ಚುಕ್ಕಿ ಚಂದ್ರಮರ ಜೂಟಾಟ
ಚುಕ್ಕಿ ಚಂದ್ರಮರ ಜೂಟಾಟ
(ಒಂದೆರಡು ವರುಷಗಳ ಹಿಂದೆ ನಭದಲ್ಲಿ ನಕ್ಷತ್ರ-ಚಂದಿರ ಒಂದಾಗಿ ಪ್ರಜ್ವಲಿಸಿದ
ದೃಶ್ಯ ನಮ್ಮೆಲ್ಲರನ್ನೂ ಮೂಕವಿಸ್ಮಿತರನ್ನಾಗಿಸಿತ್ತು. ಅದನ್ನು ಕಂಡ ಪುಟ್ಟ ಬಾಲೆ ತನ್ನ
ತಾಯಿಯೊಂದಿಗೆ ನಡೆಸಿದ ಸಂವಾದದ ತುಣುಕು ಇಲ್ಲಿದೆ)
ಬಾಲೆ:- ಮನೆಯಂಗಳಕೆ ನೀ ಬಾರಮ್ಮಾ
ಸೊಬಗಿನ ಚಂದ್ರನ ನೋಡಮ್ಮ
ಕಾಡಿದೆ ಪ್ರಶ್ನೆ ನನಗಮ್ಮ
ಉತ್ತರ ನೀನು ಹೇಳಮ್ಮ
ಬಿದಿಗೆ ಚಂದ್ರನ ಕಾಣಮ್ಮ
ತೇಲುವ ದೋಣಿ ಇವನಮ್ಮ
ದೋಣಿಯ ಅಂಚಿಗೆ ಇಂದೀಗ
ದೀಪ ಹಚ್ಚಿದವರಾರಮ್ಮ ?
ನಂಮ್ಮನೆಗೆ ಚಂದಿರ ಬಂದಿದ್ದನೆ ?
ನನ್ನಯ ಬಿಂದಿಯ ಕದ್ದೊಯ್ದನೆ ?
ತನ್ನಯ ಹಣೆಗೆ ಇರಿಸಿಹನೆ ?
ನನಗೂ ಟಿಕಳಿಯ ಉಳಿಸಿಹನೆ ?
ತಾಯಿ(ನಗುತ್ತಾ):- ಓಡುತ ಓಡುತ ಚಂದಿರನು
ಬಿಡದೆ ತಾರೆಯ ಹಿಡಿದಿಹನು
ತನ್ನಯ ಮುಡಿಗೆ ಮುಡಿದಿಹನು
ಬೀಗುತ ಬಾನಲಿ ನಿಂದಿಹನು
ಮುಂದೆ ಅರಿಯುವೆ ನೀ ಕಂದ
ವಿಸ್ಮಯ ವಿಶ್ವದ ಈ ಬಂಧ
ಇದು ಚುಕ್ಕಿ ಚಂದ್ರಮರ ಜೂಟಾಟ
ಕಣ್ಮನ ತಣಿಸಿದೆ ಈ ನೋಟ