ಚುಕ್ಕಿಯಾದರು ಗಗನದೆ...

ಚುಕ್ಕಿಯಾದರು ಗಗನದೆ...

ಕವನ

ಕಣಿಪುರೇಶನ ಪರಮಪಾವನ

ಪುಣ್ಯ ನಾಡಿದು ಕಣಿಪುರ

ಭೂಮಿತಾಯಿಗೆ ಹಸಿರಿನುಡುಗೆಯ

ತೊಡಿಸಿದಂತಹ ಪರಿಸರ

 

ಯಕ್ಷಗಾನಕೆ ಮುತ್ತು ರತ್ನದ

ಗಢಣ ನೀಡಿದ ನಾಡಿದು

ಜನರ ಮನದಲಿ ಅಚ್ಚು ಒತ್ತಿದ

ಯಕ್ಷಪ್ರೇಮದ ಊರಿದು

 

ಹಾವಭಾವದ ನಟನೆ,ಮಾತಿನ

ಪ್ರತಿಭೆ ತುಂಬಿದ ಸಾಗರ

ಯಕ್ಷಪ್ರೇಮಿಗಳೆದೆಯ ಸೇರಿದ

ಹೆಸರು ಅವರದು ಶ್ರೀಧರ

 

ಯಕ್ಷರಂಗದಿ ಹಲವು ಪಾತ್ರವ

ಮಾಡಿ ಮಿಂಚಿದ ಚೇತನ

ಯಕ್ಷಗಾನಕೆ ತಮ್ಮನರ್ಪಿಸಿ

ಮುಡಿಪನಿರಿಸಿದ ಜೀವನ

 

ಅವರ ಕೀರ್ತಿಯು ಬಾನಿನೆತ್ತರ

ಬಾನು ಸೇರುವ ತವಕದೆ

ಇಹವ ತ್ಯಜಿಸುತ ಅಗಲಿ ನಮ್ಮನು

ಚುಕ್ಕಿಯಾದರು ಗಗನದೆ||

 

(ದಿವಂಗತ ಕುಂಬಳೆ ಶ್ರೀಧರ ರಾವ್ ರವರ ಸ್ಮರಣೆ)

-ಪೆರ್ಮುಖ ಸುಬ್ರಹ್ಮಣ್ಯ ಭಟ್

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್