ಚೀನಾ ಅನಗತ್ಯ ಕ್ಯಾತೆ

ಚೀನಾ ಅನಗತ್ಯ ಕ್ಯಾತೆ

ದೇಶದ ಈಶಾನ್ಯ ಪ್ರದೇಶದ ರಾಜ್ಯಗಳಲ್ಲಿ ಅದರಲ್ಲೂ ಅರುಣಾಚಲ ಪ್ರದೇಶದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳು ಮತ್ತು ಮೂಲ ಸೌಕರ್ಯಗಳ ವಿಸ್ತಾರ ಚೀನಾದ ಕಣ್ಣನ್ನು ಕೆಂಪಾಗಿಸಿದೆ. ಹಿಂದೆ ಭಾರತ ಗಡಿಪ್ರದೇಶಗಳ ಅಭಿವೃದ್ಧಿಯತ್ತ ಅಷ್ಟೊಂದು ಗಮನ ನೀಡದೆ ಇದ್ದುದ್ದು ಡ್ರ್ಯಾಗನ್ ರಾಷ್ಟ್ರಕ್ಕೆ ಅನುಕೂಲಕರವಾಗಿ ಪರಿಣಮಿಸಿತ್ತು. ಅದು ರಾತ್ರೋರಾತ್ರಿ ಅರುಣಾಚಲದ ಹಳ್ಳಿಗಳನ್ನು, ಇತರ ಪ್ರದೇಶಗಳನ್ನು ಒತ್ತುವರಿ ಮಾಡಿಕೊಂಡು, ಅಟ್ಟಹಾಸ ಮೆರೆಯುತ್ತಿತ್ತು. ಆದರೆ ಈಗ, ಭಾರತ ಮುಂಚಿನಂತಿಲ್ಲ ಎಂಬ ವಾಸ್ತವಕ್ಕೆ ಜಾಣಕುರುಡು ಪ್ರದರ್ಶಿಸುತ್ತಿರುವ ಅದು, ಅನಗತ್ಯ ಕ್ಯಾತೆಯನ್ನು ಮುಂದುವರಿಸಿರುವುದು ಖಂಡನಾರ್ಹ.

ಅರುಣಾಚಲ ಪ್ರದೇಶದ ವಿವಿಧ ೩೦ ಸ್ಥಳಗಳಿಗೆ ಹೊಸ ನಾಮಕರಣ ಮಾಡಿ ನಾಲ್ಕನೇ ಪಟ್ಟಿಯನ್ನು ಬಿಡುಗಡೆ ಮಾಡುವ ಮೂಲಕ ಚೀನಾ ಮತ್ತೆ ಉದ್ಧಟತನ ಪ್ರದರ್ಶಿಸಿದೆ. ತನ್ನದಲ್ಲದ ಭೌಗೋಳಿಕ ಪ್ರದೇಶದ ಮೇಲೆ ಹಕ್ಕು ಸಾಧಿಸಲು ಹವಣಿಸುವುದು ಚೀನಾದ ಧೋರಣೆಯೇ ಆಗಿಬಿಟ್ಟಿದೆ. ಆದರೆ, ಸಣ್ಣ ರಾಷ್ಟ್ರಗಳಿಗೆ ಬೆದರಿಸಿ ಅಥವಾ ಸಾಲದ ಆಮಿಷ ಒಡ್ಡಿ ಅಲ್ಲಿನ ಪ್ರದೇಶಗಳ ಮೇಲೆ ಹಕ್ಕು ಸಾಧಿಸುವಂತೆ ಭಾರತದಲ್ಲಿ ಮಾಡಲು ಸಾಧ್ಯವಿಲ್ಲ. ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿರುವ ಭಾರತ, ಈಗ ಜಾಗತಿಕ ಶಕ್ತಿಯಾಗಿಯೂ ಗಮನ ಸೆಳೆದಿದೆ. ಅರುಣಾಚಲ ಪ್ರದೇಶ ತನ್ನ ಅವಿಭಾಜ್ಯ ಅಂಗ ಎಂದು ಹಲವು ಬಾರಿ ಸ್ಪಷ್ಟಪಡಿಸಿದೆ ಮತ್ತು ಅಲ್ಲಿನ ನಾಗರಿಕರ ಹಿತಕ್ಕಾಗಿ ಸೂಕ್ತ ಕ್ರಮಗಳನ್ನು ಕೈಗೊಳ್ಳುತ್ತಿದೆ. ಹೊಸ ಹೆಸರುಗಳನ್ನು ಇಟ್ಟ ಮಾತ್ರಕ್ಕೆ ವಾಸ್ತವ ಬದಲಾಗುವುದಿಲ್ಲ ಎಂದು ಭಾರತದ ವಿದೇಶಾಂಗ ಇಲಾಖೆ ಸೂಕ್ತ ತಿರುಗೇಟನ್ನು ಕೊಟ್ಟಿದೆ.

ಚೀನಾದ ಇಂಥ ಕೃತ್ಯ ಇದೇ ಮೊದಲೇನಲ್ಲ. ಅರುಣಾಚಲದ ಆರು ಸ್ಥಳಗಳ ಹೆಸರುಗಳನ್ನು ಬದಲಿಸಿ ೨೦೧೭ರಲ್ಲಿ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ೧೫ ಸ್ಥಳಗಳ ಎರಡನೇ ಪಟ್ಟಿಯನ್ನು ೨೦೨೧ರಲ್ಲಿ, ೨೦೨೩ರಲ್ಲಿ ೧೧ ಸ್ಥಳಗಳಿಗೆ ಹೊಸಹೆಸರು ಇಟ್ಟು ಮತ್ತೊಂದು ಪಟ್ಟಿ ಬಿಡುಗಡೆ ಮಾಡಿತ್ತು. ಚೀನಾದ ಹೊಟ್ಟೆಯುರಿಗೆ ಅಸಲಿ ಕಾರಣ ಬೇರೆಯೇ ಇದೆ. ರಕ್ಷಣಾ ಕ್ಷೇತ್ರದಲ್ಲಿ ವ್ಯೂಹಾತ್ಮಕ ಮಹತ್ವ ಹೊಂದಿರುವ, ತವಾಂಗ್ ಗೆ ಸರ್ವಋತು ಸಂಪರ್ಕ ಕಲ್ಪಿಸುವ ಸೇಲಾ ಸುರಂಗವನ್ನು ಪ್ರಧಾನಿ ನರೇಂದ್ರ ಮೋದಿ ಮಾರ್ಚ್ ೯ರಂದು ಅರುಣಾಚಲ ಪ್ರದೇಶದಲ್ಲಿ ಲೋಕಾರ್ಪಣೆ ಮಾಡುವ ಮೂಲಕ, ಭಾರತ ಯಾವುದೇ ಒತ್ತಡಗಳಿಗೆ ಮಣಿಯುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ರವಾನಿಸಿದ್ದರು. ಈ ಸುರಂಗದಿಂದ ಮಿಲಿಟರಿ ಸರಕುಗಳನ್ನು ತ್ವರಿತವಾಗಿ ಸಾಗಿಸಲು ಸೇನಾಪಡೆಗಳಿಗೆ ನೆರವಾಗಲಿರುವುದು, ಚೀನಾದ ಅಸಮಧಾನಕ್ಕೆ ಕಾರಣ. ಕಳೆದ ವರ್ಷ ಭಾರತವು ಅರುಣಾಚಲ ಪ್ರದೇಶದಲ್ಲಿ ಜಿ ೨೦ ಸಭೆ ನಡೆಸಿದಾಗಲೂ, ಅದು ಅಸಮಧಾನ ವ್ಯಕ್ತಪಡಿಸಿತ್ತು. ಗಡಿ ವಿವಾದವನ್ನು ಜೀವಂತವಾಗಿಡಲು ಸದಾ ಒಂದಲ್ಲಾ ಒಂದು ತಂಟೆ ತೆಗೆಯುವುದು ಆ ರಾಷ್ಟ್ರದ ನೀತಿಯೇ ಆಗಿಹೋಗಿದೆ. ಅರುಣಾಚಲ ವಿಷಯದಲ್ಲಿ ಅಮೇರಿಕ ಕೂಡ ಬಹಿರಂಗವಾಗಿಯೇ ಭಾರತದ ಬೆಂಬಲಕ್ಕೆ ನಿಂತಿದೆ. ಹೀಗಾಗಿ, ಚೀನಾ ವಾಸ್ತವವನ್ನು ತಿರುಚುವ, ಭಾರತದ ಪ್ರದೇಶಗಳ ಮೇಲೆ ತನ್ನ ಹಕ್ಕು ಸಾಧಿಸುವ ಪ್ರಯತ್ನವನ್ನು ನಿಲ್ಲಿಸಬೇಕು.

ಕೃಪೆ: ವಿಜಯವಾಣಿ, ಸಂಪಾದಕೀಯ, ದಿ: ೦೨-೦೪-೨೦೨೪ 

ಚಿತ್ರ ಕೃಪೆ: ಅಂತರ್ಜಾಲ ತಾಣ