ಚಿರಯೌವನ ಸೌಂದರ್ಯ ಪ್ರಸಾಧನಗಳಿಂದ ಸಾಧ್ಯವೇ?

ಚಿರಯೌವನ ಸೌಂದರ್ಯ ಪ್ರಸಾಧನಗಳಿಂದ ಸಾಧ್ಯವೇ?

ಯೌವನದ ಮೈಕಾಂತಿ ಹಾಗೂ ಶಾರೀರಿಕ ಸೊಬಗು ಉಳಿಸಿಕೊಳ್ಳಲು ಹೆಣ್ಣು-ಗಂಡೆಂಬ ಭೇದವಿಲ್ಲದೆ ಬಹುಪಾಲು ಜನರು ಹಾತೊರೆಯುತ್ತಾರೆ. ಯಾವುದೋ ಕ್ರೀಂ ಹಚ್ಚಿಕೊಂಡರೆ ಮುದಿತನ ತಮ್ಮ ಹತ್ತಿರ ಸುಳಿಯದೆಂದು ಭ್ರಮಿಸುತ್ತಾರೆ. ಆದರೆ ದುಬಾರಿ  ಬೆಲೆಯ ಸೌಂದರ್ಯ ಪ್ರಸಾಧನಗಳು ವಯಸ್ಸಿನ ಚಿಹ್ನೆಗಳನ್ನು ಹೋಗಲಾಡಿಸಲು ಸಾಧ್ಯವೇ?

“ಸಾಧ್ಯವೇ ಇಲ್ಲ” ಎಂದು ಎಚ್ಚರಿಸುತ್ತದೆ ಅಮೇರಿಕದ ವಿಜ್ನಾನ ಕ್ರಿಯಾ ಸಂಘಟನೆ. ಮುದಿತನ ನಿರೋಧಿ ಸೌಂದರ್ಯ ಪ್ರಸಾಧನಗಳು ಚಿರಯೌವನದ ಚಿಲುಮೆಗಳಲ್ಲ. ಅವು ದೇಹದ ಸುಕ್ಕುಗಳಲ್ಲಿ ತುಂಬಿಕೊಂಡು ಅಥವಾ ಚರ್ಮವನ್ನು ಉಬ್ಬಿಸಿ, ಆ ಸುಕ್ಕುಗಳು ಎದ್ದು ಕಾಣದಂತೆ ಮಾಡಬಲ್ಲವು. ಆದರೆ ಸುಕ್ಕುಗಳನ್ನು ಹೋಗಲಾಡಿಸಲಾರವು.

ಚರ್ಮ ಮತ್ತು ವಯಸ್ಸು
ನಮ್ಮ ಜೀವಮಾನದುದ್ದಕ್ಕೂ ಚರ್ಮ ಪರಿವರ್ತನೆಯಾಗುತ್ತದೆ. ಹೆಚ್ಚು ಕದಿಮೆಯಾಗುವ ಹಾರ್ಮೋನುಗಳೊಂದಿಗೆ ಹೊಂದಾಣಿಕೆ ಮಾದಿಕೊಳ್ಳುತ್ತ ಮತ್ತು ಪರಿಸರದ ಬದಲಾವಣೆಗಳಿಗೆ ಸ್ಪಂದಿಸುತ್ತಾ ಚರ್ಮ ಪರಿವರ್ತನೆಯಾಗುತ್ತಲೇ ಇರುತ್ತದೆ. ಮಾತ್ರವಲ್ಲ, ನಮ್ಮ ಚರ್ಮ ನಿರಂತರವಾಗಿ ಹೊಸಹುಟ್ಟು ಪಡೆಯುತ್ತಲೇ ಇರುತ್ತದೆ. ಹೊಸ ಜೀವಕೋಶಗಳು ಚರ್ಮದ ಕೆಳಪದರಗಳಲ್ಲಿ ಹುಟ್ಟಿ, ಕ್ರಮೇಣ ಚರ್ಮದ ಮೇಲ್ಭಾಗಕ್ಕೆ ಸ್ಥಾನಪಲ್ಲಟವಾಗಿ, ಅಲ್ಲಿ ಸಾಯುತ್ತವೆ. ಇವು ತೆಳುವಾದ ಪದರವಾಗಿ ಕೊನೆಗೆ ಚರ್ಮದಿಂದ ಉದುರಿ ಹೋಗುತ್ತವೆ.

ಚರ್ಮ ತಜ್ನರು ಎರಡು ವಿಧದ ಮುಪ್ಪಾಗುವ ಪ್ರಕ್ರಿಯೆ ಗುರುತಿಸುತ್ತಾರೆ. ಸಹಜ ಮುಪ್ಪಾಗುವಿಕೆ ಮೊದಲನೆಯದು. ಈ ರೀತಿ ವಯಸ್ಸಾಗಿ ಮುಪ್ಪಾದ ಬಳಿಕ ಮತ್ತೆ ಯೌವನಕ್ಕೆ ಮರಳಲು ಸಾಧ್ಯವೇ ಇಲ್ಲ. ಎರಡನೇ ವಿಧದ ಪ್ರಕ್ರಿಯೆಯನ್ನು ಬಿಸಿಲಿನಿಂದ ಮುಪ್ಪಾಗುವಿಕೆ ಎನ್ನುತ್ತಾರೆ. ಇದಕ್ಕೆ ಮುಖ್ಯ ಕಾರಣ ಸೂರ್ಯನ ಅತಿ-ನೇರಳೆ ಕಿರಣಗಳಿಂದ ಚರ್ಮಕ್ಕಾಗುವ ಹಾನಿ.

ಚರ್ಮ ಸುಕ್ಕಾಗುವುದು ಸಹಜವಾಗಿ ಮುಪ್ಪಾಗುವುದರ ಸಾಮಾನ್ಯ ಲಕ್ಷಣ. ಆದರೆ ಸುರ್ಯ ಕಿರಣಗಳ ಸುಡುವಿಕೆಯಿಂದಾಗಿಯು ಚರ್ಮವು ಮನುಷ್ಯ ಮುಪ್ಪಾಗುವ ಮುನ್ನವೇ ಸುಕ್ಕುಗಟ್ಟುತ್ತದೆ. ಬಿಸಿಲುಗಲೆಗಳು, ಭಿನ್ನ ಬಣ್ಣ ಛಾಯೆಗಳ ಚರ್ಮ, ಒಣಗಿದ ದೊರ್ಗಾದ ಮತ್ತು ಹೊಳಪಿಲ್ಲದ ಚರ್ಮ - ಈ ಚಿಹ್ನೆಗಳು ಬಿಸಿಲಿನಿಂದ ಮುಪ್ಪಾಗುವುದನ್ನು ಸೂಚಿಸುತ್ತವೆ.

ಚರ್ಮ ಸುಕ್ಕಾಗಲು ಕಾರಣಗಳೇನು?
ಪ್ರಾಯ ಸರಿದಂತೆ ಚರ್ಮಕ್ಕೂ ವಯಸ್ಸಾಗುತ್ತದೆ ಮತ್ತು ಅದು ಸ್ಥಿತಿ ಸ್ಥಾಪಕತ್ವ ಗುಣ ಕಳೆದುಕೊಳ್ಳುತ್ತದೆ. ಚರ್ಮವನ್ನು ಎಳೆದಾಗ ಅದು ಹರಿದು ಹೋಗದಂತೆ ತಡೆಯುವ ಅಂಗಾಂಶ ಕೊಲ್ಲಾಜೆನ್. ಚರ್ಮವನ್ನು ಎಳೆದು ಬಿಟ್ಟಾಗ ಅದನ್ನು ಯಥಾಸ್ಥಿತಿಗೆ ಮರಳಿಸುವ ಅಂಗಾಂಶ ಇಲಾಸ್ಟಿನ್. ಕಾಲ ಸರಿದಂತೆ ಚರ್ಮದಲ್ಲಿರುವ ಕೊಲ್ಲಾಜೆನ್ ಮತ್ತು ಇಲಾಸ್ಟಿನ್
ದುರ್ಬಲವಾಗುತ್ತವೆ. ಚರ್ಮ ಕೊಬ್ಬಿನಂಶ ಕಳೆದುಕೊಂಡು ತೆಳುವಾಗುತ್ತದೆ. ಇದರಿಂದಾಗಿ ಚರ್ಮ ನಯವಾಗಿ ಕಾಣಿಸುವುದಿಲ್ಲ. ಚರ್ಮದಲ್ಲಿ ಈ ಎಲ್ಲ ಬದಲಾವಣೆಗಳು ಆಗುತ್ತಿರುವಾಗ, ಗುರುತ್ವಾಕರ್ಷಣ ಬಲವು ಚರ್ಮವನ್ನು ಕೆಳಕ್ಕೆ ಎಳೆಯುತ್ತಲೇ ಇರುತ್ತದೆ. ಇದರಿಂದಾಗಿ ಚರ್ಮವು ಜೋತು ಬಿದ್ದಂತೆ ಕಾಣಿಸುತ್ತದೆ.

ನಿಮ್ಮ ಚರ್ಮ ಎಷ್ಟು ಸುಕ್ಕಾಗಿದೆ ಎಂಬುದು ನಿಮ್ಮ ಹೆತ್ತವರ ಚರ್ಮ ಎಷ್ಟು ಸುಕ್ಕಾಗಿತ್ತು ಎಂಬುದನ್ನು ಅವಲಂಬಿಸಿದೆ. ಯಾಕೆಂದರೆ ಇದು ವಂಶಪಾರಂಪರ್ಯ ಲಕ್ಷಣ.

ಚಿರಯೌವನದ ಭ್ರಮಾಸಾಧನಗಳು
“ಇದು ಚರ್ಮ ಸುಕ್ಕಾಗುವುದನ್ನು ತಡೆಯುತ್ತದೆ” ಎಂಬಂತಹ ಪ್ರಚಾರದೊಂದಿಗೆ ಹಲವಾರು ಕ್ರೀಂ ಮತ್ತು ಲೋಷನ್‌ಗಳು ಮಾರುಕಟ್ಟೆಯಲ್ಲಿ ನಿಮ್ಮನ್ನು ಆಕರ್ಷಿಸುತ್ತವೆ. ಅವುಗಳ ಪೊಟ್ಟಣಗಳಲ್ಲಿ ಆಲ್ಫಾ-ಹೈಡ್ರಾಕ್ಸಿ ಆಸಿಡ್‌ಗಳು, ಸೆರಾಮೈಡ್‌ಗಳು, ವಿಟಮಿನ್‌ಗಳು, ಕೊಲ್ಲಾಜೆನ್, ಇಲಾಸ್ಟಿನ್ - ಇವನ್ನೆಲ್ಲ ಒಳಗೊಂಡಿದೆ ಎಂಬ ಘೋಷಣೆ. ನಿಮ್ಮ ಗಮನ ಸೆಳೆಯಲಿಕ್ಕಾಗಿಯೇ ನಿಮಗೆ ಅರ್ಥವಾಗದ ಈ ಹೆಸರುಗಳನ್ನು ಆ ಪೊಟ್ಟಣಗಳಲ್ಲಿ ಮುದ್ರಿಸಲಾಗಿರುತ್ತದೆ. ಸೂಪರ್ ಮಾರ್ಕೆಟ್, ಶೃಂಗಾರ ಸಾಧನಗಳ ಮಳಿಗೆ, ಔಷಧಿ ಅಂಗಡಿ ಮತ್ತು ಇತರ ಮಳಿಗೆಗಳಲ್ಲಿ ಇವುಗಳ ಕಣ್ಸೆಳೆಯುವ ಪ್ರದರ್ಶನ.

ಬಣ್ಣಬಣ್ಣದ ಪೊಟ್ಟಣ ಹಾಗೂ ಕನ್‌ಟೈನರುಗಳಲ್ಲಿ ರಾರಾಜಿಸುವ ಇವುಗಳಲ್ಲಿ ಹಲವು ವಿಧ: ಡೇ ಕ್ರೀಂಗಳು, ನೈಟ್ ಕ್ರೀಂಗಳು, ಜೆಲ್‌ಗಳು ಇತ್ಯಾದಿ. ಇವುಗಳ ಬೆಲೆಯೂ ದುಬಾರಿ. ಬೆಲೆ ಜಾಸ್ತಿಯಾದಷ್ಟೂ ಅದು ಹೆಚ್ಚು ಪರಿಣಾಮಕಾರಿ ಅಂದುಕೊಳ್ಳುವ ನಾವು ಇವನ್ನು ಖರೀದಿಸಲು ಮುಂದಾಗುತ್ತೇವೆ.

ಸತ್ಯ ಏನು?
ಸೌಂದರ್ಯ ಪ್ರಸಾಧನಗಳು ದೇಹದ ಬಾಹ್ಯ ಬಳಕೆಗಾಗಿರುವ ಪ್ರಸಾಧನಗಳು. ಚರ್ಮಕ್ಕೆ ಸವರಬೇಕಾದ ಅವುಗಳಿಂದ ಯಾವುದೇ ಚಿಕಿತ್ಸಕ ಪರಿಣಾಮವಿಲ್ಲ. “ಯಾವುದೇ ಸೌಂದರ್ಯ ಪ್ರಸಾಧನವು ಚರ್ಮದಲ್ಲಿ ತೂರಿಕೊಳ್ಳುತ್ತದೆ ಎಂದಾದರೆ ಅದು ಸೌಂದರ್ಯ ಪ್ರಸಾಧನವಲ್ಲ; ಬದಲಾಗಿ ಅದು ಔಷಧಿ ಎನಿಸುತ್ತದೆ. ಹಾಗಾದಾಗ, ಅದು ವಿವಿಧ ಸರಕಾರಿ ನಿಯಮ ಹಾಗೂ ನಿಬಂಧನೆಗಳಿಗೆ ಒಳಪಡುತ್ತದೆ” ಎಂದು ತಜ್ನರ ಖಚಿತ ಅಭಿಪ್ರಾಯ. ಸೌಂದರ್ಯ ಪ್ರಸಾಧನಗಳು ನಮ್ಮ ಶರೀರದಲ್ಲಿ ಯಾವತ್ತೂ ಮೂಲಭೂತ ಬದಲಾವಣೆ ಮಾಡಲು ಸಾಧ್ಯವಿಲ್ಲ. ಅವು ಚರ್ಮವನ್ನು ಮೃದುಗೊಳಿಸಬಲ್ಲವು, ಅಷ್ಟೇ.

ಈ ಸತ್ಯ ಬಹಳ ಜನರಿಗೆ ಮನದಟ್ಟಾಗಿಲ್ಲ. ಆದ್ದರಿಂದ ಜಾಹೀರಾತುಗಳನ್ನು ನಂಬುತ್ತಾರೆ. ಹಾಗಾಗಿಯೇ, “ಈ ಪೊಟ್ಟಣದೊಳಗೆ ಸೌಂದರ್ಯದ ಗುಟ್ಟು ಇದೆ” ಎಂಬರ್ಥದ ಜಾಹೀರಾತುಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ; ಚಿರಯೌವನದ ಕನಸು ಕಾಣುವ ಅಮಾಯಕರನ್ನು ದಾರಿ ತಪ್ಪಿಸುತ್ತಿವೆ.
(ಭಾಗ 2ರಲ್ಲಿ ಮುಂದುವರಿದಿದೆ.)

ಫೋಟೋ 1 ಮತ್ತು 2: ವಯಸ್ಸಾಗುವುದೂ ಚಂದ