ಚೀನಾ ದೇಶದ ಚಿಕ್ಕ ಕಥೆಗಳು
“ಒಬ್ಬ ತನ್ನ ಅಂಗಡಿಯಲ್ಲಿ ಕತ್ತಿಗಳನ್ನೂ ಮಾರುತ್ತಿದ್ದ, ಗುರಾಣಿಗಳನ್ನೂ ಮಾರುತ್ತಿದ್ದ. ‘ನನ್ನ ಗುರಾಣಿಗಳು ಎಷ್ಟು ಗಟ್ಟಿಯಾಗಿವೆ ಎಂದರೆ, ಇವುಗಳನ್ನು ಯಾವ ಕತ್ತಿಯಿಂದಲೂ ಭೇದಿಸಲು ಸಾಧ್ಯವಿಲ್ಲ’ ಎನ್ನುತ್ತಿದ್ದ, ಮತ್ತೆ ಅವನೇ ‘ನನ್ನ ಕತ್ತಿಗಳು ಎಷ್ಟು ಹರಿತವಾಗಿವೆ ಎಂದರೆ, ಇವು ಎಂಥ ಗುರಾಣಿಯನ್ನಾದರೂ ಭೇದಿಸಬಲ್ಲುವು' ಎನ್ನುತ್ತಿದ್ದ.
ಒಂದು ದಿವಸ ಯಾವನೋ ಒಬ್ಬ ‘ನಿನ್ನ ಗುರಾಣಿಯನ್ನು ನಿನ್ನ ಕತ್ತಿಯಿಂದಲೇ ಹೊಡೆದರೆ?’ ಎಂದು ಕೇಳಿಬಿಟ್ಟ.
ಅಂಗಡಿಯವನು ಅದಕ್ಕೆ ಏನು ಉತ್ತರ ಹೇಳಿಯಾನು? ಪೆದ್ದು ಪೆದ್ದಾಗಿ ಕಣ್ಣು ಕಣ್ಣು ಬಿಟ್ಟ.”
‘ಅತಿ ಜಾಣ' ಎಂಬ ಹೆಸರಿನ ಈ ಕಥೆ ಚೀನಾ ದೇಶದ್ದು. ಇಂತಹ ಹಲವಾರು ಪುಟ್ಟ ಪುಟ್ಟ ಕಥೆಗಳನ್ನು ಸಂಗ್ರಹಿಸಿ ನೀಡಿದ್ದಾರೆ ಬಾಲ ಸಾಹಿತಿ ಎಂದೇ ಖ್ಯಾತರಾದ ಜಿ.ಪಿ.ರಾಜರತ್ನಂ ಅವರು. ಈ ಪುಸ್ತಕದಲ್ಲಿ ೨೫ಕ್ಕೂ ಅಧಿಕ ಕಥೆಗಳಿವೆ. ಪುಸ್ತಕಕ್ಕೆ ಬೆನ್ನುಡಿ ಬರೆದಿದ್ದಾರೆ ಖ್ಯಾತ ಕವಿ ಪ್ರೊ.ಕೆ.ಎಸ್.ನಿಸಾರ್ ಅಹಮದ್ ಇವರು. ಅವರು ತಮ್ಮ ಬೆನ್ನುಡಿಯಲ್ಲಿ “ತಮ್ಮ ಅನ್ಯ ದುರ್ಲಭ ವ್ಯಕ್ತಿತ್ವ ಮತ್ತು ವೈವಿಧ್ಯತರ ಬರವಣಿಗೆಯಿಂದ ಕನ್ನಡ ಸಾಹಿತ್ಯಕ್ಕೆ ಬೆಲೆ ಬಾಳುವ ಬಳುವಳಿಯನ್ನು ಓದಿಸಿರುವ ಮಹನೀಯ ಚೇತನ ಡಾ. ಜಿ.ಪಿ.ರಾಜರತ್ನಂ. ಸುದೀರ್ಘ ಕಾಲದ ಬಹು ವಿಫುಲ ಬರಹಗಳ ಜೊತೆಗೆ ಹಿರಿಯ ಮತ್ತು ನವೋದಿತರ ಲಿಖಾವಟ್ಟುಗಳ ಸತ್ವ, ಸವಿಗಳನ್ನು ಕನ್ನಡ ಸಾಹಿತ್ಯಾಭಿಮಾನಿಗಳಿಗೆ ಮನಗಾಣಿಸುವ ಕೈಂಕರ್ಯವನ್ನು ಕೈಕೊಂಡು ಕೃತಕೃತ್ಯರಾದವರು ಜಿ.ಪಿ.ರಾಜರತ್ನಂ.” ಎಂದಿದ್ದಾರೆ.
ಪುಸ್ತಕದ ಲೇಖಕರು ತಮ್ಮ ಮುನ್ನುಡಿಯಲ್ಲಿ “ಕ್ರಿಸ್ತಪೂರ್ವ ಆರನೇ ಶತಮಾನದಲ್ಲಿ ಭಗವಾನ್ ಮಹಾವೀರ ಸ್ವಾಮಿಯೂ, ಭಗವಂತನಾದ ಬುದ್ಧಗುರುವೂ ಭಾರತದಲ್ಲಿ ಇದ್ದ ಹಾಗೆಯೇ ಚೀನಾದೇಶದಲ್ಲಿ ಲಾಒಸೆ ಮತ್ತು ಕಾಂಪೂಷ ಎಂಬ ಇಬ್ಬರು ಗುರುಗಳಿದ್ದರು. ಇವರಲ್ಲಿ ಹಿರಿಯನಾದ ಲಾಒಸೆ ‘ತವ್ ತೆ ಚಿಂಗ್' ಎಂಬ ಪುಸ್ತಕದಲ್ಲಿ ತಾನು ಲೋಕಕ್ಕೆ ಬೋಧಿಸಿದ ಧರ್ಮ ಮಾರ್ಗವನ್ನು ಕುರಿತು ಕೆಲವು ಸೂತ್ರಗಳನ್ನು ಕೊಟ್ಟು ಹೋಗಿದ್ದಾನೆ. ಇವು ನಮ್ಮ ಉಪನಿಷತ್ತುಗಳು ಇದ್ದ ಹಾಗೆ. ಅನೇಕ ಆಧ್ಯಾತ್ಮಿಕ ರಹಸ್ಯಗಳನ್ನು ಒಳಗೊಂಡಿವೆ.
ಲಾಒಸೆ ಗುರುವಿನ ಅನಂತರ, ಕ್ರಿ.ಪೂ. ಮೂರನೇ ಶತಮಾನದಲ್ಲಿ ಬಂದ ಆ ಸಂಪ್ರದಾಯದ ಶಿಷ್ಯನೊಬ್ಬ ಆ ಗುರುವಿನ ಸೂತ್ರಗಳಿಗೆ ವ್ಯಾಖ್ಯಾನ ಬರೆದಿದ್ದಾನೆ. ಆತನ ಹೆಸರು ಚುವಂಗ್ ಸೆ. ತಾನು ವಿವರಿಸುವ ತತ್ತ್ವಗಳು ಸಾಮಾನ್ಯ ಜನರಿಗೆ ಕೂಡ ಸ್ಪಷ್ಟವಾಗಬೇಕೆಂಬ ಉದ್ದೇಶದಿಂದ ಆತ ಅನೇಕ ದೃಷ್ಟಾಂತ ಕತೆಗಳನ್ನು ಅಲ್ಲಿ ಹೇಳಿದ್ದಾನೆ.” ಎಂದು ಬರೆದಿದ್ದಾರೆ.
ಇಲ್ಲಿರುವ ಕಥೆಗಳಲ್ಲಿ ಹಲವಾರು ಕಥೆಗಳು ‘ಸುಧಾ’ ವಾರ ಪತ್ರಿಕೆಯಲ್ಲಿ ೧೯೭೨ರಲ್ಲಿ ಪ್ರಕಟವಾಗಿವೆ. ಸುಮಾರು ೮೦ ಪುಟಗಳನ್ನು ಹೊಂದಿರುವ ಈ ಪುಸ್ತಕವು ಈಗಿನ ಮಕ್ಕಳಿಗೆ ಅಂದಿನ ಚೀನಾ ದೇಶದ ಕಥೆಗಳನ್ನು ಓದಿ ತಿಳಿಯಲು ಸಹಕಾರಿ.