ಚುಕ್ಕಿ ಚಂದ್ರಮರ ನಾಡಿನಲ್ಲಿ
ಖ್ಯಾತ ಚಿತ್ರ ನಿರ್ದೇಶಕ, ಅಂಕಣಕಾರ, ಕಥೆಗಾರ ನಾಗತಿಹಳ್ಳಿ ಚಂದ್ರಶೇಖರ ಇವರ ಲೇಖನಿಯಿಂದ ಮೂಡಿಬಂದ ಅದ್ಬುತ ಕಾದಂಬರಿ ‘ಚುಕ್ಕಿ ಚಂದ್ರಮರ ನಾಡಿನಲ್ಲಿ'. ಈ ಕಾದಂಬರಿಯ ಬಗ್ಗೆ ತಮ್ಮ ಅನಿಸಿಕೆಗಳನ್ನು ಬೆನ್ನುಡಿಯಲ್ಲಿ ವ್ಯಕ್ತ ಪಡಿಸಿದ್ದಾರೆ ಮತ್ತೊರ್ವ ಅಪರೂಪದ ಕಥೆಗಾರ ಜಯಂತ್ ಕಾಯ್ಕಿಣಿಯವರು. ಅವರು ಹೇಳುವಂತೆ “ಭಾಗ್ಯ, ಭಾಗೂ ಅಥವಾ ಭಾಗ್ಯಲಕ್ಷ್ಮಿ ಥೇಟು ನಿಮ್ಮ ಪಕ್ಕದ ಮನೆಯ ಹುಡುಗಿ. ಮಮತೆಗಾಗಿ ಮುದ್ದಿಗಾಗಿ ಮಿಡಿಯುವ ಚಡಪಡಿಸುವ ಜೀವಸೆಲೆಯ ಕಾರಂಜಿ. ಎಂಥ ಕಾರಂಜಿ-ಪುಟಿವ ನೆಲದಲ್ಲಿ ಹಸಿರು ನಿಮಿರಬೇಕು ಅಂಥದು. ಈಗಷ್ಟೆ ಕಣ್ತೆರೆದ ಎಲೆಯಂಥ ಈ ಹುಡುಗಿ ತನ್ನ ಪುಟ್ಟ ಬೊಗಸೆಯಲ್ಲಿ ಅಕ್ಕರೆ ತುಂಬಿಕೊಂಡು ಇಡೀ ಬದುಕನ್ನು, ಚುಕ್ಕಿ ಚಂದ್ರಮರನ್ನೊಳಗೊಂಡ ವಿಶ್ವವನ್ನು ಎದುರು ಹಾಕಿಕೊಳ್ಳುತ್ತಾಳೆ. ಮಮತೆಯ ಪಣತಿ ಕಣ್ಣಲ್ಲಿ ಹಚ್ಚಿ ಕತ್ತಲ ಕಂದಕಗಳಲ್ಲಿ ನಡೆಯುತ್ತಾಳೆ. ಯಾತ್ರೆಯ ಏಕಾಂತದಲ್ಲಿ ಗಟ್ಟಿಯಾಗುತ್ತಾಳೆ. ಪ್ರತಿ ಮನುಷ್ಯನ ಎದೆಯೊಳಗೆ ಹರಿಯಲು ಕಾದಿರುವ ಸೂಕ್ಷ್ಮ ಒಳನದಿಯೊಂದರ ಹೃದ್ಯ ಸಂಕೇತವಾಗುತ್ತಾಳೆ.
ಭಾಗ್ಯಳನ್ನು ಅಕ್ಕರೆಯಿಂದ ಕರೆತಂದು ನಮ್ಮೊಳಗೆ ಬಿಟ್ಟುಹೋಗುತ್ತಿರುವ ನಾಗತಿಹಳ್ಳಿ ಚಂದ್ರಶೇಖರ - ಬದುಕನ್ನು ಬರೀ ಅಕ್ಷರಗಳ ಮೂಲಕ ಪ್ರೀತಿಸದೆ ಉತ್ಕಟವಾಗಿ ಬದುಕುವ ಮೂಲಕವಷ್ಟೇ ಪ್ರೀತಿಸಲು ಸಾಧ್ಯ ಎಂದು ನಂಬಿರುವ ಕಲೆಗಾರ. ಅಂತೆಯೇ ಸೂಕ್ಷ್ಮಾತಿಸೂಕ್ಷ್ಮ ಭಾವದ ಪಲಕುಗಳನ್ನು ಆಡಂಬರವಿಲ್ಲದೆ ಹಿಡಿಯುವ ಇವರ ಭಾಷೆಗೆ ಹೆಗಲ ಮೇಲೆ ಕೈ ಇಟ್ಟು ತೋಡಿಕೊಳ್ಳುವ ಸ್ನೇಹಿತನ ಆತ್ಮೀಯತೆ ಇದೆ. ಪ್ರತಿ ಸೂರ್ಯೋದಯವನ್ನು ಪ್ರತಿ ಚಿಗುರನ್ನು, ಪ್ರತಿ ಜೀವನವನ್ನು ಹೃತ್ಪೂರ್ವಕ ಭರವಸೆಯಿಂದ ನೋಡುವ ನೋಟ ಇದೆ. ತೆಳು ನೈತಿಕ ನಿಲುವಿನಾಚೆ ಬೆಳೆಯಲು ಈ ಕಾದಂಬರಿ ನಡೆಸುವ ಪ್ರಯತ್ನ ಅತಿ ಮುಖ್ಯವೂ ಮೌಲಿಕವೂ ಆಗಿದೆ. “ ಎಂದಿದ್ದಾರೆ.
ಕಾದಂಬರಿಕಾರರಾದ ನಾಗತಿಹಳ್ಳಿ ಚಂದ್ರಶೇಖರ ಇವರು ತಮ್ಮ ಮುನ್ನುಡಿಯಾದ ‘ಮುಖಾಮುಖಿ'ಯಲ್ಲಿ “...ನಿನಗೆ ಆ ಬೆಳಗು ಜಾವ ನೆನಪಿದೆಯೇ? ನಾನು ನಿದ್ರೆಗೆಟ್ಟು ರಾತ್ರಿ ಕಳೆದು ತೂಕಡಿಸುವಾಗ ಹೊರಗೆ ಬೆಳ್ಳಿ ಮೂಡುತ್ತಿತ್ತು. ಈ ಘಮಘಮ ಎಲ್ಲಿಂದ ಬಂತೆಂದು ನಾನು ಕಣ್ಣುಬಿಟ್ಟಾಗ ಹೂ ಬಿಟ್ಟ ಮಲ್ಲಿಗೆ ಬಳ್ಳಿಯಂತೆ ನೀನು ಎದುರು ನಿಂತಿದ್ದೆ. ಆ ಪ್ರಾತಃ ಕಾಲ ಕಂಡ ನಿನ್ನ ಹೊಳೆವ ಕಣ್ಣುಗಳಲ್ಲೇ ಈ ಕಾದಂಬರಿಯ ಬೀಜವಿತ್ತು.
...ನೀನು ನಿಂತೇ ಇದ್ದೆ, ಕೂರಿಸಲು ಒಳ್ಳೆಯ ಖುರ್ಚಿಯೂ ಇರಲಿಲ್ಲ. ಸೋರುವ ಬಾಡಿಗೆ ಮನೆಯಲ್ಲೇ ಬೆಳೆದವನು ನಾನು. ನಿನ್ನ ಶುಭ್ರ ಕಣ್ಣುಗಳ ಹಿಂದೆ ವೇದನೆ ಗೂಡುಕಟ್ಟಿತ್ತು. ಕೆಸರಲ್ಲಿ ಹೂತ ರಥ ಎಳೆಯಲಾರದೆ ಓಡಿ ಬಂದಿದ್ದೆ. ಬದುಕುವ ಉತ್ಕಟ ಪ್ರೀತಿ ಇದ್ದ ನಿನಗೆ ತುರ್ತಾಗಿ ಸಂತೈಸುವ ಕೈಗಳು ಬೇಕಿದ್ದವು. ...ನಾನು ನಿನ್ನನ್ನು ಬಡತೋಳುಗಳಿಂದ ಸಂತೈಸಿದೆ. ಆದರೆ ಕೈಹಿಡಿದು ನಡೆಸಲಾರದವನಾಗಿದ್ದೆ. ನಿನ್ನ ದಾರಿಯನ್ನು ನೀನೆ ನಡೆಯಬೇಕು- ಯಾರೂ ನಡೆಸಲಾರರು-ಒಂಟಿತನವು ಘೋರ ಸತ್ಯ ಎಂದೆ. ನೀನು ಸನ್ಯಾಸದ ಮಾತನಾಡಿದೆ, ನಿರ್ಮೋಹ, ತ್ಯಾಗ, ಏಕಾಕಿತನ, ಕಾಠಿಣ್ಯ, ಶೋಧನೆಗಳು ಇಲ್ಲವೇ ಲೋಭ, ಸೋಗು, ಪ್ರವಚನ-ಇವೆರಡರಲ್ಲಿ ಒಂದು ವರ್ಗದ ‘ಕಲೆಗಾರಿಕೆ' ಸನ್ಯಾಸಕ್ಕೆ ಬೇಕೇ ಬೇಕು. ಸನ್ಯಾಸ ನಮ್ಮಂಥವರಿಗಲ್ಲ ಎಂದೆ. ನೀನು ಒಪ್ಪಲಿಲ್ಲ.” ಎಂದು ಕಥೆಯ ಹಂದರವನ್ನು ತೆರೆದಿಟ್ಟಿದ್ದಾರೆ. ಆಸಕ್ತಿಯನ್ನು ಕುದುರಿಸಿದ್ದಾರೆ.
೩೨೫ ಪುಟಗಳ ಸುದೀರ್ಘವಾದ ಕಾದಂಬರಿಯನ್ನು ನಾಗತಿಹಳ್ಳಿ ಚಂದ್ರಶೇಖರ ಇವರು ತಮ್ಮ ಪ್ರೀತಿಯ ವೈದ್ಯರಾದ ಡಾ. ಎಂ. ಕೃಷ್ಣ ಭಾರ್ಗವ ಇವರಿಗೆ ಅರ್ಪಿಸಿದ್ದಾರೆ.