ಚುಟ್ಟಾ ನಾಡಿನಲ್ಲಿ ಮಂಗಳೂರು ಬೀಡಿ

ಚುಟ್ಟಾ ನಾಡಿನಲ್ಲಿ ಮಂಗಳೂರು ಬೀಡಿ

ಬರಹ

ಆಗಿನ್ನು ಮದುವೆ ಆಗಿ ಆರೇಳು ತಿಂಗಳಾಗಿತ್ತಷ್ಟೆ. ನಾವು ಆಗ ಡೊಮಿನಿಕನ್ ರಿಪಬ್ಲಿಕ್ (Dominican Republic) ನಲ್ಲಿ ವಾಸವಾಗಿದ್ದೆವು. ಫ಼್ಲೋರಿಡ ತೀರದಿಂದ ಸುಮಾರು ಆರನೂರು ಮೈಲಿ ದೂರ ಕೆರಿಬ್ಬಿಯನ್ ಸಮುದ್ರದಲ್ಲಿದೆ. ಇಲ್ಲಿಂದ ಜಮೈಕ ಸಮುದ್ರದಾಚೆ ಸುಮಾರು ಇನ್ನೂರು ಮೈಲಿರಬಹುದು. ನಾವು ವಾಸಿಸಿದ/ಪ್ರಯಾಣಿಸಿದ ಎಲ್ಲ ಕಡೆಗಳಲ್ಲಿ ನಮಗೆ ಅತ್ಯಂತ ಪ್ರಿಯವಾದ ದೇಶವಿದು. ಈ ದೇಶ-ಜನರ ಬಗ್ಗೆ ಮುಂದೆ ಸಾಕಷ್ಟು ಬರೆಯುವುದಿದೆ.

ಡೊಮಿನಿಕನ್ ರಿಪಬ್ಲಿಕ್ ನ ರಾಜಧಾನಿ “ಸ್ಯಾನ್ತೊ ದೊಮಿಂಗೊ” (Santo Domingo). ಇಲ್ಲಿನ ಪರಮ ಪ್ರತಿಶ್ಟಿತ ಬ್ಯಾಂಕೊಂದರ IT/Software ವಿಭಾಗದಲ್ಲಿ ನಾನು ಕೆಲಸ ಮಾಡುತಿದ್ದೆ. ಈ ಬ್ಯಾಂಕಿನ ಹೆಸರು ಹೇಳಿದರೆ ಸಾಕು ವಿಮಾನ ನಿಲ್ದಾಣದ ವಲಸಾಧಿಕಾರಿ (immigration officer) ಕೂಡ ಮರು ಪ್ರಶ್ನೆ ಇಲ್ಲದೆ ಪಾಸಪೋರ್ಟ್ ನಲ್ಲಿ ಠಸ್ಸೆ (immigration seal/stamp) ಒತ್ತಿ ಒಳಗೆ ಬಿಡುತ್ತಿದ್ದರು. ಮದುವೆ ಆದ ಹೊಸತು, ಹೊಸ ಜಾಗ ಜೊತೆಗೆ ಇನ್ನು ಮಕ್ಕಳು-ಮರಿಗಳಿಲ್ಲದೆ ಸ್ವೇಛ್ಛಂದನ. ಆದ್ದರಿಂದ ಒಂದು ನಾಲ್ಕೈದು ದಿನ ಹಾಯಾಗಿ ಕ್ಯೂಬಾಗೆ (Cuba) ಹೋಗಿ ಬರೋಣವೆಂದು ಅಲ್ಲಿಂದ ಒಂದು ವಾರಾಂತ್ಯ (weekend) ಕ್ಯೂಬಾದ ರಾಜಧಾನಿ ಹವಾನಗೆ ಹೋದೆವು. ಇಲ್ಲಿ ಎಲ್ಲ ದೇಶಗಳೂ ಚಿಕ್ಕ ಪುಟ್ಟ ದ್ವೀಪಗಳಾದ್ದರಿಂದ ಹವಾನಾಕ್ಕೆ ವಿಮಾನದಲ್ಲೇ ಹೋಗಬೇಕಾಗಿತ್ತು.

ನನ್ನ ಮೊದಲ ಹಾಗು ಇದುವರೆಗೆ ಕಡೆಯ ಸಮತವಾದಿ (communist) ದೇಶವೊಂದರ ಪ್ರಯಾಣ ಇದು. ಕ್ಯೂಬಾ ಅನುಭವದ ಬಗ್ಗೆ ಮತ್ತೊಮ್ಮೆ ಬರೆಯುತ್ತೇನೆ. ಆದರೆ ನನ್ನ ಮನಸ್ಸಿಗೆ ನಾಟಿದ ಒಂದು ಮುಖ್ಯವಾದ ವಿಷಯವೆಂದರೆ, ಇಲ್ಲಿನ ಜನ ಎಷ್ಟು ಕಡು ಬಡವರೋ ಅಷ್ಟೇ ಸ್ನೇಹಪರರು ಹಾಗು ಉಲ್ಲಾಸಿಗರು (jolly)! ಈಗ ವಿಷಯಕ್ಕೆ ಬರುತ್ತೇನೆ:

ಹವಾನದಲ್ಲಿ ಒಂದು ದಿನ ನಗರದ ಪ್ರೇಕ್ಷಣೀಯ ಸ್ಥಳಗಳ ಕಿರುಪರಿಚಯದ ಟೂರ್ ಒಂದಕ್ಕೆ ಹೋಗಿದ್ದೆವು. ನಮ್ಮಿಬ್ಬರನ್ನು ಬಿಟ್ಟರೆ ಮಿಕ್ಕವರೆಲ್ಲ ಅಮೇರಿಕ, ಇಂಗ್ಲೆಂಡ್ ಅಥವಾ ಯುರೋಪಿಯನ್ನರೆ ಬಸ್ಸಿನ ತುಂಬ. ಹಾಗೆ ನೋಡಿದರೆ, ನಾವು ಕ್ಯೂಬಾದಲ್ಲಿ ಬಿಳಿಯರಲ್ಲದ ಬೇರೆ ಯಾವುದೇ ಜನಾಂಗದ ಪ್ರವಾಸಿಗರನ್ನೇ ನೋಡಲಿಲ್ಲ. ಸುಮಾರು ಸ್ಥಳಗಳನ್ನೆಲ್ಲಾ ತೋರಿಸಿ ಕೊನೆಯದಾಗಿ ಸಂತೆಯ ಹಾಗೆ ಇದ್ದ ಹೊರಾಂಗಣ ಮಾರುಕಟ್ಟೆಯೊಂದರಲ್ಲಿ ಬಸ್ಸು ನಿಂತಿತು. ಅಲ್ಲಿ ಬೇಕಾದ ಸ್ಥಳೀಯ ಕರಕುಶಲ ವಸ್ತುಗಳು, ಕ್ಯೂಬಾದ ಸುಪ್ರಸಿದ್ಧ ರಮ್ಮು ಹಾಗು ಚುಟ್ಟ (cigar) ಮಾರುವ ಸಾಕಷ್ಟು ಅಂಗಡಿಗಳಿದ್ದವು. ಬಸ್ಸಿನಲ್ಲಿ ಪರಿಚಯವಾದ ನ್ಯೂ ಯಾರ್ಕಿನ ಇಳಿ ವಯಸ್ಸಿನ ದಂಪತಿಗಳಿಬ್ಬರು ನಮ್ಮೊಂದಿಗೆ ಇದ್ದರು, ನಮ್ಮಂತೆಯೆ ಅವರು ಕೆಲ ವಸ್ತುಗಳನ್ನು ಕೊಂಡರು. ಹಾಗು ಒಂದೆರಡು ಡಬ್ಬಗಳಷ್ಟು ಚುಟ್ಟಾವನ್ನೂ ಕೊಂಡರು. ಮುಂದೆ ನಡೆಯುತ್ತ ನಾನು ಆತನೊಂದಿಗೆ ದೇಶಾವರಿ ಮಾತನಾಡುತ್ತ ಬರುತಿದ್ದೆ. ಆಗ ಆತ “ಕ್ಷಮಿಸಿ, ನಾನು smoke ಮಾಡಬಹುದು ತಾನೆ?” ಎಂದು ಕೇಳಿದ. ಮುಲಾಜಿಲ್ಲದೆ ಬೇಕಾಬಿಟ್ಟಿ ದಮ್ಮು ಎಳೆದು ಮುಖಕ್ಕೆ ಹೊಗೆ ಬಿಡುತಿದ್ದ ಗೆಳೆಯರಿದ್ದ ನನಗೆ ಈತ ಸೇದುವುದರಲ್ಲಿ ಏನೂ ಅಭ್ಯಂತರವಿರಲಿಲ್ಲ. ಆಗ ಆತ ತನ್ನ ಜೇಬಿನಿಂದ ಒಂದು ಕಟ್ಟು ಅಚ್ಚ ಕನ್ನಡದ ಅಕ್ಷರಗಳಿರುವ ಮಂಗಳೂರಿನ 30 ಮಾರ್ಕಿನ ಬೀಡಿ ಕಟ್ಟೊಂದನ್ನ ಹೊರತೆಗೆದಾಗ ಒಂದು ಮಿಂಚಿನ ಅನುಭವ! ಮಂಗಳೂರು ಎಲ್ಲಿ, ಈಗ ನಾನಿದ್ದ ಹವಾನ ಎಲ್ಲಿ. ಇಲ್ಲಿ ಒಬ್ಬ ಅಮೇರಿಕನ್ನು ಮಂಗಳೂರು ಬೀಡಿ ಸೇದುವುದೆಂದರೆ ಏನು?!?

ಆತನೇ ವಿವರಿಸಿದಂತೆ, ಈ ಬೀಡಿ ಕಟ್ಟು ಆತ ನ್ಯೂ ಯಾರ್ಕಿನ “ದೇಸಿ” ಅಂಗಡಿಯೊಂದರಲ್ಲಿ ಸಾಮಾನ್ಯವಾಗಿ ಕೊಳ್ಳುತಿದ್ದರಂತೆ. ಆತನಿಗೇಕೋ ಬೀಡಿಯ ಹೊಗೆಯಲ್ಲೇ ತಂಬಾಕಿನ ನಿಜವಾದ ಸ್ವಾದ ಸಿಗುತ್ತಿತ್ತಂತೆ! ಇದು ಆತ ನನಗೆ ವಿವರಿಸಿದ್ದು ಚುಟ್ಟಾದ ರಾಜಧಾನಿ ಎನಿಸಿದ ಹವಾನಾದ ಪ್ರಸಿದ್ಧ ಚುಟ್ಟಾ ಮಾರುಕಟ್ಟೆಯಲ್ಲಿ, ಮಂಗಳೂರು ಬೀಡಿಯ ಹೊಗೆ ಎಳೆಯುತ್ತಾ!