ಚುನಾವಣಾ ಸಮೀಕ್ಷೆಗಳೆಂಬ ಮನರಂಜನೆಗಳು...

ಚುನಾವಣಾ ಸಮೀಕ್ಷೆಗಳೆಂಬ ಮನರಂಜನೆಗಳು...

ಬರಹ

ಚುನಾವಣಾ ಸಮೀಕ್ಷೆಗಳೆಂಬ ಮನರಂಜನೆಗಳು...

ಚುನಾವಣೆಗಳು ಹತ್ತಿರ ಬರುತ್ತಿದ್ದಂತೆ ಚುನಾವಣಾ ಸಮೀಕ್ಷೆಗಳ ಭರಾಟೆಯೂ ಶುರುವಾಗುತ್ತದೆ. ಚುನಾವಣೆಗಳು ಹಂತಾನುಹಂತವಾಗಿ ನಡೆಯುವುದರಿಂದ ಈ ಸಮೀಕ್ಷೆಗಳೂ ಹಂತಾನುಹಂತವಾಗಿ ಪ್ರಕಟವಾಗುತ್ತಾ ನಮ್ಮ ಕುತೂಹಲ ಕೆರಳಿಸಿವೆ! ಚುನಾವಣೆಗಳು ಎಂದರೆ ಇತ್ತೀಚೆಗೆ ಅಕ್ರಮ, ಅಶಾಂತಿ ಎಂದೇ ಆಗಿರುವುದರಿಂದ ಅವನ್ನು ಆದಷ್ಟೂ ಶಾಂತಿ ಹಾಗೂ ಸುವ್ಯವಸ್ಥೆಗಳೊಂದಿಗೆ ನಡೆಸಲು ಚುನಾವಣಾ ಆಯೋಗ, ಮೊದಲ್ಲಿದ್ದಂತೆ ಮತದಾನವನ್ನು ಒಂದೇ ದಿನಕ್ಕೆ ಬದಲಾಗಿ, ಹಲವಾರು ಹಂತಗಳಲ್ಲಿ ನಡೆಸಲು ಮುಂದಾಗಿದೆ. ಮೇಲ್ವಿಚಾರಣೆ ಚುರುಕಾಗಿರಲು ಮತ್ತು ಭದ್ರತಾ ಪಡೆಗಳನ್ನು ಒಂದೆಡೆಯಿಂದ ಇನ್ನೊಂದೆಡಗೆ ಸಾಗಿಸಲು ಅನುಕೂಲವಾಗುವಂತೆ ಈ ಹೊಸ ಪದ್ಧತಿಯನ್ನು ಅಳವಡಿಸಿಕೊಳ್ಳಲಾಗಿದೆ. ಬಹುತೇಕ ಶಾಂತಿಯುತ ಚುನಾವಣೆಗಳಿಗೆ ಹೆಸರಾಗಿದ್ದ ಕರ್ನಾಟಕದಲ್ಲೂ ಇದೇ ಮೊದಲ ಬಾರಿಗೆ ಎರಡು ವಾರಗಳಷ್ಟು ಕಾಲಾವಧಿಯಲ್ಲಿ ಹರಡಿಕೊಂಡಿರುವ ಮೂರು ದಿನಾಂಕಗಳಲ್ಲಿ ಮತ್ತು ರಾಜ್ಯದ ಚುನಾವಣಾ ಇತಿಹಾಸದಲ್ಲೇ ಕಂಡರಿಯದಂತಹ ಪ್ರಮಾಣದ ಭದ್ರತಾ ವ್ಯವಸ್ಥೆಯೊಂದಿಗೆ ಚುನಾವಣೆಗಳು ನಡೆಯುತ್ತಿವೆ.

ರಾಜ್ಯದಲ್ಲಿ ಈ ಬಾರಿ, ಹಿಂದಿನ ಸರ್ಕಾರದ ಸಂದರ್ಭದಲ್ಲಿ ಕಂಡು ಬಂದ ಅಧಿಕಾರ ಹಸ್ತಾಂತರದ ಗೊಂದಲದಿಂದಾಗಿ ಸ್ಪರ್ಧೆ ಬಹು ತುರುಸಾಗಿರುವ ಮತ್ತು ಹಲವಾರು ಅಭ್ಯರ್ಥಿಗಳು ತಮ್ಮ ಆಸ್ತಿ ಕೋಟಿಗಟ್ಟಲೆ ರೂಪಾಯಿಗಳದೆಂದು ಅಧಿಕೃತವಾಗಿಯೇ ಘೋಷಿಸಿಕೊಂಡಿರುವ ಹಿನ್ನೆಲೆಯಲ್ಲಿ, ಚುನಾವಣಾ ಆಯೋಗದ ಈ ಮುನ್ನೆಚ್ಚರಿಕೆಯ ವ್ಯವಸ್ಥೆಯನ್ನು - ಸ್ವಲ್ಪ ಅತಿ ಎನ್ನಿಸಿದರೂ - ಯಾರಾದರೂ ಮೆಚ್ಚಲೇ ಬೇಕಾಗಿದೆ. ಏಕೆಂದರೆ, ಅಯೋಗ ಈ ಬಾರಿ, ರಾಜ್ಯಪಾಲರ ಆಡಳಿತದ ಅನುಕೂಲಕರ ಪರಿಸ್ಥಿತಿಯಿಂದಾಗಿ ಚುನಾವಣಾ ಕಾನೂನುಗಳನ್ನು ಅತಿ ಬಿಗಿಯಾಗಿ ಜಾರಿಗೆ ತರಲು ಯತ್ನಿಸಿದ್ದು, ಯಾವಾಗಲೂ ಸಾರ್ವಜನಿಕರ ಕಿರಿಕಿರಿಗೆ ಕಾರಣವಾಗುತ್ತಿದ್ದ ಚುನಾವಣಾ 'ಗದ್ದಲ' ಸಾಕಷ್ಟು ಕಡಿಮೆಯಾಗಿದೆ. ಆಯೋಗದ ಈ ರೀತಿಯ ಕಟ್ಟುನಿಟ್ಟು, ತಮಗಾಗಿ ಪ್ರಚಾರ ಮಾಡಿಕೊಳ್ಳುವ ತಮ್ಮ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಮೊಟಕುಗೊಳಿಸಿದೆ ಎಂದು ಎಲ್ಲ ಪಕ್ಷಗಳೂ ಮತ್ತು ಅವುಗಳ ಅಭ್ಯರ್ಥಿಗಳು ದೂರುತ್ತಿರುವರಾದರೂ, ಇದಕ್ಕೆ ಕಾರಣ ಇವರೆಲ್ಲ ಸೇರಿ ಕಳೆದ ಚುನಾವಣೆಗಳಲ್ಲಿ ಸೃಷ್ಟಿಸಿದ್ದ ಆತಂಕಕಾರಿ ವಾತಾವರಣವೇ ಆಗಿರುವುದರಿಂದ, ನಾವು ಈ ವಿಷಯದಲ್ಲಿ ಆಯೋಗವನ್ನು ಅದರ ಕಾರ್ಯ ವೈಖರಿಗಾಗಿ ಅಭಿನಂದಿಸಲೇ ಬೇಕಿದೆ.

ಆದರೆ ಮತದಾರರ ಪಟ್ಟಿ ತಯಾರಿ ಮತ್ತು ಅದರ ಪರಿಷ್ಕರಣೆಯ ವಿಷಯದಲ್ಲಿ ಆಯೋಗವನ್ನು ಹೀಗೆ ಅಭಿನಂದಿಸಲಾಗದು. ಏಕೆಂದರೆ, ಈ ಬಾರಿಯ ಮತದಾರರ ಪಟ್ಟಿ ಅತ್ಯಂತ ದೋಷಪೂರ್ಣವೂ ಗೊಂದಲಕಾರಿಯೂ ಆಗಿದೆಯೆಂದು ಎಲ್ಲ ಕಡೆಗಳಿಂದ ದೂರು ಕೇಳಿ ಬರುತ್ತಿದೆ. ಈ ಪಟ್ಟಿಯನ್ನು ಸಿದ್ಧಪಡಿಸುವ ಸಿಬ್ಬಂದಿ ಈ ಕೆಲಸದಲ್ಲಿ ಸರಿಯಾಗಿ ತರಬೇತಿಗೊಳ್ಳದಿರುವುದು ಮತ್ತು ಈ ಸಂಬಂಧ ಸೂಕ್ತ ಮೇಲ್ವಿಚಾರಣಾ ವ್ಯವಸ್ಥೆ ಇಲ್ಲದಿರುವುದೇ ಇದಕ್ಕೆ ಕಾರಣವಾಗಿದೆ. ಅಲ್ಲದೆ, ಚುನಾವಣಾ ಆಯೋಗ ಈ ಕೆಲಸಗಳಿಗಾಗಿ ಕಂದಾಯ ಇಲಾಖೆಯ ಅದಕ್ಷ ಮತ್ತು ಭ್ರಷ್ಟ ಸಿಬ್ಬಂದಿಯನ್ನೇ ಅವಲಂಬಿಸಬೇಕಾಗಿ ಬಂದಿರುವುದೇ ಈ ಪಟ್ಟಿ ಅತ್ಯಂತ ಬೇಜವಾಬ್ದಾರಿಯಿಂದ ತಯಾರಾಗಿರುವುದಕ್ಕೆ ಇನ್ನೊಂದು ಕಾರಣವಾಗಿದೆ. ಇವರಲ್ಲಿ ಬಹುತೇಕರಿಗೆ ಪ್ರಜಾಪ್ರಭುತ್ವದ ಅಥವಾ ಗಣರಾಜ್ಯ ವ್ಯವಸ್ಥೆಯ ಮಹತ್ವವಾಗಲೀ, ಅದರಲ್ಲಿ ಚುನಾವಣೆಗಳಿಗಿರುವ ಪಾವಿತ್ರ್ಯದ ಅರಿವಾಗಲೀ ಇದ್ದಂತಿಲ್ಲ. ಹೀಗಾಗಿ ಇವರು ಸ್ಥಳೀಯ ರಾಜಕಿಯ ಪುಢಾರಿಗಳ ಹಸ್ತಕ್ಷೇಪಕ್ಕೆ ಅವಕಾಶ ಮಾಡಿಕೊಟ್ಟು, ಅನೇಕ ಹುಸಿ ಮತದಾರರ ಸೇರ್ಪಡೆಗೂ ಕಾರಣರಾಗಿದ್ದಾರೆ. ಇಲ್ಲದೇ ಹೋದಲ್ಲಿ ಈ ಪಟ್ಟಿಯಲ್ಲಿ ಈ ಮೊದಲು, ಆಯೋಗವೇ ಒಪ್ಪಿಕೊಂಡಿದ್ದಂತೆ ಮುವ್ವತ್ತು ಲಕ್ಷಕ್ಕೂ ಹೆಚ್ಚು ಖೊಟ್ಟಿ ಮತದಾರರು ಸೇರಿಕೊಳ್ಳಲು ಹೇಗೆ ಸಾಧ್ಯವಾಗಿರುತ್ತಿತ್ತು?

ಉದಾಹರಣೆಗೆ ನನ್ನ ವಿಳಾಸದಲ್ಲೇ ಏಳು ಜನ ಖೊಟ್ಟಿ ಮತದಾರರು ದಾಖಲಾಗಿದ್ದರು. ಅವುಗಳನ್ನು ಪಟ್ಟಿಯಿಂದ ತೆಗೆಸಿ, ನನ್ನ ಕುಟುಂಬದ ಮತದಾರರ ಹೆಸರುಗಳನ್ನು ಸೇರಿಸಲು ನಾನು ಹರಸಾಹಸ ಮಾಡಬೇಕಾಯಿತು! ಈಗಲೂ ಹೊಸದಾಗಿ ಅರ್ಜಿ ಕೊಟ್ಟವರಲ್ಲಿ ಅನೇಕರ ಹೆಸರುಗಳು ಪಟ್ಟ್ಟಿಯಲ್ಲಿ ಸೇರಿಯೇ ಇಲ್ಲ. ಸೇರಿದ್ದರೂ, ಹೆಸರು, ವಯಸ್ಸು, ಲಿಂಗ, ವಿಳಾಸಗಳಲ್ಲಿ ನಿರ್ಣಾಯಕ ತಪ್ಪುಗಳು ಹೇರಳವಾಗಿವೆ. ಅಂತಹವರು ಗುರುತಿನ ಚೀಟಿಗಾಗಿ ಬಂದ ಸಂದರ್ಭದಲ್ಲಿ ಅನೇಕ ರೀತಿಯ ಪ್ರಶ್ನೆಗಳನ್ನು ಎದುರಿಸಿ ಮುಜಗರಕ್ಕೊಳಪಟ್ಟಿದ್ದಾರೆ. ಇನ್ನು ಹೋದ ಚುನಾವಣೆಗಳಲ್ಲಿ ಹೇಗೂ ಮತದಾನ ಮಾಡಿದ್ದೆವಲ್ಲ ಎಂದು ನಿರಾಳವಾಗಿದ್ದವರು, ಈ ಬಾರಿ ಮತದಾನ ಮಾಡಲು ಹೋಗಿ ತಮ್ಮ ಹೆಸರುಗಳೇ ಕಾಣೆಯಾಗಿರುವದನ್ನು ಕಂಡು ಖೇದ - ನಿರಾಶೆಗಳಿಂದ ವಾಪಸಾಗಿದ್ದಾರೆ! ನಮ್ಮ ಚುನಾವಣಾ ಆಯೋಗ ಮತದಾನದ ವಿಷಯದಲ್ಲಿ ಸಾರ್ವಜನಿಕರಿಗೆ ಸಂಬಂಧಿಸಿದಂತೆ ಎಷ್ಟು ಕಟ್ಟುನಿಟ್ಟಾಗಿರುವುದೋ, ಮತದಾರರ ಪಟ್ಟಿ ತಯಾರಿಯ ವಿಷಯದಲ್ಲೂ ತನ್ನ ಸುಪರ್ದಿಯಲ್ಲಿರುವ ಸಿಬ್ಬಂದಿಯ ವಿಷಯದಲ್ಲೂ ಅಷ್ಟೇ ಕಟ್ಟುನಿಟ್ಟಾಗಿದ್ದರೆ ಮಾತ್ರ ನಮ್ಮ ಚುನಾವಣಾ ವ್ಯವಸ್ಥೆಯನ್ನು ನಿಜವಾದ ಅರ್ಥದಲ್ಲಿ ವಿಶ್ವಾಸಾರ್ಹಗೊಳಿಸಬಹುದು.

ಇನ್ನು ಚುನಾವಣಾ ಸಮೀಕ್ಷೆಗಳ ವಿಷಯಕ್ಕೆ ಬಂದರೆ, ಚುನಾವಣೆಗಳು ಈ ದೇಶದಲ್ಲಿ ಐವ್ವತ್ತಕ್ಕೂ ಹೆಚ್ಚು ವರ್ಷಗಳಿಂದ ನಡೆಯುತ್ತಿದ್ದರೂ, ಈ ಸಮೀಕ್ಷೆಗಳು ಮಾತ್ರ ಕಳೆದ ಹತ್ತು - ಹದಿನೈದು ವರ್ಷಗಳಿಂದೀಚೆಗಷ್ಟೇ ಚಾಲೂ ಆಗಿವೆ. ಇದಕ್ಕೆ ಕಾರಣ, ಚುನಾವಣಾ ನಿರ್ವಹಣೆ ಎನ್ನುವುದು ಪಕ್ಷಗಳು ಮತ್ತು ಅಭ್ಯರ್ಥಿಗಳ ಪಾಲಿಗೆ ಒಂದು ಕೈಗಾರಿಕೆಯ ಸ್ವರೂಪ ಪಡೆಯುತ್ತಿರುವುದೇ ಆಗಿದೆ. ಚುನಾವಣೆಗಳಂತೆ ಇತರೆ ಮಾರುಕಟ್ಟೆ ವಿದ್ಯಮಾನಗಳ ಬಗ್ಗೆ ಸಮೀಕ್ಷೆಗಳನ್ನು ನಡೆಸುವುದೂ ಈಗ ಇನ್ನೊಂದು ಕೈಗಾರಿಕೆಯಾಗಿರುವುದರಿಂದ, ಚುನಾವಣೆಗಳೆಂಬ ಕೈಗಾರಿಕೆ ಇದನ್ನು ತನ್ನ ಪೂರಕ (ancillary) ಕೈಗಾರಿಕೆಯಂತೆ ಪ್ರೋತ್ಸಾಹಿಸುತ್ತಿದೆ! ಈ ಸಮೀಕ್ಷಾ ಸಂಸ್ಥೆಗಳು ತಮ್ಮನ್ನು ತಾವು ಸ್ವತಂತ್ರ ಸಂಸ್ಥೆಗಳೆಂದು ಕರೆದುಕೊಳ್ಳುವವಾದರೂ, ಅವಕ್ಕೂ ಭಾರಿ ಪ್ರಮಾಣದ ಹಣ ಹೂಡಿಕೆಯ ಅಗತ್ಯವಿರುವುದರಿಂದ, ಅವು ಕೂಡಾ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಒಂದಲ್ಲ ಒಂದು ಉದ್ಯಮದೊಂದಿಗೆ ಕೈ ಜೋಡಿಸಿಕೊಂಡೇ ಈ ಸಮೀಕ್ಷೆಗಳನ್ನು ಮಾಡುತ್ತಿವೆ. ಇತ್ತೀಚೆಗೆ ಇವನ್ನು ಮುದ್ರಣ ಅಥವಾ ವಿದ್ಯುನ್ಮಾನ ಮಾಧ್ಯಮಗಳು ತಮ್ಮ ಪ್ರಸಾರ ಅಥವಾ ಟಿ.ಆರ್.ಪಿ. ಹೆಚ್ಚಿಸಿಕೊಳ್ಳಲು ಪ್ರಾಯೋಜಿಸುತ್ತಿರುವುದೂ ಉಂಟು.

ಈ 'ವೈಜ್ಞಾನಿಕ' ಸಮೀಕ್ಷೆಗಳು ಹೆಚ್ಚು ಬಾರಿ ಸುಳ್ಳಾಗಿ ಪರಿಣಮಿಸಿದ್ದರೂ, ಅವುಗಳ 'ಜನಪ್ರಿಯತೆ'ಯೇನೂ ಕಡಿಮೆಯಾಗಿಲ್ಲ! ಜನ ಅವನ್ನು ಸತ್ಯಕ್ಕಾಗಿ ಗಮನಿಸದಿದ್ದರೂ, ಕುತೂಹಲಕ್ಕಾಗಿಯಾದರೂ ಗಮನಿಸುತ್ತಾರೆ ಎಂಬುದು ಈ ಸಮೀಕ್ಷಾಕಾರರಿಗೆ ಗೊತ್ತಿದೆ. ಅವರು ಕೂಡಾ ತಮ್ಮ ಸಮೀಕ್ಷೆಗಳ ವಿಧಾನವನ್ನು ವಿವರಿಸುತ್ತಾ, ತಮ್ಮ ಸಮೀಕ್ಷೆಗಳ ದೋಷಗಳ ಶೇಕಡಾವಾರು ಪ್ರಮಾಣವನ್ನು ಮೊದಲೇ ಘೋಷಿಸತೊಡಗಿದ್ದಾರೆ - ಸಿಗರೇಟ್ ಪ್ಯಾಕ್ ಮೇಲಿನ ಅಪಾಯದ ಸೂಚನೆಯಂತೆ! ಆದರೂ, ಪ್ರತಿ ಬಾರಿಯೂ ಅವುಗಳ ದೋಷ ಅವರು ಸೂಚಿಸುವ ಪ್ರಮಾಣದ ಎರಡರಷ್ಟೇನು, ಕೆಲವು ಬಾರಿ ಐದು - ಹತ್ತು ಪಟ್ಟ್ಟು ಹೆಚ್ಚಿರುತ್ತದೆ! ಆದರೆ ಇದರ ಬಗ್ಗೆ ಅವರಿಗೇನೂ ಸಂಕೋಚವಿರುವುದಿಲ್ಲ. ಏಕೆಂದರೆ, ಅವರು ಎಷ್ಟಾದರೂ ಕೈಗಾರಿಕೋದ್ಯಮಿಗಳು... ತಮ್ಮ ಉತ್ಪನ್ನ ಕೆಟ್ಟದ್ದೋ ಒಳ್ಳೆಯದೋ ಎಂಬುದು ಅವರಿಗೆ ಮುಖ್ಯವಲ್ಲ. ಎಲ್ಲಿಯವರೆಗೆ ಉತ್ಪನ್ನಗಳಿಗೆ ಗ್ರಾಹಕರಿರುತ್ತಾರೋ ಅಲ್ಲಿಯವರೆಗೆ ಅದನ್ನು ಉತ್ಪಾದಿಸುತ್ತಿರುವುದು, ಅವರ ಕೈಗಾರಿಕಾ ಧರ್ಮವಾಗಿರುತ್ತದೆ! ಇದರ ಹಿಂದೆ ರಾಜಕೀಯ ಪಕ್ಷಗಳೂ, ಅವುಗಳ ಹಿಂದೆ ಅವುಗಳಿಂದ ಲಾಭ ಪಡೆಯ ಬಯಸುವ ಉದ್ಯಮಗಳೂ ಇದ್ದೇ ಇರುತ್ತವೆ.

ಹೀಗೆ ಚುನಾವಣಾ ಸಮೀಕ್ಷೆಗಳೆಂಬುವವು ಒಂದು ಕಡೆ ಸತ್ಯ ಕುತೂಹಲಕ್ಕಲ್ಲದಿದ್ದರೂ, ಸುದ್ದಿ ಸ್ವಾರಸ್ಯಕ್ಕಾಗಿಯಾದರೂ ಮುಗಿ ಬೀಳುವ ಮತದಾರ - ಓದುಗರಿಂದ; ಮತ್ತೊಂದು ಕಡೆ ತನಗೆ ಬೇಕಾದ ರಾಜಕೀಯ ಪಕ್ಷದ ಹಿತಕ್ಕಾಗಿ ಹಣ ಹೂಡುವ ಬಂಡವಾಳದಾರರಿಂದ ಪ್ರೋತ್ಸಾಹ ಪಡೆದು ಪ್ರಕಟವಾಗುತ್ತಲೇ ಇವೆ. ಅಂದ ಮಾತ್ರಕ್ಕೆ ಸ್ವತಂತ್ರವಾಗಿ ಕಾರ್ಯ ನಿರ್ವಹಿಸುವ ಸಮೀಕ್ಷಾ ತಂಡಗಳೇ ಅಥವಾ ಸಮೀಕ್ಷಕರೇ ಇಲ್ಲವೆಂದಲ್ಲ. ಉದಾಹರಣೆಗೆ ಯೋಗೇಂದ್ರ ಯಾದವ್‌ರಂತಹ ವೃತ್ತಿಪರ ಸಮೀಕ್ಷಾ ತಜ್ಞರ ಪ್ರಾಮಾಣಿಕತೆಯನ್ನು ಯಾರೂ ಅಲ್ಲಗೆಳೆಯಲಾರರು. ಆದರೆ ಅವರ ಸಮೀಕ್ಷೆಗಳೂ ಇತ್ತೀಚೆಗೆ ಚುನಾವಣಾ ಸಮೀಕ್ಷೆಗಳನ್ನು ಮುನ್ನೋಡುವಲ್ಲಿ ಸಾಕಷ್ಟು ಅಂತರದಿಂದ ವಿಫಲವಾಗಿವೆ. ಚುನಾವಣಾ ಪೂರ್ವ ಸಮೀಕ್ಷೆಗಳು ಹೋಗಲಿ, ಮತದಾನಾನಂತರದ(Exit) ಸಮೀಕ್ಷೆಗಳೂ ಹಾಸ್ಯಾಸ್ಪದವೆನಿಸುವಷ್ಟರ ಮಟ್ಟಿಗೆ ವಿಫಲವಾಗಿವೆ. ಏಕೆ? ನಮ್ಮ ಚುನಾವಣಾ - ವಿಶೇಷವಾಗಿ ಮತದಾನ - ಪ್ರಕ್ರಿಯೆ, ಈಗ ಕ್ರಮೇಣ ತನ್ನ 'ಸೂಚ್ಯಂಕ'ಗಳನ್ನು ಅನಿರೀಕ್ಷಿತವಾಗಿ ಮತ್ತು ಕ್ಷಿಪ್ರವಾಗಿ ಬದಲಾಯಿಸಿಕೊಳ್ಳುವ ಒತ್ತಡಗಳಿಗೆ ಸಿಕ್ಕಿದೆ. ಕಳೆದ ಗುಜರಾತ್ ಚುನಾವಣಾ ಸಮೀಕ್ಷೆಗಳು ಈ ಸಮೀಕ್ಷೆಗಳ 'ಅವೈಜ್ಞಾನಿಕತೆ'ಗೆ ಅನೇಕ ಸಾಕ್ಷಿಯನ್ನೊದಗಿಸಿದವು: ಗೆಲ್ಲುವ ಪಕ್ಷದ ಪರವಾಗಿದ್ದ ಸಂಸ್ಥೆಗಳು ನಡೆಸಿದ ಸಮೀಕ್ಷೆಗಳು ಮಾತ್ರ ನಿಜವಾಗಿದ್ದವು!

ಅದೇನೇ ಇರಲಿ, ಸ್ವತಂತ್ರ ಮತ್ತು ಪ್ರಾಮಾಣಿಕವೆನ್ನಿಸುವ ಸಂಸ್ಥೆಗಳು ನಡೆಸಿದ ಸಮೀಕ್ಷೆಗಳೂ ವಿಫಲವಾಗಲು ಮುಖ್ಯ ಕಾರಣ, ಅವುಗಳು ಸಮೀಕ್ಷೆಗಾಗಿ ತಯಾರು ಮಾಡಿಕೊಳ್ಳುವ 'ಮಾದರಿ'(Sample) ದೋಷಪೂರ್ಣವಾಗಿರುವುದು. ಸಂಖ್ಯಾಶಾಸ್ತ್ರದ ವೈಜ್ಞಾನಿಕ ತತ್ವಗಳನ್ನಾಧರಿಸಿ ಈ ಮಾದರಿಯನ್ನು ರೂಪಿಸಲಾಗುತ್ತದೆ. ಆದರೆ ಅಂಕಿ ಅಂಶಗಳನ್ನಾಧರಿಸಿಧ ಈ ಸಂಖ್ಯಾಶಾಸ್ತ್ರದ ವೈಜ್ಞಾನಿಕತೆಯೇ ಒಂದು ನೆಲೆಯಲ್ಲಿ ಅನುಮಾನಾಸ್ಪದವೆನ್ನಿಸುತ್ತದೆ. ಏಕೆಂದರೆ, ಸುಳ್ಳುಗಳಲ್ಲಿ ಸುಳ್ಳು, ಶುದ್ಧ ಸುಳ್ಳು ಮತ್ತು ಅಂಕಿ-ಅಂಶ ಎಂಬ ಮೂರು ಪ್ರಬೇಧಗಳಿವೆ ಎಂಬ ವಿಡಂಬನೆಯನ್ನು ಎಲ್ಲರೂ ಕೇಳಿರಬಹುದು! ಅದೇನೇ ಇರಲಿ, ಸದಾ ಚಂಚಲವಾಗಿರುವ ಮನಸ್ಸನ್ನು ಹೊಂದಿರುವ ಮನುಷ್ಯರ 'ಮಾದರಿ' ವೈಜ್ಞಾನಿಕವೆಂದು ಕರೆಯಲಾಗದಷ್ಟು ಅಸ್ಥಿರವಾಗಿರುತ್ತದೆ ಎಂಬುದನ್ನು ಎಲ್ಲರೂ ಬಲ್ಲರು. ಹಾಗಾಗಿ, ತನ್ನ ಆಯ್ಕೆಯನ್ನು ಮತದಾರ - ಮನುಷ್ಯ ಅಂತಿಮವಾಗಿ ಖಚಿತಗೊಳಿಸಿಕೊಳ್ಳುವುದು ಯಾವಾಗ ಮತ್ತು ಯಾವ ಕಾರಣದ ಮೇಲೆ ಎಂಬುದು ತುಂಬಾ ಸಂಕೀರ್ಣವಾದ ವಿಷಯ. ಅಲ್ಲದೆ ಅವನು ತನ್ನ ಆಯ್ಕೆಯನ್ನು ಸಮೀಕ್ಷಕನಿಗೆ ಸೂಚಿಸುವಾಗಲೂ ಎಷ್ಟು ಸ್ಥಿರ ಮತ್ತು ಬಿಚ್ಚು ಮನಸ್ಸಿನವನಾಗಿರುತ್ತಾನೆ ಎಂಬುದೂ ಸಮೀಕ್ಷೆಯಲ್ಲಿ ಬಹು ಮುಖ್ಯ ಪಾತ್ರ ವಹಿಸುತ್ತದೆ. ಇದು ಮತದಾನಾನಂತರದ ಸಮೀಕ್ಷೆಯಲ್ಲಂತೂ ನಿರ್ಣಾಯಕ. ಜೊತೆಗೆ, ಸಮೀಕ್ಷೆಗಾಗಿ ಸಿದ್ಧಪಡಿಸುವ ಪ್ರಶ್ನಾವಳಿ, ಅದರ ಭಾಷೆ ಹಾಗೂ ಅದರ ಉದ್ದೇಶ - ಸ್ಪಷ್ಟತೆಗಳೂ ಇಲ್ಲಿ ಮುಖ್ಯವಾಗುತ್ತವೆ. ಬಹಳಷ್ಟು ಸಮೀಕ್ಷಾ ಸಂಸ್ಥೆಗಳು ಪ್ರಾದೇಶಿಕ ಭಾಷೆಗಳ ಮೇಲೆ ಹಿಡಿತವಿಲ್ಲದ 'ಪರಿಣತ'ರಿಂದ ತುಂಬಿರುವುದರಿಂದ ಈ ಪ್ರಶ್ನಾವಳಿ ಬಹು ಬಾರಿ ಮತದಾರರಿಗೆ ಅಸಂಗತವಾಗಿ ಕಾಣುತ್ತಿರುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಸಮೀಕ್ಷೆ ರೂಪಿಸಿಕೊಂಡಿರುವ 'ಮಾದರಿ'ಯ ಸ್ವರೂಪ ಗಾತ್ರ ಮತ್ತು ವ್ಯಾಪ್ತಿ ಬಹು ಮುಖ್ಯವೆನಿಸಿಕೊಳ್ಳುತ್ತದೆ.

ಚುನಾವಣೆಗಳಲ್ಲಿ ಜಾತಿ, ವರ್ಗ, ಲಿಂಗ, ಅಭ್ಯರ್ಥಿಯ ಸಾರ್ವಜನಿಕ ವರ್ಚಸ್ಸು, ಚುನಾವಣಾ ವಿಷಯಗಳು, ವಿವಿಧ ಪಕ್ಷಗಳ ಪ್ರಣಾಳಿಕೆಗಳು, ಕ್ಷೇತ್ರದ ಭೌಗೋಳಿಕ ಹಾಗೂ ಆರ್ಥಿಕ ಸ್ವರೂಪ, ಹಿಂದಿನ ಚುನಾವಣೆಗಳ ಮತದಾನದ ಪ್ರಮಾಣ ಇತ್ಯಾದಿಗಳೆಲ್ಲವೂ ಸೇರಿ ಪ್ರಸಕ್ತ ಫಲಿತಾಂಶವನ್ನು ನಿರ್ಧರಿಸುವುದರಿಂದ, ಈ ಎಲ್ಲ ನೆಲೆಗಳನ್ನೂ ಪ್ರಮಾಣಾನುಸಾರ ಸಂಯೋಜಿಸಿ 'ಮಾದರಿ'ಯನ್ನು ರೂಪಿಸಲಾಗುತ್ತದೆ. ಮಾದರಿ ಚಿಕ್ಕದಾದಷ್ಟೂ, ಈ ನೆಲೆಗಳ ವೈವಿಧ್ಯ ಕಡಿಮೆಯಾಗುತ್ತಾ ಹೋಗುತ್ತದೆ; ದೊಡ್ಡದಾದಷ್ಟೂ, ಈ ನೆಲೆಗಳ ಸೂಕ್ಷ್ಮತೆ ಸ್ಥೂಲವಾಗುತ್ತಾ ಹೋಗುತ್ತದೆ! ಹೀಗೆ 'ಮಾದರಿ'ಯ ಗಾತ್ರ, ವ್ಯಾಪ್ತಿ ಮತ್ತು ಸ್ವರೂಪಗಳೇ ಸಮೀಕ್ಷೆಯ ವಿಶ್ವಸನೀಯತೆಯನ್ನು ನಿರ್ಧರಿಸುತ್ತದೆ. ಹಾಗಾಗಿ ಸಮರ್ಪಕವಾದ 'ಮಾದರಿ' ಎಂದರೆ ಎಂತಹುದು ಎಂಬುದೇ ಇನ್ನೂ 'ವೈಜ್ಞಾನಿಕ'ವಾಗಿ ನಿರ್ಧಾರವಾಗಿಲ್ಲ. ಹೀಗಿರುವಾಗ, ಈ ಚುನಾವಣಾ ಸಮೀಕ್ಷೆಗಳ ಫಲಿತಾಂಶಗಳು 'ವೈಜ್ಞಾನಿಕ'ವಾಗಿರಲು ಹೇಗೆ ಸಾಧ್ಯ? ಹಾಗಾಗಿಯೇ ಈ ಸಮೀಕ್ಷೆಗಳು ಕ್ರಮೇಣ 'ಸತ್ಯಾ'ನ್ವೇಷಣೆಯ ಪ್ರಯತ್ನಗಳಿಗಿಂತ ಹೆಚ್ಚಾಗಿ ಮಾಧ್ಯಮಗಳ ಮಸಾಲೆಯನ್ನು ಹೆಚ್ಚಿಸುವ ಅಥವಾ ಸ್ಫರ್ಧಿಸಿರುವ ಪಕ್ಷಗಳ ಆತ್ಮ ವಿಶ್ವಾಸವನ್ನು ಹೆಚ್ಚಿಸುವ ಪ್ರಯತ್ನಗಳಾಗಿ ಸಾರ್ವಜನಿಕರಿಗೆ ಕಾಣತೊಡಗಿವೆ. ಉದಾಹರಣೆಗೆ ನೋಡಿ: ಕರ್ನಾಟಕದ ಸದ್ಯದ ಚುನಾವಣೆಗಳ ಬಗ್ಗೆ ಮೊದಲೆರಡು ಸಮೀಕ್ಷೆಗಳು ಕಾಂಗ್ರೆಸ್ಗೆ ಹೆಚ್ಚಿನ ಸ್ಥಾನಗಳನ್ನು ನೀಡಿದರೆ, ಅದಕ್ಕೆ ಪ್ರತಿಕ್ರಿಯೆಯೆಂಬಂತೆ ಬಂದ ಇನ್ನೊಂದು ಸಮೀಕ್ಷೆ ಬಿಜೆಪಿಗೆ ಹೆಚ್ಚು ಸ್ಥಾನಗಳನ್ನು ನೀಡಿದೆ! ನಂತರ ಜೆಡಿಎಸ್‌ಗೂ ಎಲ್ಲಕ್ಕಿಂತ ಹೆಚ್ಚಿನ ಸ್ಥಾನಗಳನ್ನು ನೀಡಿರುವ ಮತೊಂದು ಸಮೀಕ್ಷೆಯೂ ಪ್ರಕಟವಾಗಿದೆ! ಜೊತೆಗೆ ಈ ಸಮೀಕ್ಷೆಗಳಲ್ಲಿ ಮೂರು ಮುಖ್ಯ ಪಕ್ಷಗಳ ನಡುವಣ ಅಂತರಗಳೂ ವೈವಿಧ್ಯಮಯವಾಗಿವೆ. ಸಮೀಕ್ಷೆಗಳು ನಿಜವಾಗಿಯೂ ವೈಜ್ಞಾನಿಕವಾಗಿರುವುದಾದರೆ, ಇಷ್ಟೊಂದು ಅಂತರಗಳೇಕೆ? ಸಮೀಕ್ಷಾಕಾರರು ಇದಕ್ಕೆ ವಿವಿಧ ಕಾರಣಗಳನ್ನು ನೀಡುತ್ತಾರೆ. ಆದರೆ, ಒಂದು ಸಮೀಕ್ಷಾ ಸಂಸ್ಥೆ ಹೇಳುವ ಕಾರಣಗಳಿಗೂ ಇನ್ನೊಂದು ಸಮೀಕ್ಷಾ ಸಂಸ್ಥೆ ಹೇಳುವ ಕಾರಣಗಳಿಗೂ ಸಂಬಂಧವೇ ಇರುವುದಿಲ್ಲ! ಹಾಗಾಗಿಯೂ ಇವು ವಿಶ್ವಸನೀಯವೆನ್ನಿಸುವುದಿಲ್ಲ.

ಹಾಗೆ ನೋಡಿದರೆ, ಸುಮ್ಮನೆ ಚುನಾವಣಾ ವಾತಾವರಣವನ್ನು ಗಮನಿಸಿ ಅಥವಾ 'ವಾಸನೆ ಹಿಡಿದು', ಸಾಮಾನ್ಯ ಪರಿಜ್ಞಾನದೊಡನೆ ಅಂರ್ತಬೋಧೆಯನ್ನು ನೆಚ್ಚಿ ಮಾಡುವ ಊಹೆಯೇ ಸತ್ಯಕ್ಕೆ ಹೆಚ್ಚು ಹತ್ತಿರವೇನೋ ಎಂದು ಬಹಳ ಬಾರಿ ನನಗೆ ಅನ್ನಿಸಿದೆ... ಹಾಗಾಗಿಯೇ ಹೋದ ಚುನಾವಣೆಯಲ್ಲಿ ಜೆಡಿಎಸ್ 45ರಿಂದ 55 ಸ್ಥಾನಗಳನ್ನು ಪಡೆಯಬಹುದೆಂಬ - ಅಂದು ಬಹಳ ಜನರಿಗೆ ಹಾಸ್ಯಾಸ್ಪದವೆನಿಸಿದ್ದ - ನನ್ನ ಊಹೆ ನಿಜವಾಯಿತೋ ಏನೋ! ಈ ಬಾರಿ ನನ್ನ ಇಂತಹ ಊಹೆ ನಿಜವಾಗುತ್ತದೆ ಎಂದು ಹೇಳಲಾರೆ. ಏಕೆಂದರೆ, ಅಂರ್ತಬೋಧೆಯ ರಹಸ್ಯ, ಅಂರ್ತಬೋಧೆಯಾದವನಿಗೂ ಗೊತ್ತಿರುವುದಿಲ್ಲ! ಆದರೂ ನನ್ನ ಊಹೆ ಹೀಗಿದೆ: ಕಾಂಗ್ರೆಸ್‌ಗೆ: 100ರಿಂದ 115, ಬಿಜೆಪಿಗೆ: 75ರಿಂದ 85, ಜೆಡಿಎಸ್‌ಗೆ: 30ರಿಂದ 35 ಹಾಗೂ ಇತರರಿಗೆ: 10ರಿಂದ 15. ಇದು ಸುಳ್ಳಾದರೂ ನನಗೇನೂ ಆಶ್ಚರ್ಯವಿಲ್ಲ ಅಥವಾ ಬೇಸರವಿಲ್ಲ. ಏಕೆಂದರೆ, ಇದಕ್ಕಾಗಿ ನಾನು ಯಾವ ಹಣವನ್ನೂ ಹೂಡಿಲ್ಲ ಮತ್ತು ಇದನ್ನು ವೈಜ್ಞಾನಿಕವೆಂದು ಹೇಳಿಕೊಂಡು, ಯಾರ ಕುತೂಹಲವನ್ನೂ ಕೆರಳಿಸಿಲ್ಲ!