ಚುನಾವಣೆಯ ಹೊಸ್ತಿಲಿನಲ್ಲಿ ನಿಜ ನಾಯಕರನ್ನು ಹುಡುಕುತ್ತಾ…!
ನಾಯಕರಣ್ಣ ನಾಯಕರು, ಇವರೇ ನಮ್ಮ ನಾಯಕರು. ತಾವೇ ಸೃಷ್ಟಿಸಿಕೊಂಡ, ನಾವೇ ಭ್ರಮಿಸಿಕೊಂಡ ನಾಯಕರಣ್ಣ ನಾಯಕರು, ಇವರೇ ನಮ್ಮ ನಾಯಕರು. ಕಟೌಟ್ ಕಟ್ಟಿಸಿಕೊಂಡು ನಾಯಕರಾಗುವರಣ್ಣ, ಟಿವಿ - ಪತ್ರಿಕೆಗಳಲ್ಲಿ ಜಾಹೀರಾತು ನೀಡಿ ನಾಯಕರಾಗುವರಣ್ಣ, ಬೀದಿಗಳಲ್ಲಿ ಪೋಸ್ಟರ್ - ಬ್ಯಾನರ್ ಹಾಕಿ ನಾಯಕರಾಗುವರಣ್ಣ, ದುಡ್ಡು ಚೆಲ್ಲಿ ಜನ ಸೇರಿಸಿ ನಾಯಕರಾಗುವರಣ್ಣ, ಜಾತಿ ಹೆಸರಲ್ಲಿ ಜನ ಸೇರಿಸಿ ನಾಯಕರಾಗುವರಣ್ಣ, ಧರ್ಮದ ಮತ್ತೇರಿಸಿ ನಾಯಕರಾಗುವರಣ್ಣ, ಭಾಷೆಯನ್ನು ದುರುಪಯೋಗ ಮಾಡಿಕೊಂಡೂ ನಾಯಕರಾಗುವರಣ್ಣ, ಜೈಕಾರ ಹಾಕಿಸಿಕೊಂಡು ನಾಯಕರಾಗುವರಣ್ಣ, ಟಿವಿ ಚರ್ಚೆಗಳಲ್ಲಿ ಜಗಳವಾಡುತ್ತ, ಬಾಯಿ ಮಾತಿನ ಮೂಲಕವೇ ನಾಯಕರಾಗುವರಣ್ಣ, ಪತ್ರಿಕೆಗಳಲ್ಲಿ ಅಂಕಣ ಬರೆಯುತ್ತಾ ನಾಯಕರಾಗುವರಣ್ಣ, ಸಿನಿಮಾಗಳಲ್ಲಿ ನಟಿಸುತ್ತಾ ನಾಯಕರಾಗುವರಣ್ಣ, ಚಿನ್ನ ಬೆಳ್ಳಿಗಳನ್ನು ಮಾರುತ್ತಾ ನಾಯಕರಾಗುವರಣ್ಣ, ಕಂಪ್ಯೂಟರ್ ಗಳನ್ನು ಸೃಷ್ಟಿಸುತ್ತಲೂ ನಾಯಕರಾಗುವರಣ್ಣ, ಭೂಮಿ ಬಗೆದು ಅದಿರು ತೆಗೆದು ನಾಯಕರಾಗುವರಣ್ಣ, ಜಮೀನುಗಳ ವ್ಯಾಪಾರ ಮಾಡಿ ಕಟ್ಟಡಗಳನ್ನು ಕಟ್ಟಿಯೂ ನಾಯಕರಾಗುವರಣ್ಣ, ಶಿಕ್ಷಣ ಸಂಸ್ಥೆಗಳನ್ನು ಮಾಡಿ ನಾಯಕರಾಗುವರಣ್ಣ, ಆಸ್ಪತ್ರೆಗಳನ್ನು ಸ್ಥಾಪಿಸಿಯೂ ನಾಯಕರಾಗುವರಣ್ಣ, ದೇವರುಗಳನ್ನು ನಂಬಿಸಿಯೂ ನಾಯಕರಾಗುವರಣ್ಣ, ಶೋಷಕರ ಪರ ಹೋರಾಟ ಎಂದು ಬಿಂಬಿಸಿಯೂ ನಾಯಕರಾಗುವರಣ್ಣ, ಟಿವಿ Reality ಶೋ ಗೆದ್ದೂ ನಾಯಕರಾಗುವರಣ್ಣ.
YouTube - Twitter - Instagram - Facebook ಗಳಲ್ಲಿ ಸರ್ಕಸ್ ಮಾಡಿಯೂ ನಾಯಕರಾಗುವರಣ್ಣ, ಇವರೇ ನಮ್ಮನ್ನಾಳುವ ನಾಯಕರಣ್ಣ. ಗಾಂಧಿ - ಅಂಬೇಡ್ಕರ್ - ನೇತಾಜಿ - ತಿಲಕ್ - ಭಗತ್ ಸಿಂಗ್ - ಆಜಾದ್ ಮುಂತಾದವರೂ ನಾಚುವಂತೆ ಮಿಂಚುವರಣ್ಣ. ಅಸಲಿ ನಾಯಕರ ತ್ಯಾಗ - ತಾಖತ್ತುಗಳು ಮರೆಯಾಗುವಂತೆ ಮೆರೆಯುವರಣ್ಣ ಈ ನಕಲಿ ನಾಯಕರು, ಆ ಸೂಕ್ಷ್ಮತೆ - ಆ ದೂರದೃಷ್ಟಿ - ಆ ಧೈರ್ಯ - ಆ ವಿಶಾಲ ಮನೋಭಾವ - ಆ ಸಹಿಷ್ಣುತೆ - ಆ ದೇಶಭಕ್ತಿ ಇವರಲ್ಲಿ ಇಲ್ಲವಣ್ಣ, ಸ್ವಾರ್ಥ ತುಂಬಿದ - ಉಡಾಫೆ ವ್ಯಕ್ತಿತ್ವದ - ಹಣ ಅಧಿಕಾರದ - ದುರಾಸೆ ತುಂಬಿದ - ಗುಲಾಮಿತನದ - ನಾಯಕರಣ್ಣ ನಾಯಕರು ಇವರೇ ನಮ್ಮ ನಾಯಕರು. ಎಚ್ಚರ - ಎಚ್ಚರ - ಎಚ್ಚರ. ಅಸಲಿ - ನಕಲಿ ಗಳ ವ್ಯತ್ಯಾಸ ಗಮನಿಸಿ… ಮಾತು - ಭಾಷೆ - ವರ್ತನೆ - ನಡವಳಿಕೆ - ಪ್ರಾಮಾಣಿಕತೆ ಸದಾ ಗುರುತಿಸಿ. ಸ್ವಾಭಿಮಾನಿ - ಸಮೃದ್ಧ ಕರ್ನಾಟಕದ ಹಿತದೃಷ್ಟಿಯಿಂದ ಇದು ಅತ್ಯಾವಶ್ಯಕ. ಆಯ್ಕೆ ನಿಮ್ಮ ಮುಂದಿದೆ, ಭವಿಷ್ಯ ನಿಮ್ಮ ಕೈಲಿದೆ...
-ವಿವೇಕಾನಂದ ಎಚ್. ಕೆ., ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ