ಚುನಾವಣೆಯ ಕಥೆಗಳು

ಚುನಾವಣೆಯ ಕಥೆಗಳು

ಭಾರತದಲ್ಲಿ ಲೋಕಸಭಾ ಚುನಾವಣೆಗೆ ಮತದಾನದ ಪ್ರಕ್ರಿಯೆಗಳು ನಡೆಯುತ್ತಾ ಇವೆ. ಕರ್ನಾಟಕ ರಾಜ್ಯದಲ್ಲೂ ಎಪ್ರಿಲ್ ೨೬ ಮತ್ತು ಮೇ ೭ ಎಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಇಂದು ಮೊದಲ ಹಂತದ ಮತದಾನ. ಎಲ್ಲಾ ಅರ್ಹ ಮತದಾರರು ಯಾವುದೇ ನೆಪ ಹೇಳದೇ ತಮ್ಮ ತಮ್ಮ ಮತಗಟ್ಟೆಗೆ ತೆರಳಿ ಮತವನ್ನು ಚಲಾಯಿಸಿ. ನಿಮ್ಮ ಒಂದು ಮತ ದೇಶದ ಪ್ರಗತಿಯಲ್ಲಿ ಗಮನಾರ್ಹ ಬದಲಾವಣೆ ತರಬಹುದು. ಕನಿಷ್ಟ ೮೦-೮೫ ಶೇಕಡ ಮತದಾನವಾಗುವಂತೆ ನೋಡಿಕೊಳ್ಳಬೇಕಾಗಿದೆ. ಏಕೆಂದರೆ ಬಹಳಷ್ಟು ಮಂದಿ ಮತ ಚಲಾಯಿಸಲು ಬರುವುದೇ ಇಲ್ಲ. ದಯವಿಟ್ಟು ಮತಗಟ್ಟೆಗೆ ಬನ್ನಿ, ನಿಮ್ಮ ಮತ ಚಲಾಯಿಸಿ.

ಚುನಾವಣೆಯ ಬಗ್ಗೆ ಸುಖಾಸುಮ್ಮನೇ ಉಪದೇಶ ನೀಡುವುದಕ್ಕಿಂತ ಬೇರೆ ಏನು ಬರೆಯಬಹುದು ಎಂದು ಯೋಚನೆ ಮಾಡುತ್ತಿರುವಾಗ ನನಗೆ ಪತ್ರಿಕೆಯೊಂದರಲ್ಲಿ ಶ್ರೀ ಅರ್ಜುನ್ ಶೆಣೈ ಎನ್ನುವವರು ಬರೆದ ಪುಟ್ಟ ಪುಟ್ಟ ಚುನಾವಣೆಯ ಕಥೆಗಳು ಸಿಕ್ಕವು. ಅವುಗಳನ್ನು ಸಂಗ್ರಹಿಸಿ ನಿಮ್ಮ ಓದಿಗಾಗಿ ಪ್ರಕಟ ಮಾಡಿರುವೆ. ಓದಿ…

***

ಜಾತಿಯವರ ಮನೆಗೆ ಮತ ಕೇಳಲು ಹೊರಟ ಆ ಆಕಾಂಕ್ಷಿ ತಮ್ಮವರೆಲ್ಲ ಈ ಬಾರಿ ತನ್ನನ್ನು ಪ್ರಚಂಡ ಬಹುಮತದಿಂದ ಗೆಲ್ಲಿಸಬೇಕು ಎಂದು ವಿನಂತಿಸಿಕೊಂಡ. ಮನೆಯವರೂ ತಮ್ಮವನೇ ಶಾಸಕನಾಗುವನಲ್ಲ ಎಂದು ಸಂತಸಗೊಂಡರು. ಮನೆಯ ಹೊರಗಡೆ ಬೆಕ್ಕು ಮತ್ತು ನಾಯಿ ರಾಗ-ದ್ವೇಷವಿಲ್ಲದೇ ಒಂದೇ ತಟ್ಟೆಯಲ್ಲಿ ಹಸಿವು ನೀಗಿಸಿಕೊಳ್ಳುತ್ತಿದ್ದವು. !

***

ಗ್ರಾಮವಾಸ್ತವ್ಯದಲ್ಲಿ ಆ ಹಳ್ಳಿಗನ ಮನೆಯ ರೊಟ್ಟಿಯುಂಡಿದ್ದ ಆ ಆಕಾಂಕ್ಷಿ ಶಾಸಕರಾಗಿ ಗೆದ್ದು ಬಂದರು. ಅದೇ ಹಳ್ಳಿಗ ಶಾಸಕ ಕಚೇರಿಯೊಳಕ್ಕೆ ಬೆವರುತ್ತ ಮನವಿ ಪತ್ರ ಹಿಡಿದು ಒಳಗೆ ಬಂದ. ಅವನಿಗೊಂದು ತೊಟ್ಟು ನೀರು ಕೊಡುವವರು ಯಾರೂ ಇರಲಿಲ್ಲ.

***

ಈ ಬಾರಿ ಹಿಂದಿನ ಬಾರಿಗಿಂತ ಹೆಚ್ಚಿನ ಮತಗಳಿಂದ ಗೆಲ್ಲಿಸಿ ಎಂದು ಹಾಲಿ ಶಾಸಕರು ವಿನಂತಿಸಿಕೊಂಡರು. ಪಕ್ಕದಲ್ಲೇ ಕಳೆದ ಐದು ವರ್ಷಗಳಿಂದ ತೇಪೆಯೂ ಕಾಣದ ಗುಂಡಿಗಳೆಲ್ಲ ಕಿಸಕ್ಕನೇ ನಕ್ಕು ಚಪ್ಪಾಳೆ ಹೊಡೆದವು !

***

ಭರ್ಜರಿ ಜಯಗಳಿಸಿದ್ದ ಆ ಅಭ್ಯರ್ಥಿ ಎರಡು ವಾರಗಳ ಕಾಲ ವಿಜಯೋತ್ಸವದಲ್ಲಿ ಮುಳುಗಿ ಮಾರನೇ ದಿನ ವಿದೇಶ ಪ್ರಯಾಣಕ್ಕೆ ಸಜ್ಜಾದ. ಐನೂರು ರೂಪಾಯಿಗೆ ಮತ ಮಾರಿಕೊಂಡವರ ಬೆರಳಿನ ಶಾಯಿ ಇನ್ನೂ ಮಾಸಿರಲಿಲ್ಲ.

***

ಸೇತುವೆ ಇಲ್ಲದ, ಮೊಬೈಲ್ ನೆಟ್ ವರ್ಕ್ ಸಿಗದ ಆ ಕುಗ್ರಾಮದ ಜನತೆ ಆ ಯುವ ಆಕಾಂಕ್ಷಿಯ ಭರವಸೆಯ ಮಾತಿಗೆ ಮರುಳಾಗಿ ಮತ ಕೊಟ್ಟು ಗೆಲ್ಲಿಸಿದರು. ತಿಂಗಳುಗಳೇ ಕಳೆದರೂ ಯುವಶಾಸಕರ ಪತ್ತೆಯಿಲ್ಲ. ಅತ್ತ ಸೇತುವೆಯೂ ಇಲ್ಲ. ಇತ್ತ ಮೊಬೈಲ್ ನೆಟ್ ವರ್ಕೂ ಇಲ್ಲ. ಈಗ ಎಲ್ಲರೂ ಮುಂದಿನ ಚುನಾವಣೆಗೆ ದಿನ ಲೆಕ್ಕ ಹಾಕುತ್ತಿದ್ದಾರೆ. 

***

ಶಾಸಕ ಸ್ಥಾನದ ಆಕಾಂಕ್ಷಿ ತಮ್ಮ ಕ್ಷೇತ್ರದಲ್ಲಿ ಐವತ್ತಕ್ಕೂ ಹೆಚ್ಚು ಸ್ಲಂ ಪ್ರದೇಶವಿದೆ. ಹಾಲಿ ಶಾಸಕರು ಅವರಿಗೊಂದು ಸೂರು ಕೊಟ್ಟಿಲ್ಲ ಎಂದು ಆಕ್ರೋಶಭರಿತ ಭಾಷಣ ಮಾಡಿ ಜನರ ಮನಗೆದ್ದು ಶಾಸಕನಾದ. ಈಗ ಕ್ಷೇತ್ರದಲ್ಲಿ ಸ್ಲಂ ಪ್ರದೇಶಗಳ ಸಂಖ್ಯೆ ಇಳಿದಿಲ್ಲ. ಆತನ ಮನೆ ಎರಡಂತಸ್ತು ಎತ್ತರಕ್ಕೆ ಏರಿದೆ !

***

ಕತೆಗಳನ್ನು ಓದಿದಿರಲ್ಲವೇ? ಇನ್ನೂ ಮತ ಚಲಾಯಿಸದವರು ಮತ ಚಲಾಯಿಸಲು ಹೊರಡಿ. ಈಗಾಗಲೇ ಮತ ಚಲಾಯಿಸಿದವರಿಗೆ ಅಭಿನಂದನೆಗಳು. 

ಕೃತಜ್ಞತೆಗಳು: ಅರ್ಜುನ್ ಶೆಣೈ

ಚಿತ್ರ : ಅಂತರ್ಜಾಲ ತಾಣ