ ತಲುಪಿದಾಗ ಭಾರತ, ಇಡೀ ವಿಶ್ವದಲ್ಲಿ ಚೀನ ನಂತರ ಅತಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಆದರೆ ಯುಪಿಎ ೨ ಸಮಯದಲ್ಲಿ ನಡೆದ ಹಲವಾರು ಹಗರಣಗಳು ಇವರ ನಿಷ್ಕಳಂಕ ವ್ಯಕ್ತಿತ್ವಕ್ಕೆ ಕಪ್ಪು ಮಸಿಯಾಯಿತು. ಇದರ ಪರಿಣಾಮವೇ ೨೦೧೪ರಲ್ಲಿ ನಡೆದ ಚುನಾವಣೆಯಲ್ಲಿ ಯುಪಿಎ ಸರಕಾರ ಪತನವಾಗಿ ನರೇಂದ್ರ ಮೋದಿ ನೇತೃತ್ವದಲ್ಲಿ ಸರಕಾರ ಅಧಿಕಾರಕ್ಕೇರಿತು. ಏನೇ ಆದರೂ ಮನಮೋಹನ್ ಸಿಂಗ್ ಅವರ ಕಳಂಕರಹಿತ ಸರಳ ಬದುಕು ಎಲ್ಲರಿಗೂ ಮಾದರಿ ಎನ್ನುವುದರಲ್ಲಿ ಎರಡು ಮಾತಿಲ್ಲ.
೧೯೫೮ರಲ್ಲಿ ಸಿಂಗ್ ಅವರು ಗುರುಶರಣ್ ಕೌರ್ ಅವರನ್ನು ವಿವಾಹವಾದರು. ಈ ದಂಪತಿಗಳಿಗೆ ಮೂವರು ಹೆಣ್ಣು ಮಕ್ಕಳು. ಮೂರು ಮಂದಿ ಹೆಣ್ಣು ಮಕ್ಕಳು ಉನ್ನತ ವ್ಯಾಸಂಗ ಮಾಡಿ ಉತ್ತಮ ಹುದ್ದೆಗಳಲ್ಲಿದ್ದಾರೆ. ಮನಮೋಹನ್ ಸಿಂಗ್ ಅವರಿಗೆ ಭಾರತ ಸರಕಾರದ ಪದ್ಮವಿಭೂಷಣ, ಆಕ್ಸ್ ಫರ್ಡ್ ವಿವಿ, ಲಂಡನ್ ವಿವಿ ಗಳಿಂದ ಗೌರವ, ಪುಣೆಯಲ್ಲಿ ಲೋಕಮಾನ್ಯ ತಿಲಕ್ ಪ್ರಶಸ್ತಿ, ಎಚ್ ಎಚ್ ಕಂಚಿ ಶ್ರೀ ಪರಮಾಚಾರ್ಯ ಪ್ರಶಸ್ತಿ, ಏಮ್ಸ್ ಸಂಸ್ಥೆ ವತಿಯಿಂದ ಗೌರವ ಫೆಲೋಶಿಪ್ ಮೊದಲಾದ ಸನ್ಮಾನಗಳು ಸಂದಿವೆ.
ಪ್ರಧಾನ ಮಂತ್ರಿಯಾಗಿದ್ದ ಸಂದರ್ಭದಲ್ಲಿ ಒಂದು ಬಾರಿ ಮನಮೋಹನ್ ಸಿಂಗ್ ಅವರು ಮಂಗಳೂರು ಬರುವ ಅಧಿಕೃತ ಕಾರ್ಯಕ್ರಮ ಏರ್ಪಾಡಾಗಿತ್ತು. ಆದರೆ ಅನಿರೀಕ್ಷಿತವಾಗಿ ಸುರಿದ ಮಳೆಯಿಂದ ವಾತಾವರಣ ಹದಗೆಟ್ಟು ಅವರು ಬಂದ ವಿಮಾನ ಮಂಗಳೂರಿನಲ್ಲಿ ಇಳಿಸಲು ಆಗದೇ ಹಿಂದಕ್ಕೆ ಹೋಗಿತ್ತು. ಎಂ ಆರ್ ಪಿ ಎಲ್ ಅವರ ಯೋಜನೆಯೊಂದನ್ನು ಲೋಕಾರ್ಪಣೆ ಮಾಡುವ ಈ ಕಾರ್ಯಕ್ರಮವು ರದ್ದಾಗಿತ್ತು. ನಂತರದ ದಿನಗಳಲ್ಲಿ ಮನಮೋಹನ್ ಸಿಂಗ್ ಅವರು ಮಂಗಳೂರಿಗೆ ಬರಲೇ ಇಲ್ಲ.
ಮನಮೋಹನ್ ಸಿಂಗ್ ಅವರು ಒಂದೆಡೆ ಹೇಳುತ್ತಾರೆ “ನಾನೊಬ್ಬ ಆಮ್ ಆದ್ಮಿ. ನಾನು ಪ್ರಧಾನಿಯಾಗಲು ಶಿಕ್ಷಣ ಪ್ರಮುಖ ಪಾತ್ರ ವಹಿಸಿತು. ಸಾಮಾನ್ಯ ಕೆಳ ಮಧ್ಯಮ ವರ್ಗದ ಕುಟುಂಬದಿಂದ ಬಂದ ನನ್ನಂತಹ ಸಾಮಾನ್ಯ ವ್ಯಕ್ತಿಯೇ ಪ್ರಧಾನಿ ಆಗಬಹುದಾದರೆ ನೀವೂ ಆಗಬಹುದು. ಒಬ್ಬರ ಜೀವನವನ್ನು ರೂಪಿಸುವಲ್ಲಿ ಶಿಕ್ಷಣ ಅತ್ಯಂತ ಮಹತ್ವದ ಪಾತ್ರವಹಿಸಿದೆ. ಈಗ ನಾನು ಏನಾಗಿದ್ದೇನೋ ಅದಕ್ಕೆಲ್ಲ ಶಿಕ್ಷಣವೇ ಕಾರಣ.” ಈ ಮಾತನ್ನು ಭಾರತದ ಭವಿಷ್ಯವಾದ ಮಕ್ಕಳು ಸದಾ ಕಾಲ ನೆನಪಿನಲ್ಲಿಡಬೇಕು. ಭಾರತ ಕಂಡ ಅತ್ಯುತ್ತಮ ಆರ್ಥಿಕ ತಜ್ಞ, ಸರಳ ಜೀವಿ ಡಾ। ಮನಮೋಹನ್ ಸಿಂಗ್ ತಮ್ಮ ಇಹಲೋಕದ ಪ್ರಯಾಣ ಮುಗಿಸಿ ಮೌನವಾಗಿ ತೆರಳಿದ್ದಾರೆ. ಅವರಿಗೆ ಶ್ರದ್ಧಾಂಜಲಿಗಳು.
ಚಿತ್ರ ಕೃಪೆ: ಅಂತರ್ಜಾಲ ತಾಣ