ಚುನಾವಣಾ ರಾಜಕೀಯವೇ ಪ್ರಜಾಪ್ರಭುತ್ವಕ್ಕೆ ಮಾರಕವಾಗುತ್ತಿದೆಯೇ ?

ಚುನಾವಣಾ ರಾಜಕೀಯವೇ ಪ್ರಜಾಪ್ರಭುತ್ವಕ್ಕೆ ಮಾರಕವಾಗುತ್ತಿದೆಯೇ ?

ವಿವೇಚನೆ ಇಲ್ಲದ ಮತದಾರರ ಕಾರಣಕ್ಕಾಗಿ ಪ್ರಜಾಪ್ರಭುತ್ವ ಕುಸಿಯುತ್ತಿದೆಯೇ ?ಅಥವಾ, ಜಾಗತೀಕರಣದ ಕಾರಣದಿಂದಾಗಿ ಹಣದ ಹಿಂದೆ ಹೋಗಿ ಮಾನವೀಯ ಮೌಲ್ಯಗಳನ್ನು ಮರೆತ ಕಾರಣದಿಂದ ಪ್ರಜಾಪ್ರಭುತ್ವ ನಶಿಸುತ್ತಿದೆಯೇ ? ಅಥವಾ ಅಕ್ಷರಸ್ಥರ ಸಂಖ್ಯೆ ಹೆಚ್ಚಾದಷ್ಟೂ ಪ್ರಜಾಪ್ರಭುತ್ವದ ಆಡಳಿತ ವ್ಯವಸ್ಥೆ ದಿಕ್ಕು ತಪ್ಪುತ್ತಿದೆಯೇ ? ಅಥವಾ ಭಾರತದ ಸಾಮಾಜಿಕ ವ್ಯವಸ್ಥೆಯ ಕೆಲವು ಲೋಪ ದೋಷಗಳು ಆಧುನಿಕತೆಗೆ ಒಗ್ಗಿಕೊಳ್ಳದೆ ನಲುಗುತ್ತಿದೆಯೇ ? ಅಥವಾ ವಿನಾಶ ಕಾಲೇ ವಿಪರೀತ ಬುದ್ದಿ ಎಂಬಂತೆ ಯಾವುದಾದರೂ ದುರ್ಘಟನೆಯ ಮುನ್ಸೂಚನೆಯೇ ? ಅಥವಾ

ಈ ಎಲ್ಲವೂ ಕಾಲ ಕಾಲಕ್ಕೆ ಘಟಿಸುವ ಸೃಷ್ಟಿಯ ಸಹಜ ಕ್ರಿಯೆಗಳೇ ? ಅಥವಾ ಜಾತಿ ಧರ್ಮ ಸಿದ್ಧಾಂತ ಭಾಷೆಗಳ ಸಂಕುಚಿತಕ್ಕೆ ಶರಣಾದ ಮನಸ್ಸುಗಳ ಪರಿಣಾಮವೇ ?

ಏಕೆಂದರೆ ಕೋವಿಡ್ ನಿರ್ವಹಣೆಯ ಆಡಳಿತಾತ್ಮಕ ಅರಾಜಕತೆ ಮಾತ್ರವಲ್ಲದೆ ಸದ್ಯದ ಭಾರತೀಯ ಸಮಾಜದ ಮಾನಸಿಕ ಅರಾಜಕತೆಯನ್ನು ಗಮನಿಸಬೇಕಿದೆ. ಸಂಪರ್ಕ ಕ್ರಾಂತಿಯ ಮಾಧ್ಯಮ ಪ್ರಭಾವದ ಸಮಯದಲ್ಲಿ ಈ ಅರಾಜಕತೆ ಮತ್ತಷ್ಟು ಹೆಚ್ಚಾಗುತ್ತಿದೆ.

ಯದ್ದದ ರೀತಿಯ ಸನ್ನಿವೇಶದಲ್ಲಿ ಜೀವ ಜೀವನದ ಹೋರಾಟದ ಸಂದರ್ಭದಲ್ಲಿ ಇರಬೇಕಾಗಿದ್ದ ದಕ್ಷತೆ ಪ್ರಾಮಾಣಿಕತೆ ಬದ್ದತೆ ಮಾನವೀಯತೆ ಧೈರ್ಯ ವಿವೇಚನೆಗಳ ಜಾಗದಲ್ಲಿ ಭ್ರಷ್ಟತೆ, ಸೋಗಲಾಡಿತನ, ಭಯ, ಆತಂಕ, ಉಢಾಪೆ, ನಿರಾಸೆಗಳು ಗಾಳಿ ಸುದ್ದಿಗಳು ಮೇಲುಗೈ ಪಡೆಯುತ್ತಿವೆ.

ಸಾವಿನ ಸಂದರ್ಭದ ಪ್ರತಿಕ್ರಿಯೆಗಳು, ಅದನ್ನು ಮಾಧ್ಯಮಗಳು ಬಿಂಬಿಸುವ ರೀತಿ ಮನಸ್ಸುಗಳನ್ನು ಅನವಶ್ಯಕವಾಗಿ ಅಲ್ಲೋಲ ಕಲ್ಲೋಲ ಆಗುವಂತೆ ಮಾಡುತ್ತಿದೆ. ಒಂದಷ್ಟು ತಾಳ್ಮೆ, ಒಂದಷ್ಟು ಸಹಿಷ್ಣುತೆ, ಒಂದಷ್ಟು ಸ್ಥಿತಪ್ರಜ್ಞತೆ, ಒಂದಷ್ಟು ವಿಮರ್ಶೆ ವಿವೇಚನೆ ಕಾಣೆಯಾಗಿ ಮನಸ್ಸುಗಳು ಗೊಂದಲದ ಗೂಡುಗಳಾಗಿವೆ. ಒಂದು ವರ್ಷಕ್ಕಿಂತ ಹೆಚ್ಚಿನ ಕೊರೋನಾ ವೈರಸ್ ಹಾವಳಿಯಿಂದ ನಾವು ಕಲಿಯಬೇಕಾಗಿದ್ದ ಪಾಠಕ್ಕಿಂತ ಭಯ ಭೀತಿಯಿಂದ ಮತ್ತಷ್ಟು ತಪ್ಪುಗಳೇ ಹೆಚ್ಚಾಗುತ್ತಿದೆ. ಇದಕ್ಕೆ ಬಹುಮುಖ್ಯ ಕಾರಣ ನಮ್ಮಲ್ಲಿ ಅಡಗಿರುವ ಸಂಕುಚಿತ ಮನೋಭಾವವೇ ಆಗಿದೆ. 

ಎಷ್ಟು ಸಂಕುಚಿತತೆ ಎಂದರೆ ಸೃಷ್ಟಿಯ ಮೂಲದಿಂದ ನಮ್ಮ ಯೋಚನೆಗಳನ್ನು ಗ್ರಹಿಸದೆ ಕೇವಲ ಆಯಸ್ಸು ಹಣ ಅಧಿಕಾರ ವೈರಸ್ ವೆಂಟಿಲೇಟರ್ ಆಕ್ಸಿಜನ್ ಆಸ್ಪತ್ರೆ ಆಂಬುಲೆನ್ಸ್ ಸಾವು ಎನ್ನುತ್ತಾ ವೈಯಕ್ತಿಕ ನೆಲೆಯಿಂದ ಯೋಚಿಸುತ್ತಾ ಸಂಕಷ್ಟವನ್ನು ಮತ್ತಷ್ಟು ಹೆಚ್ಚು ಮಾಡಿಕೊಳ್ಳುತ್ತಿದ್ದೇವೆ.

ಬೆಂಗಳೂರಿನಂತ ನಗರದಲ್ಲಿ ಆಸ್ಪತ್ರೆಯ ಹಾಸಿಗೆಗಳು, ರೆಡಿಸಿಮರ್ ನಂತ ಔಷಧಿಗಳು, ಆಕ್ಸಿಜನ್ ಗಳು ಬ್ಲಾಕ್ ನಲ್ಲಿ ಬಿಕರಿಯಾಗುತ್ತಿದೆ ಮತ್ತು ಅದು ಒಂದು ದೊಡ್ಡ ದಂಧೆಯಾಗಿದೆ ಎನ್ನುವ ಸುದ್ದಿಯೇ ಅರಾಜಕತೆಯ ಗಂಭೀರವಾದ ಲಕ್ಷಣ ಎಂದು ಪರಿಗಣಿಸಬೇಕು. 

ಪ್ರಜೆಗಳಿಗಾಗಿ ಜನ ಪ್ರತಿನಿಧಿಗಳು, ಅಧಿಕಾರ ಶಾಹಿ ಮುಂತಾದ ಬಹುದೊಡ್ಡ ವ್ಯವಸ್ಥೆ ಇದೆ. ಆದಾಯದ ಅತಿಹೆಚ್ಚು ಪಾಲು ಇವರುಗಳ ಸಂಬಳ ಸೌಕರ್ಯಗಳಿಗೇ ಖರ್ಚಾಗುತ್ತದೆ. ಇಡೀ ದೇಶದ ಅಧಿಕಾರ ಮತ್ತು ಎಲ್ಲಾ ಸಂಪನ್ಮೂಲಗಳು ಇರುವುದೇ ಇವರ ಬಳಿ. 

ಒಂದು ವೇಳೆ ಈ ವ್ಯವಸ್ಥೆ ಒಳ್ಳೆಯ ದಕ್ಷತೆಯಿಂದ ಕೆಲಸ ಮಾಡಿದ್ದರೆ ಸಾವುಗಳನ್ನು ತಡೆಯುವುದು ಕಷ್ಟವಾಗಿದ್ದರು ಕನಿಷ್ಠ ನೋವುಗಳು ಮತ್ತು ಅಸಹಾಯಕತೆಯನ್ನು ಕಡಿಮೆ ಮಾಡಬಹುದಿತ್ತು. ಮಂತ್ರಿಗಳು ಶಾಸಕರು ಹಿರಿಯ ಅಧಿಕಾರಿಗಳು ಇತರೆ ಕೆಲಸಗಳನ್ನು ಬದಿಗಿಟ್ಟು ಒಂದೆರಡು ತಿಂಗಳು ಟೊಂಕಕಟ್ಟಿ ನಿಂತಿದ್ದರೆ, ಮಾಧ್ಯಮಗಳು ಸ್ವಲ್ಪ ತಾಳ್ಮೆ ಮತ್ತು ವಿವೇಚನೆಯಿಂದ ವರ್ತಿಸಿದ್ದರೆ, ಆಸ್ಪತ್ರೆಗಳು ಇನ್ನೊಂದಿಷ್ಟು ಮಾನವೀಯತೆ ಮೆರೆದಿದ್ದರೆ ನಿಜಕ್ಕೂ ಇಷ್ಟೊಂದು ಅರಾಜಕತೆ ಇರುತ್ತಿರಲಿಲ್ಲ.

ಸಾಮಾನ್ಯ ಜನ ಯಾವಾಗಲೂ ವೈಯಕ್ತಿಕ ಹಿತಾಸಕ್ತಿಯ ಕಡೆಗೆ ಹೆಚ್ಚಿನ ಒಲವು ಹೊಂದಿರುತ್ತಾರೆ. ಅದನ್ನು ಸರಿದೂಗಿಸಿ ಒಂದು ವ್ಯವಸ್ಥಿತ  ಸಮಾಜ ಅಥವಾ ದೇಶ ಕಟ್ಟುವ  ಸಲುವಾಗಿಯೇ  ಪ್ರಜಾಪ್ರಭುತ್ವ ಅಸ್ತಿತ್ವದಲ್ಲಿದೆ. ಎಂತಹ ಪರಿಸ್ಥಿತಿಯಲ್ಲೂ ಜನರ ದೇಶದ ಹಿತಾಸಕ್ತಿ ಕಾಪಾಡುವ ಜವಾಬ್ದಾರಿ ನ್ಯಾಯಾಂಗ ಶಾಸಕಾಂಗ ಕಾರ್ಯಾಂಗದ ಜವಾಬ್ದಾರಿ. ಇದೊಂದು ಬಹುದೊಡ್ಡ ಸಾಂಕ್ರಾಮಿಕ ರೋಗ ಎಂಬುದು ನಿಜವೇ ಆಗಿದ್ದರು ಶಾಸಕಾಂಗ ಸಮಾಧಾನಕರವಾಗಿ ಕಾರ್ಯನಿರ್ವಹಿಸುತ್ತಿಲ್ಲ ಮತ್ತು ಜನರಲ್ಲಿ ಆತ್ಮವಿಶ್ವಾಸ ತುಂಬುವಲ್ಲಿ ವಿಫಲವಾಗಿದೆ ಎಂಬುದು ಮೇಲ್ನೋಟಕ್ಕೆ ಕಾಣುತ್ತಿದೆ. ಮಾಧ್ಯಮಗಳು ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸುತ್ತಿವೆ. 

ವಾಸ್ತವಕ್ಕಿಂತ ಅತಿರಂಜಿತ ಸುದ್ದಿಗಳು, ಬದುಕುವ ಆತ್ಮವಿಶ್ವಾಸ ತುಂಬುವ ಜಾಗದಲ್ಲಿ ಭಯ, ಸಿನಿಕತನದ ವರ್ತನೆ, ಸಮಗ್ರ ಮತ್ತು ದೂರದೃಷ್ಟಿಯ ಚಿಂತನೆ ಮಾಡದೆ ಜನರನ್ನು ಅತ್ಯಂತ ನಿಕೃಷ್ಟವಾಗಿ ಕಾಣುವುದು, ಒಳ್ಳೆಯದು ಮಾಡುವ ನೆಪದಲ್ಲಿ ದುರಹಂಕಾರದ ಮಾತುಗಳು ಹೀಗೆ ಪರಿಸ್ಥಿತಿಯ ಅಧೋಗತಿಗೆ ತಮ್ಮ ಕಾಣಿಕೆ ಸಲ್ಲಿಸುತ್ತಿವೆ.

ಪ್ರಜಾಪ್ರಭುತ್ವದ ನಿಜವಾದ ಯಶಸ್ಸು ಅಡಗಿರುವುದೇ ಮಾನವೀಯ ಮೌಲ್ಯಗಳು ಮತ್ತು ವಿವೇಚನಾಯುಕ್ತ ಮತದಾರ ಪ್ರಜೆಗಳಿಂದ. ಅದು ಇಲ್ಲದಿದ್ದರೆ ಭಂಡ ಭ್ರಷ್ಟ ಮತಿಹೀನ ವ್ಯಕ್ತಿಗಳು ಜನರನ್ನು ಆಳುತ್ತಾ ತಾವು ಮಜಾ ಉಡಾಯಿಸುತ್ತಾರೆ ಮತ್ತು ಜನರನ್ನು ದೂಷಿಸುತ್ತಾ ಜನರ ಐಕ್ಯತೆಯನ್ನು ಪರೋಕ್ಷವಾಗಿ ಮುರಿಯುತ್ತಾ ತಾವೇ ಅಧಿಕಾರ ಚಲಾಯಿಸುತ್ತಿರುತ್ತಾರೆ. ಅದರ ಪರಿಣಾಮವೇ ಆಡಳಿತ ಮತ್ತು ಮಾನಸಿಕ ಅರಾಜಕತೆ.

ಇದನ್ನು ಮೀರುವ ವಿವೇಚನೆ ಮತ್ತು ಧೈರ್ಯ ಪ್ರದರ್ಶಿಸುವ ಸಮಯ ಈಗ ಬಂದಿದೆ. ದಯವಿಟ್ಟು ತಾಳ್ಮೆಯಿಂದ ಮತ್ತೊಮ್ಮೆ ಯೋಚಿಸಿ ಎಂದು ಮನವಿ ಮಾಡಿಕೊಳ್ಳುತ್ತಾ......

ಪ್ರಜಾಪ್ರಭುತ್ವ ಮತ್ತು ಅದರ ಮೌಲ್ಯಗಳ ಉಳಿವಿಗಾಗಿ ಮಾನವೀಯ ಮೌಲ್ಯಗಳನ್ನು ಉಳಿಸೋಣ......

  • ಜ್ಞಾನ ಭಿಕ್ಷಾ ಪಾದಯಾತ್ರೆಯ 185 ನೆಯ ದಿನ ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರದಲ್ಲಿಯೇ ವಾಸ್ತವ್ಯ ಹೂಡಿದ ಸಂದರ್ಭದಲ್ಲಿ ಬರೆದ ಬರಹ.

-ವಿವೇಕಾನಂದ. ಹೆಚ್.ಕೆ., ಬೆಂಗಳೂರು

ಚಿತ್ರ : ಅಂತರ್ಜಾಲ ತಾಣ