ಚುನಾವಣೆಯಲ್ಲಿ ಮತ ಚಲಾಯಿಸಲು ನಿರಾಕರಣೆ: ನಮ್ಮ ಕೈಯಲ್ಲಿನ ಒಂದು ಅಸ್ತ್ರವಾಗಬಲ್ಲದೇ?

ಚುನಾವಣೆಯಲ್ಲಿ ಮತ ಚಲಾಯಿಸಲು ನಿರಾಕರಣೆ: ನಮ್ಮ ಕೈಯಲ್ಲಿನ ಒಂದು ಅಸ್ತ್ರವಾಗಬಲ್ಲದೇ?

Comments

ಬರಹ

ಸಾ‌ರ್ವತ್ರಿಕ ಚುನಾವಣೆಗಳು ಇನ್ನೇನು ಬರುತ್ತಿವೆ. ಚುನಾವಣೆಯಲ್ಲಿ ಸ್ಫರ್ಧಿಸಿರುವ ಕೆಲವು ಉಮೇದುವಾರರ ವಿರುದ್ಧ ಪೊಲೀಸ್ ಅಥವಾ ನ್ಯಾಯಾಲಯದಲ್ಲಿ ಮೊಕದ್ದಮೆ ನಡೆಯುತ್ತಿರುವ ನಿದರ್ಶನವಿರುವುದಾಗಲೀ, ಸಚ್ಚಾರಿತ್ರವುಳ್ಳವರು ಸ್ಪರ್ಧಿಸಿಲ್ಲ ಎಂಬುದು ಕಂಡುಬಂದಾಗಲಾಗಲೀ, ಅಥವಾ ಸ್ಪರ್ಧಿಸಿರುವ ಯಾವ ಉಮೇದುವಾರನೂ ಆಯ್ಕೆಗೆ ಅರ್ಹನಲ್ಲ ಎಂದು ಜನರಿಗೆ ಅನಿಸಿದಾಗ ಸಹಜವಾಗಿ ಅವರು "ನಾವು ಯಾಕೆ ಮತ ಚಲಾಯಿಸಬೇಕು" ಎಂಬ ಧೋರಣೆಯಿಂದ ಮತವನ್ನು ಚಲಾಯಿಸದೇ ಸುಮ್ಮನಿದ್ದುಬಿಡಲು ನಿರ್ಧರಿಸುತ್ತಾರೆ. ಅದೇ ರೀತಿ ಎಷ್ಟೋ ಜನ "ನಾನೊಬ್ಬ ಮತ ಚಲಾಯಿಸದಿದ್ದರೆ ಏನಾಗುತ್ತದೆ" ಎಂದು ಸುಮ್ಮನಿರುವುದೂ ಉಂಟು. ಇದರ ಪರಿಣಾಮವೆಂದರೆ ಚುನಾವಣೆಯಲ್ಲಿ ಶೇಕಡ ೫೦ಕ್ಕಿಂತ ಕಡಿಮೆ ಮತ ಚಲಾವಣೆಯಾಗಿ ಅಂತಿಮವಾಗಿ ಜನರಿಗೆ ಯಾರು ಬೇಡವಾದವರೋ ಅವರೇ ಚುನಾಯಿತರಾಗಿ ಬರುವ ಸಂದರ್ಭವಿರುವುದೂ ಉಂಟು. ಆಮೇಲೆ ಪರಿಣಾಮವನ್ನು ಹಳಿಯುವುದರಿಂದ ಯಾವ ಪ್ರಯೋಜನವೂ ಆಗುವುದಿಲ್ಲ ಎಂಬುದೂ ಎಲ್ಲರಿಗೂ ಗೊತ್ತಿರುವ ವಿಷಯ.

ಹಾಗಾದರೆ ನಮ್ಮ ವಿರೋಧವನ್ನು ವ್ಯಕ್ತಪಡಿಸುವ ಬೇರೆ ದಾರಿ ಇಲ್ಲವೇ?
ಮತವನ್ನು ನಮ್ಮ ಕೈಯಲ್ಲಿರುವ ಅಸ್ತ್ರವೆಂದು ಹೇಳುತ್ತಾರೆ. ಅದನ್ನು ಎಷ್ಟರ ಮಟ್ಟಿಗೆ ನಾವು ಪರಿಣಾಮಕಾರಿಯಾರಿ ಉಪಯೋಗಿಸುತ್ತಿದ್ದೇವೆ?

ಇತ್ತೀಚೆಗೆ, ಸ್ಪರ್ಧಿಸಿರುವ ಉಮೇದುವಾರರ ಪಟ್ಟಿಯ ಕೊನೆಯಲ್ಲಿ ಮತಯಂತ್ರದಲ್ಲಿ "ಯಾರನ್ನೂ ಚುನಾಯಿಸಲು ಬಯಸುವುದಿಲ್ಲ" ಎಂಬ ಒಂದು ಗುಂಡಿಯನ್ನು ಸೇರಿಸಬೇಕೆಂಬ ವಿಷಯದ ಬಗ್ಗೆ ಸ್ವಲ್ಪ ಚರ್ಚೆಯಾಯಿತು. ನಿರೀಕ್ಷೆಯಂತೆ, ಯಾವ ರಾಜಕೀಯ ಪಕ್ಷವೂ ಅದಕ್ಕೆ ಒಪ್ಪಲಿಲ್ಲ. ಚುನಾವಣಾ ಸುಧಾರಣೆಗಳಾಗಬೇಕು ಎಂದು ಎಲ್ಲರೂ ಹೇಳುವವರಾಗಲೀ ಅದಕ್ಕೆ ಯಾರೂ ಸಿದ್ಧವಿಲ್ಲ, ಅಥವಾ ಇನ್ನೂ ನಿಖರವಾಗಿ ಹೇಳುವುದಾದರೆ ಯಾರಿಗೂ ಆ ಧೈರ್ಯವಿಲ್ಲ, ಎಂಬುದು ಇದರಿಂದ ಗೊತ್ತಾಯಿತು.

ಇವೆಲ್ಲದರ ಮಧ್ಯೆಯೂ ಜನಸಾಮಾನ್ಯರಿಗೆ ಮತದಾನದ ಮೂಲಕವೇ ಅಥವಾ ಆ ಸಮಯದಲ್ಲಿಯೇ ತಮ್ಮ ವಿರೋಧವನ್ನು ವ್ಯಕ್ತಪಡಿಸುವ ಮಾರ್ಗವೊಂದಿದೆ ಎಂದು ಅನಿಸುತ್ತದೆ.
ಬಹುಜನರಿಗೆ ಗೊತ್ತಿರಲಿಕ್ಕಿಲ್ಲ: ಮತದಾನದ ಕಾನೂನಿನಡಿ ಒಬ್ಬ ಮತದಾರನು ಮತಯಂತ್ರದ ಬಳಿಗೆ ಹೋಗಿ, ಮತವನ್ನು ಚಲಾಯಿಸದೇ "ನಾನು ಮತವನ್ನು ಚಲಾಯಿಸಲು ನಿರಾಕರಿಸುತ್ತೇನೆ" ಎಂದು ಘೋಷಿಸಿ, ಮತದಾನದ ರಿಜಿಸ್ಟರಿನಲ್ಲಿ ತನ್ನ ಸಹಿಯನ್ನು ಹಾಕಬಹುದು. ಒಂದು ಕ್ಷೇತ್ರದಲ್ಲಿ ಒಬ್ಬ ಉಮೇದುವಾರನು ಎಷ್ಟು ಮತಗಳ ಅಂತರದಿಂದ ಗೆದ್ದಿರುವನೋ ಆ ಸಂಖ್ಯೆಗಿಂತ ಜಾಸ್ತಿ ಜನರು "ನಿರಾಕರಿಸಿದ್ದೇನೆ" ಎಂದು ಸಹಿ ಹಾಕಿದ್ದರೆ ಆ ಕ್ಷೇತ್ರದಲ್ಲಿ ಕಡ್ಡಾಯವಾಗಿ ಮರುಚುನಾವಣೆ ನಡೆಸಬೇಕಾದ ಸ್ಥಿತಿ ಉಂಟಾಗುತ್ತದೆ. ಇದು ಯಾವ ಪಕ್ಷಕ್ಕೂ ಇಷ್ಟವಾಗುವ ವಿಷಯವಲ್ಲ. ದೇಶದಾದ್ಯಂತ ಕೆಲವು ಕ್ಷೇತ್ರಗಳಲ್ಲಾದರೂ ಈ ರೀತಿಯಾದರೆ ಆಗಲಾದರೂ ರಾಜಕೀಯ ಪಕ್ಷಗಳು ಎಚ್ಚೆತ್ತುಕೊಂಡು, ತಮ್ಮ ಕಡೆಯಿಂದ ಒಳ್ಳೆಯ ಸ್ಪರ್ಧಿಗಳನ್ನು ಮಾತ್ರ ನಿಲ್ಲಿಸುವ ಮನಸ್ಸು ಮಾಡುತ್ತಾರೆ ಎಂಬುದರ ಬಗ್ಗೆ ನಾವೀಗ ಯೋಚಿಸುವ ಕಾಲ ಬಂದಿದೆ ಎಂದು ಅನಿಸುತ್ತದೆ.

ಇಲ್ಲಿ ಒಂದು ಅನಾನುಕೂಲತೆಯೂ ಇದೆ: ಮರು ಚುನಾವಣೆಯ ಸಂದರ್ಭ ಬಂದರೆ ದೇಶಕ್ಕೆ ಆರ್ಥಿಕವಾಗಿ ಹೊರೆಯಾಗುತ್ತದೆ ಎಂಬುದು ನಿಜ. ಅಂತೆಯೇ ಜನರು ಬೇಕೆಂದೇ ಈ ಸೌಲಭ್ಯವನ್ನು ದುರುಪಯೋಗಪಡಿಸಿಕೊಳ್ಳುವ ಉದ್ದೇಶದಿಂದ ಬೃಹತ್ ಪ್ರಮಾಣದಲ್ಲಿ ಈ ವಿಧಾನವನ್ನು ಅನುಸರಿಸಹೊರಟರೆ ಚುನಾವಣೆ ಪ್ರಕ್ರಿಯೆಯ ಉದ್ದೇಶವೇ ನಾಶವಾಗಿ, ದೇಶದ ಸಮಯ, ಹಣ ಮತ್ತು ಶ್ರಮ ವ್ಯರ್ಥವಾಗುವ ಸಂಭವವುಂಟಾಗಬಹುದು. ಆದರೆ, ಬೃಹತ್ ಪ್ರಮಾಣದಲ್ಲಿ ಜನರನ್ನು ಈ ರೀತಿ ಮಾಡಲು ಪ್ರೇರೇಪಿಸುವುದು ಅಷ್ಟು ಸುಲಭವಲ್ಲ ಎಂಬುದೂ ಅಷ್ಟೇ ನಿಜ.

ಈ ವಿಧಾನವನ್ನು ಅನುಸರಿಸಿ ನಾವು ರಾಜಕೀಯ ಪಕ್ಷಗಳಲ್ಲಿ ಭಯ ತುಂಬದೇ ಹೋದರೆ ನಮಗೆ ಈಗಿರುವ ಸ್ಥಿತಿಯೇ ಗತಿ. ಈಗಿನಿಂದ ಇದನ್ನು ಮಾಡುತ್ತಾ ಹೋದರೆ ಇನ್ನು ೨೦ ವರ್ಷಗಳಲ್ಲಾದರೂ (ನಾಲ್ಕು ಚುನಾವಣೆಗಳ ಅವಧಿಯಲ್ಲಿ) ನಾವು ಸುಧಾರಿಸಬಹುದೇನೋ. ಏನಂತೀರಿ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet